(ಮಹಿಳಾ)ವಾದ:


ಲಂಕೇಶರ ಟೀಕೆ ಟಿಪ್ಪೆಣಿಯ ಲೇಖನವೊಂದರಲ್ಲಿ ಹಳ್ಳಿಗಳ ಆರ್ಥಿಕ ಸ್ವಾವಲಂಬನೆಗೆ ಅನುಸರಿಸಬಹುದಾದ ಒಂದು ಯೋಚನೆಯನ್ನು ಹೇಳುತ್ತಾರೆ. ಹಳ್ಳಿಯೊಂದು ಹತ್ತೆಕೆರೆ ನೆಲದಲ್ಲಿ ಸುಮಾರು 17420 ಸಾಗುವಾನಿ ಗಿಡಗಳನ್ನು ಇಪ್ಪತ್ತೈದುವರ್ಷಗಳ ಕಾಲ ಕಾಪಾಡಿಕೊಂಡು, ಅವು ಮರವಾದ ನಂತರ ಶೇ.೪ ಭಾಗ ಅಂದರೆ 696 ಗಿಡಗಳನ್ನು ಕಡಿದು ಮಾರಿ ಅಷ್ಟು ಸಸಿಗಳನ್ನು ಪುನಃ ನೆಟ್ಟರೆ ವರ್ಷಕ್ಕೆ ಆರೂವರೆ ಕೋಟಿಯಷ್ಟು (ಆಗಿನ ಕಾಲಕ್ಕೆ ಅಂದರೆ 1991 ರಲ್ಲಿ) ಆದಾಯ ಬರುತ್ತದೆ, ಇದರಲ್ಲಿ ಕೇವಲ ರಸ್ತೆ ಸೇತುವೆ ಮಾತ್ರವಲ್ಲ, ಊರಿನ ಶಿಕ್ಷಣ, ಹಬ್ಬ, ಕ್ರೀಡೆ ಎಲ್ಲವನ್ನು ಸರ್ಕಾರದ ಹಂಗಿಲ್ಲದೆ ನಡೆಸಬಹುದು ಎಂಬುವುದು. ಮೇಲುನೋಟಕ್ಕೆ ಇದು ಅತೀ ಆದರ್ಶದ ಪರಿಹಾರ ಎಂದೆನಿಸಿದರು, ಸಾಧ್ಯವಾಗದ್ದೇನಲ್ಲ. ಸಂಕೀರ್ಣ ಸಮಸ್ಯೆ. ಸಮಸ್ಯೆಗೆ ಕಾರಣಗಳನ್ನು ಹೇಳುವಷ್ಟೇ ಕರಾರುವಾಕ್ ಆಗಿ ಅದಕ್ಕೆ ಪರಿಹಾರವನ್ನು ಸೂಚಿಸುವುದು, superficial ಅಲ್ಲದ ಸಾಧ್ಯವಾಗುವಂತಹ ಪರಿಹಾರಗಳನ್ನು ಸೂಚಿಸುವುದು ಬಹಳ ಮುಖ್ಯ. ಎಲ್ಲ ಸಮಸ್ಯೆಗಳಿಗೂ ಈ ರೀತಿಯ ಸಿದ್ಧಸೂತ್ರಗಳು ಅನ್ವಯಿಸಲು ಸಾಧ್ಯವಾ? ಇತ್ತೀಚೆಗೆ ಇಲ್ಲಿ ನಡೆಯುತ್ತಿದ್ದ ’ಮಹಿಳೆಯರ ಮೇಲಿನ ಭಯೋತ್ಪಾದನೆ’ ಎಂಬ ಚರ್ಚೆಯ ಹಿನ್ನಲೆಯಲ್ಲಿ ಈ ಸಂಧರ್ಭ ನೆನಪಾಯಿತು.

ಎಂತಹ ಪರಿಸ್ಥಿತಿಯಲ್ಲು ಹೊಂದಿಕೊಂಡು ಬದುಕುವುದು, ಬದಲಾಯಿಸಲು ಅವಕಾಶವಿದ್ದಾಗ ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಮನುಷ್ಯನಗುಣ. ಮನುಷ್ಯನ ಗುಣ ಎಂದ ಮಾತ್ರಕ್ಕೆ ಮಹಿಳೆಯರಿಗೆ ಹೊರತಾದ ಗುಣ ಎಂದು ಭಾವಿಸಬೇಕಿಲ್ಲ ಅಷ್ಟೆ! ಯಾವುದರಲ್ಲೂ ತೀವ್ರ ಬದಲಾವಣೆ ಬಯಸದೆ, ಕ್ರಿಯೆಯಲ್ಲಿ ತರದೆ, ಪ್ರಗತಿಯನ್ನು ಅಪೇಕ್ಷಿಸುವುದು ಹಗಲುಗನಸಿನಂತೆಯೇ. ನಿಜವಾದ ಪ್ರತಿಭೆ ಇದ್ದಲ್ಲಿ ಅದು ಹೊರಹೊಮ್ಮುವುದಕ್ಕೆ ಯಾವುದೇ ಬೇಲಿಯಿರುವುದಿಲ್ಲ. ಸಾರಾ ಅಬೂಬಕ್ಕರ್ ತಮ್ಮ ೪೦ನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿ, ತಮ್ಮ ಧರ್ಮದವರ ಕಟ್ಟಳೆಗಳನ್ನು ಮೀರಿ ಪ್ರಸಿದ್ದ ಲೇಖಕಿ ಆಗಿದ್ದು, ವೈದೇಹಿ ತಮ್ಮ ಕರಾವಳಿಯ ಹಳ್ಳಿಯಲ್ಲೇ ಇದ್ದುಕೊಂಡು ಅದರ ಸೂಕ್ಷ್ಮಾತಿಸೂಕ್ಷ್ಮ ಚಿತ್ರಣಗಳನ್ನು ಅವರ ಬರಹಗಳಲ್ಲಿ ಕಟ್ಟಿಕೊಡುತ್ತಿರುವುದು ನೋಡಿದರೆ, ಇಷ್ಟೆಲ್ಲಾ ಅವಕಾಶಗಳಿರುವ, ಪುರುಷರಿಗೆ ಸಮನಾಗೇ ಬದುಕುವ ಇತರ ಮಹಿಳೆಯರಲ್ಲಿ ವಿರಳವಾಗಿರುವ ಸಂವೇದನಶೀಲತೆಗೆ ಏನು ಕಾರಣವೆನ್ನೋಣ?

ಈಗ ಗಮನಿಸಿ, ಎಲ್ಲ ಪ್ರಸಿದ್ದ ಟೀವಿ ಚಾನೆಲ್ಗಳು ಹೆಂಗಸರನ್ನು ಪ್ರಮುಖ ಪ್ರೇಕ್ಷಕರು ಎಂದು ಪರಿಗಣಿಸಿ ಧಾರವಾಹಿಗಳನ್ನು ಮಾಡುತ್ತವೆ. ಹಲವಾರು ಚಿತ್ರೀಕರಣ ತಂಡಗಳು ಹಗಲು ರಾತ್ರಿ ತಲೆಕೆಡೆಸಿಕೊಂಡು ಹೆಂಗಸರ ಮನರಂಜನೆಗಾಗಿ ದುಡಿಯುತ್ತಿವೆ. ಇದನ್ನು ನೀವು ಮಹಿಳೆಯರಿಗೆ ಸಿಗುತ್ತಿರುವ ಗೌರವವೆಂದಾಗಲೀ, ಪರಿಗಣನೆ ಎಂದಾಗಲಿ ಮಹಿಳಾವಾದದಡಿಯಲ್ಲಿ ಹೇಳಲು ಆಕ್ಷೇಪವಿಲ್ಲವಷ್ಟೆ? ಆದರೆ ಈ ಧಾರಾವಾಹಿಗಳಲ್ಲಿ ಬರುವ ವಿಷಯಗಳು, ಅವನ್ನು ಪ್ರಸ್ತುತಪಡಿಸುವ ರೀತಿ (ಬೆರಳೆಣಿಕೆಯ ಕೆಲವನ್ನು ಹೊರತು ಪಡಿಸಿ) ಹೆಂಗಸರ ಬುದ್ದಿ ಯಾವ ಮಟ್ಟದಲ್ಲಿದೆ ಎಂದು ನಿರ್ಧರಿಸಿದೆ ಎಂಬುದಕ್ಕೊಂದು ಒಳ್ಳೆಯ ಉದಾಹರಣೆ. ಅದಿರಲಿ ನಮ್ಮ ಚಾನೆಲ್ಗಳು ಟಿ.ಆರ್.ಪಿ ದುರಾಸೆಗಾಗಿ ಪ್ರಸಾರ ಮಾಡುವ ಜ್ಯೋತಿಷ್ಯ ಕಾರ್ಯಕ್ರಮಗಳನ್ನೇ ತೆಗೆದುಕೊಳ್ಳಿ, ಅಲ್ಲೊಬ್ಬ ತಲೆಕೆಟ್ಟ ಬ್ರಹ್ಮಾಂಡ ಸ್ವಾಮಿ, ’ಕುಂಕುಮವಿಟ್ಕೊಳ್ದೆ ಗಂಡಸತ್ತವರಂತೆ, ಬೂಬಮ್ಮಗಳಂತೆ ಇರ್ಬೇಡಿ’ ಎಂದು ಘಂಟಾಘೋಷವಾಗಿ ಹೇಳ್ತಾನೆ. ಇಂತಹ ಮಾತನ್ನು ನಾವು ಖಂಡಿಸಬೇಕು ಅಲ್ಲವೇ? ಆದರೆ ನಮ್ಮಲ್ಲಿ ಎಷ್ಟು ಜನ ಮುಟ್ಟಾದಾಗ ದೇವರ ಕೋಣೆಗೆ ಹೋಗಲು ಹಿಂಜರಿಯುವುದಿಲ್ಲ? ಅದೊಂದು ನೈಸರ್ಗಿಕ ಕ್ರಿಯೆ ಎಂದು ಎಷ್ಟೇ ವೈಚಾರಿಕವಾಗಿ ಹೇಳಿದರೂ, ಓದಿದ್ದರೂ, ತಿಳಿದಿದ್ದರೂ ಮುಟ್ಟಾಗುವುದು ನಮಗೆ ಮೈಲಿಗೆಯೇ. ಇಂತಹದ್ದೊಂದು ಪದ್ದತಿಯನ್ನು ನಂಬುತ್ತಿದ್ದೇವೆ, ಅನುಸರಿಸುತ್ತಿದ್ದೇವೆ ಎಂದರೆ ನಮಗೆ ಅದರದೇ ಮುಂದುವರೆದ ಭಾಗವಾದ ಕುಂಕುಮವಿಡುವುದು, ಬಳೆಹಾಕಿಕೊಳ್ಳುವುದು choice ಆಗಿ ಉಳಿಯುವುದಿಲ್ಲ, ಅನಿವಾರ್ಯತೆಯಾಗಿಬಿಡುತ್ತದೆ.

ಇಷ್ಟೆಲ್ಲಾ ನಾನು ಹೇಳುತ್ತಿರುವುದು ’ಮಹಿಳೆಯರ ಮೇಲಿನ ಭಯೋತ್ಪಾದನೆ’ ಹೆಚ್ಚಾಗುತ್ತಿದೆ ಎಂದಾದರೆ ಮಹಿಳೆಯೇನು ಕೈಲಾಗದವಳಂತೆ ಸುಮ್ಮನೆ ಕೂರಬೇಕಿಲ್ಲ unless she is ok with it. ಕುಡುಕ ಗಂಡನಿಂದ ಒದೆತ ತಿಂದು ಮುಸುಮುಸು ಅಳುತ್ತಾ ಕೂರುವ ಹೆಂಗಸರಿರುವ ಊರಿನಲ್ಲೇ, ಮನೆಗೆ ಸರಿಯಾಗಿ ದುಡ್ಡುಕೊಡುತ್ತಿಲ್ಲವೆಂದು ತಮ್ಮ ಕುಡುಕಗಂಡನನ್ನು ಪೊರಕೆಯಲ್ಲಿ ಹೊಡೆಯುವ, ಪೋಲೀಸ್ಟೇಶನ್ನಿಗೆ ದೂರುಕೊಡುವ ಹೆಂಗಸರಿದ್ದಾರೆ. ವೈದೇಹಿಯವರು ಹೇಳಿದಂತೆ ಹೆಣ್ಣಿನ ದೇಹವೆ ಆಕೆಗೆ ಶತ್ರುವಾಗುತ್ತಿದೆ ಮತ್ತು ಇದರಿಂದಾಗಿ ಆಕೆಯ ಮೇಲೆ ಒಂದು ರೀತಿಯ ಭಯೋತ್ಪಾದನೆ ನಡೆಯುತ್ತಿದೆ. ತುಂಡುಡುಗೆ ತೊಟ್ಟು pose ಕೊಡುವ ನಟಿಯರಿಗೆ ಬೇಕಾದಷ್ಟು ಭದ್ರತೆ ಹಾಗೂ ಅನುಕೂಲ ವಾತಾವರಣವಿರುತ್ತದೆ. ಅದನ್ನು ಜಾಹೀರಾತುಗಳಲ್ಲಿ ಕಂಡು ಸ್ಪೂರ್ತಿಗೊಂಡು ನಾವೆಲ್ಲರೂ ಸಾರ್ವಜನಿಕವಾಗಿ ಹಾಗೆಯೇ ಇರತೊಡಗಿದಾಗ ಅಷ್ಟೇ ರಕ್ಷಣೆ ಇರುವುದಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು. ಫ್ಯಾಶನ್ ಹೆಸರಿನಲ್ಲಿ ವಿದೇಶಿಯರನ್ನು ಅನುಕರಣೆ ಮಾಡಿ Educated fool ಗಳಾಗಬಾರದು. ಅಭದ್ರತೆ ಇದೆಯೆಂದಾದರೆ ಅದನ್ನು ಬದಲಿಸಲು ಯತ್ನಿಸಬೇಕು.

ಇವೆಲ್ಲಾ ಯಾವುದು ಹೀಗೆ ಹರಟೆಕೋಣೆಗಳಲ್ಲಿ ಮಾತಾಡಿದರೆ ಮುಗಿದು ಹೋಗುವಂತದ್ದಲ್ಲ. ಎಲ್ಲರ ಗಮನಕ್ಕೆ ಬರದ ಸಾವಿರಾರು ಘಟನೆಗಳಿರುತ್ತವೆ. ಮಹಿಳೆ ತಾನಾಗೇ ಎಚ್ಚೆತ್ತುಕೊಳ್ಳದೆ ಮೌಢ್ಯಗಳಿಂದ ಹೊರಬರದೆ, ಪರಿಸ್ಥಿತಿಯನ್ನು ಎದುರಿಸದೇ, ಇಂತಹ ಮಾತುಗಳು, ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಅಲ್ಲೊಬ್ಬ ಅಪ್ಪ ಹೆಣ್ಣುಮಗುವೆಂದು ಕೋಪಗೊಂಡು ತನ್ನ ಮಗುವನ್ನೇ ಕೊಂದುಹಾಕಿದ ಎಂದರೆ ನಾವಿಲ್ಲಿ ಲೊಚಗುಟ್ಟಿ ಸುಮ್ಮನಾಗಬಹುದು. ಕ್ರಿಯೆಯಲ್ಲಿ ಕಾಣದ್ದು ಬರೀ ಒಣವಾದವಾಗಿ ಉಳಿದುಬಿಡುವ ಭಯವಿದೆ.

(ಅಂತಃಪುರವೆಂಬ ಫೇಸ್ಬುಕ್ ತಾಣದ ಚರ್ಚೆಗಳಿಂದ ಪ್ರೇರಿತವಾದ ಬರಹವಾದರೂ ಪ್ರತ್ಯೇಕವಾಗಿ ಓದಿಕೊಳ್ಳಬಹುದೆನಿಸಿದ್ದರಿಂದ ಇಲ್ಲಿ ಹಾಕಿದ್ದೇನೆ.)

ಸಿದ್ಲಿಂಗು – A review

ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು.

ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.

ಚಿತ್ರದಲ್ಲಿ ಒಂದೊಂದು ಪಾತ್ರವನ್ನು ಮೂಡಿಸಿರುವ ರೀತಿ ವಿಶಿಷ್ಟವಾಗಿದೆ. ಪಾತ್ರಗಳು ಒಂದಕ್ಕೊಂದು ಪರಿಚಯವಾಗುವುದು ಇನ್ಸಿಡೆಂಟಲ್ ಎನಿಸುತ್ತ ಸಹಜತೆಗೆ ಹತ್ತಿರವಾಗಿದೆ.ಎಲ್ಲ ಪಾತ್ರಗಳೂ ಇನ್ನೊಂದು ಪಾತ್ರಕ್ಕೆ ಸಹಾಯ ಮಾಡುತ್ತಲೇ ಹತ್ತಿರವಾಗುತ್ತವೆ, ಯಾರಿಗೆ ಯಾರೂ ಅನಿವಾರ್ಯವಲ್ಲ. ಇತ್ತೀಚಿನವರೆಗೂ ತೀರ ಭಾವುಕವೆನಿಸುತ್ತಿದ್ದ ಎಂದುಕೊಳ್ಳುತ್ತಿದ್ದ ಅಪ್ಪ ಅಮ್ಮ ಪ್ರೇಯಸಿ ಎಂಬಂತಹ ಪಾತ್ರಗಳು ಇಲ್ಲಿ ಅಷ್ಟು ಆಳವೆನಿಸದೇ ತೀರ ಹಗುರವಾಗಿ ಮೂಡಿಸಿದಂತಿದೆ. ಅಚಾನಕ್ಕಾಗಿ ಹುಟ್ಟುವ ಪಾತ್ರಗಳು ಅವು ಕಳೆದು ಹೋಗುವ ರೀತಿಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಿಸದಿರುವುದು ತಿಳಿಯುತ್ತದೆ. ಲೆಕ್ಚರರ್ ಒಬ್ಬಳು ಕಾರಣವೇ ಇಲ್ಲದಂತೆ ತನ್ನ ವಿದ್ಯಾರ್ಥಿಯತ್ತ ಆಕರ್ಷಿತಳಾಗಿ ಮೈ ಒಪ್ಪಿಸಿಬಿಡುವ ದೃಶ್ಯ ತೀರ ಸಹಜವೆಂಬಂತೆ ಹೇಳಲಾಗಿದೆ. ಇಡೀ ಕತೆಯಲ್ಲಿ ಗಂಭೀರ ಎನಿಸುವುದು, ಭಾವನಾತ್ಮಕವಾಗಿ ತಟ್ಟುವುದು ಬಾಲಕ ಸಿದ್ಲಿಂಗುವಿನ ಪ್ರೇಮ ಪ್ರಸಂಗ. ಕಡಿಮೆ ದೃಶ್ಯಗಳಲ್ಲೇ ಆ ಪಾತ್ರಕ್ಕಿರುವ ಪ್ರಾಮುಖ್ಯತೆ ಆಳ, ಇಡೀ ಸಿನಿಮಾದ ತುಂಬಾ ಇರುವ ಯುವಕ ಸಿದ್ಲಿಂಗುವಿಗೆ ಸಿಗದಿರುವುದು ವಿಪರ್ಯಾಸ. ಪ್ರತಿ ಪಾತ್ರವನ್ನು ಹಗುರವಾಗಿ ಮೂಡಿಸಿ ಸೀರಿಯಸ್ ನೆಸ್ ನತ್ತ ತಳ್ಳುವುದು, ಮುಂಗಾರು ಮಳೆಯಿಂದಲೂ ನಡೆದು ಕೊಂಡು ಬಂದಿರುವ ಪದ್ದತಿಯೇ, ಆದರೆ ಈ ಸಿನಿಮಾದಲ್ಲಿ ಗಂಭೀರತೆಯೂ ಎಲ್ಲೂ ಪ್ರಮುಖವಾಗಿಲ್ಲ ಹಾಗಾಗಿ ಕಡೆಯಲ್ಲಿ ನಾಯಕಿ ಸತ್ತರೂ ಅದು ಕತೆ ಹೇಳುತ್ತಿರುವ ರೀತಿಗೆ, ನಡೆದಷ್ಟೇ accidental ಎನಿಸಿ ಮರೆತು ಹೋಗುತ್ತದೆ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣತೆಯ ಹಿನ್ನೆಲೆಯಲ್ಲಿ ಕತೆಯನ್ನು ಬಿಡಿಸುತ್ತಾ ಮುಂದುವರೆಯುವ ಚಿತ್ರ, ಕತೆಗೆ ಅನಿವಾರ್ಯವೆನಿಸುವಂತೆ ನಾಯಕನಿಗೆ ಕಾರಿನ ಬಗ್ಗೆ ಇರುವ ಗೀಳನ್ನು ತೋರಿಸುತ್ತದೆ. ಸಿದ್ಲಿಂಗುವಿನ ಜೀವನದ ಜೊತೆ ಕಾರು, ಕಾರಿನ ಬಗ್ಗೆ ಆತನ ಕನಸನ್ನು ವಿಸ್ತರಿಸುತ್ತಾ ಸಾಗುತ್ತದೆ. ಇಡೀ ಕತೆಯಲ್ಲಿ ಬಂದು ಮರೆಯಾಗುವ ಪಾತ್ರಗಳಲ್ಲಿ ಇಲ್ಲದ ಗಟ್ಟಿತನವನ್ನು ಕಾರಿಗೆ ನೀಡಲಾಗಿದೆ. ಪಾತ್ರಗಳನ್ನು ಬೇಕೆಂದಲ್ಲಿ ಸೃಷ್ಟಿಸಿ ಬೇಡವೆಂದಲ್ಲಿ ಸಾಯಿಸಿಬಿಟ್ಟಿರುವ ನಿರ್ದೇಶಕರು ಕಾರಿಗೊಂದು ಕೊನೆಯೇ ಕೊಡುವುದಿಲ್ಲ. ಯಾವ ಪಾತ್ರಕ್ಕೂ ಸ್ಪಷ್ಟನೆ ಯಾಗಲೀ ಫ್ಲಾಶ್ ಬ್ಯಾಕ್ ಆಗಲೀ ಇಲ್ಲವೇ ಇಲ್ಲ. ಎಲ್ಲರೂ ಸಿದ್ಲಿಂಗುವಿಗೆ ಪರಿಚಯವಾಗಲೆಂದೇ ಕಾಯುತ್ತಿರುವ ಪಾತ್ರಗಳು, ಸಿದ್ಲಿಂಗುವಿನೊಂದಿಗಲ್ಲದೆ ಅವಕ್ಕೆ ಬೇರೆಲ್ಲೂ ಇರವೇ ಇಲ್ಲ. ಹೀಗೆ ಅಸ್ಪಷ್ಟವಾದ ಒಂದು ಕತೆಯನ್ನು ಹೇಳಲು ಹೊರಟು, ಹೇಳುವಾಗಲೂ ಸ್ಪಷ್ಟತೆ ಕಂಡುಕೊಳ್ಳದೆ, ಕೊನೆಯನ್ನು ಪರಿಣಾಮಕಾರಿಗೊಳಿಸುವತ್ತ ಕೆಂದ್ರೀಕೃತಗೊಂಡು ಅಬ್ರಪ್ಟ್ ಆಗಿ ಮುಗಿದು ಹೋಗುತ್ತದೆ.

ಹುಡುಗ, ಹುಡುಗಿ – ನಿರೂಪಕ

ಹುಡುಗಿ:
ಎಲ್ಲವೂ ನಾಟಕ! ನನಗೆ ನಿಜವಾಗಿ ನಿನ್ನ ಹತ್ತಿರ ತೋಡಿಕೊಳ್ಳುತ್ತಿದ್ದಷ್ಟು ತೀವ್ರವಾಗಿ ನೋವಾಗುತ್ತಿರಲಿಲ್ಲ, ನಿನ್ನ ಕನಿಕರ, ಕರುಣೆಯಿಂದ ತುಂಬಿದ ಪ್ರೀತಿಯಲ್ಲಿ ನನ್ನನ್ನು ನೀನು ಸಮಾಧಾನಿಸುತ್ತಿದ್ದ ರೀತಿ ನನಗೆ ಇನ್ನಷ್ಟು ಮತ್ತಷ್ಟು ಬೇಕೆನಿಸುತ್ತಿತ್ತು. ಅದಕ್ಕೆ ನನ್ನೆಲ್ಲಾ ಕಷ್ಟಗಳನ್ನು ನಿನ್ನ ಕಣ್ಣು ತುಂಬಿ ಬರುವಂತೆ ವರ್ಣಿಸುತ್ತಿದ್ದೆ. ಮತ್ತೆ ಮತ್ತೆ ನಿನ್ನ ಕನಿಕರದ ಎಂಜಲಿಗೆ ಆಸೆ ಪಡುತ್ತಿದ್ದೆ. ಇಷ್ಟು ಅಂದು ಸುಮ್ಮನಾದವಳು ಆಚೀಚೆ ಒಮ್ಮೆ ಕಣ್ಣಾಡಿಸಿ ಪರ್ಸಿನಿಂದ ಸಿಗರೇಟೊಂದನ್ನು ತೆಗೆದು ಹೊತ್ತಿಸಿ, ಬೆನ್ನನ್ನು ಕುರ್ಚಿಗಾನಿಸಿ ಮೈ ಸಡಿಲಿಸಿ ಆರಾಮಾಗಿ ಎಂಬಂತೆ ಕೂತಳು.

ತಾನು ಸಿಗರೇಟು ಹಚ್ಚಿದ್ದು ಅವನಿಗೆ ಶಾಕ್ ಆಗಿದೆ ತೋರಿಸಿಕೊಳ್ಳುತ್ತಿಲ್ಲ ಇವನು ಎಂದುಕೊಂಡವಳ ಮುಖದಲ್ಲಿ ಅಣಕದ ಕಿರು ನಗೆಯು ಮೂಡಿತು. ಮುದ್ದು ಮುದ್ದು ಮಗುವಿನಂತೆ ಮಾತಾಡುತ್ತಾ ನನ್ನನ್ನು ಮರುಳು ಮಾಡುತ್ತಿದ್ದವಳು. ದುಃಖ ಹೆಚ್ಚಾಗಿ ಮಾತಡಲು ಆಗದಂತೆ ಗಂಟಲು ಕಟ್ಟಿ ಬಿಕ್ಕಿ ತನ್ನೆದೆಗೆ ಒರಗುತ್ತಿದ್ದವಳು, ಪುಟ್ಟ ಬೊಟ್ಟಿನ, ಮುತ್ತಿನ ಮೂಗುತಿಯ ಪಾಪು ಪಾಪು ಮುಖದ ಹುಡುಗಿಯೇ ಹೀಗೆ ಜಗತ್ತಿನ ಕ್ರೌರ್ಯವೆಲ್ಲ ತುಂಬಿಕೊಂಡ ಕಣ್ಣುಗಳಿಂದ, ಒಂದೊಂದೇ ಸತ್ಯವನ್ನು ಬಿಚ್ಚಿಟ್ಟು ತನ್ನ ಮುಂದೆ ಬೆತ್ತಲಾಗುತ್ತಿರುವುದು? ಎಂದುಕೊಳ್ಳುತ್ತಿರುತ್ತಾನೆ ತನಗೆ ಗೊತ್ತು.

ಹೀಗೆಲ್ಲ ಯಾಕೆ ಮಾಡಿದೆ ಎಂದು ಕಪಾಳಕ್ಕೆ ಹೊಡೆದು ಕೇಳಬೇಕೆನಿಸುತ್ತದಲ್ಲ? ಜಗತ್ತಿನಲ್ಲಿರುವ ಎಲ್ಲ ಕೆಟ್ಟ ಬೈಗುಳಗಳನ್ನು ಬಳಸಿ ­­­­­­­­­ನನ್ನನ್ನು ಬೈಯ್ಯಬೇಕೆನಿಸುತ್ತದೆ ನಿನಗೆ, ಆದರೆ ನೀನು ಹಾಗೆ ಮಾಡೋಲ್ಲ. ನನಗೆ ಗೊತ್ತು ನಿನಗೆ ಉದಾತ್ತನಾಗುವ ಬಯಕೆ. ನನ್ನೆದುರು ನೀನು ಕೆಳಗಿಳಿಯಲಾರೆ. ಉದಾತ್ತತೆಯ ಪೀಠವೇರಿ ಕೂತಿರ್ತೀಯ. ನೀನು ಏನೆಂದರು, ಏನು ಮಾಡಿದರು ನನಗೇನಾಗದು ನಾನಿನ್ನೂ ನಿನ್ನ ಬಯಸ್ತೀನಿ ಎಂಬ ಮತ್ತದೇ ಕೊಳೆತ ಕನಿಕರ. ಅಲ್ಲವೇ? ಸಿಗರೇಟನ್ನ ದೀರ್ಘವಾಗೊಮ್ಮೆ ಸೇದಿ ಎರೆಡು ಕ್ಷಣ ತಡೆದು ಉಸಿರು ಬಿಟ್ಟಳು.

ಇದ್ದಕ್ಕಿದ್ದಂತೆ ಏಕೆ ಹೋದೆ ಆರು ತಿಂಗಳು ಏನು ಮಾಡಿದೆ ಯಾರ ಕೈಗೂ ಸಿಗದೆ ಭೂಗತವಾಗಿದ್ದೇಕೆ? ನಿನಗೋಸ್ಕರ ಎಷ್ಟು ಹುಡುಕಿದೆ ಗೊತ್ತಾ? ನನ್ನ ಪ್ರೀತಿ ಅಷ್ಟು ಹಿಂಸಿಸುತ್ತಿತ್ತ ನಿನ್ನ? ಎಂದೆಲ್ಲ ಕೇಳುತ್ತಾನಾ, ಕೇಳುಬಹುದು ಎನಿಸಿತು. ಆ ದೊಡ್ಡ
ಕಾಫಿ ಕಪ್ಪನ್ನೆತ್ತಿ ಮತ್ತೊಂದು ಗುಟುಕು ಹೀರಿದಳು. ಏನನ್ನೂ ಹೇಳದ ಅವನ ನಿರ್ಭಾವುಕ ಮುಖ ಇವಳನ್ನು ಉರಿಸುತ್ತಿತ್ತು.

ಕೆಲವರಿಗೆ ಖುಷಿಯಾಗಿರುವುದು ಸಂಕಟವಾಗುತ್ತೆ. ನಿನಗೆ ಕೇಳಿದರೆ ವಿಚಿತ್ರವೆನಿಸಬಹುದು. ಆದರೆ ಅದು ಹಾಗೆ. ಎಲ್ಲ ಸರಿ ಇದ್ದರೆ ಅವರು ಸಹಿಸಲಾರರು ಜೀವನದ ತುಂಬ ಗೋಳಿರಬೇಕು ಅದನ್ನು ವಿಧ ವಿಧವಾಗಿ ವರ್ಣಿಸಿ ಗೋಳಾಡಿ ಅಳಬೇಕು, ಇನ್ನೊಬ್ಬರು ಅದನ್ನು ಕೇಳಿ ಕನಿಕರಿಸಬೇಕು. ಅದೇ ಅವರಿಗೆ ಸಂತೋಷ. ಕನಿಕರದ ಕಸವೇ ಬೇಕೆನಿಸುವ ಜಾಯಮಾನ. ನಾನು ಹಾಗೆ ಇದ್ದೇ. ಯಾವತ್ತೂ ಬೇಸರವೆನಿಸದ ಅಪ್ಪನ ಕುಡಿತ, ಅಮ್ಮನ ಬೈಗುಳ, ಅಕ್ಕನ ಸ್ವಾರ್ಥ ನಿನ್ನ ಮುಂದೆ ವರ್ಣಿಸುವಾಗ ರೆಕ್ಕೆ ಪುಕ್ಕ ಪಡೆದ ಹಕ್ಕಿಯಾಗುತ್ತಿತ್ತು. ನೀ ಕೇಳುತ್ತೀ ಕನಿಕರದಿಂದ ಕೇಳುತ್ತೀ ಎಂಬ ಒಂದೇ ಕಾರಣಕ್ಕೆ ಜಗತ್ತಿನ ಅತಿ ಪಾಪದ ವ್ಯಕ್ತಿ ನಾನು ಎಂದು ಕಥೆ ಕಟ್ಟಿ ಹೇಳುತ್ತಿದ್ದೆ. ಈಗಿಷ್ಟು ದಿನ ಆದಮೇಲೆ ನಿನ್ನ ಮುಂದೆ ಬಂದು ಎಲ್ಲವನ್ನು ಹೀಗೆ ಹೇಳಿಕೊಳ್ಳುತ್ತಿದ್ದೇನಲ್ಲ, ಹೀಗಾಗಲೆಂದೇ ನಿನ್ನನ್ನು ಒದ್ದುಕೊಂಡು ಹೋಗಿದ್ದು. ನೀನಿರುವಷ್ಟು ದಿನ ಗೋಳಿಡುತ್ತಲೇ ಇರುತ್ತಿದ್ದೆ. ಕೊನೇ ಇಲ್ಲದ ಕತೆ ನನ್ನದು, ಪದೇ ಪದೇ ಕೇಳುತ್ತಿದ್ದ ನಿನಗೆ ಬೇಜಾರಾಗಲು ಶುರುವಾಗಿರೋದು, ನೀ ಒದ್ದು ಹೊರಡುತ್ತಿದ್ದೆ. ಹಾಗಾಗುವುದಕ್ಕೂ ಮೊದಲೇ ನಾನೇ ಹೊರಟೆ. ನನಗೆ ಗೊತ್ತು ಈಗಿನ ನನ್ನನ್ನು ನೀನು ಜೀರ್ಣಿಸಿಕೊಳ್ಳಲಾರೆ ಎಂದು ನನಗೆ ಅದರ ಭಯವಿಲ್ಲ. ನೀನು ಸಿಕ್ಕರೂ ಸಿಗದಿದ್ದರು ಅಂತಹ ವ್ಯತ್ಯಾಸವೇನು ಆಗದು. ಹೀಗೆ ನನ್ನೆಲ್ಲ ಕ್ರಿಯೆಗಳಿಗೆ ನೀನಷ್ಟೇ ಕಾರಣವಾಗಿ ಹೋದೆ ಎಂದು ಯೊಚಿಸುತ್ತಿದ್ದೆ. ನಿನ್ನಲ್ಲಿ ಕಳೆದುಕೊಂಡ ನನ್ನನ್ನು ಹುಡುಕಿಕೊಂಡು ಹೊರಟ ನನಗೆ ವಾಪಸ್ಸು ಬಂದು ನನ್ನ ಪ್ರವರ ಹೇಳಬೇಕೆನಿಸಿದ್ದು ನಿನಗೇನೆ! ತಮಾಷೆಯಲ್ಲವ? ನಾನಿನ್ನೂ ನಿನ್ನನ್ನು ಮೀರಿ ಬೆಳೆದೇ ಇಲ್ಲ, ಯೋಚಿಸಿಯೇ ಇಲ್ಲ. ನೀನಷ್ಟೇ ಇರುವಾಗಿ ನನ್ನಿಂದ ನಾನು ಕಳೆದು ಹೋಗಿದ್ದೇನೆ, ಹುಡುಕಿ ಹೊರಟು ಊರೆಲ್ಲ ಸುತ್ತಿ ಬಂದದ್ದು ನಿನ್ನ ಕಾಲ ಬುಡಕ್ಕೆ!

ಕಾಫಿಯ ಕಪ್ಪನ್ನು ಎತ್ತಿಕೊಳ್ಳಲು ಹೋದ ಅವಳ ಕೈ ಸೂಕ್ಷ್ಮವಾಗಿ ಕಂಪಿಸಿ, ಪಿಂಗಾಣಿ ಕಪ್ಪು ಕಟಕಟಿಸಿತು. ಅವನು ಏನಾದರೂ ಮಾತನಾಡುತ್ತಾನೇನೋ ಎಂದು ಕಾದಳು, ಅವನು ನಿರ್ಲಿಪ್ತನಾಗಿ ಕೂತೆ ಇದ್ದ ರೀತಿಯಿಂದ ಅವಳಿಗೆ ಕಿರಿಕಿರಿಯಾಯಿತು.

ಹುಡುಗ:

ಹಾಗೆ ಮಾತಾಡುತ್ತಿದ್ದವಳ ಕಣ್ಣೊಳಗೆ ಇಳಿಯುತ್ತಿದ್ದೇನೇನೋ ಎಂದೆನ್ನುವಂತೆ ಅವಳ ಕಣ್ಣುಗಳನ್ನೇ ನೋಡುತ್ತಿದ್ದ. ಹುಡುಗರು ಒಬ್ಬೊರಿಗೊಬ್ಬರು ಇಷ್ಟು ಕಾಂಪ್ಲಿಕೇಟೆಡ್ ಅಲ್ಲವೇ ಅಲ್ಲ, ಹುಡುಗಿಯರದು ಸಿಕ್ಕಾಪಟ್ಟೆ ಸಿಕ್ಕಲು ವ್ಯಕ್ತಿತ್ವ, ಹೇಗೆಂದರೆ ಹೀಗೆ ಕಾಂಪ್ಲಿಕೇಟೆಡ್ ಅನ್ನುವ ಶಬ್ದದಿಂದಲೂ ಅವರನ್ನು ಅಳೆಯಲು ಹೋಗಬಾರದು. ಇಷ್ಟೇ ಎಂದು ಹೇಳಿಬಿಡಲು ಕರಾರುವಾಕ್ ಆಗಿ ಅವರನ್ನು ತೀರ್ಮಾನಿಸಲು ಅವಕಾಶವೇ ಕೊಡುವುದಿಲ್ಲ. ಇನ್ನೇನು ತಿಳಿದುಕೊಳ್ಳುತ್ತಿದ್ದೇನೆ ಎಂದುಕೊಳ್ಳುವಷ್ಟರಲ್ಲಿ ಪೂರ್ತಿ ಯು ಟರ್ನ್ ಮಾಡಿಟ್ಟು ಬಿಡುತ್ತಾರೆ. ಇವಳ ತರಹ. ಇವಳು ಆಗೆಲ್ಲ ಅವಳ ಮನೆಯ ಕಥೆಯನ್ನು ಅಷ್ಟು ಇಂಟೆನ್ಸ್ ಆಗಿ ಹೇಳಿಕೊಳ್ಳುತ್ತಿರಬೇಕಾದರೆ ಒಮ್ಮೊಮ್ಮೆ ಕನಿಕರ ಉಕ್ಕುತ್ತಿದ್ದರೂ ಈಕೆ ಸಣ್ಣದ್ದಕ್ಕೆಲ್ಲಾ ಯಾಕೆ ಹೀಗೆ ತಲೆ ಕೆಡಿಸಿಕೊಳ್ಳುತ್ತಾಳೆ ಎಂದು ಕಿರಿಕಿರಿಯಾಗುತ್ತಿದ್ದೆ. ಮಕ್ಕಳ ಹಾಗೆ ಹಠ ಮಾಡಿ ಗಮನ ತನ್ನೆಡೆಗೆ ಎಳೆದುಕೊಂಡು ಮುದ್ದು ಬರಿಸೋಳು. ಸಮಧಾನ ಮಾಡುವಂತೆ ನಾನೂ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದೆ. ಅಳುತ್ತಿದ್ದಳು, ಇದು ನಿತ್ಯದ ಗೋಳು ಬಿಡು ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು.

ಆಕೆಯ ಮನೆಯವರಂತೂ ನನ್ನ ಪಾಲಿಗೆ ಯಾವತ್ತಿಗೂ ವಿಲನ್ ಗಳೇ ಆಕೆ ಕೊಟ್ಟ ಪರಿಕಲ್ಪನೆ ಇಂದ ಹೊರಗಿಟ್ಟು ನನಗೆ ಯಾರನ್ನು ನೋಡಲಿಕ್ಕೆ ಆಗಲಿಲ್ಲ. ಇವತ್ತಿಗೂ ಅವಳ ಮನೆಯವರು ನನಗೆ ಅಪರಿಚಿತರೇ ಅದಕ್ಕಾಗಿಯೇ ಇವಳು ಹೇಳಿದಷ್ಟೇ ತೀವ್ರತೆಯಿಂದ ಎಲ್ಲವನ್ನು ಒಳಕ್ಕೆ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿದ್ದೆ. ಅವಳು ಮತ್ತೆ ಬಂದಳೆಂಬ ಖುಷಿಯೊಂದಿಗೆ ಆಶ್ಚರ್ಯ ಕೋಪ ಎಲ್ಲವೂ ಒಟ್ಟೊಟ್ಟಾಗಿ ಆಗಿ ಮತ್ತೆಲ್ಲೂ ಅವಳು ಹೋಗಲು ಬಿಡಬಾರದೆಂದುಕೊಳ್ಳುತ್ತ ತನ್ನ ಸೆಲ್ಫ್ ಈಗೊ ವನ್ನು ಬಿಟ್ಟು ನೀನಿಲ್ಲದೇ ಬದುಕಲು ಕಷ್ಟ ಪಡುತ್ತಿದ್ದೇನೆ ಎಂದು ಹೇಳುತ್ತಾ ತಾನು ಅವಳ ಮುಂದೆ ಅತ್ತಂತೆ ಭಾಸವಾಯಿತು. ಸಂಜೆಯಾಗುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದವನಿಗೆ ಸಮಯ ನಿಧಾನಕ್ಕೆ ಸರಿದಂತೆ ಅನಿಸುತ್ತಿತ್ತು. ಕಾಫಿ ಬಾರಿನಲ್ಲಿ ಬಂದು ಕೂತವನು ಅವಳ ಮಾತುಗಳನ್ನು ಕೇಳುತ್ತಾ ತಾನಂದುಕೊಂಡದ್ದನ್ನು ಇವಳಿಗೆ ಹೇಳಲಾರೆ, ಸಡಿಲಾಗಲಾರೆ ಅನ್ನಿಸಿ ಚಡಪಡಿಸಲಾರಂಭಿಸಿದ.

ಇವಳು ಯಾವಾಗಲೂ ಹೀಗೆಯೇ ನನ್ನದೇ ತಪ್ಪೆನಿಸಿ ನನ್ನ ಕೈಯಲ್ಲೇ ಮಂಡಿ ಊರಿಸುತ್ತಾಳೆ. ಅಲ್ಲಿಂದೆದ್ದು ಹೊರಟು ಬಿಡಬೇಕೆನಿಸಿತವನಿಗೆ. ಏನೋ ಕಟ್ಟು ಹಾಕಿದಂತೆ ಕೂತೆ ಇದ್ದ. ತಾನು ಸೋತಿದ್ದು ಎಲ್ಲಿ? ತಾನು ಸೋತಿದ್ದಾದರೂ ಹೌದಾ? ಅವಳದೇ ಆಟ, ಎರಡೂ ಕಡೆಯ ಆಟಗಾರ್ತಿಯೂ ಅವಳೇ, ನಾ ಬರಿಯ ವೀಕ್ಷಕನಾಗಿದ್ದೆ, ಈಗೆಲ್ಲ ನನ್ನದೇ ತಪ್ಪಂತೆ. ಥೂ ತಲೆನೋವಿನ ಸಂಗತಿಗಳು ಇವೆಲ್ಲ. ಯಾವುದಕ್ಕು ಅಂಟದಂತೆ ಇದ್ದು ಬಿಡಬೇಕು. ಹಾಗಿರುವುದು ಹೇಗೆ, ತಾನು ಹಾಗೇ ಇದ್ದದ್ದಲ್ಲವೇ? ಈ ಸುಳಿಗೆ ಸಿಕ್ಕಿದ್ದಾದರೂ ಹೇಗೆ?

ತಾನಷ್ಟು ದಿನ ಅವಳಿಲ್ಲದೇ ಪಟ್ಟ ಸಂಕಟ ಏನಾಗಿ ಹೋಯಿತೋ; ಎಲ್ಲಿ ಕಷ್ಟ ಪಡುತ್ತಿದ್ದಾಳೋ ಎಂದು ನಿದ್ದೆಗೆಟ್ಟ ರಾತ್ರಿಗಳು, ಪ್ರತಿ ವಾರಕ್ಕೊಂದರಂತೆ ಮರೆಯದೇ ಆಕೆಗೆಂದು ಬರೆದು ಎತ್ತಿಟ್ಟುಕೊಳ್ಳುತ್ತಿದ್ದ ಪತ್ರಗಳು. ಎಲ್ಲವನ್ನು ಸಿಗರೇಟಿನ ಬೂದಿಯ ಹಾಗೆ ಒದರಿಬಿಡುತ್ತಿದಾಳೇನೋ ಎಂದವನಿಗೆ ಒಂದು ಕ್ಷಣ ಅನಿಸಿಯೂ. ಕಾಫಿಯ ಕಪ್ಪನ್ನು ತಿರುಗಿ ಟೇಬಲ್ ಮೇಲೆ ಇಟ್ಟ ಅವಳ ಕೈಯನ್ನೊಮ್ಮೆ ಹಿಡಿದ. ಅವಳ ಬಾಯಲ್ಲಿ ಉರಿಯುತ್ತಿದ್ದ ಸಿಗರೇಟಿನ ತುಂಡನ್ನು ತೆಗೆದು ಆರಿಸಿದ. ಕಡೆಯ ಬಾರಿಯ ಸಿಗರೇಟಿನ ಹೊಗೆ ಅವಳ ಬಾಯಿಂದ ಹೊರ ಬಂತು. ಕಣ್ಣಲ್ಲಿ ಕಟ್ಟಿದ್ದ ಕಂಬನಿ ಕಟ್ಟೆಯಲ್ಲಿ ಸಿಗರೇಟಿನ ಹೊಗೆ ಹೊಳೆದಿತ್ತು.

ನಿರೂಪಕ:
ಪಾತ್ರಗಳನ್ನು ಸೃಷ್ಟಿಸಿದ ನಿರೂಪಕನ ಕೈಯಿಂದ ನಿರೂಪಣೆಯನ್ನು ಬಿಡಿಸಿ ಪಾತ್ರಗಳೇ ಬೆಳೆದುಬಿಡುವಂತಿದ್ದರೆ ಈ ಕತೆಗೆ ಒಂದು ಅಂತ್ಯವಾದರೂ ಸಿಕ್ಕುತ್ತಿತ್ತು. ಆದರೆ ಹಾಗಾಗದೆ ಸೃಷ್ಟಿಸಿದವನ ಬೆನ್ನಿಗೆ ಅವಕ್ಕೊಂದು ಕೊನೆಯನ್ನು ಕೊಡುವ ಹೊಣೆಯೂ ಅಂಟಿರುತ್ತದೆ. ಇಲ್ಲಿರುವ ಎರೆಡು ಪಾತ್ರದ ಸುತ್ತಲಿರುವ ಕತೆ ಮತ್ತದರಿಂದ ನಿರ್ಗಮಿಸುವ ರೀತಿಯೂ ಅವು ಸೃಷ್ಟಿಯಾದಷ್ಟೇ ವಿಚಿತ್ರ. ಕತೆಯನ್ನು ಕತೆಯಾಗಿ ಬರೆದಿದ್ದರೆ, ಅವರಿಬ್ಬರು ದೂರದಾಗಿನಿಂದ ಶುರುಮಾಡಿ ಇಲ್ಲಿಯವರೆಗೆ ತಂದು ಇಬ್ಬರನ್ನು ಒಂದು ಮಾಡಿ ಮುಗಿಸಬಹುದಿತ್ತು. ಇದರ ಶುರುವಿಗೇ ಕೊನೆಯು ಅಂಟಿಕೊಂಡಿದೆ. ಅವನಿಂದ ದೂರಾಗ ಬಯಸಿ ಹೋದ ಅವಳಿಗೆ ಅವನನ್ನು ಬಿಟ್ಟು ದೂರಾಗಬಲ್ಲೆನೆಂಬ ಹೆಮ್ಮೆಗೆ ಜಂಭಕ್ಕೆ ಮತ್ತೆ ಅವನದೇ ಅಂಗೀಕಾರ ಬೇಕಾಯಿತು. ಆಕೆಯ ಭಾವನೆಗಳನ್ನು ಅಳೆದು ಸುರಿದು ನಂಬಲು ಹೆಣಗುತ್ತಿದ್ದ ಅವನಿಗೆ ಅವನೆಲ್ಲಾ ಊಹೆಗಳು ನಿಜವಾದೆಂತೆ ಅವಳೇ ಬಂದು ಹೇಳುತ್ತಾ ಕುಳಿತಿದ್ದಾಳೆ. ಒಬ್ಬರಲ್ಲೊಬ್ಬರು ಬೆರೆತು ಹೋದ, ಒದ್ದುಕೊಳ್ಳಲು ಹೆಣಗುತ್ತಿರುವ, ಬಿಟ್ಟು ಹೊರಡಲೂ ಆಗದ, ಬಾಗಿ ಹೊರಲೂ ಆಗದ, ತಮ್ಮ ತಮ್ಮ ಹೆಣವನ್ನು ಇನ್ನೊಬ್ಬರ ಬೆನ್ನ ಮೇಲೆ ಹೊರಿಸುತ್ತಾ ಬದುಕುತ್ತವೆ. ಬೆಳೆಯಲು ಪಾತ್ರಗಳಿಗೂ ಇಷ್ಟವಿಲ್ಲ, ಬೆಳೆಸಲು ನಿರೂಪಕನಿಗೂ ಅವಕಾಶವಿಲ್ಲ. ಕತೆಯು ಅಪೂರ್ಣವೆನಿಸಿದರೆ ಇದಕ್ಕೆ ಮೂವರೂ ಜವಬ್ದಾರರಲ್ಲ.

ವಿವೇಕಾನಂದರು ನಮಗೆಷ್ಟು ಗೊತ್ತು?

ಈಗಾಗಲೇ ಕಾಂಟ್ರಾವರ್ಷಿಯಲ್ ನ ಉತ್ತುಂಗದಲ್ಲಿರುವ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗಿದೆ ಎನ್ನಲಾದ ದಿನೇಶ್ ಅಮಿನ್ ಮಟ್ಟುರವರ ಲೇಖನದ ರೆಫರೆನ್ಸ್ ಇಟ್ಟುಕೊಂಡೇ ಬರೆಯುತ್ತಿದ್ದೇನೆ. ಶಾಲೆಯ ದಿನಗಳಲ್ಲಿ ನನಗೆ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದವರು, ಹೊರದೇಶದಲ್ಲಿ ಭಾರತದ ಬಗ್ಗೆ ಮಾತನಾಡಿ ಮನ್ನಣೆ ಪಡೆದವರು ಎಂಬಂತಹ ಬೇಸಿಕ್ ಮಾಹಿತಿಗಳನ್ನು ಬಿಟ್ಟರೆ ಹೆಚ್ಚೇನು ತಿಳಿದಿರಲಿಲ್ಲ. ಕಾಲೇಜಿನ ದಿನಗಳಲ್ಲಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ, ಬಡವರ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದರೂ ಕಿಟಕಿಯಿಂದ ಕೈಗೆ ಸಿಕ್ಕಿದ್ದನ್ನು ಬಿಕ್ಷುಕರಿಗೆ ದಾನ ಮಾಡಿಬಿಡುತ್ತಿದ್ದರು ಎಂದೆಲ್ಲಾ ಉರು ಹಚ್ಚಿ ಭಾಷಣಗಳಲ್ಲಿ ಒಪ್ಪಿಸುತ್ತಿದ್ದದ್ದೇ ಹೊರತು ಒಬ್ಬ ವ್ಯಕ್ತಿಯಾಗಿ, ಸಾಧಕರಾಗಿ, ಅದೆಷ್ಟೋ ಜನರಿಗೆ ಪ್ರೇರಕ ಶಕ್ತಿಯಾದ ವಿವೇಕಾನಂದರ ಚಿಂತನೆಗಳನ್ನು ನಿಲುವುಗಳನ್ನು ಬಿಂಬಿಸುವಂತಹ ಮಾಹಿತಿ ಶಾಲೆ ಅಥವಾ ಕಾಲೇಜಿನ ದಿನಗಳಲ್ಲಿ ದಕ್ಕುವುದು ವಿರಳವಾಗಿತ್ತು.

ಇಂತಹ ಪುಸ್ತಕದಲ್ಲಿ, ಹೀಗೆ, ಇಂತಹವರು ಹೇಳಿದ್ದಾರೆ ಎಂದು ಇಡೀ ಪುಸ್ತಕವನ್ನೇ ಇಂಡೆಕ್ಸ್ ಮಾಡಿಕೊಂಡಿದ್ದ ಖ್ಯಾತ ಕಾದಂಬರಿಯೊಂದನ್ನು ಓದಿ ವಿವೇಕಾನಂದರ ನಿಜದ ನಿಲುವು ಹೀಗಿತ್ತೇ ಎಂದು ಗೊಂದಲಕ್ಕೊಳಗಾಗಿ ಅವರ ಬಗ್ಗೆ ಓದಲು ತೊಡಗಿದೆ. ಸೆಂಟ್ರಲ್ ಲೈಬ್ರರಿಯ ಹತ್ತಾರು ಪುಸ್ತಕಗಳ ನಡುವೆ ಆಸಕ್ತಿಕರ ಎನಿಸಿದ ಪುಸ್ತಕ ‘Swami Vivekananda On Himself’, ಆತ್ಮ ಕಥೆ ಎಂದು ಹೇಳಲು ಬರದಿದ್ದರೂ ಆ ಪುಸ್ತಕದಲ್ಲಿದ್ದದ್ದೆಲ್ಲಾ ವಿವೇಕಾನಂದರ ಬರಹಗಳೇ, ಅವರ ಡೈರಿಯಿಂದ ಹೆಕ್ಕಿದ್ದು, ಹಲವರ ಜೊತೆ ಹಂಚಿಕೊಂಡ ಪತ್ರಗಳು ಹೀಗೆ ಅವರ ವಿಚಾರಗಳನ್ನು ಹಿಡಿಯಾಗಿ ಬಿಂಬಿಸುವಂತಹ ಪುಸ್ತಕವದು. ಓದಿ ಮುಗಿಸುವಷ್ಟರಲ್ಲಿ ಅವರ ಚಿಂತನೆಗಳಿಂದ ತೀವ್ರ ಪ್ರಭಾವಿತಳಾಗಿದ್ದೆ. ವಿವೇಕಾನಂದರು ಮತ್ತವರ ಚಿಂತನೆಗಳು ಎಲ್ಲಾ ಕಾಲಕ್ಕು ಅನ್ವಯವಾಗುವಂತವು. ತಮ್ಮ ಬರಹಕ್ಕೆ ಬೆಂಬಲಿಸುವಂತದ್ದಷ್ಟೇ ಮುಖ್ಯವಾಗಿಸಿಕೊಂಡು ಅವರು ಹೀಗಿದ್ದರು ನೋಡಿ ನಾನು ಹೇಳುತ್ತಿರುವುದೂ ಅದನ್ನೇ ಎಂದು ತಮ್ಮ ವಿಕೃತಿಯನ್ನು ವಿವೇಕಾನಂದರ ಮೇಲೆ ಹೇರಲೆತ್ನಿಸಿದ ಆ ಖ್ಯಾತ ಕಾದಂಬರಿಕಾರರ ಬಗ್ಗೆ ಯೋಚಿಸಿ ನಗು ಬಂದಿತ್ತು.

ವಿವೇಕಾನಂದರು ಹುಕ್ಕ ಸೇದುತ್ತಿದ್ದರು, ಅವರಿಗೆ ಮದುವೆ ಮಾಡಲು ಅವರ ತಾಯಿ ಇನ್ನಿಲ್ಲದ ಪ್ರಯತ್ನ ಪಟ್ಟು ಸೋತು ನೊಂದಿದ್ದರು, ಎಂಬಷ್ಟೇ ಮಾಹಿತಿಗಳಲ್ಲದೆ ದಿನಗಟ್ಟಲೆ ಧ್ಯಾನದಲ್ಲಿ ಮಗ್ನರಾಗಿರಬಲ್ಲವರಾಗಿದ್ದರು, ಸರ್ವ ಧರ್ಮ ಸಮ್ಮೇಳನಕ್ಕೆ ಅತೀ ಕಡಿಮೆ ದುಡ್ಡಿನಲ್ಲಿ ಪ್ರಯಾಣ ಮಾಡಿದ್ದರಲ್ಲದೆ, ವಾಪಾಸು ಬರಲು ಅವರ ಬಳಿ ಹಣವೇ ಇರಲಿಲ್ಲ. ಸಮ್ಮೇಳನದ ಹಿಂದಿನ ದಿನ ರಸ್ತೆಯಲ್ಲಿಯೇ ಕಳೆದಿದ್ದರು. ಕಡೆಯ ಭಾಷಣಕಾರರಾಗಿ, ಎಲ್ಲರೂ ನಿರ್ಗಮಿಸುತ್ತಿರಬೇಕಾದರೆ ತಮ್ಮ ಮಾತನ್ನು ಶುರು ಮಾಡಿದೆ, ಧ್ವನಿಯಲ್ಲಿ ಕಂಪನವಿದ್ದಂತಿತ್ತು ನಂತರ ಯಾವುದೋ ಶಕ್ತಿ ಮೈಯಲ್ಲಿ ಹೊಕ್ಕಂತೆ ಮಾತಾಡಿದೆ ಎಂದು ಸ್ವತಃ ವಿವೇಕಾನಂದರೇ ಅವರ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸಮ್ಮೇಳನದಲ್ಲಿ ಅವರ ಭಾಷಣ ಎಷ್ಟು ಜನಪ್ರಿಯವಾಯಿತೆಂದರೆ ಮಾರನೇ ದಿನ ಅದೇ ರಸ್ತೆಯ ಮೇಲೆ ಅವರ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಎಲ್ಲ ಇಂಗ್ಲೀಷ್ ಪತ್ರಿಕೆಗಳು ಅವರನ್ನು ಹೊಗಳಿ ಬರೆದಿದ್ದವು. ಇಂತಹ ಸಣ್ಣ ವಿವರಗಳು ನಿಜವಾದ ವಿವೇಕಾನಂದರು ನಮಗೆ ಹತ್ತಿರವಾಗುವಂತೆ ಮಾಡುತ್ತವೆ. ಒಬ್ಬ ಮನುಷ್ಯ ಐಕಾನ್ ಹೌದೋ ಅಲ್ಲವೋ ಎಂಬುದು, ಆತನ ಕೆಲಸಗಳಿಂದ, ಚಿಂತನೆಗಳಿಂದ ನಮಗೆ ತಿಳಿಯಬೇಕೆ ಹೊರತು ಅವನೊಬ್ಬ ಐಕಾನ್ ಹೌದೇ ಹೌದು ಎಂದು ಒಂದು ನಿಯಮಿತ ಗುಂಪಿನ ಹೇರಿಕೆಯಿಂದಾಗಲೀ, ಜಯಂತಿ ಉತ್ಸವಗಳ ಆಚರಣೆಯಿಂದಾಗಲೇ ನಮ್ಮ ಹಾಗೂ ಮುಂದಿನ ಪೀಳಿಗೆಗೆ ತಿಳಿಯಬೇಕಿಲ್ಲ.

ವಿವೇಕಾನಂದರು ಹಿಂದುಗಳ ಬ್ರಾಂಡ್ ಅಂಬಾಸಿಡರ್ ಎಂಬಂತೆ ಬಿಂಬಿಸುವ ಕೋಮುವಾದಿಗಳ ಪ್ರಯತ್ನಕ್ಕೆ ನೀರೆರೆಚುವಂತಿರುವ ಅಮೀನ್ ಮಟ್ಟು ಬರಹ ಕಹಿಯಾದರೂ ಅರಗಿಸಿಕೊಳ್ಳಬೇಕಾದ, ವಿವೇಕಾನಂದರನ್ನು ರಾಜಕೀಯದಿಂದ ಹೊರಗಿಡಲು ಅಗತ್ಯವಾದ ಮಾಹಿತಿಪೂರ್ಣ ಲೇಖನ. ವಸ್ತು ನಿಷ್ಠತೆಯಲ್ಲಿ ಬರಹವನ್ನು ಅಲ್ಲಗಳೆಯುವಂತಿಲ್ಲವಾದರೂ, ವಿವೇಕಾನಂದರನ್ನು ತಿಂಡಿಪೋತ, ದಡ್ಡ ಶಿಕ್ಷಕ ಎಂದೆಲ್ಲ ಕರೆದಿರುವುದು ಅರಗಿಸಿಕೊಳ್ಳಲು ಕಷ್ಟವೇ. ವಿವೇಕಾನಂದರು ಮಾಂಸಾಹಾರಿಯಾಗಿದ್ದರು ಎಂಬುದೂ ನನಗೆ ದಿನೇಶರ ಲೇಖನ ಓದಿಯೇ ತಿಳಿದದ್ದು. ಗಾಂಧೀಜಿ ತಮ್ಮ ಆತ್ಮ ಸಂಯಮ ಪರೀಕ್ಷೆಗಾಗಿ ಹೆಂಗಸಿನೊಂದಿಗೆ ಬೆತ್ತಲೆ ಮಲಗಿದ್ದರು, ನೆಹರು ಮೌಂಟ್ ಬ್ಯಾಟನ್ ಹೆಂಡತಿಯೊಂದಿಗೆ ಸಲಿಗೆಯಿಂದಿದ್ದರು ಎಂಬೆಲ್ಲಾ ಮಾತುಗಳನ್ನು ಕೇಳಿದಾಗ, ಚಿಕ್ಕಂದಿನಿಂದ ಓದಿ ಕೇಳಿ ನಮ್ಮಲ್ಲೇ ಬೆಳೆಸಿಕೊಂಡು ಬಂದಿರುವ ವ್ಯಕ್ತಿಗಳ ಬಗೆಗಿನ ಗೌರವದ ಬುಡವೇ ಅಲ್ಲಾಡಿದಂತಾಗುತ್ತದೆ. ಆದರೆ ಎಷ್ಟೇ ದೊಡ್ಡವನಾದರೂ ಆತನು ನಮ್ಮೆಲ್ಲರಂತೆ ಮನುಷ್ಯ ಎಂಬುದು, ಕಂಡಕಂಡ ಬಾಬಾಗಳು, ಮಠಾಧೀಶರು, ಸ್ವಾಮೀಜಿಗಳಿಗೆ ಕಾಲಿಗೆ ಬಿದ್ದು ದೈವತ್ವಕ್ಕೇರಿಸುವ ನಮಗೆ ಅರಿವಾಗಲು, ಒಳಹೋಗಲು ಇನ್ನು ಬಹಳಷ್ಟು ಸಮಯಬೇಕೆನಿಸುತ್ತದೆ.

ಆರ್.ಎಸ್.ಎಸ್ ನ ಅಂಗವಾದ ಎ.ಬಿ.ವಿ.ಪಿ ಐಕಾನಿಕ್ ವ್ಯಕ್ತಿಯಾದ ಭಗತ್ ಸಿಂಗ್ ನಿಜದಲ್ಲಿ ಒಬ್ಬ ಕಮ್ಯುನಿಷ್ಟ್ ಆಗಿದ್ದ. ದೇವರನ್ನು ಸುತಾ ರಾಂ ನಂಬುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಚಂದವೆತ್ತಿದ್ದ ಹಣವನ್ನು ಕದ್ದು ಸಿನಿಮಾ ನೋಡಲು ಹೋಗಿದ್ದ ಎಂದೆಲ್ಲಾ ನಾವು ಹೇಳದಿದ್ದರೆ, ದೇಶಕ್ಕಾಗಿ ಪ್ರಾಣ ಕೊಟ್ಟ ಆತನ ತ್ಯಾಗವನ್ನು, ಭವಿಷ್ಯದ ಭಾರತ ಹೀಗಿರಬೇಕು ಎಂದು ಆತ ಕಂಡ ಕನಸುಗಳನ್ನು, ಚಿಂತನೆಗಳನ್ನು ಕೋಮುವಾದಿಗಳ ವಶಕ್ಕೆ ಬಿಟ್ಟು ಸುಮ್ಮನೆ ಕುಳಿತಂತಾಗುತ್ತದೆ. ವಿವೇಕಾನಂದ, ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಗಾಂಧೀಜಿ, ಸಾವರ್ಕರ್, ಮುಂತಾದ ಇತಿಹಾಸ ಪುರುಷರನ್ನು ಅವರಿದ್ದ ಹಾಗೇ ಯಾವುದೇ ಹೇರಿಕೆ, ಇಂಟರ್ ಪ್ರೆಟೇಶನ್ನುಗಳಿಲ್ಲದೆ ಅರ್ಥಮಾಡಿಕೊಳ್ಳುವುದು ಸದ್ಯದ ಅನಿವಾರ್ಯ.

ಅರೆ-ಬರೆ

’ಬರೆಯೋದು ನಿಲ್ಲಿಸಿಬಿಟ್ರ? ತುಂಬ ದಿನವಾಯ್ತು ಬ್ಲಾಗಿನಲ್ಲೇನು ಬರೆದಹಾಗಿಲ್ಲ?’ ಎಂಬ ಪ್ರಶ್ನೆಗೆ ಏನುತ್ತರಿಸಲಿ? ತಿಳಿಯಲಿಲ್ಲ. ನಿಜವೇ, ಸುಮಾರು ದಿನಗಳಾದವು, ಬರವಣಿಗೆ ಬಹುತೇಕ ಮರೆತಂತೇ ಆಗಿದೆ. ಅಲ್ಲೊಂದು ಇಲ್ಲೊಂದು ಕಮೆಂಟುಗಳು ಬಿಟ್ಟರೆ, ಓದಿಸಿಕೊಳ್ಳುವಂತದ್ದು ಏನೂ ಬರೆದಿಲ್ಲ. ಮೊದಲಿನಿಂದಲೂ ಹೀಗೆ, ರೆಗ್ಯುಲಾರಿಟಿ ಅನ್ನೋದು ನನಗೆ ಸಿದ್ದಿಸಿದ್ದೆ ಇಲ್ಲ. ಯಾವುದರಿಂದಲೂ ಬೇಗ ಬೋರ್ ಆಗಿಬಿಡುವ, ಒಂದರಿಂದ ಇನ್ನೊಂದಕ್ಕೆ ತಟಕ್ಕನೆ ನೆಗೆದು ಬಿಡುವ ಮನಸ್ಥಿತಿ. ಇದೊಂದು ಚಟವೋ, ಹವ್ಯಾಸವೋ, ಮನೋವೈಕಲ್ಯವೋ ತಿಳಿಯದು. ಬರೆಯಬೇಕೆಂದುಕೊಂಡರೂ ವಿಷಯಗಳಲ್ಲಿ ಅಸ್ಪಷ್ಟತೆ, ಏನೋ ಬರೆಯಲು ಹೋಗಿ ಅದಿನ್ನೇನೋ ಆಗಿ ಕಡೆಗೆ ಯಾವುದೂ ಬೇಡವೆನಿಸಿ ಸುಮ್ಮನಾದದ್ದು ಎಷ್ಟು ಸಲವೋ. ಅದೇಕೆ ಹಾಗಾಗುತ್ತದೆ? ಬರವಣಿಗೆಯ ಬಗ್ಗೆ ಬರೆಯ ಹೊರಟಷ್ಟು ಅಚ್ಚರಿಗಳು ಕಾಡುತ್ತವೆ. ಪಿಯುಸಿ ದಿನಗಳವು, ಯಾವುದಾದರೊಂದು ಕಾದಂಬರಿ ಸಿಕ್ಕರೆ ಊಟ ನಿದ್ದೆ ಬಿಟ್ಟು ಕೂರುತ್ತಿದ್ದದ್ದು, ಓದು ಮುಗಿದ ನಂತರ ಯಾರೊಂದಿಗೂ ಮಾತೇ ಆಡದೆ ಕೆಲವು ಕಾಲ ಅದರ ಗುಂಗಿನಲ್ಲೇ ಕಳೆದು ಹೋಗುತ್ತಿದ್ದುದ್ದು ಬಿಟ್ಟರೆ ಓದಿದ್ದನ್ನೇ ಮತ್ತೆ ಓದುವುದಾಗಲೀ, ಅದರ ಬಗ್ಗೆ ಬರೆಯುವುದಾಗಲೀ ಬೇರೆಯದೇ ಗ್ರಹದ ಜೀವಿಗಳ ಕೆಲಸವೆನ್ನುವಷ್ಟು ಮಟ್ಟಿಗೆ ಬರವಣಿಗೆಗೆ ಅಪರಿಚಿತಳಾಗಿದ್ದೆ.

ಈಗಲೂ ಬರವಣಿಗೆಯ ಬಗ್ಗೆ ನನ್ನದೇ ದೂರುಗಳಿವೆ. ಬರೆಯಬೇಕೆನ್ನುವ ವಿಷಯದ ಆಯ್ಕೆಯಿಂದ ಹಿಡಿದು ಪ್ರತಿ ಪದಕ್ಕೂ, ಸಾಲಿಗೂ ತಿಣುಕಾಡುತ್ತಾ, ಅತ್ಯಂತ ಗೊಂದಲದಲ್ಲಿ ಬರೆಯುತ್ತೇನೆ. ಬರೆದ ಮೇಲೆ ಅಪೂರ್ಣವೆನಿಸ ತೊಡಗಿ ಅತೃಪ್ತಿಯಲ್ಲಿ ಬೇಯುತ್ತೇನೆ. ಆದರೂ ಬರವಣಿಗೆ ನನಗೆ ಖುಷಿಕೊಡುವ ವಿಷಯ. ಓದುವಾಗಿರುವ ಅಸ್ಪಷ್ಟತೆ ಗೊಂದಲಗಳು ಬರೆಯತೊಡಗಿದಾಗ ಬಗೆಹರಿದ್ದಿದೆ. ನನ್ನದೆ ನಿಲುವುಗಳು, ಅಭಿಪ್ರಾಯಗಳು ಇನ್ನಷ್ಟು ಪಕ್ವಗೊಂಡಿದ್ದಿದೆ. ಬರೆಯತೊಡಗಿದ್ದಾಗಿನಿಂದ ನನ್ನ ಓದಿನ ರೀತಿಯೇ ಬದಲಾಗಿದೆ. ಕೆಲವೊಮ್ಮೆ ನನ್ನ ಓದು ಕೇವಲ ನನ್ನ ಬರವಣಿಗೆಗಷ್ಟೇ ಸೀಮಿತವಾಗಿ ಹೋಯ್ತೆ, ಬರೆಯ ತೊಡಗುವುದಕ್ಕೂ ಮುಂಚಿನ ತನ್ಮಯತೆ ಇಂದ ನಾನಿದನ್ನು ಓದುತ್ತಿಲ್ಲವೇನೋ ಎನಿಸಿ ಕಳವಳಗೊಳ್ಳುತ್ತೇನೆ. ’ಬರವಣಿಗೆ ಒಂದು ಉತ್ತಮ ಓದಿನ ರೀತಿ’ ಎಂಬಂತಹ ಮಾತುಗಳನ್ನು ಕೇಳಿದಾಗ ಬರವಣಿಗೆಯಿಂದಲೇ ನನ್ನ ಓದು ಇನ್ನಷ್ಟು ಸಮೃದ್ದವಾಗುತ್ತಿದೆ, ಎಂದು ಸಂಭ್ರಮಿಸಿಯೂ ಇದ್ದೇನೆ.

ಏನು ಬರೆಯಬೇಕು? ಯಾವುದರ ಬಗ್ಗೆ ಬರೆಯಬೇಕು? ನಮ್ಮ ಅನುಭವಗಳನ್ನೆಲ್ಲ ಬರಹವಾಗಿಸಬೇಕೆ? ನನ್ನ ಅತೀ ಬೇಸರದ ದಿನದ ಒಂಟಿತನ, ಖುಷಿಯಾಗಿದ್ದಾಗಿನ ಹುರುಪು, ಮನಸ್ಸಿನ ಸಂತೋಷ, ದುಗುಡ ದುಃಖ ತುಂಟತನ, ಅವನಾರೋ ಕೈ ಹಿಡಿದಾಗ ಉಂಟಾಗುವ ರೋಮಾಂಚನ, ಇನ್ನೊಬ್ಬನ ಮಾತಿಗೇ ಕಿವಿಯಾಗಿ ಬದುಕು ಕಳೆದುಬಿಡಬೇಕೆನಿಸುವ ಹುಂಬತನ, ತಲೆ ಮೇಲೆ ಕೈ ಇಟ್ಟು ಹರಸುವ ಹಿರಿಯರ ಸ್ಪರ್ಶದ ಆರ್ದ್ರತೆ, ಎಲ್ಲವನ್ನೂ ತನ್ನ ಅಚ್ಚರಿಯ ಕಣ್ಣುಗಳಲ್ಲಿ ನೋಡುತ್ತಿರುವ ಮುಗ್ಧ ಮಗು, ಹೀಗೆ ಎಚ್ಚರವಾಗಿರುವಾಗಿನ ನನ್ನ ಬದುಕಿನ ಪ್ರತಿ ಕ್ಷಣ ಗಳಿಗೆಯೂ ನನಗೆ ಅನುಭವವೇ. ಈ ಹೊತ್ತು ಹೀಗೆ ಕೂತು ಬರೆಯುತ್ತಿರುವ ನಾನು ಈ ಕ್ಷಣವನ್ನು ಅನುಭವಿಸುತ್ತಿಲ್ಲವೇ? ಓದುತ್ತಿರುವ ನೀವು ಅನುಭವವಲ್ಲದೇ ಮತ್ತೇನು ಪಡೆಯುತ್ತಿದ್ದೀರಿ? ಅನುಭವಗಳನ್ನೆಲ್ಲ ಬರಹವಾಗಿಸುವುದು ಎಂದರೆ ಹೇಗೆ? ಅನುಭವಿಸಿ ಬರೆಯುವುದು ಎಂದರೇನು? ಯಾವ ಯಾವ ಅನುಭವಗಳ ಬಗ್ಗೆಯೆಂದು ಬರೆಯುತ್ತೀರಿ? ಉಹ್ಞುಂ ನನ್ನಲ್ಲಿ ಸ್ಪಷ್ಟತೆ ಇಲ್ಲ.

ನಮ್ಮೆಲ್ಲ ಯೋಚನೆಗಳನ್ನು ಕಲ್ಪನೆಗಳನ್ನು ಚಿಂತನೆಗಳನ್ನು ಮೊನಚುಗೊಳಿಸುವ ಶಕ್ತಿ ಬರವಣಿಗೆಗಿದೆ ಎಂಬುದು ನನ್ನ ನಂಬಿಕೆ, ಹೀಗಾಗಿಯೇ ನನಗೆ ಬೇರೆ ಚಟಗಳಂತೆ ಹತ್ತಿಸಿಕೊಂಡ ಇದನ್ನು ಅಷ್ಟೇ ಸುಲಭವಾಗಿ ಬಿಟ್ಟು ಬಿಡಲು ಆಗುತ್ತಿಲ್ಲ. ನನ್ನ ಯೋಚನೆಗಳ ನಿರಂತರ ತಿಕ್ಕಾಟಕ್ಕೆ, ಸ್ಪಷ್ಟತೆಗೆ, ಗೊಂದಲಗಳಿಗೆ ಬರವಣಿಗೆಯ ಜೊತೆ ಬೇಕೇಬೇಕು. ಬರೆಯಬೇಕೆಂದೇ ಓದ ತೊಡಗುತ್ತೇನೆ ಅಥವಾ ಓದುತ್ತಿದ್ದೇನಾದ್ದರಿಂದ ಬರೆಯತೊಡಗಿದ್ದೇನೆ. ಬರವಣಿಗೆಯು ನನ್ನ ಪಾಲಿಗೆ ಬರೆದು ಮುಗಿಸಿಬಿಡುವ ಕ್ರಿಯೆಯಲ್ಲ, ನನ್ನಲ್ಲೇ ನಿರಂತರ ಹರಿಯುವ, ಕಾಡುವ, ಬೆನ್ನುಬೀಳುವ ಗೀಳು.

ಮತ್ತೆ ಬೋಂಡಾ ಜಾಮೂನು…


“ನೀನು ಮದ್ವೆ ಮಾಡ್ಕೊಳಲ್ವೇನೆ!?” ತಮ್ಮೆಲ್ಲ ಪ್ರಯತ್ನ ವಿಫಲವಾಗುತ್ತಿರುವ ವ್ಯಥೆಯಲ್ಲಿ ಅಮ್ಮ ಕೇಳುತ್ತಿದ್ದರು. ಮದುವೆಯಷ್ಟು mysterious ಸಂಗತಿ ಮತ್ತೊಂದಿದೆ ಅನ್ನಿಸೋಲ್ಲ ರೀ, ಹೀಗಾಗಿ ನನ್ನ ಬರವಣಿಗೆ ಎಲ್ಲ ಮದುವೆಯ ಸುತ್ತಲೇ ಯಾಕೆ ಸುತ್ತುತ್ತದೆ ಎಂಬ ಜನರ ಕಂಪ್ಲೇಂಟನ್ನು ಕಾಂಪ್ಲಿಮೆಂಟೆಂದುಕೊಂಡು ಮತ್ತೆ ಅದರ ಬಗ್ಗೆಯೇ ಬರೆಯಬೇಕೆನ್ನಿಸಿ ಬರೆಯುತ್ತಿದ್ದೇನೆ. ಮೊನ್ನೆ ಒಂದು ಲಗ್ನ ಪತ್ರಿಕೆಯಲ್ಲಿ “ಮದುವೆಯಿಂದ, ಮದುವೆಗಾಗಿ, ಮದುವೆಗೋಸ್ಕರವೇ ಜೀವನವಲ್ಲವೆ” ಎಂದೊಬ್ಬ ಮಹರಾಯ ಬರೆದುಕೊಂಡಿದ್ದ, ನೋಡಿ ಹೆದರಿಕೆಯಾಗಿ ನಗು ಬಂದಿತು. ‘ಮದುವೆ’ ಇಷ್ಟು ವರ್ಷಗಳಾದರೂ ತನ್ನ ಚಾರ್ಮ್ ಕಳೆದುಕೊಳ್ಳದೆ ಎಲ್ಲರಿಗೂ ಹೊಸದರಂತೇ ಹೇಗೆ ಕಾಣುತ್ತದೆ ಮತ್ತು ಎಲ್ಲರನ್ನು ಹೇಗೆ ತನ್ನೆಡೆಗೆ ಸೆಳೆಯುತ್ತದೆ ಎಂಬುದರ ಮೇಲೆ ದೊಡ್ಡದೊಂದು research ಮಾಡಿ ಥೀಸೀಸ್ ಬರೆಯಬೇಕು. ಮದುವೆಯಾಗಿ ಹತ್ತು ವರ್ಷಗಳಾಗಿ ಇಬ್ಬರು ಮಕ್ಕಳ ತಾಯಿಯಾಗಿ ೭೦+ ಕೆ.ಜಿ.ಗಳ ಪರ್ವತವಾಗಿ, ಗಂಡನಿಗೆ permanant ಕಿರಿಕಿರಿಯಾಗಿ, ನೋಡಿದ ತಕ್ಷಣ ಇವರ ಜೀವನದಲ್ಲಿ ಹೊಸತು ಇನ್ನೇನಾದರೂ ನಡೆಯಲಿಕ್ಕೆ ಸಾಧ್ಯವೇ ಎಂದೆನಿಸಿಬಿಡುವ ನನ್ನ ಸಂಬಂಧಿಕರೊಬ್ಬರಿದ್ದಾರೆ, ಅಮ್ಮನ ಹತ್ತಿರದ ಫ್ರೆಂಡು ಆಕೆ. ನಮ್ಮಮ್ಮನ ಕಣ್ಣಿಗೆ ಅವರದು ಸಂಪೂರ್ಣ ಜೀವನ, ಹುಟ್ಟಿದ್ದಕ್ಕೆ ಸಾರ್ಥಕತೆ. ‘ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದ ಹುಡುಗಿ, ಗಂಡ ಮಕ್ಕಳ ಜೊತೆ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದಾಳೆ ನೋಡು’ ಎಂದೆನ್ನುತ್ತಿರುತ್ತಾರೆ. ನನಗೂ ಈ ಉಪದೇಶದ ಫಲವಾಗಿ, ತಲೆಯಲ್ಲಿ ಎರೆಡೆರೆಡು ಸೈಟ್ ಗಳಾಗಿರುವ, ಗುಡಾಣ ಹೊಟ್ಟೆಯ (ಸ್ಸಾರಿ ಮತ್ತೊಮ್ಮೆ ಬರೆಯೋಲ್ಲ) ಗುಂಡಣ್ಣಗಳ ಫೋಟೋ ತಂದು ತೋರಿಸಿ ನಾನು ರೇಗುವಂತೆ ಮಾಡುತ್ತಾರೆ. ಗುಂಡಗಿರೋರೆಲ್ಲ ಮನುಷ್ಯರಲ್ಲೇನ್ರೀ? ಅಂತ ನೀವು ಕೇಳಬಹುದು. ಆದರೆ ಕಾಲೇಜು ಯವ್ವನದ ದಿನಗಳಲ್ಲಿ ಗರ್ಲ್ ಫ್ರೆಂಡ್ ಸಿಗದೆ, ಸಿಕ್ಕಿದರೂ ಆಕೆಯನ್ನು ಮದುವೆಯಾಗದೆ, ಜೀವನದಲ್ಲಿ ಜಿಗುಪ್ಸೆ ಬಂದು ಅಮ್ಮನ ಮಾತು ಕೇಳಿಬಿಡೋಣ ಎಂದುಕೊಂಡು ಅರೇಂಜ್ ಮ್ಯಾರೇಜ್ ಗೆ ಅಣಿಯಾಗಿರುವ ಇಂತಹ ಗಂಡುಗಳ ಮೇಲೆ ನನಗೆ ಕರುಣೆ ಉಕ್ಕಿದರೂ, ಇರುವುದು ಒಂದೇ ಜೀವನ, ಹಾಗು ಪುನರ್ಜನ್ಮದಲ್ಲಿ ನನಗೆ ನಂಬಿಕೆಯಿಲ್ಲದ ಕಾರಣ ನನ್ನ ಅಮೂಲ್ಯ ಜೀವನವನ್ನು ಇವರಲ್ಲೊಬ್ಬರ ಜೊತೆ ಎಕ್ಸ್ ಪರಿಮೆಂಟ್ ಗೆ ಒಳಪಡಿಸಲಿಕ್ಕೆ ನನಗೆ ಭಯವಾಗಿದೆ.

ನೀನಿರೋ ಚಂದಕ್ಕೆ ಇಂತಹ ಗಂಡುಗಳೇ ಸಿಗುವುದು ಅನ್ನೋ ಬೆದರಿಕೆಗಳು. ಕೂದಲು ಜಾಸ್ತಿ ಉದುರಿದರೆ, ಎರೆಡು ದಿನ ಸತತವಾಗಿ ಕೋಳಿ ಊಟ ಉಂಡರೆ, ಬಿಸಿಲಲ್ಲಿ ತಿರುಗಾಡಿ ಚರ್ಮ ಸ್ವಲ್ಪ ಕಪ್ಪಾದರೆ, ಅನ್ನ ಮಾಡಲಿಕ್ಕೆ ಹೋಗಿ ಕುಕ್ಕರ್ ಸಿಡಿಸಿದರೆ, ಇತ್ಯಾದಿ ಎಲ್ಲವೂ ನನ್ನಮ್ಮನಿಗೆ ನನ್ನ ಮದುವೆಯ ದೊಡ್ಡ ದೊಡ್ಡ ತಡೆಗಳಾಗಿ ಕಾಣುತ್ತವೆ. ಹುಡುಗರಿಗೆ ಈ ಕಷ್ಟವಿರುವುದಿಲ್ಲವೇನೋ? ಪಾಪ ಅವರಿಗೆ ಮದುವೆ ಮಾಡಿಕೊಳ್ಳಲು ಉತ್ಸಾಹವೇ. ಕಾರಣವೇನೇ ಇರಲಿ ಆದರೆ ಮದುವೆ ಆಗುವ ಹುಡುಗನಿಗೆ ಇಂಥವೇ ಬೆದರಿಕೆಗಳಿರುತ್ತವೆ ಅಲ್ವೇ? ‘ಇನ್ನೇನು ಮಹರಾಯ ಹಳ್ಳಕ್ಕೆ ಬಿದ್ದಾಯ್ತು!’, ‘ಕುರಿ ಬಲಿಗೆ ರೆಡಿಯಾಗಿದೆ’, ‘ಅಮ್ಮಾವ್ರ ಗಂಡ ಆಗ್ತಿ ಇನ್ಮೇಲೆ ಕಂಗ್ರಾಟ್ಸ್!’ ಎನ್ನುವ ನಮ್ಮ ಗೆಳೆಯರ ಗುಂಪಿನ ಕಾಲೆಳಿಯುವ ಕಮೆಂಟುಗಳಿಗೆ, ‘ನನ್ನ ಮಕ್ಕಳ ಯಾರಾದರೂ ಒಬ್ಬರು, ಒಳ್ಳೇದಾಗ್ತಿದೆ, ರೊಮ್ಯಾಂಟಿಕ್ ಜೀವನಕ್ಕೆ ಕಾಲಿಡ್ತಿದೀಯ ಅಂತ ವಿಷ್ ಮಾಡ್ತೀರ ನೋಡಿ’ ಎಂದು ಮದುವೆ ಆಗಲಿದ್ದ ಗೆಳೆಯ ವಿಷಾದಿಸುತ್ತಿದ್ದ.

ಅದಿರಲಿ ನಾನು ನನ್ನ ಬಗ್ಗೆ ಯೋಚಿಸಿ ಮದುವೆಯ ಬಗ್ಗೆ ನನ್ನ ನಿಜವಾದ ಅಭಿಪ್ರಾಯವೇನು ಎಂದು ಕೆದಕಿ ಬೆದಕಿ ಕೇಳಿಕೊಳ್ಳುತ್ತಿದ್ದೆ. ಒಂದೂವರೆ ದಿನದಷ್ಟು ಇತರರ ಸಂಭ್ರಮಕ್ಕೆ ಎರೆಡು ಮೂರು ತಿಂಗಳಿನಷ್ಟು ನನ್ನ ಸಮಯ ಹಾಳು ಮಾಡಿಕೊಂಡು, ತೀರದ ಸೀರೆ ಒಡವೆಗಳ ಸೆಲೆಕ್ಷನ್ಗಳ ಜಂಜಡದಲ್ಲಿ ಮುಳುಗಿ. ಈ ಓಲೆಗೆ ಈ ಸೀರೆ ಒಪ್ಪುತ್ತಾ ಎಂದೆಲ್ಲಾ ಸಿಲ್ಲಿ ಪ್ರಶ್ನೆಗಳಿಗೆ ಉತ್ತರಿಸಿಕೊಂಡು. ಅರಿಸಿನ ಮದರಂಗಿ ಡಿಸೈನ್ ಗಳು, ಅವರಿವರ ಮನೆ ಗುಟ್ಟುಗಳು, ಕೆಲಸಕ್ಕೆ ಬಾರದ ಗೆಳತಿಯರ ರೇಗಿಸುವಿಕೆಗಳಿಗೆಲ್ಲಾ ನಾಚುವಂತೆ ನಟಿಸುತ್ತಾ, ಭವಿಷ್ಯದ ಅತ್ತೆಯ ಮನೆಯ ಬಗ್ಗೆ ಹೆದರಿಕೊಳ್ಳುತ್ತಾ, ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪನ ಇದ್ದಬದ್ದ ದುಡ್ಡನ್ನೆಲ್ಲಾ ಖರ್ಚುಮಾಡಿಸಿ ಸಾಲ ಹೆಚ್ಚಿಸುವ ಸಂಭ್ರಮದ ಮದುವೆ ಬಗ್ಗೆ ಇವರಿಗೆಲ್ಲ ಏಕಷ್ಟು ಆತುರ ಅನಿಸುತ್ತದೆ. ಮದುವೆಯ ಬಗ್ಗೆ ಇಂತಹ ಪೂರ್ವಾಗ್ರಹವಿರುವ ನನಗೆ ಗಂಡು ಸಿಗುವ ಮಾತು ಹಾಗಿರಲಿ, ಹೀಗೆಲ್ಲಾ ಅಂದುಕೊಂಡಿರುವೆ ಎಂದು ನಮ್ಮಮ್ಮನಿಗೆ ಸುಳಿವು ಸಿಕ್ಕರೂ ನನಗೆ ನಾಳೆಯಿಂದ ಮನೆಯಲ್ಲಿ ಊಟ ದಕ್ಕುವುದು ದುಸ್ತರವಾಗಿಬಿಡುವುದು. ಗುಟ್ಟು ನಿಮ್ಮಲ್ಲೇ ಇರಲಿ.

ಇಷ್ಟೆಲ್ಲಾ ಪ್ರಗತಿಪರ ಯೋಚನೆಗಳಿಗಿಟ್ಟುಕೊಂಡಿರುವ ನಾನು ಮದುವೆ ಆಗದೆ ಉಳಿದರೆ ಮಾಡುವುದೇನು? ಎಂತಲೂ ಯೋಚನೆ ಮಾಡಬೇಕಾಗುತ್ತದೆ. ಆಗ ನನ್ನ ದಪ್ಪನೆ ತಲೆಗೆ ಹೊಳೆಯುವುದು, ಬಹುಶಃ ಇದೇ ಭಯದಿಂದ ಎಲ್ಲರೂ ಮದುವೆಯ ಮೊರೆ ಹೋಗುತ್ತಿರುವುದು ಎಂದು. ‘ನನ್ನ ಗಂಡ ಡಾಕ್ಟರ್ರೂ’ ಎಂದು ನನ್ನ ಗೆಳತಿ ಹೇಳುವಾಗ ಅವಳ ಕಣ್ಣಲ್ಲಿರುವ ಹೆಮ್ಮೆ ಅವಳೇ ನಿಜವಾಗಿ ಡಾಕ್ಟರಳಾಗಿದ್ದರೆ ಇರುತ್ತಿತ್ತೇ? ಎಂದುಕೊಳ್ಳುತ್ತಿದ್ದೆ. ಹೆಣ್ಣಿಗೊಂದು ಗಂಡು ಸೇರಿ ಹೇಗೋ ಏನೋ ಹೊಂದಿಕೊಂಡು ಬದುಕಿದ್ದರಲ್ಲವೇ ಪ್ರಪಂಚ? ಹಾಗಿದ್ದಿದ್ದಕ್ಕಲ್ಲವೇ ನಾನೂ ಇರುವುದು, ಎಂದೆಲ್ಲಾ ಮೂಲ ಉದ್ದೇಶಕ್ಕಿಣುಕಿದರೂ, ಅದೊಂದಕ್ಕೆ ಮದುವೆ ಎಂಬ ಜಂಬು ಸರ್ಕಸ್ ಮಾಡಲೇ ಬೇಕೆ ಎಂದೂ ಅನಿಸುತ್ತದೆ. ಯೋಚಿಸಿ ಯೋಚಿಸಿ ತಲೆಚಿಟ್ಟು ಹಿಡಿದು ಕಡೆಯಲ್ಲಿ ನನ್ನ ತಲೆಯಲ್ಲಿ ಕೂದಲ ಜೊತೆ ಉಳಿಯುವ ಪ್ರಶ್ನೆಯೊಂದೇ ‘ಮದುವೆ ಬೇಕೆ?!’ ಎಂದು.

ಅಂದಹಾಗೆ ಇಷ್ಟೆಲ್ಲಾ ತಲೆಯಲ್ಲಿ ಮೊಸರು ಕಡೆಯುತ್ತಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದಂತೆ ಮಾಡಿ ಈ ವಾರ ಮತ್ತೆ ಗಂಡು ನೋಡಲು ಒಪ್ಪಿದ್ದೇನೆ. ನಮ್ಮ ಮನೆಯಲ್ಲಿ ಈ ಭಾನುವಾರ ಬೋಂಡಾ ಜಾಮೂನು. ಬೋಂಡಾ ಜಾಮೂನು ಸಿಗುತ್ತದೆ ಎಂಬ ಆಸೆ ಅಲ್ಲದೇ ಇನ್ನೊಂದು ಹಾಸ್ಯಲೇಖನಕ್ಕೆ ಸ್ಪೂರ್ತಿ ಸಿಗಬಹುದೆಂಬ ಗಂಭೀರ ಉದ್ದೇಶಗಳಿಂದ ಗಂಡಿನ ಬರುವಿಕೆಗೆ ನನ್ನಮ್ಮನಷ್ಟೇ ನಾನೂ ಕಾತರಳಾಗಿದ್ದೇನೆ..

ನೀನಿಲ್ಲದೇ ನನಗೇನಿದೆ..​.?

‘ನಿನ್ನ ನೆನಪಾಗುತ್ತೆ’ ಅಂತಷ್ಟೇ ಡೈರಿನಲ್ಲಿ ಬರೆದು ನೋಡ್ತಾ ಕೂತಿದ್ದೆ. ನನ್ನ ಕನವರಿಕೆ, ಬಿಕ್ಕಳಿಕೆ, ಕನಸು, ಮುನಿಸು, ಆಸೆ, ನಿರೀಕ್ಷೆ ಎಲ್ಲವೂ ಇದರ ಸುತ್ತಲೇ
ಸುತ್ತುತ್ತಿದೆ ಅನಿಸಿತು. ನೀ ಬಂದು ಬಿಟ್ಟರೆ ಅವಕ್ಕೆಲ್ಲ ಅರ್ಥ ಸಿಕ್ಕಂತೆ. ಬೆರಳಲ್ಲಿ ಬೆರಳು ಹೆಣೆದು, ನಿನ್ನ ತೊಡೆಯ ಮೇಲೆ ಹರಡಿದ ನನ್ನ ಕೂದಲನ್ನು ನೇವರಿಸುತ್ತಾ, ಮೈ ಮರೆತು ನೀ ಮಾತಾಡುತ್ತಿದ್ದೆಯಲ್ಲ, ಬಾಲ್ಕನಿಯ ಕಡೆ ನೋಡಿದಾಗಲೆಲ್ಲ ಅದೇ ಚಿತ್ರ ಕಣ್ಣ ಮುಂದೆ. ‘ಉಫ್’ ಎಂದು ಕಿವಿಯಲ್ಲಿ ಕಚಗುಳಿ ಆಗುವ
ಹಾಗೆ ಗಾಳಿ ಊದುತ್ತೀಯಲ್ಲ, ನೆನಪಾದಾಗಲೆಲ್ಲ ರೋಮಾಂಚನ. ಕಳ್ಳ ಹೆಜ್ಜೆ ಇಟ್ಟು, ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಹಿಂದಿನಿಂದ ಬಂದು ತಬ್ಬುತ್ತಿದ್ದೆಯಲ್ಲ, ಮನಸ್ಸಿಲ್ಲದ ಮನಸ್ಸಿನಿಂದ ಅಡಿಗೆ ಮನೆ ಹೊಕ್ಕರೆ ಅದೇ ನೆನಪು. ನೀನು ಯಾಕೆ ಹೀಗೆ ನೆನಪಾಗಾಬೇಕು? ಇಷ್ಟು ವರ್ಷ ನೀನಿಲ್ಲದೇ ನಾನು ಬದುಕಿದ್ದೂ ಹೌದಾ? ಕೇಳಿಕೊಳ್ಳಲೂ ಭಯವಾಗುತ್ತದೆ. ನನ್ನಿಂದ ನಿನ್ನನ್ನು ಹೊರಗಿಟ್ಟು ನೋಡಿಕೊಂಡರೆ ನನಗೆ ನಾನು ಎಷ್ಟು ಟೊಳ್ಳು ಎನಿಸಿಬಿಡ್ತೆನೆ ಗೊತ್ತಾ? ಒಂದು ವೇಳೆ ನೀನಿಲ್ಲದೇ ಹೋಗಿದ್ದರೆ ನನ್ನ ಬದುಕು
ಎಷ್ಟು ಅಪೂರ್ಣ, ಎಷ್ಟು ಖಾಲಿ, ಎಷ್ಟು ನೀರಸವಾಗಿರುತಿತ್ತು ಅಲ್ವೇ ಎಂದುಕೊಳ್ಳುತ್ತಿದ್ದೆ. ‘ನೀನಿಲ್ಲದೇ’ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಧೈರ್ಯವಾಗಲಿಲ್ಲ ನನಗೆ. ಯಾಕಿಷ್ಟು ನನ್ನೊಳಗೆ ತುಂಬಿ ಹೋಗಿದ್ದೀ ಹುಡುಗ? ನನ್ನನ್ನೇ ನಾನು ಕಳೆದುಕೊಳ್ಳುತ್ತಿರುವಂತೆ ಇಷ್ಟಿಷ್ಟೇ ನನ್ನೊಳಗೆ ನೀನು ಆವರಿಸಿ ನೀನೆ ನಾನಾಗಿ ಹೋಗುತ್ತಿರುವಂತೆ ಅನಿಸುತ್ತದೆ.

ನಿನ್ನ ತೊಡೆಯೊಳಗೆ ಮುಖವಡಗಿಸಿ ಕಿಶೋರ್ ಕುಮಾರ್ ನ ‘ಹಮೆ ತುಮ್ ಸೆ ಪ್ಯಾರ್ ಕಿತನ’ ಕೇಳುವಾಗಿನ ಸುಖ ನೆನಪಾಗಿ, ಹಾಡು ಹಾಕಿದೆ ಎಷ್ಟು ನಿರ್ಭಾವುಕ ಅನಿಸತೊಡಗಿತು. ನೀನಿಲ್ಲದೇ ಎಲ್ಲವೂ ಎಷ್ಟು ಯಾಂತ್ರಿಕ. ಎಲ್ಲಕ್ಕು ಜೀವ ತುಂಬುವ ಮಾಂತ್ರಿಕ ನೀನು. ಯಾಕೆ ಎಲ್ಲವೂ ಹೀಗೆ ಸಾಯುವಷ್ಟು ಬೇಸರವೆನಿಸುತ್ತಿದೆ, ನೀ ಬರದೇ? ಸದ್ದಾಗದೆ ಬಂದು ಬಾಗಿಲಲ್ಲಿ ನಿಲ್ಲು, ನಾನು ಕಾದು, ಕನವರಿಸಿ, ಕಣ್ಮುಚ್ಚಿ………….. ತೆಗೆಯುವಷ್ಟರಲ್ಲಿ.

ಹೆಸರಲ್ಲಿ ಏನಿದೆ?!

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು. ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು. ನನ್ನ ಕ್ಲೈಂಟ್ಕಂಪೆನಿಯ HR ಒಬ್ಬರ ಹೆಸರು ವಿಚಿತ್ರಾಸಿಂಗ್ ಎಂದು, ಆಕೆಗೆ ಫೋನ್ ಮಾಡಿದಾಗಲೆಲ್ಲ,ವಿಚಿತ್ರ ದಿಸ್ ಸೈಡ್ ಎಂದು ಶುರುವಿಡುತ್ತಾರೆ, ಆಕೆಯ ಹೆಸರು ಗೊತ್ತಿಲ್ಲದಕನ್ನಡಿಗರೇನಾದರೂ ಫೋನ್ ಮಾಡಿದರೆ ಹೌದೆ! ಏನಾಯ್ತು? ಎಂದೆನ್ನಬೇಕು! ಇನ್ನು ಬರಹದ ಎಲ್ಲ ಪ್ರಾಕಾರಗಳನ್ನು ಹೆಸರಿಟ್ಟುಕೊಂಡಿರುತ್ತಾರೆ ಕೇಳಬೇಕು, ಕಾದಂಬರಿ,ಸಾಹಿತ್ಯ, ಕವನ, ಪ್ರಬಂಧ, ಸಾಹಿತಿ ಇತ್ಯಾದಿ. ಸ್ವಲ್ಪ ಯೋಚಿಸಿ ಯಾರಿಗಾದರೂ ಪರಿಚಯಿಸುವಾಗ ಇವರು ಕಾದಂಬರಿ ಎಂದು ಹೇಳಿದರೆ, ಎಷ್ಟು ಪುಟದ್ದು, ಯಾರು ಬರೆದಿದ್ದು, ಮುನ್ನುಡಿ ಬೆನ್ನುಡಿ ಯಾರದ್ದು, ಓದಬಹುದೇ? ಎಂದಂದುಬಿಟ್ಟರೆ ಆಗುವ ಪೇಚಾಟವೆಷ್ಟು?!

ಈ ಹೆಸರುಗಳನ್ನು ಕೇಳಿ, ಕುಡುಮಿ ( ಪಾಪ ಹಿಂಗಾ ಹೆಸರಿಡೋದು!), ರಾಮದಾಸ್ ಗುಹಾ(ಅಜಂತಾನೋ ಎಲ್ಲೋರಾನೋ ಕೇಳ್ಬೇಕು), ನನ್ನ ಸ್ನೇಹಿತರೊಬ್ಬರು ತಮ್ಮ ಅವಳಿ ಮಕ್ಕಳಿಗೆ’ನಗು’ ಮತ್ತು ’ನಲಿ’ ಎಂದು ಹೆಸರಿಟ್ಟಿದ್ದರು (ಇನ್ನೊಂದು ಮಗು ಆಗಿದ್ದರೆ ’ಕುಣಿ’ಎಂದು ಹೆಸರಿಡೋರಿದ್ದರ ಕೇಳ್ಬೇಕಿತ್ತು).

ಒಂದಷ್ಟು ತಮಿಳು ಹೆಸರುಗಳನ್ನುಉಚ್ಚರಿಸುವುದಂತು ಕಬ್ಬಿಣದ ಕಡಲೆ ಬಾಯಿಗೆ ಹಾಕಿಕೊಂಡು ಕಟುಮ್ ಎಂದು ಕಡಿದಂತೆ. ತಮಿಳಿನಲ್ಲಿ ಎರಡು ಳ ಗಳಿವೆ. ಒಂದು ಸಾಮಾನ್ಯ ಳ ಇನ್ನೊಂದು ರ್ಳ, ಹೆಚ್ಚಿನ ತಮಿಳು ಹೆಸರುಗಳಲ್ಲಿ ಈ ರ್ಳ ಬಳಸುತ್ತಾರೆ. ಉದಾಹರಣೆಗೆ ಅರಿವರ್ಳಗನ್, ಎರ್ಳಿಲ್ ಅಳಗಿ, ಮಲರ್ ವಿರ್ಳಿ (ಉತ್ತರ ಭಾರತೀಯರ ಬಾಯಲ್ಲಿ ಇದು ಮಲರ್ ವಿಲಿ ಎಂದಾಗುತ್ತದೆ ಜೋರಾಗಿ ಕರೆದರೆ ಎಲ್ಲಿ ’ಇಲಿ’ ’ಇಲಿ’ ಎಂದು ಹೆದರಿಕೊಳ್ಳಬೇಕು), ಪುಗರ್ಳೇಂದ್ರನ್ (ಇದನ್ನು ಸರಿಯಾಗಿ ಉಚ್ಚರಿಸಿದರೆ ನೀವು ಸಂಸ್ಕೃತ ಪಂಡಿತರು), ಯಾರ್ಳಿನಿ ಇತ್ಯಾದಿ. ಉತ್ತರ ಭಾರತದ ಕೆಲವು ಸರ್ ನೇಮ್ surname ಗಳು ಅಷ್ಟೇ ತಮಾಶೆಯೆನಿಸುತ್ತವೆ, ಥಾಂಬೆ, ಗಾವ್ಡೆ, ’ಚಟ್ಟ’ರ್ಜಿ, ಮುಖ್ಯೋಪಧ್ಯಾಯ್ (ಯಾವ ಸ್ಕೂಲಿಗೆ ಎಂದು ಕೇಳೀರಿ ಮತ್ತೆ!), ಚಟ್ಟೋಪಧ್ಯಾಯ್ (ಚಟ್ಟ ಕಟ್ಟೋದರಲ್ಲಿ ಫೇಮಸ್ ಇರ್ಬೇಕು). ಜೆಮ್ ಶೆಡ್ ಪುರದವಳಾದ ನನ್ನ ಕಲೀಗ್ ಗೆ ’ಳ’ ಉಚ್ಛರಿಸಲು ಬರದು. ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!

ಮೈನಾ: ಚಿತ್ರ ವಿಮರ್ಶೆ


ತಮಿಳುನಾಡಿನ ಹಳ್ಳಿಗಳ ಜೀವನಶೈಲಿಯನ್ನು ಆಧರಿಸಿ, ಅಲ್ಲಿಯದೇ ಆಡುಭಾಷೆ ಬಳಸಿ ಮಾಡಿರುವ ತಮಿಳು ಚಿತ್ರಗಳ ಪೈಕಿ ನನಗೆ ನೆನಪಿರುವುದು, ಆಮೀರ್ ಸುಲ್ತಾನ್ ನಿರ್ದೇಶನದ ಪರತ್ತಿವೀರನ್ ಚಿತ್ರ, ಅದೇ ಸಾಲಿನಲ್ಲಿ ಸೇರಿಸಬಹುದಾದ ಚಿತ್ರ ಮೈನಾ. ಕತೆಯು, ಹಳ್ಳಿಯ ಜೀವನದ ರೀತಿಯನ್ನು ಪರಿಚಯಿಸುತ್ತ, ಪ್ರಕೃತಿಯ ಸೊಬಗನ್ನು ಬಿಂಬಿಸುತ್ತದೆ. ಅಲ್ಲದೆ, ಅನೇಕ ಸೂಕ್ಷ್ಮಗಳನ್ನು ಒಳಗೊಂಡಿದೆ. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕನ ಊಹೆಯ ಜೊತೆ ಸೆಣೆಸಾಡಿ, ಎಲ್ಲದರ ಮೊತ್ತವೆಂಬಂತೆ ಸಿನಿಮಾ, ಪ್ರೇಕ್ಷಕನ ಊಹೆಗೂ ಮೀರಿ ಪರಿಣಾಮಕಾರಿಯಾದ ಕ್ಲೈಮ್ಯಾಕ್ಸನ್ನು ಹೊಂದಿದೆ. ಪ್ರತಿ ಪಾತ್ರವನ್ನು ಅದರ ಮನೋಸ್ಥಿತಿಯನ್ನು ನಮಗೆ ಕಟ್ಟಿಕೊಡುವ ದೃಶ್ಯಗಳಂತು ಅತ್ಯುತ್ತಮ.

ಸಿನಿಮಾದ ಎಳೆ ಸಾಮಾನ್ಯ ಪ್ರೇಮಕತೆ, ಜಗತ್ತಿನಲ್ಲಿ ಎಲ್ಲ ಕತೆಯೂ ಹೇಳಲ್ಪಟ್ಟಿದೆ, ಹೇಳುವ ರೀತಿಯಲ್ಲಿ ಅಷ್ಟೇ ಹೊಸತನವನ್ನು ತರಲಾಗುವುದು ಎನ್ನಲಾಗಿದೆ, ಮೈನಾ ಇದಕ್ಕೊಂದು ಉತ್ತಮ ಉದಾಹರಣೆ. ಚಿತ್ರದ ಸತ್ವವೆಲ್ಲ ಇರುವುದು ನಿರೂಪಣೆಯಲ್ಲಿ, ನಿರ್ದೇಶಕ ಇಡೀ ಕತೆಯನ್ನು ಹೊಸತಾಗಿ ಕಟ್ಟಿಕೊಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆನ್ನಬಹುದು. ಸಿನಿಮಾದ ಮೊಟ್ಟ ಮೊದಲನೆಯ ದೃಶ್ಯಕ್ಕೂ ಕೊನೆಯ ನಿಮಿಷದ ದೃಶ್ಯಕ್ಕೂ ಮಧ್ಯೆ ಬಂದಿರುವ ಅಷ್ಟೂ ದೃಶ್ಯಗಳು ಒಂದಕ್ಕೊಂದು ಹೇಗೆ ತಾಳೆಹಾಕಿಕೊಂಡಿವೆ ಎಂದು ತಿಳಿಯುವುದು ಕಡೆಯ ದೃಶ್ಯದ ನಂತರವೇ!

ಇಡೀ ಸಿನಿಮಾ ನಡೆಯುವುದು ಒಂದೇ ದಿನದಲ್ಲಿ ನಡೆಯುವ ಘಟನೆಗಳನ್ನಾಧರಿಸಿ. ಕತೆಗೆ ಪೋಷಕವಾಗಿ ಶುರುವಿನಲ್ಲಿ ಮೂವತ್ತು ನಿಮಿಷದ ಫ್ಲ್ಯಾಶ್ ಬ್ಯಾಕ್ ಬಿಟ್ಟರೆ ಉಳಿದ ಒಂದೂವರೆ ತಾಸಿನಷ್ಟು ಸಿನಿಮಾ ಕತೆಯು ದೀಪಾವಳಿಯ ಮುಂಚಿನ 24 ಗಂಟೆಗಳು ಇಬ್ಬರು ಪೋಲೀಸ್ ಆಫೀಸರ್ ಮತ್ತು ಇಬ್ಬರು ಪ್ರೇಮಿಗಳ ಸುತ್ತಲೇ ಸುತ್ತುತ್ತದೆ. ಮಗಳನ್ನು ತನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ಹೇಳಿದ ಹೆಂಗಸಿಗೆ ಇಟ್ಟಾಡಿಸಿ ಹೊಡೆದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಲು ಹೋದ ಎಂಬ ಆರೋಪವನ್ನು ಹೊತ್ತು ಜೈಲು ಸೇರಿದ್ದ ಹೀರೋ ತನ್ನ ಪ್ರೇಯಸಿಯನ್ನು ಬೇರೆ ಯಾರೋ ಮದುವೆ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದು ಜೈಲಿನಿಂದ ಪರಾರಿಯಾಗುತ್ತಾನೆ. ಇತ್ತ ಹೊಸದಾಗಿ ಮದುವೆಯಾಗಿರುವ ಜೈಲರು ತನ್ನ ಸಿಡುಕು ಹೆಂಡತಿಗೆ ಇನ್ನೆರೆಡು ಗಂಟೆಯಲ್ಲಿ ಬಂದು ಅವಳನ್ನು ತವರಿಗೆ ಮದುವೆಯಾದ ಮೊದಲ ದೀಪಾವಳಿಗೆ (ತಲದೀಬಾವಳಿ) ಕರೆದೊಯ್ಯುವುದಾಗಿ ಮಾತು ಕೊಟ್ಟು ಬಂದಿರುತ್ತಾನೆ,ಅದಾಗಲೆ ಜೈಲಿನಲ್ಲಿ ನಡೆದ ಸಮಾರಂಭದಿಂದ ತಡವಾಗಿ ಹೆಂಡತಿ ಮತ್ತೆ ಮತ್ತೆ ಫೋನ್ ಮಾಡಿ ಕಾಡಿಸುತ್ತಿರುತ್ತಾಳೆ ಇದರಿಂದ ತಲೆಬಿಸಿಯಾಗಿದ್ದ ಅವನಿಗೆ ಪರಾರಿಯಾಗಿರುವ ಖೈದಿ ಸಿಗದೆ ಹೋದರೆ ಅಲ್ಲಿರುವ ಎಳೂ ಜನ ಪೋಲೀಸರುಗಳ ಕೆಲಸಕ್ಕೆ ಕುತ್ತು ಬರುವ ಸಂಭವವೇರ್ಪಟ್ಟಿದೆ ಎಂದು ತಿಳಿದು ಇನ್ನಷ್ಟು ತಲೆಕೆಡುತ್ತದೆ. ಪರಾರಿಯಾದ ಖೈದಿಯ ಮೇಲೆ ಕುತ್ತಿಗೆವರೆಗೂ ಸಿಟ್ಟಿಟ್ಟುಕೊಂಡು ಇನ್ನೊಬ್ಬ ಪೇದೆಯ ಜೊತೆ ಖೈದಿಯನ್ನು ಹುಡುಕುತ್ತಾ ಹೊರಡುತ್ತಾನೆ. ಈ ಮಧ್ಯೆ ಕಾಯುತ್ತಿರುವ ಹೆಂಡತಿಗೆ ಮತ್ತು ಅವಳ ಮನೆಯವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಹೋಗಿ ಆಗದೆ ಸುಮ್ಮನಾಗುತ್ತಾನೆ.

ಇತ್ತ ಖೈದಿ ಓಡಿಬಂದು ತನ್ನ ಪ್ರೇಯಸಿ (ಮೈನಾ) ಯ ಅಮ್ಮನಿಗೆ ಮತ್ತೆ ಒದ್ದು ಮೈನಾಳನ್ನು ಕರೆದೊಯ್ಯುತ್ತಿರುವ ಸಂಧರ್ಭದಲ್ಲೇ ಅವನನ್ನು ಹುಡುಕಿಕೊಂಡು ಬಂದ ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಅಲ್ಲಿ ನಡೆಯುವ ಗಲಾಟೆಯಲ್ಲಿ ಮೈನಾ ಕೂಡ ಅವನ ಜೊತೆ ಹೊರಟು ಬರುತ್ತಾಳೆ. ನಾಲ್ವರು ಮತ್ತೆ ಜೈಲಿನವರೆಗೂ ಬರುವುದೇ ಕತೆ. ನಾಯಕನು ಮೈನಾಳಿಗೋಸ್ಕರ ಬಂದಿದ್ದರೂ, ಕತೆಯು ಹೇಗೆ ಅವಳನ್ನೇ ಕೇಂದ್ರವಾಗಿರಿಸಿಕೊಂಡು ಮುಂದುವರೆದು ಮುಗಿಯುತ್ತದೆ ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.

ಸಿನಿಮಾ ನೋಡುತ್ತಾ ನೋಡುತ್ತಾ ಪಾತ್ರಗಳು ಯಾವಾಗ ಆಪ್ತವಾಗಿಬಿಡುತ್ತದೋ ನಮಗೆ ತಿಳಿಯುವುದಿಲ್ಲ. ಆದರೆ ನಿರ್ದೇಶಕ, ಪ್ರೇಕ್ಷಕನ ಎಮೋಷನ್ ಗಳನ್ನು ಪರಿಗಣಿಸದೆ ಕತೆಯ ಪಾತ್ರಗಳ ಬಗ್ಗೆ ನಿರ್ಭಾವುಕವಾಗೇ ಉಳಿದು ಪರಿಣಾಮಕಾರಿಯಾದ ಕೊನೆಯನ್ನು ಕೊಟ್ಟಿದ್ದಾರೆ. ಹೀಗಾಗಿ ಕತೆಯು ಎಲ್ಲಿಯೂ ಕ್ಲೀಷೆಯೆನಿಸುವುದಿಲ್ಲ. ಚಿತ್ರವು ಅಚ್ಚುಕಟ್ಟಾಗಿದೆ, ಪ್ರತಿಯೊಂದು ಫ್ರೇಮನ್ನೂ ಏಕಾಗ್ರತೆಯಿಂದ ಮೂಡಿಸಿರುವುದು ನೋಡುತ್ತಲೇ ತಿಳಿಯುತ್ತದೆ. ಹಳ್ಳಿಯ ಹಸಿರು, ನಾಯಕನ ಹುಚ್ಚು ಒರಟು ಪ್ರೇಮ, ನಾಯಕಿಯ ಎಳಸು ಕಂಗಳು ಎಲ್ಲವೂ ಅದೆಷ್ಟು ಚೆನ್ನಾಗಿ ಮೂಡಿಬಂದಿದೆಯೆಂದು ನೀವು ಚಿತ್ರ ನೋಡಿಯೇ ತಿಳಿಯಬೇಕು.

ಗ್ರಾಮೀಣ ತಮಿಳು ಬಳಸಿದ್ದರೂ ಬಹಳಷ್ಟು ಪಾಲು ಕತೆಯನ್ನು ನಾವು ದೃಶ್ಯಗಳಲ್ಲೆ ತಿಳಿಯಬಹುದು. ನಿಮಗೆ ತಮಿಳು ಬರುತ್ತದೆಯಾದರೇ ಈ ಚಿತ್ರವನ್ನು ತಪ್ಪದೇ ನೋಡಿ, ಬರದಿದ್ದರೂ ನೋಡಿ ನಿಮಗೆ ನಿರಾಶೆಯಾಗದು. It is worth watching more than once

ನಿನ್ನ ನೆನಪು….

ಕಣ್ಮುಚ್ಚಿ ನನ್ನೊಳಕ್ಕಿಳಿದು ನೋಡುತ್ತೇನೆ,
ನಿನ್ನೊಂದಿಗಿನ ಸಂಭ್ರಮದ ಕ್ಷಣಗಳ ಕಚಗುಳಿ.

ನೆನಪುಗಳ ಜೊತೆ ಸವಾರಿ ಹೊರಡುತ್ತೇನೆ
ಕನಸಿನೂರಿನೊಳಗೆಲ್ಲ ನಿನ್ನದೆ ಮೆರವಣಿಗೆ,

ನಿನ್ನ ಕೋಪ, ನನ್ನ ಸಮಾಧಾನ,
ನನ್ನ ಹುಸಿಮುನಿಸು ನಿನ್ನ ಮುದ್ದು…

ಬಾಗಿಲಲ್ಲೇ ಕಾಯುತ್ತಾ ಕೂಡುತ್ತೇನೆ,
ಕಿವಿಗೆ ಕೇಳುವುದು ನಿನ್ನದೇ ಹೆಜ್ಜೆ ಸದ್ದು

ತುಂಬು ಬೆಳದಿಂಗಳು ಕಂಡಾಗಲೆಲ್ಲ ನಿನ್ನ ಮುಗುಳು ನಗೆಯ ನೆನಪು,
ಕತ್ತಲಲ್ಲಿ ಹೆದರಿದ ಜೀವ ತಡಕಾಡುವುದು ನಿನ್ನ ಎದೆಯ ಬಿಸುಪು,

ಕನಸಿನಿಂದ ಎಚ್ಚರಗೊಂಡು ಏಳಲೇಬಾರದೆನಿಸುತ್ತದೆ,
ಕಣ್ಣುಬಿಟ್ಟಾಗ ನೀನಿರದ ಹಾಸಿಗೆ ನನ್ನನ್ನು ಅಣಕಿಸುತ್ತದೆ.

ನಿನ್ನ ನೆನಪಿನಲ್ಲಿ ನಾನಿಲ್ಲಿ ಕಣ್ಣೀರಿಟ್ಟ ಕ್ಷಣ
ಸಿಹಿ ನಿದ್ದೆಯಲ್ಲು ನೀನು ಮುಲುಕಾಡಿ ಮಗ್ಗಲು ಬದಲಿಸುತ್ತೀಯ
ಅಲ್ಲವೇನೋ ಗೆಳೆಯ?