ಬೇಕಾಗಿದ್ದಾರೆ!


ಮದುವೆ ಆಗೋದು ಅಂತ ತೀರ್ಮಾನಿಸಿ ಬಿಟ್ಟಿದೀನಿ! ಬಂದ ’ಗಂಡು’ (ಗುಂಡು?) ಗಳನ್ನೆಲ್ಲ,
ಸ್ಟೀಲ್ ಬಿಂದಿಗೆ, ಹಿತ್ತಾಳೆ ಹಂಡೆ, ತೊಳೆದ ಕೆಂಡ, ನರಸಿಂಹರಾಜು ಮುಖ, ಅಂಬರೀಷ್
ಸೊಂಟ ಅಂತೆಲ್ಲ ಹೆಸರಿಟ್ಟು ರಿಜೆಕ್ಟ್ ಮಾಡ್ತಿದ್ದವಳು ಈಗ ಇದ್ದಕ್ಕಿದ್ದಂತೆ ಮದುವೆ
ಆಗೋದು ಅಂತ ತೀರ್ಮಾನಿಸಿ ಬಿಟ್ಟಿದ್ದೀನಿ. ಬುದ್ದನಿಗೆ ಬೋಧಿವೃಕ್ಷದ ಕೆಳಗಡೆ ಆದ ಹಾಗೆ
ನನಗೂ ನಮ್ಮ ಅಡುಗೆಮನೆಲಿ ಗ್ನಾನೋದಯ ಆಗಿ ಹೋಗಿದೆ. ನನ್ನಮ್ಮ ತನ್ನ ಪುಣ್ಯದ
ಅಕೌಂಟನ್ನು ಕ್ರೆಡಿಟ್ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಹೊರಟು ಇಂದಿಗೆ ವಾರವಾಯಿತು.
ನಂಬುವ ಮಾತೇ ಅಲ್ಲ ಆದರೂ ನನ್ನಂತ ನಾನೇ ಈ ಒಂದು ವಾರವೂ ನನ್ನ ಬೆಳಗಿನ ತಿಂಡಿಯನ್ನು
ಬಲಿಕೊಟ್ಟಿದ್ದೇನೆ. ಈಗೊಂದು ವಾರದಿಂದ ಎದ್ದು ತಿಂಡಿ ಮಾಡಿಕೊಂಡು ತಿನ್ನುವುದಿರಲಿ,
ಯಾರಾದರೂ ಮಾಡಿಟ್ಟಿದ್ದರೂ ತಿನ್ನಲು ಸಮಯವಿಲ್ಲದಷ್ಟು ಲೇಟಾಗಿ ಹೋಗಿ, ಅರ್ಧಗಂಟೆ
ತಡವಾಗಿ ಆಫೀಸ್ ಸೇರಿ ಕಂಪ್ಯೂಟರ್ ನೊಳಗೆ ಕಳೆದು ಹೋದರೆ, ಮತ್ತೆ ತಿಂಡಿ
ತಿಂದಿಲ್ಲವೆಂದು ನೆನಪಾಗುವುದು ಊಟದ ಸಮಯಕ್ಕೆ. ಯಾವುದೇ ಡಯಟ್ಟಿನ ಸಹಾಯವಿಲ್ಲದೆ
ಅನಾಮತ್ತು ೨ ಕೆಜಿ ತೂಕ ಇಳಿಸಿಬಿಟ್ಟಿದ್ದೇನೆ.ಮುಂದೆ ಹೀಗಾಗಬಾರೆದೆಂಬ
ಮುನ್ನೆಚ್ಚರಿಕೆಗಾಗಿಯೇ ಚೆನ್ನಾಗಿ ಅಡುಗೆ ಬಲ್ಲ ಹುಡುಗನನ್ನು ಹುಡುಕಿ
ಮದುವೆಯಾಗಿಬಿಡಬೇಕೆಂದಿದ್ದೇನೆ. ಹೀಗೆಂದ ತಕ್ಷಣ ನನ್ನನ್ನು ಸಮಾನತೆ, ಸ್ತ್ರೀವಾದಿ
ಎಂದೆಲ್ಲ ಬ್ರಾಂಡ್ ಮಾಡಿಬಿಡಬೇಡಿ. ಚೆನ್ನಾಗಿ ಅಡುಗೆ ಬರುವ ಯಾವ ಹುಡುಗನೂ ನನ್ನ ಕೈಯ
ಅಡಿಗೆಯನ್ನು ತುಂಬಾ ದಿನ ಸಹಿಸಿಕೊಳ್ಳಲಾರನೆಂಬ ಕಾನ್ಫಿಡೆನ್ಸ್ ನಿಂದ ಈ
ಮಾತನ್ನು ಹೇಳುತ್ತಿದ್ದೇನೆ.

ಅಡುಗೆಮನೆ ಅನ್ನೋದು ಹುಡುಗಿಯರಿಗೆ ಅದೇಕೆ ಬ್ರಾಂಡ್ ಮಾಡಿದ್ದಾರೋ, ಏನೇ ಇದ್ದರೂ ನಾನು
ಮತ್ತು ಅಡುಗೆ ಎರೆಡೂ ವಿರುದ್ದ ಪದಗಳು. ಕಷ್ಟಪಟ್ಟು ವಾಂಗಿಭಾತ್ ಮಾಡುವುದನ್ನು
ಕಲಿತು, ಮನೆಗೆ ಬಂದ ಅತಿಥಿಗಳಿಗೆ ಒಮ್ಮೆ ಕೊಟ್ಟರೆ, ಪುಳಿಯೋಗರೆಗೆ ಸ್ವಲ್ಪ ಹುಳಿ
ಕಡಿಮೆ ಹಾಕಬೇಕಿತ್ತು ಎಂದಾಗ, ಅವರನ್ನೇ ಹುಣಸೇಹಣ್ಣಿನಂತೆ ಕಿವುಚಿಬಿಡುವ
ಮನಸ್ಸಾಗಿತ್ತು. ಅಪ್ಪನಿಗೆ ಅಮ್ಮ ಮನೆಯಲ್ಲಿ ಇಲ್ಲದಾಗ ಕಾಫಿ ಮಾಡಿಕೊಡಲೋ ಅಥವಾ ಟೀ
ಕುಡೀತೀರ ಎಂದು ಕೇಳಿದರೆ, ಯಾವುದನ್ನಾದರೂ ಮಾಡು ಮಗಳೇ ನೀ ಮಾಡಿದರೆ ಎರೆಡು ಒಂದೇ ತರ
ಇರುತ್ತೆ ಎಂದಂದು ನಗುತ್ತಾರೆ. ನಾನು ಮಾಡಿದ ಚಪಾತಿ ಯಾವಾಗಲೂ ಆಸ್ಟ್ರೇಲಿಯ ಮ್ಯಾಪ್
ತರಹ ಇರುತ್ತದೆಂದು ಅಕ್ಕನ ಪುಟ್ಟ ಮಗಳು ಹಿಯ್ಯಾಳಿಸುತ್ತಾಳೆ. ಅಲ್ಲರೀ ಆಸ್ಟ್ರೇಲಿಯ
ಮ್ಯಾಪ್ ಆದರೇನು ಇಂಡಿಯಾ ಮ್ಯಾಪ್ ಆದರೇನು ಮುರಿದೇ ತಾನೆ ತಿನ್ನುವುದು. ಹೊಟ್ಟೆ ಒಳಗೆ
ಏನು ಶೇಪ್ ಸಮೇತ ಹೋಗತ್ತ? ಬುದ್ದಿಇಲ್ಲ ಜನಕ್ಕೆ. ನನ್ನ ಹೊಸ ಪ್ರಯತ್ನವನ್ನು ಯಾರ
ಕೈಲದಾರೂ ಹೊಗಳಿಸಬೇಕೆಂದು ಮೊನ್ನೆ ಪಕ್ಕದ ಮನೆಯ ಹುಡುಗನಿಗೆ ನಾನು ಮಾಡಿದ್ದ
ತಿಂಡಿಯನ್ನು ಕಪ್ ನಲ್ಲಿ ಹಾಕಿಕೊಟ್ಟೆ, ’ಚೂರು ಸಪ್ಪೆ ಇತ್ತು ಅಕ್ಕ, ಪಾಯಸದಲ್ಲೆಲ್ಲೂ
ಬೇಳೆ ಕಾಣಲಿಲ್ಲ, ಆದರೂ ಚೆನ್ನಾಗಿದೆ’ ಎಂದುಬಿಟ್ಟ, ನನಗೆ ನಖಶಿಖ ಅಂತ ಉರಿದು
ಹೋಯಿತು, ನಾನು ಮಾಡಿದ್ದಿದ್ದು ಜಾಮೂನು, ಅದು ಗುಂಡಗೆ ಉಳಿಯದೇ ತನ್ನ ಶೇಪ್
ಕಳೆದುಕೊಂಡು ಪಾಕದಲ್ಲಿ ಕರಗಿ ಹೋಗಿತ್ತಷ್ಟೇ!!

ನಾನು ಅನ್ನ ಮಾಡುತ್ತೇನೆಂದರೆ ನನಗಿಂತ ಜಾಸ್ತಿ ನಮ್ಮ ಪಕ್ಕದ ಮನೆಯ ಆಂಟಿಗೆ ತುಂಬಾ
ಭಯ. ಅದು ಆಗಿದ್ದು ಇಷ್ಟು, ಅಕ್ಕಿ ಮತ್ತು ನೀರು ಕುಕ್ಕರಿಗೆ ಹಾಕಿ ಮೂರು ವಿಷಲ್
ಹಾಕಿಸಿದರೆ ಅನ್ನವಾಗುತ್ತದೆ ಎಂದು ಅಮ್ಮನ
ಬಾಯಲ್ಲಿ ಕೇಳಿದ್ದೆ ಪ್ರಾಕ್ಟಿಕಲ್ ಆಗಿ ಎಕ್ಸ್ ಪರಿಮೆಂಟ್ ಮಾಡಿರಲಿಲ್ಲ. ಅದೊಂದು ದಿನ
ಮಾಡಿ ನೋಡಿಯೇ ಬಿಡೋಣವೆನಿಸಿ ಅಕ್ಕಿ ನೀರು ಹಾಕಿ ಕುಕ್ಕರನ್ನು ಒಲೆಯಮೇಲಿಟ್ಟು ಟಿವಿ
ನೋಡುತ್ತ ಕುಳಿತು ಬಿಟ್ಟೆ ಎಷ್ಟು ಹೊತ್ತಾದರೂ ಕುಕ್ಕರ್ ವಿಷಲ್ ಹಾಕೋದನ್ನೆ ಮರೆತು
ಹೋಗಿತ್ತು. ಪಾಪ ಅದಕ್ಕೂ ಪಕ್ಕದಲ್ಲಿ ಸುಂದರ ಹುಡುಗಿಯರು ಯಾರೂ ಕಾಣಿಸಲಿಲ್ಲವೇನೋ,
ನಾನು ಬೇರೆ ಹಾಲಿನಲ್ಲಿದ್ದೆನಲ್ಲ. ಸುಮಾರು ಹೊತ್ತಾಯಿತು. ಏನೋ ಸೀದ ವಾಸನೆ
ಬರುತ್ತಿದೆ ಎಂದು ಎರಡನೇ ಫ್ಲೋರಿನ ಆಂಟಿ ಕಷ್ಟಪಟ್ಟು ತಮ್ಮ
ದೇಹವನ್ನು ನಮ್ಮ ಮನೆವರೆಗೂ ತಂದು ಏದುಸಿರು ಬಿಡುತ್ತಾ ಹೇಳಿದರು.
ಅನ್ನ ಮಾಡ್ತಿದ್ದೆ ಆಂಟಿ ಕುಕ್ಕರ್ ಇಟ್ಟು ತುಂಬಾ ಹೊತ್ತಾಯಿತು ವಿಷಲ್ ಹಾಕ್ತಿಲ್ಲ
ನೋಡಿ ಎಂದು ಅವರನ್ನು ಅಡುಗೆ ಮನೆಗೆ ಕರೆದೊಯ್ದು ತೋರಿಸಿದೆ, ಕುಕ್ಕರ್ ತಲೆಯಮೇಲೆ
ವಿಷಲ್ಲೇ ಇಲ್ಲವಲ್ಲೇ ಎಂದು ನನ್ನ ತಲೆಯ ಮೇಲೆ ಮೊಟಕಿದರು. ಅಷ್ಟೇ ಆಗಿದ್ದರೆ
ಚೆನ್ನಾಗಿತ್ತು, ಒಳಗೇನಾಗಿರಬಹುದು ನೋಡೋಣವೆನಿಸಿ ಕುಕ್ಕರ್ ನ ಮುಚ್ಚುಳ
ತೆಗೆಯುತ್ತಿದ್ದಂತೆ ಬಿಸಿ ಅನ್ನದ ಅಗಳುಗಳು ಕುಕ್ಕರಿನೊಳಗೆ ಇಣುಕುತ್ತಿದ್ದ ಆಂಟಿಯ
ಮುಖಕ್ಕೆ ಹಾರಿ, ಕೆಲದಿನಗಳವರೆಗು ಅವರು ಹೊರಗೆ ಮುಖ ತೋರಿಸದ ಹಾಗೆ ಕೆಟ್ಟದಾಗಿ
ಬೊಬ್ಬೆಗಳಾಗಿದ್ದವು. ಅವತ್ತಿನಿಂದ ಆಂಟಿ ನಾನು ಅನ್ನ ಮಾಡುತ್ತೇನೆಂದರೂ ಸಾಕು ಹೆದರಿ
ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿ ಕಳುಹಿಸುತ್ತಾರೆ.

ಇಷ್ಟೆಲ್ಲ ಆದರೂ ಅಡುಗೆಯನ್ನು ಕಲಿಯಲೇಬೇಕೆಂಬ ನನ್ನ ಹಂಬಲವೇನು ಕಡಿಮೆಯಾಗಿಲ್ಲ.
ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತು ಒಂದು ದಿನ ಯಾವುದಾದರೂ ಫೈವ್
ಸ್ಟಾರ್ ಹೋಟೇಲಿನ ಶೆಫ್ ಆಗ್ಬೇಕು ಅನ್ನೋದು ನನ್ನ ದೂರದ ಯೋಚನೆ.ಇಂತಹ ಮಹಾನ್
ಯೋಚನೆಯನ್ನಿಟ್ಟಿಕೊಂಡಿರುವ ನನಗೆ ಇಂತಹ ಸಣ್ಣಪುಟ್ಟ ತಪ್ಪುಗಳೆಲ್ಲ ಗಣನೀಯವೆನಿಸಿಲ್ಲ.
ಒಮ್ಮೊಮ್ಮೆ ಅನಿವಾರ್ಯವಾಗಿ ಬೇರೆಯವರ ಸುರಕ್ಷತೆಯ ದೃಷ್ಟಿಯಿಂದ ನನ್ನ ಸತತ
ಪ್ರಯತ್ನವನ್ನು ಕೈಬಿಡುತ್ತೇನೆ. ಹೀಗಾಗಿ ನಾನು ಮನೆಯಲ್ಲಿರದ ದಿನ ನೀನು ಅಡಿಗೆಮನೆಗೆ
ಹೋಗಬಾರದು, ಒಲೆ ಹಚ್ಚಬಾರದೆಂಬ ಅಮ್ಮನ ನಿಷೇದಾಜ್ಞೆಯನ್ನು ಶಿರಸಾವಹಿಸಿ
ಪಾಲಿಸುತ್ತಿದ್ದೇನೆ.

ನಾನು ಆಮ್ಲೇಟ್ ಮಾಡಿದರೆ ಅದು ಕಾವಲಿಯಿಂದ ಏಳಲು ಮುಷ್ಕರ ಹೂಡುತ್ತದೆ, ದೋಸೆಯು
ಹೆಂಚಿನಿಂದ ಹೊರಬರುವಷ್ಟ್ರಲ್ಲಿ ಉಡಿ ಉಡಿಯಾಗಿ ಅನ್ನದ ರೂಪ ಪಡೆದಿರುತ್ತದೆ. ಇಡ್ಲಿಗೂ
ಇಟ್ಟಿಗೆಗೂ ವ್ಯತ್ಯಾಸವೇ ಇರುವುದಿಲ್ಲ, ಇನ್ನು ಚಿತ್ರನ್ನವಂತು ದೇವರ ಮೇಲೆ ಎಸೆಯುವ
ಅಕ್ಷತೆಯ ಕಾಳಿನ ಹಾಗಿರುತ್ತದೆ, ಟೊಮೇಟೋ ಗೊಜ್ಜು ತನ್ನ ಅಸಲೀ ರೂಪ ಬಿಟ್ಟುಕೊಟ್ಟು
ಟೊಮೆಟೋ ರಸವಾಗಿಬಿಟ್ಟಿದೆ, ಇವೆಲ್ಲಾ ನನ್ನ ಅಡುಗೆಗೆ ಸಿಕ್ಕ ಕಾಂಪ್ಲಿಮೆಂಟ್ಸು. ಮರಳಿ
ಯತ್ನವ ಮಾಡು ಎಂಬ ಮಾತನ್ನು ಮರೆಯದೇ, ಟಿವಿಗಳಲ್ಲಿ ಬರುವ ಶೋಗಳನ್ನು ನೋಡಿ, ಪಾಕ
ಶಾಸ್ತ್ರದ ಪುಸ್ತಕಗಳನ್ನು ಓದಿ ಅಂತೂ ಹೇಗೋ ಆವಗವಾಗ ಅಡುಗೆ ಕಲಿಯುವ (ಕೊಲ್ಲುವ)
ಪ್ರಯತ್ನವನ್ನಂತು ಮಾಡುತ್ತಲೇ ಇರುತ್ತೇನೆ. ಆದರೆ ಇತ್ತೀಚೆಗೆ ನನ್ನ ಪಾಕ ಕ್ರಾಂತಿಯ
ಪರಿಣಾಮಗಳಿಂದಾಗಿ, ನಾನು ಮಾಡುವ ಅಡುಗೆಯನ್ನು ತಿಂದು ಅಭಿಪ್ರಾಯ ತಿಳಿಸಲು ಜನ
ಸಿಗುತ್ತಿಲ್ಲ ಎನ್ನುವುದೇ ಕೊರಗು, ಒಂದು ಮಹಾನ್ ಸಾಧನೆ ಇಂತಹ ಕಾರಣಗಳಿಂದ ನಿಲ್ಲಬಾರದೆಂಬ
ಉದ್ದೇಶದಿಂದ ಹೀಗೊಂದು ಅಡ್ವರ್ಟೈಸ್ ಮೆಂಟು, ’ನನ್ನ ಅಡುಗೆಯನ್ನು ರುಚಿ ನೋಡಲು ಜನ
ಬೇಕಾಗಿದ್ದಾರೆ. ಜೀವನ ಬೇಸರವಾಗಿರುವವರು, ಜೀವ ನಶ್ವರ ಎಂದುಕೊಂಡಿರುವವರಿಗೆ ಆದ್ಯತೆ!!’

(ವಿಜಯಕರ್ನಾಟಕದಲ್ಲಿ ಪ್ರಕಟಿತ)

ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!!

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:

ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ. ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?


೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗು ಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?

ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು.

ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ, ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.


***

ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು. ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ
ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ
ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.

ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!

ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.

ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ,
ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.
ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ, ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.

ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ. ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.

ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ. ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.

ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.

ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಥರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!

ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ. ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!

ಕತೆಯಾದ ಕುಂಟಪ್ಪ!

ಕುಂಟಪ್ಪನ ಹೆಸರು ಕುಂಟಪ್ಪನಲ್ಲ!

ಈಗ್ಯೆ ಎರೆಡು ವರ್ಷದ ಕೆಳಗೆ ಕುಂಟಪ್ಪನನ್ನು ಯಾರೂ ಕುಂಟಪ್ಪನೆಂದು
ಕರೆಯುತ್ತಿರಲಿಲ್ಲ. ಕುಂಟಪ್ಪನ ನಿಜವಾದ ಹೆಸರು ಮನ್ನೋಜಿ ರಾವ್ ಎಂದು. ಅಕಸ್ಮಾತಾಗಿ
ಯಾರಾದರೂ ತನ್ನ ಹೆಸರು ಹಿಡಿದು ಕೂಗಿದರೆ ಕುಂಟಪ್ಪನು ತುಂಬಾ ಖುಷಿಗೊಳ್ಳುತ್ತಾನೆ.
ಎರೆಡು ವರ್ಷದ ಹಿಂದೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಕುಂಟಪ್ಪನನ್ನು ಹಳ್ಳಿಯೇನು
ಅಷ್ಟು ಆಸ್ಥೆಯಿಂದ ಜ್ಞಾಪಿಸಿಕೊಳ್ಳುತ್ತಿರಲಿಲ್ಲ. ತಿರುಗಿ ಬಂದ ಅವನಿಗೆ ಸಂಭ್ರಮದ
ಸ್ವಾಗತವನ್ನೂ ಕೋರಲಿಲ್ಲ. ಇಂಥಹ ಎಷ್ಟೊ ಕುಂಟಪ್ಪರನ್ನು ಒಳಗೊಂಡ ಹಳ್ಳಿ ತನ್ನ ಪಾಡಿಗೆ
ತಾನಿದೆ.

ಕುಂಟಪ್ಪನ ಹಿನ್ನೆಲೆಯೂ ಏನಷ್ಟು ರೋಚಕವಾಗಿಲ್ಲ. ಈ ಮೊದಲು ಕುಂಟಪ್ಪನಿಗೆ
ಹಳ್ಳಿಯಲ್ಲೊಂದಷ್ಟು ಜಮೀನಿತ್ತು. ಈಗಿಲ್ಲ. ಕುಂಟಪ್ಪ ಒಂದಲ್ಲ ಎರೆಡು ಮದುವೆ ಆಗಿದ್ದ.
ಈಗ ಒಬ್ಬ ಹೆಂಡತಿಯೂ ಜೊತೆಗಿಲ್ಲ. ದೊಡ್ಡವಳು ಸತ್ತ ವರ್ಷಕ್ಕೇ ಇನ್ನೊಂದು ಮದುವೆಯಾದ
ಕುಂಟಪ್ಪನ ಎರಡನೇ ಹೆಂಡತಿ ಬಲು ಘಾಟಿ ಹೆಂಗಸು. ಕುಂಟಪ್ಪನೇನು ಮುಗ್ಧನಲ್ಲ. ಏರು
ದನಿಯಲ್ಲಿ ಜಗಳವಾಡುತ್ತಿದ್ದ ಅವಳನ್ನು ಮೂಲೆಗೆ ಕೆಡವಿ ಸಿಕ್ಕಸಿಕ್ಕಿದ್ದರಲ್ಲೆಲ್ಲ
ಸರಿಯಾಗಿ ಇಕ್ಕುತ್ತಿದ್ದ. ಅವನ ಒದೆತ ತಾಳಲಾರದೆ ಅವಳು ಹಿಂದಿನ ರಸ್ತೆಯ ಮಾಸ್ತರ ಜೊತೆ
ಓಡಿ ಹೋದಳು. ಇಬ್ಬಿಬ್ಬರನ್ನು ಕಟ್ಟಿಕೊಂಡು ಒಬ್ಬಳನ್ನೂ ಬಾಳಿಸದೇ ಹೋದ ಎಂದು, ಮಾತಿಗೆ
ಏನೂ ಸಿಗದಾಗ ಜನ ಕುಂಟಪ್ಪನ ಬಗ್ಗೆ ಆಡಿಕೊಳ್ಳುವುದುಂಟು. ಕುಂಟಪ್ಪನಿರುವ ಆ ಹಳ್ಳಿ
ಬೆಂಗಳೂರಿಗೆ ತೀರ ಸಮೀಪದಲ್ಲಿದೆ. ಬಿ.ಡಿ.ಎ ಲೇ ಔಟ್ ಗಳನ್ನು ಮಾಡಲು ಸರ್ಕಾರವು ರೈತರ
ಜಮೀನನ್ನು ಖರೀದಿ ಮಾಡಿತು. ಕುಂಟಪ್ಪನಿಗೆ ಊಟಕ್ಕೆ, ಸಾರಾಯಿಗೆ ಏನೂ ತೊಂದರೆ
ಇರಲಿಲ್ಲ. ಇದ್ದ ಜಮೀನಿನಲ್ಲಿ ಬೆಳೆದು, ವರ್ಷಕ್ಕಾಗುವಷ್ಟು ಇಟ್ಟುಕೊಂಡು
ಮಿಕ್ಕಿದ್ದನ್ನು ಮಾರಿ ಹೇಗೋ ಕಾಲ ತಳ್ಳುತ್ತಿದ್ದ. ಜಮೀನು ಮಾರಬೇಕಾದ ದರ್ದು ಖಂಡಿತ
ಅವನಿಗೆ ಇರಲಿಲ್ಲ. ಅವನು ಜಮೀನು ಮಾರಿದ್ದಕ್ಕೂ ಒಂದು ಹಿನ್ನಲೆಯಿದೆ.

ಕುಂಟಪ್ಪನಿಗೆ ಮಕ್ಕಳಿದ್ದಾರೆ. ಎರಡನೆ ಹೆಂಡತಿಯ ಮಕ್ಕಳು. ಮೊದಲನೆ ಹೆಂಡತಿಗೂ
ಮಕ್ಕಳಿದ್ದುವೇನೋ, ಅವರ ಬಗ್ಗೆ ಗೊತ್ತಿಲ್ಲ. ಈ ಎರಡನೆ ಹೆಂಡತಿ, ಮಾಸ್ತರ ಜೊತೆಗೆ ಓಡಿ
ಹೋಗುವ ಮೊದಲು ಇದ್ದ ಎರಡು ಮಕ್ಕಳನ್ನು ’ಹುಟ್ಟಿಸಿಲ್ವ ನೀನೇ ಸಾಕ್ಕೋ’ ಅಂತಂದು
ಕುಂಟಪ್ಪನ ಹತ್ತಿರವೇ ಬಿಟ್ಟು ಹೋಗಿದ್ದಳು. ತನ್ನ ಊಟಕ್ಕೆ ಪರದಾಡುತ್ತಿದ್ದ ಕುಂಟಪ್ಪ,
ಹಳ್ಳಿಯಲ್ಲಿ ಅವರಿಬ್ಬರನ್ನೂ ಸಾಕಲಾರದೆ, ಎರಡನೆ ಹೆಂಡತಿ ತಾಯಿಯ ಮನೆಗೆ ಅವನ್ನು
ಬಿಟ್ಟು ಬಂದಿದ್ದ. ಓಡಿಹೋದವಳ ಮಕ್ಕಳೆಂದು ಅವಕ್ಕೂ ಅಲ್ಲಿ ಸಿಕ್ಕ ಮರ್ಯಾದೆ
ಅಷ್ಟರಲ್ಲೇ ಇತ್ತು. ಚೆನ್ನಾಗಿ ಸಾಕುತ್ತಿಲ್ಲವೆಂದೂ ತಿಳಿದರೂ, ಅವರನ್ನು ಮನೆಗೆ ತಂದು
ಆರೈಕೆ ಮಾಡಲು ಚೈತನ್ಯವಿಲ್ಲದ ಅಸಹಾಯಕನಾಗಿದ್ದ ಕುಂಟಪ್ಪ ಆಗಾಗ ಹೋಗಿ ಮಕ್ಕಳನ್ನು
ನೋಡಿಕೊಂಡು, ಓಡಿ ಹೋದ ಹೆಂಡತಿಗೆ ಹಿಡಿ ಶಾಪ ಹಾಕಿ ಬರುತ್ತಿದ್ದ. ಇಬ್ಬರು ಮಕ್ಕಳೂ
ಬೆಳೆದು ಮದುವೆಯಾಗಿ ಈಗ ಇಬ್ಬಿಬ್ಬರು ಮಕ್ಕಳಿಗೆ ಪೋಷಕರಾಗಿದ್ದಾರೆ. ಆಟೋ
ಓಡಿಸಿಕೊಂಡಿದ್ದ ಅನುಭವದಿಂದಲೇ ಎಂಬಂತೆ ತಮಿಳು ಹುಡುಗಿಯನ್ನು ಓಡಿಸಿಕೊಂಡು ಹೋಗಿ
ಮದುವೆಯಾಗಿ, ಮಾವನ ಆಸ್ತಿಯ ಒಡೆಯನಾಗಿ ನೆಮ್ಮದಿಯಿಂದಿರುವವನು ಕುಂಟಪ್ಪನ ಹಿರಿಮಗ.
ಬಡತನದಲ್ಲೇ ಹುಟ್ಟಿ, ಮೂದಲಿಕೆಯಲ್ಲೇ ಬೆಳೆದು, ಅವರಿವರ ನೆರವಿನಿಂದ ಮದುವೆಯಾದ
ಹೆಣ್ಣುಮಗಳು ಮತ್ತು ಇಬ್ಬರು ಮಕ್ಕಳ ಅಮ್ಮ ಕುಂಟಪ್ಪನ ಎರಡನೆಯ ಸಂತಾನ. ಅಪ್ಪ-ಮಗ-ಮಗಳು
ಇವರಲ್ಲಿ ಸ್ವಾಭಾವಿಕವಾಗಿ ಇರಬೇಕಿದ್ದ ಪ್ರೀತಿ ಅವರಲ್ಲಿ ಇರಲಿಲ್ಲವೆನ್ನುವುದಕ್ಕಿಂತ
ಕಡಿಮೆ ಇತ್ತು ಎಂದರೆ ಸರಿಯೇನೋ.

ಕುಂಟಪ್ಪನ ಬಳಿ ಇದ್ದ ಜಮೀನು ಪಿತ್ರಾರ್ಜಿತವಾದ್ದರಿಂದ ಸಧ್ಯಕ್ಕೆ ಇದ್ದ ಇಬ್ಬರೂ
ಮಕ್ಕಳಿಗೂ ಅದರಲ್ಲಿ ಹಕ್ಕಿತ್ತು. ಬಿ.ಡಿ.ಎ. ಲೇ ಔಟುಗಳಾಗ ತೊಡಗಿ ಸರ್ಕಾರವು ಜಮೀನಿನ
ಖರೀದಿಗೆ ಒತ್ತಾಯಿಸಿದಾಗ, ಬೆಂಗಳೂರಿನಲ್ಲಿ ಇದ್ದುದ್ದರಲ್ಲೇ ಸಂಸಾರ ಮಾಡಿಕೊಂಡಿದ್ದ
ಕುಂಟಪ್ಪನ ಮಕ್ಕಳು, ಕುಂಟಪ್ಪನು ಸುತಾರಾಂ ಬೇಡವೆಂದರೂ ಕೇಳದೆ ಒಳ್ಳೆಯ ಬೆಲೆಗೆ
ಜಮೀನನ್ನು ಮಾರಿಬಿಟ್ಟರು. ಬಂದ ಹಣದಲ್ಲಿ ಸೈಟು ಮನೆ ಎಲ್ಲಾ ಖರೀದಿಸಲು ಆಗದೆ ಹೋದರೂ,
ಹಾಲಿ ಇದ್ದುದ್ದಕ್ಕಿಂತ ಅವರ ಜೀವನ ಉತ್ತಮ ಮಟ್ಟದ್ದಾಯಿತು. ಆದರೆ ಕುಂಟಪ್ಪನಿಗೆ
ಪೀಕಲಾಟಕ್ಕಿಟ್ಟುಕೊಂಡಿತು. ಜಮೀನಿಲ್ಲದೆ ಹಳ್ಳಿಯಲ್ಲಿ ತಾನು ಮಾಡುವುದೇನು ಎಂದು
ಜಮೀನು ಮಾರುವುದಕ್ಕೆ ಮುಂಚೆಯೇ ಮಕ್ಕಳಿಬ್ಬರಿಗೂ ಪ್ರಶ್ನಿಸಿದ್ದ, ಹೇಗಾದರೂ ಜಮೀನನ್ನು
ಮಾರಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದ ಅವರಿಬ್ಬರೂ ’ನಾವಿಲ್ವ, ನಾವು ಸಾಕ್ತೀವಿ,
ನಮ್ಮನೇಲೆ ಬಂದಿರು’ ಎಂದು ಅವಸರಿಸಿ ಅವನ ಕೈಲಿ ಹೆಬ್ಬೆಟ್ಟೊತ್ತಿಸಿದ್ದರು. ಜಮೀನು
ಮಾರಿದ ಮೇಲೆ ಬಂದ ಹಣವನ್ನು ಹಂಚಿಕೊಂಡು, ಕುಂಟಪ್ಪನ ಕೈಲೊಂದಷ್ಟು ಹಣ ಇರುಕಿ ಹೋದ
ಮಕ್ಕಳು, ಮತ್ತವನ ಕಡೆ ತಿರುಗಿ ನೋಡಿರಲಿಲ್ಲ. ಕೈಲಿದ್ದ ಹಣ ಖಾಲಿಯಾಗುವವರೆಗೂ
ಕುಂಟಪ್ಪನಿಗೂ ಮಕ್ಕಳ ನೆನಪು ಬಂದಿರಲಿಲ್ಲ. ’ಕೂತು ಉಂಡರೆ ಕುಡಿಕೆ ಹೊನ್ನೂ ಸಾಲದು’
ಎಂಬ ಮಾತೆಷ್ಟು ನಿಜ. ಕುಂಟಪ್ಪನ ಕೈಲಿದ್ದ ದುಡ್ಡು ಖಾಲಿಯಾಗಿತ್ತು. ಅವರಿವರ ಹತ್ತಿರ
ಸಾಲ ಮಾಡಿ ಸೇಂದಿ ಏರಿಸಿ ಒಂದಷ್ಟು ದಿನ ಕಳೆದ. ಸಾಲವೂ ಹುಟ್ಟದಾದಾಗ, ಕುಂಟಪ್ಪನು
ಯೋಚಿಸಬೇಕಾಗಿ ಬಂತು. ಇದೆಲ್ಲದರ ಮಧ್ಯೆ ಕುಂಟಪ್ಪನಿಗೆ ಕಾಲಿನ ಕೊನೆಯಲ್ಲಿ ಕೆಟ್ಟದಾಗಿ
ವಾಸನೆ ಬಂದಂತಾಗಿ ಸಿಕ್ಕ ಸಿಕ್ಕ ಸೊಪ್ಪನ್ನೆಲ್ಲ ಅರೆದು ಹಚ್ಚುತ್ತಿದ್ದ.
ಯಾವುದರಿಂದಲೂ ವಾಸಿಯಾಗದಾದಾಗ ಕುಂಟಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಅಷ್ಟು ದಿನ
ಮರೆತಿದ್ದ ಮಕ್ಕಳನ್ನು ತಟಕ್ಕನೆ ಜ್ಞಾಪಿಸಿಕೊಂಡು, ತನ್ನ ಜಮೀನು ಮಾರಿ ದುಡ್ಡು
ತಗಂಡು, ತನ್ನನ್ನು ಅಬ್ಬೇಪಾರಿಯಾಗಿಸಿ ಬಿಟ್ಟರೆಂದು, ತನ್ನ ಕಾಲಿಗೆ ಔಷದಿ ಮಾಡಿಸಲೂ
ತನ್ನಲ್ಲಿ ದುಡ್ಡಿಲ್ಲವೆಂದು ಬೈಯ್ಯ ತೊಡಗಿದ. ಅವರಿವರ ಕಿವಿಗೆ ಬಿದ್ದು ಅದು ಹೇಗೋ ಈ
ಮಾತುಗಳು ಅವನ ಮಕ್ಕಳ ಕಿವಿಯನ್ನೂ ತಲುಪಿತು. ಮಕ್ಕಳಿಬ್ಬರೂ ದೀರ್ಘ ಸಮಾಲೋಚನೆ ನಡೆಸ
ತೊಡಗಿದರು.

ತಾನೇ ಮಾವನ ಮನೆ ಸೇರಿಕೊಂಡಿದ್ದೇನೆ, ಅಪ್ಪನನ್ನು ಎಲ್ಲಿಟ್ಟುಕೊಳ್ಳಲಿ ಎಂದು ಮಗ
ತಗಾದೆ ತೆಗೆದ. ತನ್ನ ಗಂಡ ಒಪ್ಪಿದರೂ, ಮಗನಿದ್ದ ಮೇಲೆ ನಾನ್ಯಾಕೆ ಸಾಕಲಿ ಎಂದು ಮಗಳು
ಹಿಂತೆಗೆದಳು. ಜಗಳ ಬಗೆಹರೆಯದಾದಾಗ ಹಿರಿಯರೆನಿಸಿಕೊಂಡವರ ಮಧ್ಯಸ್ಥಿಕೆಯಲ್ಲಿ
ಕುಂಟಪ್ಪನು ಮಗಳ ಮನೆಯಲ್ಲಿ ಇರುವುದೆಂದೂ, ಮಗನು ಅಪ್ಪನ ದೇಕ್ ರೇಖಿಗೆ ತಿಂಗಳಾ
ಒಂದಷ್ಟು ಹಣ ಕೊಡುವುದೆಂದೂ ತೀರ್ಮಾನವಾಯಿತು. ಕುಂಟಪ್ಪನೂ ಇದಕ್ಕೆ ಒಪ್ಪಿದ. ತನ್ನ
ಹಳ್ಳಿಗೆ ಒಂದು ಸಲಾಮು ಹೊಡೆದು, ಮಗಳು ಮತ್ತು ಕೊಳೆಯುತ್ತಿದ್ದ ಕಾಲಿನ ಜೊತೆ
ಬೆಂಗಳೂರು ಬಸ್ಸನ್ನೇರಿದ.

ಮಗಳ ಮನೆ ಸುಸಜ್ಜಿತವಾಗಿತ್ತು. ಸ್ವಿಚ್ ಹಾಕಿದರೆ ಬಿಸಿ ನೀರು, ತಂಪಾಗಿಸಲು
ರೆಫ್ರಿಜರೇಟರು. ಬಟ್ಟೆ ಒಗೆಯಲು ಅದೆಂತದೋ ಮಶೀನು. ಮಲಗಲು ಮಂಚ, ನೋಡಲು ಟಿ.ವಿ.
ಕುಂಟಪ್ಪ ಖುಷಿಯಾಗಿ ಹೋದ. ಅವನಿಗೆ ಕಾಲಿನ ಗಾಯ ಮರೆತಂತೇ ಆಗಿತ್ತು. ಸ್ವಲ್ಪ ದಿನದ
ಮೇಲೆ ಮತ್ತೆ ಎಡಬಿಡದೇ ನೋವು ಕಾಡತೊಡಗಿದಾಗ, ಮಗಳು ಆತನನ್ನು ಆಸ್ಪತ್ರೆಗೆ
ಕರೆದುಕೊಂಡು ಹೋದಳು. ಆದರೆ ಅಷ್ಟ್ರರಲ್ಲಾಗಲೇ ಹಿಮ್ಮಡಿಯ ಮೇಲ್ಭಾಗದವರೆಗೂ ಕಾಲು
ಗ್ಯಾಂಗ್ರಿನ್ ಆಗಿ , ಕಾಲು ತೆಗೆಯದಿದ್ದರೇ ಅದು ಮೈಯೆಲ್ಲ ಹಬ್ಬುತ್ತದದೆಂದು ಡಾಕ್ಟರು
ಎಚ್ಚರಿಸಿದರು. ’ಏನಾದ್ರು ಆಗ್ಲಿ ನನ್ ಕಾಲು ಕತ್ತರಿಸಕ್ಕೆ ಬಿಡಲ್ಲ’ ಎಂದು ಕುಂಟಪ್ಪ
ಚೀರಾಡಿದರೆ, ಇದೆಲ್ಲಕ್ಕೂ ದುಡ್ಡೆಲ್ಲಿಂದ ಹೊಂಚುವುದೆಂದೂ ಮಗಳೂ ಮಗನೂ ತಲೆಮೇಲೆ ಕೈ
ಹೊತ್ತು ಕುಳಿತರು. ಮಗಳು ಸಣ್ಣದ್ದಕ್ಕೆಲ್ಲ ಸಿಡಿಮಿಡಿಗೊಳ್ಳ ತೊಡಗಿದರೆ. ಮಗ ದುಡ್ಡು
ಹೊಂಚಲು ಆಗುತ್ತಿರುವ ಕಷ್ಟವನ್ನೆಲ್ಲ ಹೇಳಿಕೊಂಡು ರೇಗುತ್ತಿದ್ದ. ಅಂತೂ ಕುಂಟಪ್ಪನ
ಕಾಲಿಗೆ ಆಪರೇಶನ್ ಆಗಿ, ಎಡಗಾಲು ಹಿಮ್ಮಡಿಯ ಮೇಲ್ಬಾಗದವರೆಗೆ ಇಲ್ಲವಾಯಿತು.
ಆಸ್ಪತ್ರೆಯವರು ಕೊಟ್ಟ ಕೋಲನ್ನು ಕಂಕುಳ ಕೆಳಗೆ ಇಟ್ಟುಕೊಂಡು ಓಡಿಯಾಡಲು ಕಲಿತ.
ಆಸ್ಪತ್ರೆ ಇಂದ ಮನೆಗೆ ಬಂದ ಮೇಲೆ ಮಗಳ ಸಿಡಿಮಿಡಿ ನಡೆದೇ ಇತ್ತು. ಕೇಳಿಸಿಕೊಳ್ಳದೆ
ಹೊರಗೆ ಹೋಗಲು, ಐದನೇ ಫ್ಲೋರಿನಲ್ಲಿದ್ದ ಮನೆಯಿಂದ ಕೆಳಗೆ ಇಳಿಯಲು ಕುಂಟಪ್ಪನ ಕೈಲಿ
ಅಲ್ಲಲ್ಲ ಕಾಲಲ್ಲಿ ಆಗುತ್ತಿರಲಿಲ್ಲ. ಕುಂಟಪ್ಪ ಅಂತರ್ಮುಖಿಯಾಗ ತೊಡಗಿದ್ದ. ಈಗೀಗ
ಅವನಿಗೆ ಎಲ್ಲವೂ ಬೇಸರವೆನಿಸುತ್ತಿತ್ತು. ಟೀವಿ ನೋಡದಾದ. ಹೊರಗೆ ಹೋಗಿಬರಲು ಮಕ್ಕಳ
ಮೊಮ್ಮಕ್ಕಳ ಸಹಾಯ ಕೇಳಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಕುಂಟಪ್ಪನಿಗೆ
ಎಲ್ಲಿಯಾದರೂ ಓಡೇ ಹೋಗಬೇಕೆನಿಸುತ್ತಿತ್ತು. ರಾತ್ರಿಗಳಲ್ಲಿ ಎದ್ದು ಮನೆಯ ಹೊರಗೆ
ಗಸ್ತು ತಿರುಗ ತೊಡಗಿದ. ಏನೂ ಮಾಡಿದರೂ ಅವನ ತಳಮಳ ನಿಲ್ಲದಾಯಿತು.

ಅದೊಂದು ದಿನ ಮಗಳಿಗೆ ತನ್ನನ್ನು ಹಳ್ಳಿಗೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದ.
ಸಿಟ್ಟುಗೊಂಡ ಮಗಳು ಆಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸತೊಡಗಿದ, ಇವನ ಕಾಟ
ತಾಳಲಾರದೆಯೋ ಅಥವಾ ಕನಿಕರದಿಂದಲೋ ಅವನನ್ನು ಹಳ್ಳಿಗೆ ಕರೆದುಕೊಂಡು ಹೊರಟಳು. ಸುಮಾರು
೨ ವರ್ಷದ ಹಿಂದೆ ನೋಡಿದ್ದ ತನ್ನ ಹಳ್ಳಿಯನ್ನು ಮತ್ತೆ ನೋಡುತ್ತಲೇ ಕುಂಟಪ್ಪ
ಖುಷಿಗೊಂಡ. ತನ್ನ ಮನೆಯ ಸುತ್ತ ಮುತ್ತ ನಡೆದಾಡಿದ. ಮನೆಯ ಎದುರಿಗಿದ್ದ ತೆಂಗಿನ
ಮರವನ್ನು ನೇವರಿಸಿದ. ಹಸುಗಳನ್ನು ಕಂಡು ಮಾತಾಡಿಸಿದ. ಒಟ್ಟಿನಲ್ಲಿ ಅವನು
ಪ್ರಸನ್ನನಾಗಿದ್ದ. ಕತ್ತಲಾಗುತ್ತ ಬಂದಂತೆ ಮಗಳು ವಾಪಾಸ್ಸು ಹೊರಡಲು ಒತ್ತಾಯಿಸ
ತೊಡಗಿದಳು. ಕುಂಟಪ್ಪ ಏನು ಮಾಡಿದರೂ ಬರದಾದ. ಒಬ್ಬನೇ ಇಲ್ಲಿರುವುದು
ಕ್ಷೇಮವಲ್ಲವೆಂದೂ, ಅವನನ್ನು ನೋಡಿಕೊಳ್ಳಲು ಯಾರೂ ಅಲ್ಲಿಲ್ಲವೆಂದು ಹೇಳಿದರೂ
ಕುಂಟಪ್ಪನು ಮನ ಬದಲಿಸಲಿಲ್ಲ. ಬೇಸತ್ತ ಮಗಳು ಒಬ್ಬಳೇ ವಾಪಾಸ್ಸಾದಳು. ಬೇರಿಗೆ
ಅಂಟಿಕೊಂಡಿದ್ದ ಕುಂಟಪ್ಪನ ಮನಸ್ಸು ರೆಕ್ಕೆಗಳಿಗೆ ಹೊಂದಿಕೊಳ್ಳದಾಯಿತು. ಏನೇ ಆದರು
ಮತ್ತೆ ತನ್ನ ಹಳ್ಳಿ ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದ.

ಅಂದಿನಿಂದ ಕುಂಟಪ್ಪ ಹಳ್ಳಿಯಲ್ಲೇ ಇದಾನೆ. ಇದಕ್ಕೂ ಮೊದಲು ಮಾನಣ್ಣ, ಮಾನೋಜಿ, ಮಾನಪ್ಪ
ನಾಗಿದ್ದವನು ಈಗ ಎಲ್ಲರ ಬಾಯಲ್ಲಿ ಕುಂಟಪ್ಪನಾಗಿದ್ದಾನೆ. ಮನೆಯಲ್ಲಿ ಸಹಾಯಕ್ಕೆ ಒಬ್ಬ
ಸಣ್ಣ ಹುಡುಗನನ್ನು ಇಟ್ಟುಕೊಂಡಿದ್ದಾನೆ. ಪಕ್ಕದ ಮನೆಯವರಿಗೆ ಮಾರಿಬಿಟ್ಟಿದ್ದ ತನ್ನ
ಹಸುಗಳನ್ನು ತಾನೇ ಸಾಕ ತೊಡಗಿದ್ದಾನೆ. ಆಗಾಗ ತನ್ನದಲ್ಲದ ಜಮೀನಿಗೆ ಹೋಗಿ
ಅಡ್ಡಾಡಿಕೊಂಡು ಬರುತ್ತಾನೆ.

ಹೀಗೊಂದು ಸಂಜೆ!

the_girl_in_the_rain_by_best10photos

ಇವತ್ತೂ ಆಫೀಸ್ ನಿಂದ ಹೊರಡೋ ಅಷ್ಟೊತ್ತಿಗೆ ಅರ್ಧಗಂಟೆ ಲೇಟ್ ಆಗಿತ್ತು. ಗಾಡಿ ಸ್ಟಾರ್ಟ್ ಮಾಡ್ತಿದ್ದ ಹಾಗೆ ಆಕಾಶದಾಳದಲ್ಲೆಲ್ಲೋ ಧಡುಂ ಅಂದ ಸದ್ದು. ಒಂದು ವಾರದಿಂದ ನೆನಿತಾ ಇದೀನಿ, ಇವತ್ತು ಮಳೆ ಬರೋದು ಬೇಡಪ್ಪಾ ಅಂತ ತಲೆ ಮೇಲೆತ್ತಿ ಮೋಡಕ್ಕೊಂದು ಸಂದೇಶ ಕಳುಹಿಸಿದೆ. ’ಹಹ್ ನೀನೆಷ್ಟರವಳು!’ ಎಂದುಕೊಂಡಿತೋ ಏನೋ, ಮುಂದಿನ ಎರಡು ನಿಮಿಷಕ್ಕೆಲ್ಲ ದಪ್ಪ ದಪ್ಪ ಹನಿಗಳು ಬೀಳೋಕೆ ಶುರು ಆಯಿತು. ’ಇವತ್ತಂತು ನಿನ್ ಕೈಲಿ ಆಗೋದಿಲ್ವೆ, ಈಗ ನೆಂದ್ರೆ ನಾಳೆ ಜ್ವರ ಬಂದು ಮಲಗಿಬಿಡ್ತೀಯ ನೋಡ್ಕೋ!. ನನ್ನೊಳಗು ನನ್ನನ್ನ ಎಚ್ಚರಿಸಿತು. ದಿನಾ ಮಳೇನ ಎನ್ಜಾಯ್ ಮಾಡ್ಕೊಂಡು ಡ್ರೈವ್ ಮಾಡ್ತಿದ್ದ ನನಗೆ ಇವತ್ತು ನೆನಿಲೇಬಾರದು ಅನ್ಸೋ ಅಷ್ಟು ಬೇಜಾರಾಗಿತ್ತು. ಒಂದಿನ್ನೂರು ಮೀಟರ್ನಷ್ಟು ಮುಂದೆ ಹೋಗಿ ಹೋಟೇಲ್ ಒಂದರ ಹತ್ರ ನಿಲ್ಲಿಸಿದೆ.

ಆ ಹೋಟೇಲೋ ತೀರಾ ಸಣ್ಣದು, ಒಂದು ಕಾಫಿ, ಒಂದು ವಡೆ ತಗೊಂಡು ಹೊರಗಡೆ ಬೀಳ್ತಿದ್ದ ಮಳೆ ಕಾಣೋ ಹಾಗೆ ಮೂಲೆಯ ಟೇಬಲ್ ಒಂದರಲ್ಲಿ ಕೂತು ಇಷ್ಟಿಷ್ಟೇ ಕಾಫಿ ಕುಡೀತಾ ವಡೆ ತಿಂದು ಮುಗಿಸಿದ್ರೆ, ಬೆಳಗ್ಗೆ ಇಂದ ಇದ್ದ ಬೇಜಾರೆಲ್ಲ ಮಾಯ ಮಾಯ!!! ಈ ಕಾಫಿಗೆ ಏನು ಪವರ್ ಇದೆ ಅಂತೀರಾ! ಫುಲ್ ರಿಫ್ರೆಶ್ ಆಗಿ, ಆ ಮಳೇಲೆ ಗಾಡಿ ಸ್ಟಾರ್ಟ್ ಮಾಡ್ಕೊಂಡು, ಮುಖಕ್ಕೆ ರಾಚುತಿದ್ದ ಮಳೆನೀರನ್ನ ನೆಕ್ಕಿಕೊಂಡು, ಬರ್ರ್ ಅಂತ ಗಾಡಿ ಓಡಿಸ್ಕೊಂಡು, ಮಳೆಗೆ ರಸ್ತೆ ಕಾಣದೆ ಸುಮ್ ಸುಮ್ನೆ ಹಾರನ್ ಹೊಡೆದು, ಪಕ್ಕದಲ್ಲಿ ಬರ್ತಿದ್ದ ಪಲ್ಸರ್ ಅವ್ನು ಗುರಾಯಿಸಿದಾಗ ಅವ್ನಿಗೆ ಕಣ್ಣು ಹೊಡೆದು, ಪಾಪ ಅವನು ಆಟೋದವನಿಗೆ ಗುದ್ದೇ ಬಿಡುವವನ ಹಾಗೆ ಹೋಗಿ ಬ್ಯಾಲೆನ್ಸ್ ಮಾಡ್ಕೊಂಡು ಮುಂದಕ್ಕೋದ. ಮಳೇಲಿ ಒದ್ದೆ ಮುದ್ದೆ ಆಗಿದ್ನಲ್ಲ, ಎಲ್ಲಿಗೂ ಹೋಗೋ ಮನಸ್ಸಾಗದೆ ರಥಾನಾ ಮನೆ ಕಡೆ ತಿರುಗಿಸ್ದೆ.

ಮನೆಗೆ ಬಂದವಳೇ ಹನ್ನೆರೆಡು ಅಡಿ ದೂರವಿರುವಾಗ್ಲೇ ಅಮ್ಮಾಆಆಆ! ಅಂತ ಕೂಗಿ, “ಅದ್ಯಾಕೆ ಹಂಗ್ ಬಡ್ಕೋತಿ ಇಲ್ಲೇ ಇದೀನಿ, ಇವತ್ತು ನೆನಕೊಂಡ್ ಬಂದಿಯಾ? ಹಾಳು ಹುಡುಗಿ ನಿನಗೇನ್ ಬಂದಿರೋದು. ಶೀತಗೀತ ಆಗಿ ಜ್ವರ ಬಂದು ಮಲಗ್ತೀಯ ನೋಡು ಆಗ ಗೊತ್ತಗುತ್ತೆ………” ಮಾತಾಡ್ತಲೇ ಇದ್ದ ಅಮ್ಮನ್ನ ಓಡೋಗಿ ಒದ್ದೇ ಮೈಯಲ್ಲೇ ತಬ್ಕೊಂಡು, ಅವಳತ್ರ ಮುಖ ತಿವಿಸಿಕೊಂಡು ಬಚ್ಚಲ ಮನೆಗೋಡಿದೆ. ಬಟ್ಟೆ ಬದಲಿಸಿ, ತಲೆ ಒರೆಸ್ಕೊಂಡು, “ಅಮ್ಮಾ ಚಳಿ ಆಗ್ತಿದೆ ಒಂದ್ ಕಪ್ ಕಾಫೀ….” ಅಂತ ಅಂಗಲಾಚಿ, ಬಿಸಿ ಬಿಸಿ ಕಾಫಿ ಕಪ್ ಹಿಡ್ಕೊಂಡು, ಕಂಪ್ಯೂಟರ್ ಆನ್ ಮಾಡಿ ಕೂತ್ರೆ ಚಾಟಿಗೆ ಸಿಕ್ಕ ಗೆಳೆಯನ ಮೊದಲನೆ ಮಾತೇ ’ಹೇಗಿತ್ತೆ ದಿನ?’ ಎಂದು, ಮುಗುಳ್ನಕ್ಕೆ, ’ಎಂತು ಬಣ್ಣಿಸಲಿ ಬರಿ ಮಾತಿನಲಿ!’ ಅಂತಂದು ಕಣ್ಮಿಟುಕಿಸಿದೆ!

ಸ್ವಾತಂತ್ರ್ಯದಿನ-ನನ್ನ ಅನುಭವ-ಒಂದು ಲೇಖನ

ಸ್ವಾತಂತ್ರ್ಯದ ದಿನದಲ್ಲಿ ಬರೆಯಬಹುದಾದ ಮಾಡಬಹುದಾದ ವಿಷಯಗಳು ನನಗೆ
ಸ್ಪಷ್ಟವಾಗಿಲ್ಲವಾದರೂ ಈ ಸಲದ ಸ್ವಾತಂತ್ರ್ಯ ದಿನ ನನ್ನ ಪಾಲಿಗೆ ಅತಿ ಮುಖ್ಯ ದಿನ
ಎನಿಸಿದ್ದರಿಂದ ಬರೆಯುತ್ತಿದ್ದೇನೆ. ಮೊದಲೆಲ್ಲಾ ಇತರೆ ರಜದ ದಿನಗಳ ಹಾಗೆ
ಸ್ವಾತಂತ್ರ್ಯದಿನಾಚರಣೆಯೂ ಮುಗಿದು ಹೋಗುತ್ತಿತ್ತು ಮತ್ತು ಹಾಗೆ ಕಳೆದುಬಿಟ್ಟಿದ್ದರ
ಬಗ್ಗೆ ಸಣ್ಣದೊಂದು ಗಿಲ್ಟ್ ಮನಸಲ್ಲುಳಿದುಬಿಡುತ್ತಿತ್ತು, ಈ ಸಲ ಹಾಗಾಗಲಿಲ್ಲವೆಂಬುದೇ
ಖುಷಿಯ ವಿಚಾರ. ನಾನು ಬೆಳ್ಳಂಬೆಳಿಗ್ಗೆ ಎದ್ದು ರೆಡಿಯಾಗಿ ಸ್ಯಾಟಲೈಟ್ ಬಸ್ಟಾಪ್
ತಲುಪಿಕೊಂಡು, ಇಡ್ಲಿ ತಿಂದು, ಬಿಸೀ ಬಿಸಿ ಕಾಫಿ ಕಪ್ ಹಿಡಿದು ವಾಚ್ ನೋಡಿಕೊಂಡಾಗ ಸಮಯ
ಆರುಗಂಟೆ. ಅಲ್ಲಿಂದ ನನ್ನ ಪಯಣ ಸಾಗಿದ್ದು ಮದ್ದೂರಿನ ಹತ್ತಿರವಿರುವ ನಂಬಿನಾಯಕನಹಳ್ಳಿ
ಎಂಬ ಗ್ರಾಮಕ್ಕೆ. ಹಳ್ಳಿಗಳು ನನಗೇ ಪ್ರತಿ ವಿಷಯದಲ್ಲೂ ವಿಸ್ಮಯದ ಸಂತೆ, ದೊಡ್ಡ ದೊಡ್ಡ
ಹೆಂಚಿನ ಮನೆಗಳು, ಮನೆಯಲ್ಲೇ ಸಾಕಿರುವ ರೇಷ್ಮೆ ಹುಳುಗಳು, ಆಡು, ಕುರಿ, ಹಸು, ಎತ್ತು,
ಎಮ್ಮೆ, ಕೋಳಿ ಮತ್ತು ಅವೆಲ್ಲಕ್ಕೂ ಮನೆಮಂದಿ ಮಾಡುವ ಆರೈಕೆ, ಹಳ್ಳಿಯ ನಿರ್ಮಲ ಗಾಳಿ,
ಹಸಿರು ಎಲ್ಲವೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಒಂದು
ಅಪೂರ್ವ ಸೆಳೆತವನ್ನುಂಟು ಮಾಡುತ್ತದೆ. ಅಲ್ಲಿನ ಪರಿಚಿತರ ಮನೆ ಹೊಕ್ಕು ಎಲ್ಲರನ್ನು
ಮಾತಾಡಿಸುತ್ತಿದ್ದಾಗಲೇ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದು ಗಮನ ಸೆಳೆಯಿತು,
ನಟಿ ರಮ್ಯ ಯಡಿಯೂರಪ್ಪನವರ ಸಂದರ್ಶನ ಮಾಡಿತ್ತಿದ್ದುದ್ದು. ಚಾನೆಲ್ ಸರ್ಫ್
ಮಾಡುತ್ತಿದ್ದ ಸಣ್ಣ ಹುಡುಗ ರಮ್ಯಳ ಮುಖ ನೋಡುತ್ತಿದ್ದ ಹಾಗೆ ನಿಲ್ಲಿಸಿದ,
ಪರವಾಗಿಲ್ವೆ ನಮ್ಮ ಮುಖ್ಯಮಂತ್ರಿಗಳು ಹೀರೋಯಿನ್ ರಿಗೆಲ್ಲಾ ಸಂದರ್ಶನ ಕೊಡುವ ಧೈರ್ಯ
ಮಾಡಿದ್ದಾರೆಂದು ನಾನೂ ಕಿವಿಗೊಟ್ಟೆ, ಆಕೆಯ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ
ನನಗೆ ಮೈ ಉರಿದು ಹೋಯಿತು, ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್
ಪೆಡಿಕ್ಯೂರ್ ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ? ಅರೆ ರಾಜ್ಯದ ಮುಖ್ಯ
ಮಂತ್ರಿಗಳಿಗೆ ಕೇಳುವ ಪ್ರಶ್ನೆಯಾ ಇದು?! ಇರಲಿ ಅದರ ಬಗ್ಗೆ ಮುಂದೆ ಬರೆಯುವೆ.

ಅಲ್ಲಿನ ವಾತಾವರಣ ಅನುಭವಿಸಿ ಖುಷಿ ಪಡಲು ಇನ್ನೊಂದು ಅವಕಾಶವೆಂಬಂತೆ ಪಕ್ಕದ ಹಳ್ಳಿಗೆ
ಹೋಗಬೇಕಿದ್ದ ಬಸ್ ಆ ದಿನ ನಾಪತ್ತೆಯಾಗಿತ್ತು, ಮೂರು ಕಿ.ಮೀ ನಷ್ಟು ದೂರವಿದ್ದ ಊರಿಗೇ
ನಡೆದೇ ಹೊರಟೆವು. ನನ್ನ ಜೊತೆಯಲ್ಲಿ ಬರುತ್ತಿದ್ದ ಗೆಳೆಯರೊಬ್ಬರೊಡನೆ ಹಳ್ಳಿಯ ಆಗು
ಹೋಗುಗಳ ಬಗ್ಗೆ, ಪಟ್ಟಣದ ಯಾಂತ್ರಿಕತೆಯ ಬಗ್ಗೆ ಲೋಕಾಭಿರಾಮವಾಗಿ ಮಾತು ಸಾಗಿತ್ತು.
ಮಾತು ಒಳ್ಳೆಯ ಬಿರುಸು ಪಡೆದು ನಾನು ಹಳ್ಳಿಯ ಜನರೆಲ್ಲ ನೆಮ್ಮದಿ ಉಳ್ಳವರೆಂದು
ಪಟ್ಟಣದವರ ಚೆನ್ನಾಗಿರುವಿಕೆ ಬರಿಯ ತೋರಿಕೆಯೆಂದೂ ಹೇಳಿದೆ. ಆದರೆ ಆ ಹಳ್ಳಿಯ ಜನರ ಇತರ
ಸ್ವಭಾವಗಳ ಬಗ್ಗೆ (ಅವರು ಸ್ವತಃ ಅದೇ ಊರಿನವರಾದ್ದರಿಂದ) ಹೇಳುತ್ತಾ, ಹೇಗೆ ರೈತನ
ಶ್ರಮವು ಸರಿಯಾದ ಅನುಕೂಲಗಳಿಲ್ಲದೆ ಇರುವುದರಿಂದ ಫಲ ದೊರೆಯದೇ ಪೋಲಾಗುತ್ತಿದೆ,
ಅನಕ್ಷರಸ್ಥ ಹಳ್ಳಿಗರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಗೆ
ವಿಮುಖರಾಗುತ್ತಾರೆ, ಸಮಯ ಬಂದಾಗ ಒಗ್ಗಟ್ಟಾಗಿರಲು ಒದ್ದಾಡುತ್ತಾರೆ, ಕಷ್ಟವಿಲ್ಲದ
ಪಟ್ಟಣದ ಜೀವನಕ್ಕೆ ಹಾತೊರೆಯುತ್ತಾರೆ, ಸರ್ಕಾರವು ರೈತನಿಗೆ ಕೊಟ್ಟಿರುವ
ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಾರೆ, ಸರ್ಕಾರವು ಒದಗಿಸಿರುವ
ಸೌಲಭ್ಯಗಳಲ್ಲಿ ರೈತನಿಗೆ ಆಗುತ್ತಿರುವ ಅನುಕೂಲವೆಷ್ಟು ಎಂದೆಲ್ಲ ವಿವರಿಸಿ ಒಂದು
ಉದಾಹರಣೆಯನ್ನು ಕೊಟ್ಟರು.

ಅದನ್ನು ವಿವರಿಸುವ ಮೊದಲು ಕಬ್ಬಿನ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಕಬ್ಬು ಒಂದು
ದೀರ್ಘ ಕಾಲದ ಬೆಳೆ, ಕಬ್ಬನ್ನು ಸಸಿಯಿಂದ ಕಟಾವಿನ ಹಂತದವರೆಗು ಬೆಳೆಯಲು ಕನಿಷ್ಟ
ಹನ್ನೊಂದು ತಿಂಗಳು ಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಾಲ
ದೊರೆಯುತ್ತದೆ. ಸರ್ಕಾರ, ರೈತನು ಬೆಳೆದ ಕಬ್ಬನ್ನು ತನ್ನದೇ ಅಧೀನದಲ್ಲಿರುವ
ಕಾರ್ಖಾನೆಗೆ ಕೊಡುವಂತೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ
ಕೊಡುತ್ತದೆ. ನಿಗಧಿತ ಸಮಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಒದಗಿಸದ ಪಕ್ಷದಲ್ಲಿ,
ಸಾಲವನ್ನು ಬಡ್ಡಿ ಮತ್ತು ಇತರೆ ದಂಡಗಳ ಸಮೇತ ಹಿಂತಿರುಗಿಬೇಕಾಗುತ್ತದೆ. ಇತ್ತ
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯ ಫೀಲ್ಡ್ ಮ್ಯಾನ್ ನಿಂದ ರೈತನ ಜಮೀನನ್ನು
ಪರಿಶೀಲಿಸಿ ಆ ಜಾಗದಲ್ಲಿ ಬೆಳೆಯಬಹುದಾದ ಕಬ್ಬನ್ನು ಅಂದಾಜಿಸಿ, ಕಟಾವಿನ ಸಮಯದಲ್ಲಿ
ಅಂದಾಜಿಸದಷ್ಟೇ ಕಬ್ಬು ಜಮೀನಿನಲ್ಲಿ ದೊರೆಯಬೇಕೆಂದು ಒಪ್ಪಂದದಲ್ಲಿ ಹೇಳಿರುತ್ತಾರೆ.
ಇದು ಸಾಲ ನೀಡಿ ರೈತನಿಂದ ಮರುಪಾವತಿ ಪಡೆಯುವುದಕ್ಕೆ ಸರ್ಕಾರ ಮಾಡಿರುವ ನಿಯಮ. ಆದರೆ
ಇಲ್ಲಾಗುವ ವ್ಯತಿರಿಕ್ತ ಪರಿಣಾಮಗಳೆಂದರೆ ಕಾರ್ಖಾನೆಯು ಒಂದೊಮ್ಮೆ ಫೀಲ್ಡ್ ಮ್ಯಾನ್
ನನ್ನು ಕಳಿಸಿ ಬೆಳೆಯನ್ನು ಅಂದಾಜಿಸಿದ ಮೇಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಟಾವು
ಮಾಡಿಸುವಲ್ಲಿ ತಡಮಾಡುತ್ತದೆ. (ಇದಕ್ಕೆ ಬೇರೆ ಬೇರೆಯದೇ ಕಾರಣಗಳಿರುತ್ತವೆ,
ಕಾರ್ಖಾನೆಯೂ ಅದಾಗಲೇ ಬೇರೆ ಕಡೆಯಿಂದ ಕಡಿಮೆ ಬೆಲೆಯ ಕಬ್ಬು ತರಿಸಿದ್ದರೆ,
ಕಾರ್ಖಾನೆಯಲ್ಲಿ ಕಡಿಮೆ ಕಬ್ಬನ್ನು ಅರೆಯುವ ಅವಕಾಶವಿದ್ದು ಜಾಸ್ತಿ ಜಮೀನಿಗೆ ಒಪ್ಪಂದ
ಮಾಡಿಕೊಂಡಿದ್ದರೆ, ಮಳೆ ಸರಿಯಾಗಿ ಆಗದೇ ಬೆಳೆಯೇ ತಡವಾಗಿದ್ದರೆ, ಇತ್ಯಾದಿ) ಆಗ ತಪ್ಪು
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯದ್ದೇ ಆದರೂ ರೈತ ತಾನು ಪಡೆದಿರುವ ಸಾಲಕ್ಕೆ
ಬಡ್ಡಿ ಕಟ್ಟಲೇ ಬೇಕು. ಸರ್ಕಾರದ್ದೇ ಅಧೀನದಲ್ಲಿರುವ ಎರೆಡು ವಿಭಾಗಗಳು ಒಂದಕ್ಕೊಂದು
ಪೂರಕವಲ್ಲದೆ ರೈತನಿಗೆ ಅನಾನುಕೂಲಕರವಾಗಿದೆ ಎಂಬುದು ಒಂದು ಅಂಶವಾದರೆ, ಒಂದೊಮ್ಮೆ
ಕಬ್ಬಿನ ಬೆಲೆಯಲ್ಲಿ ಏರಿಕೆ ಇದ್ದರೆ ಕೆಲವು ರೈತರು ಖಾಸಗೀ ಕಾರ್ಖಾನೆಯವರಿಗೆ
(ಬಂಡವಾಳಶಾಹಿಗಳಾದ ಖಾಸಗೀ ಕಾರ್ಖಾನೆಯವರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ
ಹೆಚ್ಚಿನ ಬೆಲೆಗೆ ಮಾರುತ್ತಾರೆ) ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮುಂಚೆಯೇ
ಮಾರಿಕೊಂಡು ಕಾರ್ಖಾನೆಯವರು ಬಂದಾಗ ಬೆಳೆಯಿಲ್ಲದ ಜಮೀನನ್ನು ತೋರಿಸುತ್ತಾರೆ.
ಕಾರ್ಖಾನೆಯಲ್ಲಾಗ ಕಬ್ಬಿನ ಪೂರೈಕೆ ಇಲ್ಲದೆ ಅರೆಯುವ ಮಶೀನುಗಳು ಬಳಕೆಯಾಗದೆ ಸರ್ಕಾರವು
ಅದರಲ್ಲಿ ತೊಡಗಿಸಿದ ಹಣ ಪೋಲಾಗುತ್ತದೆ. ಕಬ್ಬಿನ ಬೆಲೆಯ ಹೆಚ್ಚಳಕ್ಕೆ, ಸಾಲ ಮನ್ನಾ
ಮಾಡಲಿಕ್ಕೆ ಮುಷ್ಕರಗಳು ಹೂಡಲಾಗುತ್ತದೆಯಾದರೂ ನಿಜವಾಗಿಯೂ ತೊಡಕಾಗಿರುವ ಈ
ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಇತರ ಹೋರಾಟಗಾರರೆನಿಸಿಕೊಂಡವರು
ಸೋಲುತ್ತಾರೆ.

ಇದು ಗಮನಕ್ಕೆ ಬಂದ ಉದಾಹರಣೆಯಾಗಿದ್ದು ವ್ಯವಸಾಯ ಮಾಡುವಾಗ ಇಂತಹ ಹಲವು ಹತ್ತು
ಸಮಸ್ಯೆಗಳನ್ನು ರೈತನು ಎದುರಿಸಬೇಕಾಗುತ್ತದೆ. ರೈತನ ಜೀವನ ನಾನಂದುಕೊಂಡಷ್ಟು ಸುಲಭವೂ,
ಸಲೀಸೂ ಅಲ್ಲ ಎಂಬುದರ ಅರಿವಾಯಿತು. ಇವೆಲ್ಲದರ ಅರಿವು ಎಷ್ಟು ಜನಕ್ಕೆ ಇರುತ್ತದೆ?
ಅರಿವು ಮೂಡಿದ ಮೇಲಾದರೂ ಯುವಜನಾಂಗವೆನಿಸಿಕೊಂಡ ನಾವು ಮಾಡಬೇಕಾದದ್ದೇನು? ಇಂದಿನ ಯುವ
ಪೀಳಿಗೆ ವ್ಯವಸಾಯದಲ್ಲಿ ತೊಡಗುತ್ತಿಲ್ಲ ಎಂದು ದೂರುವ ಹಿರಿಯರಿಗೆ, ಇಲ್ಲಿನ
ಅನಾನುಕೂಲಗಳ ಅರಿವಿಲ್ಲವೇ? ಹಾಯಾದ ಪಟ್ಟಣದ ಜೀವನ ನೌಕರಿ ಎಲ್ಲವನ್ನು ಬಿಟ್ಟು
ವ್ಯವಸಾಯ ಮಾಡಲು ಯುವಕರಾದರೂ ಏಕೆ ಮುಂದೆ ಬಂದಾರು? ಮುಂದೆ ಬರುವಂತೆ ನಮ್ಮ ಸರ್ಕಾರ
ಏನು ಕ್ರಮ ತೆಗೆದುಕೊಂಡಿದೆ? ನಮ್ಮ ಶಿಕ್ಷಣ ಪದ್ದತಿಯು ರೈತರ ಸಮಸ್ಯೆಗಳು
ಯುವಜನಾಂಗಕ್ಕೆ ಎಷ್ಟರ ಮಟ್ಟಿಗೆ ಮುಟ್ಟಿಸುತ್ತಿದೆ? ನಗರದ ಜನತೆಗೆ ಹೀಗೆ
ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ಬವಣೆ ತಿಳಿದಿದೆಯೇ? ನಮ್ಮಲ್ಲಿಲ್ಲಿ ದೇಶದ
ತುಂಬಾ ಸಮಸ್ಯೆಗಳಿವೆ, ಸ್ವಾತಂತ್ರ್ಯದದಿನ, ನಟಿಯೊಬ್ಬಳು ಮುಖ್ಯಮಂತ್ರಿಯನ್ನು
ಕೇಳುತ್ತಾಳೆ ’ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್ ಪೆಡಿಕ್ಯೂರ್
ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ?’ ನಗುವುದೋ ಅಳುವುದೋ ನೀವೆ ಹೇಳಿ?!

(ಮುಗಿಸುವ ಮುನ್ನ: ಇದನ್ನೆಲ್ಲ ತಿಳಿದುಕೊಂಡು ಹೀಗೆ ಬರೆಯುತ್ತಿರುವುದರಿಂದ ನನ್ನ
ದೇಶಕ್ಕೆ ಅದರ ಸಮಸ್ಯೆಗಳ ನಿವಾರಣೆಗೆ ನಾನು ಉಪಕಾರ ಮಾಡುತ್ತಿದ್ದೇನೆ ಎಂದು
ನನಗನಿಸುತ್ತಿಲ್ಲ. ನಗರದ ನೌಕರಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ನಾನು ಹಳ್ಳಿಗೆ
ಹೋಗಿ ಎಂದಾದರು ಮೈ ಬಗ್ಗಿಸಿ ದುಡಿಯಬಲ್ಲೆನೇ? ಬಡಕಲು ದನಗಳಿಗೆ ನೇಗಿಲನ್ನು ಕಟ್ಟಿ
ವ್ಯವಸಾಯ ಮಾಡುತ್ತಿರುವ ರೈತನಿಗೆ ನಗರದಲ್ಲಿ ನಮಗೆ ಸಿಗುವ ಸಾರ್ವಜನಿಕ ಸೌಲಭ್ಯಗಳ ಶೇ
೫ ರಷ್ಟೂ ಸಿಗುತ್ತಿಲ್ಲ. ಓದಿರುವ ನಾವು ಸರ್ಕಾರಿ ನೌಕರಿಗಳಲ್ಲಿನ ಮೀಸಲಾತಿ,
ಕನ್ನಡಪರಚಳವಳಿಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಹೋರಾಡುತ್ತೀವಾದರೂ, ರೈತನ ಕಷ್ಟಗಳ
ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಅತಿ ಹೆಚ್ಚಿನ ಪ್ರಾಮುಖ್ಯತೆ,
ಸೌಲಭ್ಯಗಳು ಸಿಗಬೇಕಾಗಿರುವುದು ನಮ್ಮ ದೇಶದ ಬೆನ್ನೆಲುಬಾದ ರೈತನಿಗಲ್ಲವೇ?)

ಆತ್ಮಕತೆಗಳ ಜಾಡು ಹಿಡಿದು- ಇನ್ನೊಂದು ಆತ್ಮಕತೆಯ ಸುತ್ತ!

alone-13004
ಆತ್ಮಕತೆಗಳಲ್ಲಿ ಇರುವುದೆಲ್ಲವೂ ಸತ್ಯವಾ? ಸುಳ್ಳಾದರೂ ಅದನ್ನು ಪರೀಕ್ಷಿಸಲು ಬರದು
ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ
ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ ಮೂರ್ಖತನ.
ಸತ್ಯಕ್ಕೊಂದು ಪರಿಧಿ ಹಾಕಿ ಇದರಾಚೆಗಿನದೆಲ್ಲ ಸುಳ್ಳು ಎಂದು ಹೇಳಲು ಬರುವುದೇ?
ಘಟನೆಗಳು, ಅನುಭವಗಳು, ದಾಖಲಾಗುತ್ತವೆ. ಅದರ ಸತ್ಯಾಸತ್ಯತೆ ಬರೆದವರನ್ನು ಕಾಡುತ್ತದೆ.
ಆತ್ಮಸಾಕ್ಷಿಗೆ ಹೆದರುವವರೆಲ್ಲರು ಸತ್ಯವನ್ನೇ ದಾಖಲಿಸುತ್ತಾರೆ ಎಂಬ ಮಾತುಗಳೆಲ್ಲ
ಎಷ್ಟು ಸಿನಿಕವೆನ್ನಿಸತೊಡಗಿತು. ಒಂದು ಘಟನೆಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ
ತನ್ನದೇ ಅಭಿಪ್ರಾಯಗಳನ್ನು ಹೊಂದಿರುತ್ತಾನೆ, ಅದೂ ಅವನವೇ ಎಂಬುದಕ್ಕೆ ಏನು ಸಾಕ್ಷಿ
ತಂದುಕೊಡಬಲ್ಲ? ಅವನ ಯೋಚನೆಗೆ ನಿಲುಕಬಲ್ಲಷ್ಟು ಪ್ರಾಮಾಣಿಕ ಅಭಿಪ್ರಾಯಗಳನ್ನು
ದಾಖಲಿಸಬಲ್ಲನೆಂದರೆ, ಅಭಿಪ್ರಾಯಗಳ ಪ್ರಾಮಾಣಿಕತೆಯ ಮೇಲೆ ಅವನು ಘಟನೆಯ ಬಗ್ಗೆ ನೀಡಿದ
ವಿವರಗಳನ್ನು ಸತ್ಯ ಸುಳ್ಳು ಎಂದು ವರ್ಗೀಕರಿಸಬಹುದೇ? ಹೀಗೇ ಯೋಚಿಸುತ್ತಿದ್ದೆ.
ನನ್ನನ್ನು ಸದಾ ಕಾಡುವ, ಯೋಚನೆಗೆ ಹಚ್ಚುವ, ನಾನರಿಯದ ವ್ಯಕ್ತಿಗಳನ್ನು ಪರಿಚಯಿಸುವ
ಆತ್ಮ ಕಥನಗಳು ನನಗೆ ಇನ್ನಷ್ಟು ಆಪ್ತವಾಗುತ್ತಿವೆ. ಈ ಸಲದ ಆತ್ಮಕತೆಗಳ ಸರಣಿಯಲ್ಲಿ
ನಾನು ಬರೆಯುತ್ತಿರುವುದು ’ದಾದಾಗಿರಿಯ ದಿನಗಳ’ ಬಗ್ಗೆ ಇದು ’ಅಗ್ನಿ’ ಪತ್ರಿಕೆಯ
ಸಂಪಾದಕ ಶ್ರೀಧರ್ ರ ಆತ್ಮಕತೆ. ಇದರ ಮೊದಲ ಭಾಗವಷ್ಟೇ ಓದಿದ್ದೇನೆ, ಇನ್ನೂ ಎರಡು
ಭಾಗಗಳು ಬಾಕಿ ಇವೆ ಆದ್ದರಿಂದ ಬರೆಯಲೋ ಬೇಡವೋ ಎಂಬ ಗೊಂದಲದಲ್ಲೇ, ಬರೆಯದೆ ಇರಲು
ಸಾಧ್ಯವಿಲ್ಲವೆನಿಸಿ ಬರೆಯುತ್ತಿದ್ದೇನೆ.

ಆತ್ಮಕತೆಗಳನ್ನು ಯಾರ್ಯಾರು ಬರೆಯಬಹುದು? ಯಾರಾದರೂ ಬರೆಯಬಹುದು. ಆದರೂ ಎಲ್ಲರೂ
ಬರೆಯುವುದಿಲ್ಲ ಏಕೆ? ತಮ್ಮ ಜೀವನದಲ್ಲಿ ದಾಖಲಿಸಲು ಅರ್ಹವೆನಿಸುವಂತಹ ಘಟನೆಗಳು
ನಡೆದಿದ್ದರೆ ಸಾಮಾನ್ಯವಾಗಿ ಆತ್ಮಕತೆಗಳನ್ನು ಬರೆದುಕೊಳ್ಳುತ್ತಾರೆ. ದಾಖಲಿಸಲ್ಪಟ್ಟ
ಘಟನೆಗಳು ಪೂರ್ತಿಯಾಗಲ್ಲದಿದ್ದರೂ ಎಲ್ಲೋ ಒಂದು ಕಡೆ ಬರೆಯುತ್ತಿರುವವನ
ಒಳ್ಳೆಯತನಗಳನ್ನೋ ಸಾಧನೆಗಳನ್ನೋ ಪ್ರತಿಬಿಂಬಿಸುತ್ತವೆ. ಇದು ಲೋಕಾರೂಢಿ. ಆದರೆ
ದಾದಾಗಿರಿಯ ದಿನಗಳಲ್ಲಿ ನಾನು ಕಂಡಿದ್ದು ಶ್ರೀಧರರ ಕನ್ಪೆಶನ್. ಅವರ ಮನಸ್ಸು ಬರವಣಿಗೆ
ಎಡೆಗೆ ಪಲ್ಲಟಗೊಳ್ಳುವವರೆಗೂ ಅವರೊಂದಿಗೆ ನಡೆದ ಘಟನೆಗಳು ಯಾವ ಸಿನಿಮಾಕ್ಕಿಂತ ಕಡಿಮೆ
ಇಲ್ಲ. ಅತ್ಯಂತ ರಂಜಕವಾಗಿ, ವಿಜೃಂಬಿಸಿ ಬರೆದಿದ್ದರೆ ಅದೊಂದು ಬೆಸ್ಟ್ ಸೆಲ್ಲರ್
ಪುಸ್ತಕವಾಗುತ್ತಿತ್ತೋ ಏನೋ, ಆದರೆ ಶ್ರೀಧರ್ ಎಲ್ಲೂ ಎಲ್ಲೆ ಮೀರಿಲ್ಲ. ತಮ್ಮ
ಒಳ್ಳೆಯತನಗಳನ್ನು ಸಾಬೀತುಪಡಿಸಹೊರಟಿಲ್ಲ, ಅಲ್ಲಿರುವುದು ಘಟನೆಗಳ ನೇರ ವಿವರ, ಅವುಗಳು
ಜರಗುವಾಗಿನ ಅವರ ಮನಸ್ಥಿತಿ, ತಪ್ಪೊಪ್ಪಿಗೆ ಮತ್ತು ಪಶ್ಚಾತಾಪ. “ನನ್ನ
ಬದುಕಿನಲ್ಲೊಂದು ಕಾಲವಿತ್ತು. ನನ್ನ ಪ್ರತಿಯೊಂದು ಗಳಿಗೆಯನ್ನು ಅಪರಿಚಿತ ಕಣ್ಣುಗಳು
ಹಿಂಬಾಲಿಸುತ್ತಿದ್ದವು. ಕಾಣದ ಕಿವಿಗಳು ಕೇಳಿಸಿಕೊಳ್ಳುತ್ತಿದ್ದವು. ಅದೊಂದು ಪಾತಕಿಗಳ
ಭೀಕರ ಪ್ರಪಂಚವೆಂದು ತಳ್ಳಿ ಹಾಕುವ ಹಾಗಿರಲಿಲ್ಲ. ಪಾತಕಿಗಳಲ್ಲಿ ನಾನೂ
ಒಬ್ಬನಾಗಿದ್ದೆ. ಭೀಕರತೆಯಲ್ಲಿ ನನ್ನ ಕೊಡುಗೆಯೂ ಇತ್ತು” ಎಂದು ಶುರುವಿಡುತ್ತಾರೆ.
೧೯೭೦-೮೦ ರ ಪಾತಕಪ್ರಪಂಚದ ಬಗ್ಗೆ ಬೆಚ್ಚಿಬೀಳಿಸುವ ಒಂದೊಂದೂ ವಿವರವೂ ಅವರ
ಆತ್ಮಕತೆಯಲ್ಲಿ ದಾಖಲಾಗಿದೆ, ಅದರಲ್ಲಿ ಶ್ರೀಧರ್ ರ ಪಾತ್ರವೂ ಇತ್ತೆಂಬುದು
ನಂಬಲಸಾಧ್ಯವಾದ ಸತ್ಯ.

’ಲಾ’ ಓದಿದ್ದ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಎಲ್ಲ ಅವಕಾಶಗಳು ಇದ್ದ ಅವರನ್ನು
ಪಾತಕ ಪ್ರಪಂಚ ಸೆಳೆದದ್ದು ಒಂದು ವಿಚಿತ್ರ. ಒಂದೊಮ್ಮೆ ಅಲ್ಲಿಗೆ ಕಾಲಿಟ್ಟ ಮೇಲೆ
ಹೊರಬರಲಾಗದ ಅನಿವಾರ್ಯತೆ, ಪಾತಕ ಲೋಕದಲ್ಲೆ ಇನ್ನೂ ಹೆಚ್ಚು ಹೆಚ್ಚು ಆಳಕ್ಕಿಳಿಯಬೇಕಾದ
ಸಂಧರ್ಭಗಳು, ತಪ್ಪು ಮತ್ತು ಸರಿಯಲ್ಲಿನ ದ್ವಂದ್ವಗಳೆಲ್ಲವನ್ನು ಅದೆಷ್ಟು ಚೆನ್ನಾಗಿ
ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆಂದರೆ, ಪಾತಕಿಯಾಗಿದ್ದವನ ಕೈಯಲ್ಲರಳಿದ ಕೃತಿಯೇ ಇದು
ಅನಿಸಿಬಿಡುತ್ತದೆ. “ಪಾತಕ ಪ್ರಪಂಚದಿಂದ ನಾನು ಕಳಚಿಕೊಳ್ಳಲೇ ಬೇಕಿತ್ತು. ಆದರೆ
ಕಳಚಿಕೊಳ್ಳುವುದಾದರೂ ಹೇಗೆ? ಆ ಪ್ರಶ್ನೆಯ ತುಡಿತ ನನ್ನನ್ನು ಬರವಣಿಗೆಯ ಜಗತ್ತಿಗೆ
ದೂಡಿತು. ಆ ಪ್ರಕ್ರಿಯೆ ಎದೆಯಾಳದಲ್ಲಿ ವಿಚಿತ್ರ ಘರ್ಷಣೆಯನ್ನು ಹುಟ್ಟಿಸತೊಡಗಿತು.
ತಣ್ಣನೆಯ ಕ್ರೂರಿಗಳು ಅಸಹಾಯಕರಂತೆ ಗೋಚರವಾಗತೊಡಗಿದರು. ಶಿಷ್ಠರು ಮತ್ತು ದುಷ್ಠರ
ನಡುವಿನ ವ್ಯತ್ಯಾಸ ತೆಳುವಾಗುತ್ತ ಹೋಯಿತು. ಎಲ್ಲಾರೂ ಒಂದೇ ದೋಣಿಯಲ್ಲಿ ಸಾಗುತ್ತಿರುವ
ಸಹಪ್ರಯಾಣಿಕರೆನ್ನುವ ಅರಿವು ಮನಸ್ಸನ್ನು ಆಕ್ರಮಿಸತೊಡಗಿತು. ಬರಹ ನನ್ನ ಹಾದಿಯನ್ನು
ಬದಲಿಸತೊಡಗಿತು. ಬದಲಾದ ಹಾದಿ ಹೆಚ್ಚು ಹೆಚ್ಚು ಆಪ್ತವಾಗಿ ಆಶವಾಗಿ ಬರವಣಿಗೆಯಲ್ಲಿ
ತೊಡಗುವಂತೆ ಪ್ರೇರೇಪಿಸಿತು. ಈಗ ನಿಮ್ಮ ಮುಂದೆ ನಿಂತಿದ್ದೇನೆ
ಸಂಪೂರ್ಣವಾಗಲ್ಲದಿದ್ದರೂ ಸಾಕಷ್ಟು ಬೆತ್ತಲೆಯಾಗಿ” ಹೀಗೆ ಅವರ ಮನಸ್ಸು ಕ್ರೈಂ ನಿಂದ
ಬರವಣಿಗೆಗೆ ಹೊರಳಿದ್ದನ್ನು ವಿವರಿಸುತ್ತಾರೆ. ವಿಖ್ಯಾತರದ್ದಷ್ಟೇ ಆತ್ಮಕತೆಗಳು
ಓದಿಸಿಕೊಳ್ಳುತ್ತವೆ ಎಂಬ ನನ್ನ ಭಾವನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಕೊತ್ವಾಲ್
ಕೊಲೆಯಲ್ಲಿ ಅವರು ಭಾಗಿಯಾಗಿದ್ದಾಗಿನ ವಿವರಗಳನ್ನು ಓದ ತೊಡಗಿದಾಗ, ಬೇಡ
ಬೇಡವೆಂದುಕೊಂಡಿದ್ದ ಕೊತ್ವಾಲನ ಕೊಲೆಯು ಜರುಗಿಯೇ ಬಿಟ್ಟಾಗ ಅದೊಂದು ಕ್ಷಣ ನನ್ನ
ಸುತ್ತಲಿನ ಜಗತ್ತೇ ನಿಂತಂತೇ ಭಾಸವಾಗಿದ್ದು ಸುಳ್ಳಲ್ಲ. ನನಗೆ ತಿಳಿದಂತೆ ಅಷ್ಟು
ತನ್ಮಯಳಾಗಿ ಬೇರಾವ ಕೃತಿಯನ್ನು ಬಹುಶಃ ನಾನು ಓದಿಲ್ಲ.

’ಕಲೆಯ ಶ್ರೇಷ್ಟತೆ ಇರುವುದು ವಸ್ತುಗಳ ಅಭಿವ್ಯಕ್ತಿಯಲ್ಲಿ ವಸ್ತುಗಳ
ಮೌಲ್ಯಮಾಪನದಲ್ಲಲ್ಲ’ ಹೀಗಾಗಿಯೇ ಒಂದು ಕೊಲೆಯ ವಿವರಗಳನ್ನೂ ಕೂಡ ಅದ್ಬುತವಾಗಿ
ಅಭಿವ್ಯಕ್ತಿಸಬಹುದು. ಆದರೆ ಇದೆಲ್ಲದರ ಆಚೆ ನಿಂತು ಮಾನವೀಯ ಮೌಲ್ಯಗಳಿಂದ ನೋಡಿದಾಗ
ಕೊಲೆಯು ಪರಿತಪಿಸಿ ಸುಮ್ಮನಾಗಿಬಿಡುವ ಒಂದು ಕ್ರಿಯೆಯೇ ಎಂಬ ಪ್ರಶ್ನೆ ಕಾಡುತ್ತದೆ.
’ಒಬ್ಬ ವ್ಯಕ್ತಿಯು ಸಾವಿರ ಬಾರಿ ಸಾಯುವಂತಹ ತಪ್ಪು ಮಾಡಬಹುದು, ಆದರೆ ಯಾರಿಗೂ
ಒಬ್ಬನನ್ನು ಕೊಲ್ಲುವಷ್ಟು ಅಧಿಕಾರವಾಗಲೀ ನೈತಿಕತೆಯಾಗಲೀ ಇರುವುದಿಲ್ಲ’ ಎಂದು ಎಲ್ಲೋ
ಓದಿದ ನೆನಪು. ಬಹುಶಃ ಶ್ರೀಧರ್ ಮನಸ್ಸಿನಲ್ಲಿ ಈ ಭಾವವಿತ್ತೆಂದು ಕಾಣುತ್ತದೆ.
ಪಶ್ಚತಾಪವು ಒಮ್ಮೆ ಅನುಭವಿಸಿ ಮುಗಿಸಿಬಿಡುವಂತಹ ಕ್ರಿಯೆಯಲ್ಲ. ಅದು ನಿರಂತರವಾಗಿ
ಕಾಡುತ್ತಲೇ ಇರುವ, ಅನುಭವಿಸುತ್ತಲೇ ಬದುಕಬೇಕಾದ ಮನಸ್ಥಿತಿ. ನಾನು ತಪ್ಪು
ಮಾಡಿಬಿಟ್ಟಿದ್ದೇನೆ, ಅದಕ್ಕೆ ಪಶ್ಚಾತಾಪವಾಗಿದೆ, ನನ್ನನ್ನು ಕ್ಷಮಿಸಿಬಿಡಿ ಎಂದು
ಅವರೆಲ್ಲೂ ಕೇಳಿಕೊಂಡಿಲ್ಲ, ಪ್ರಾಮಾಣಿಕ ವಿವರಗಳೊಡನೆ ತಾವು ಮಾಡಿದ ತಪ್ಪನ್ನೆಲ್ಲ
ತೆರೆದಿಟ್ಟಿದ್ದಾರೆ ಅದನ್ನೋದಿ ಓದುಗನ ಮನಸ್ಸಿನಲ್ಲಿ ಮೊಳೆಯಬಹುದಾದ ಭಾವನೆಗಳನ್ನು
ಅವರು ಅಂದಾಜಿಸ ಬಲ್ಲರು, ಒಂದು ಕೊಲೆ ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾರದ್ದು
ಎಂಬುದನ್ನು ಅರಿತೇ ಅವರು ಬರೆಯತೊಡಗಿದ್ದಾರೆ. ಹಾಗಾಗಿಯೇ ’ದಾದಾಗಿರಿಯ ದಿನಗಳು’
ಎಲ್ಲೂ ಸಿನಿಕವೆನ್ನಿಸದೆ ಓದಿಸಿಕೊಳ್ಳುತ್ತದೆ. ಕೇವಲ ಒಂದು ಆತ್ಮಕತೆಯಾಗಷ್ಟೆ
ಅಲ್ಲದೇ, ಮಾನವನ ಗುಣದಲ್ಲಾಗುವ ವೈರುಧ್ಯದ ಪ್ರತೀಕದಂತೆ ಮನಸ್ಸಿನಲ್ಲುಳಿಯುತ್ತದೆ.

ಆಂತರ್ಯವನ್ನು ಬೆತ್ತಲಾಗಿಸುವ ಆತ್ಮಕತೆಗಳು!

sept14biography

ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು
ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ
ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು. ಬಹುಶಃ
ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ
ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!

ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು
ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು
ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು
ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ
ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ,
ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ
ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ
ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ
ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ
ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ
ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.

ಓದುತ್ತಾ ಹೋದಂತೆ ಲಂಕೇಶ್ ಗಿಡದಿಂದ ಮರವಾಗಿ ನಮ್ಮಲ್ಲಿ ಬೆಳೆಯತೊಡಗುತ್ತಾರೆ.
ಮರೆಮಾಚಬಹುದಾದಂತಹ ವಿಷಯಗಳನ್ನೂ ಕೂಡ ಎಳ್ಳಷ್ಟು ಮುಜುಗರವಿಲ್ಲದೇ ಬಿಚ್ಚಿಡುವ ಅವರ
ರೀತಿ, ಸಂಬಂಧಗಳನ್ನೆಲ್ಲ ಒಂದು ಪರದೆ ಇಟ್ಟುಕೊಂಡೇ ನೋಡಿರುವ ಅವರ ಪ್ರವೃತ್ತಿ, ಅವರ
ಸ್ವಾಭಿಮಾನ, ಬೇರೆಯವರ ಬಗ್ಗೆ ಅವರಿಗಿದ್ದ ಕೀಳರಿಮೆ, ಅವರ ಜಾಣತನದ ಬಗ್ಗೆ ಅವರಿಗಿದ್ದ
ಅಹಂಕಾರ, ಉಹೂ ಎಲ್ಲೂ ಮರೆಮಾಚುವ ಪ್ರಯತ್ನವನ್ನೇ ಮಾಡಿಲ್ಲ. ಇದ್ದದ್ದನ್ನು ಇದ್ದ ಹಾಗೇ
ಓದಿಕೊಂಡುಬಿಡಿ ನಾನು ಇಷ್ಟೇ ಎಂಬ ದರ್ಪ. ಆ ದರ್ಪದಿಂದಲೇ ಇನ್ನಷ್ಟು ಹತ್ತಿರವಾಗುವ
ಲಂಕೇಶ್. ಅವರ ಬಗ್ಗೆ ಅಷ್ಟೇ ಅಲ್ಲ, ಅವರ ಸಂಪರ್ಕದಲ್ಲಿದ್ದ ಇನ್ನು ಎಷ್ಟೋ ಜನರ ಬಗ್ಗೆ
ಬೆಚ್ಚಿ ಬೀಳುವಂತ, ತಮಾಶೆ ಎನಿಸುವಂತಹ ಘಟನೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.

’ಅನುರೂಪ’, ’ಎಲ್ಲಿಂದಲೋ ಬಂದವರು’ ಮತ್ತು ’ಪಲ್ಲವಿ’ ಚಿತ್ರಗಳ ತಯಾರಿಕೆಯಲ್ಲಿ ಅವರು
ಪಟ್ಟ ಪಾಡು. ಸೆಂಟ್ರಲ್ ಕಾಲೇಜಿನ ಅಧ್ಯಾಪಕ ವೃತ್ತಿ. ಲಂಕೇಶ್ ಪತ್ರಿಕೆ
ಶುರುಮಾಡಿದ್ದು. ಬಿಡಲಾಗದ ಅವರ ಕುದುರೆ ರೇಸಿನ ಚಟ. ಪ್ರತಿ ಶುಕ್ರವಾರ ರಾತ್ರಿ
ಗೆಳೆಯರೊಂದಿಗೆ ಆಡುತ್ತಿದ್ದ ಕಾರ್ಡ್ಸ್. ದಿನವೊಂದಕ್ಕೆ ನಲವತ್ತಕ್ಕೂ ಹೆಚ್ಚು
ಸುಡುತ್ತಿದ್ದ ಸಿಗರೇಟು, ಆರೋಗ್ಯ ಕೈಕೊಡುವವರೆಗೂ ಕೈಹಿಡಿದಿದ್ದ ಕುಡಿತ, ತಮ್ಮ
ನೆಗೆಟೀವ್ ಗುಣಗಳನ್ನೂ ಪಟ್ಟಿ ಮಾಡುವುದರಲ್ಲಿ ಬೇಸರಿಸಿಕೊಂಡಿಲ್ಲ. ಚಟಗಳಿಂದಾಗಿಯೇ
ಅವರ ಕಣ್ಣೊಂದು ಕಳೆದುಕೊಳ್ಳಬೇಕಾಗಿ ಬಂದಿದ್ದು. ತೀರ ಮಿದುಳಿನ ಭಾಗಕ್ಕೆ ಲಕ್ವಾ
ಹೊಡೆದು, ಎಡಗಾಲು, ಎಡಗೈ ಶಕ್ತಿಹೀವಾಗಿ ತಾನಿನ್ನು ಬದುಕಲಾರೆ ಅಥವಾ ಬದುಕಿದರೂ
ಮೊದಲಿನಷ್ಟು ಚಟುವಟಿಕೆಯಿಂದರಲಾರೆ ಎಂದೆನಿಸಿದಾಗ ಅವರು ತಮ್ಮ ಆತ್ಮಕತೆಯನ್ನು
ಬರೆಯಬೇಕೆಂದುಕೊಂಡದ್ದರವರೆಗಿನ ವಿವರಗಳೆಲ್ಲವೂ ನಮ್ಮಲ್ಲಿ ಬೇರೂರಿ ಬೆಳೆಯ
ತೊಡಗುತ್ತವೆ. ಅವರ ಕಡೆಯ ಸಾಲುಗಳು ಹೀಗಿವೆ ’ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ
ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ
ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ
ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ
ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ
ಛಾಯೆ ಅನ್ನಿಸತೊಡಗಿತು’, ಸಾವಿನೆಡೆಗಿನ ಭಯಕ್ಕಿಂತಲೂ ಹೆಚ್ಚಾಗಿ, ಅದರ ಅಸ್ತಿತ್ವ
ಅರಿವಾಗತೊಡಗಿದರಿಂದ ಅವರಲ್ಲುಂಟಾದ ಗೊಂದಲಗಳನ್ನು ಪದಗಳಲ್ಲಿ ಜೋಡಿಸಿಟ್ಟುರುವಂತಿದೆ ಈ
ಸಾಲುಗಳು.

ಒಂದು ಕಡೆ ಲಂಕೇಶ್ ಹೀಗೆ ಕೇಳುತ್ತಾರೆ ’ನೀವು ಈ ಬದುಕಿನಲ್ಲಿ ಯಾವ ಯಾವ
ಆಗುಹೋಗುಗಳಿಗೆ, ಯಾವಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆ ಕೂತು
ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ
ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ
ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು
ಯಾವುದನ್ನು ಯಾರನ್ನು ನೆನೆಯುತ್ತೀರಿ?’ ಅಷ್ಟೇ ಅಲ್ಲಿಗೆ ಅವರ ಮೌನ. ನಮ್ಮಲ್ಲಿ
ಪ್ರಶ್ನೆಯ ಉತ್ತರದ ತಾಕಲಾಟ ನಡೆಯುತ್ತಿರುವಾಗಲೇ ಅವರು ಗಂಡು ಹೆಣ್ಣಿನ ಸಂಬಂಧದ ಬಗ್ಗೆ
ಹೇಳ ತೊಡಗುತ್ತಾರೆ. ಹೆಣ್ಣುಗಂಡಲ್ಲಿನ ವಾಂಛೆ, ಒಬ್ಬರಿಗೊಬ್ಬರು
ನಿಷ್ಠರಾಗಿರುತ್ತೇವಂಬ ವ್ಯಂಗ್ಯ, ನಿಷ್ಠೆ ಮತ್ತು ವಾಂಛಲ್ಯದೊಂದಿಗಿನ ಕಿತ್ತಾಟದಲ್ಲೇ
ವ್ಯಕ್ತಿಯೊಬ್ಬ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಚರ್ಚಿಸುತ್ತಾರೆ.

‘No doubt alcohol, tobacco and so forth are things that a saint must
avoid, but sainthood also a thing that human beings must avoid –
George Orwell’ ಎಂದು ಆತ್ಮಕಥನದ ಶುರುವಿನಲ್ಲೇ ಇದೆ, ಇಡೀ ಪುಸ್ತಕ ಓದಾದ ಮೇಲೆ
ಬಹುಶಃ ಲಂಕೇಶರು ತಮ್ಮ ಜೀವನಕ್ಕೆ ಹೊಂದಿಸಿ ಈ ಪದಗಳ ಹುಡುಕಿದ್ದಾರೆನಿಸಿತು.
ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಸುವ, ಇದುವರೆಗೂ ಎಲ್ಲೂ ಕಾಣದ ಲಂಕೇಶರನ್ನು ನನಗೆ
ಪರಿಚಯಿಸಿದ್ದು ’ಹುಳಿ ಮಾವಿನ ಮರ’.

ಮನಸು ಹೇಳಬಯಸಿದೆ……

emptyness

ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ
ಕೇಳಿದ್ದೆ, ಅವತ್ತು ನಮಗೆ ಅಂದರೆ ಆ ವರ್ಶದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೆಂಡ್
ಆಫ್ ಕಾರ್ಯಕ್ರಮವಿತ್ತು. ಶಾಲೆಯ ಜೀವನ ಮುಗಿಯ ಹೊರಟಿತ್ತು, ಕಾಲೇಜಿನ ಬಣ್ಣಬಣ್ಣದ
ಬದುಕು ಆ ಕಡೆ ನಿಂತು ಕೈ ಬೀಸಿ ಕರೆಯುತಿತ್ತು. ಎಷ್ಟೇ ಪ್ರಭುದ್ದವಾಗಿ ಆಲೋಚಿಸಿದರೂ,
ಸ್ಕೂಲ್ ಯುನಿಫಾರಂನಲ್ಲಿದ್ದರೆ ನಾವು ಚಿಕ್ಕವರೆಂದೇ ದೊಡ್ಡವರ (?) ಅಭಿಪ್ರಾಯ.
ದಿನಕ್ಕೊಂದು ಬಣ್ಣದ ಬಟ್ಟೆ, ಶಾಲೆಯ ಪ್ರಾರ್ಥನೆ, ಎಕ್ಸರ್ಸೈಸ್ ಗಳಿಂದ ಮುಕ್ತಿ,
ಬೇಕಿದ್ದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯ, ನಿಜಕ್ಕೂ ಕಾಲೇಜೊಂದು ಕಿನ್ನರ ಲೋಕ ಎಂಬ
ಭ್ರಮೆ. ಸಂಭ್ರಮ, ಭಯ, ಬೇಸರಗಳ ಮಿಶ್ರಭಾವದಿಂದ ದಿಗ್ಮೂಢರಾಗಿ, ಒಬ್ಬರಿಗೊಬ್ಬರು ಏನು
ಮಾತಾಡಿಕೊಳ್ಳಬೇಕು ಎಂಬುದೂ ಹೊಳೆಯುತ್ತಿರಲಿಲ್ಲ. ತಮ್ಮ ಕಡೆಯ ಕರ್ತವ್ಯವೆಂಬಂತೆ
ಉಪಧ್ಯಾಯರೆಲ್ಲ, ’ಯಾವ ಕಾಲೇಜ್ ಸೇರ್ತಿ?’ ’ಸೈನ್ಸಾ ಕಾಮರ್ಸಾ?’ ಎಂದು
ಕೇಳುತ್ತಿದ್ದರೆ, ಪಕ್ಕದವಳು ಕಾಮರ್ಸ್ ಅಂದಿದ್ದನ್ನೇ ನಿಷ್ಠೆ ಇಂದ
ಪುನರುಚ್ಚರಿಸಿದ್ದು, ಆಗಿನ್ನು ಸ್ಲಾಮ್ ಬುಕ್ ಗಳ ಅಭ್ಯಾಸವಾಗಿರಲಿಲ್ಲವಾದ್ದರಿಂದ,
ಕಡೆಯ ದಿನದ ಗ್ರೂಪ್ ಫೋಟೋಗೆ ಫೋಸ್ ಕೊಟ್ಟು, ಗುಂಪು ಗುಂಪಾಗಿ ಸಹಪಾಠಿಗಳ ಜೊತೆ
ಶಾಲೆಯಿಂದ ಹೊರಹೊರಟ ಚಿತ್ರ ಮೊನ್ನೆ ಮೊನ್ನೆಯಷ್ಟೇ ನಡೆಯಿತೇನೋ ಎಂಬಂತೆ ಹಸಿಯಾಗಿದೆ.

ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ, ಕಾಲೇಜಲ್ಲಿ ನಾವಂದುಕೊಂಡದ್ದೆಲ್ಲ ಇತ್ತು, ಆದರೆ
ಕೆಲವೇ ದಿನಗಳಲ್ಲಿ ಇಷ್ಟೇನೆ ಅನ್ನಿಸಹತ್ತಿತ್ತು. ಶಾಲೆಯ ಸಹಪಾಠಿಗಳ ನೆನಪು
ಮಾಸತೊಡಗಿತ್ತು. ಹೊಸ ಗೆಳತಿ/ಗೆಳೆಯರು ಅದಾಗಲೇ ಹಳಬರಾಗ ತೊಡಗಿದ್ದರು. ಕ್ಲಾಸ್ ಬಂಕ್
ಮಾಡುವುದು, ಸಿನಿಮಾ ನೋಡುವುದು, ದುಡ್ಡಿಗಾಗಿ ಮನೆಯಲ್ಲಿ ಸುಳ್ಳು ಹೇಳುವುದು ಯಾವುದೂ
ತಪ್ಪೆನಿಸದ ಮಟ್ಟಿಗೆ ಒಗ್ಗಿ ಹೋಗಿತ್ತು. ಕನ್ನಡ ಟೀಚರ್ ಹೇಳಿದ್ದ ಪದ್ಯವನ್ನು ಕಂಠಪಾಠ
ಮಾಡಿ, ರಾಗವಾಗಿ ಒಪ್ಪಿಸುತ್ತಿದ್ದಾಗಿನ ಮುಗ್ಧತೆ ಅದೆಲ್ಲೋ ಕಾಣದಂತೆ ಕಳೆದು
ಹೋಗಿತ್ತು. ಗೆಳತಿಯರ ಗುಂಪಲ್ಲಿನ ತರಲೆಗಳು, ಇಷ್ಟಿಷ್ಟೇ ಮಾತಿಗೂ ಇಷ್ಟಗಲ ನಗು,
ಕ್ಯಾಂಪಸ್ಸಿನಲ್ಲಿ ಹಾದು ಹೋಗುತ್ತಿದ್ದರೆ ಬೆನ್ನಿಗೇ ಅಂಟಿಕೊಂಡಂತೆನಿಸುತ್ತಿದ್ದವನ
ಕಣ್ಣುಗಳು, ಕಾಲೇಜಿನ ಪುಸ್ತಕಗಳಲ್ಲಿನ ಪಾತ್ರಗಳು, ರಂಗು ರಂಗೆನಿಸಿದ್ದ ಕಾಲೇಜ್ ಡೇ,
ಕಡೆಗೂ ಸೀರೆ ಉಡಿಸಿದ ಎತ್ನಿಕ್ ಡೇ, ಬಹುಮಾನ ತಂದುಕೊಟ್ಟ ಪ್ರಬಂಧ ಸ್ಪರ್ಧೆ,
ಅರ್ಧಕ್ಕೆ ಓಡಿ ವಾಪಸ್ ಬಂದ ರನ್ನಿಂಗ್ ರೈಸ್ ಕಾಂಪಿಟೇಶನ್ನು, ಹಹ್! ಮುಗಿಯದ
ನೆನಪುಗಳು. ಅಷ್ಟೇ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಅಂತಾರಲ್ಲ ಹಾಗೆ ಮುಗಿದು
ಹೋಗಿತ್ತು ಪಿ.ಯು.ಸಿ ಯ ಎರಡು ವರ್ಷ.

ಮತ್ತೊಂದು ಫೇರ್ ವೆಲ್. ಇಡೀ ವರ್ಷದ ತರಲೆಗಳನ್ನು ನೆನಪಿಸಿಕೊಳ್ಳುತ್ತ,
ದೂರವಾಗುತ್ತಿರುವುದಕ್ಕೆ ಬೇಸರಿಸಿಕೊಳ್ಳುತ್ತಾ, ಮತ್ತೆ ಸಿಗಬೇಕೆಂದು ಒಬ್ಬರಿಗೊಬ್ಬರು
ಆಜ್ಞಾಪಿಸುತ್ತಾ. ಚಿತ್ರ ವಿಚಿತ್ರವಾಗಿ ಸ್ಲಾಮ್ ಬುಕ್ ಗಳನ್ನು ತುಂಬಿಸುತ್ತಾ
ಸಂಭ್ರಮಿಸುತ್ತಿದ್ದೆವು. ಪದವಿ ಓದಲು ಹೊರಟಿದ್ದವರು, ಮದುವೆಯಾಗ ಹೊರಟಿದ್ದವರು,
ಮತ್ತಿತರ ಕೋರ್ಸ್ ಗಳಿಗೆ ಸೇರಬೇಕೆಂದಿದ್ದವರು, ಕೆಲಸ ಮಾಡುತ್ತೇನೆನ್ನುತ್ತಿದ್ದವರು,
ಹೀಗೆ ಪ್ರತಿಯೊಬ್ಬರ ಅಭಿಪ್ರಾಯವೂ ಕೇಳಿ, ಹಿಂದಿನ ಹಾಗೇ ಅದರಲ್ಲೊಂದು ಪುನರುಚ್ಚರಿಸಿ
ಪಿ.ಯು.ಸಿ. ಮುಗಿಸಿದ್ದಾಯ್ತು.

ಪದವಿ ಸೇರಿದ ಮೇಲೆ ಕ್ಲಾಸುಗಳಿಗೆ ಹಾಜರಾಗಲು ಇನ್ನಷ್ಟು ಸೋಂಬೇರಿತನ. ದಿನವೂ ತಪ್ಪದೇ
ಕಾಲೇಜಿನ ಕ್ಯಾಂಪಸ್ಸಿನಲ್ಲಿರುತ್ತಿದ್ದ ನಾವು, ಕ್ಲಾಸುಗಳಿಗಂತೂ ತೀರ ಅಪರೂಪ.
ಕ್ಯಾಂಟೀನ್ ನಲ್ಲಿ, ಥೇಟರಿನಲ್ಲಿ, ಗೆಳೆಯ ಗೆಳತಿಯರ ಮನೆಗಳಲ್ಲೇ ನಮ್ಮ ಓದು
ಸಾಗುತ್ತಿದ್ದಿದ್ದು. ಪರೀಕ್ಷೆ ಹಿಂದಿನ ದಿನ ಒಂದು ನಿಮಿಷವೂ ಹಾಳು ಮಾಡದೇ
ನಿಷ್ಠೆಯಿಂದ ಓದಿ ಅಷ್ಟೇ ನಿಷ್ಠೆಯಿಂದ ಅಲ್ಲಿ ಇಲ್ಲಿ ಕಾಪಿ ಮಾಡಿ ಬರೆದು ಅದು ಹೇಗೋ
ಪಾಸ್ ಮಾಡಿ ಮುಂದಿನ ಸೆಮಿಸ್ಟರಿಗೆ ಹಾರುತ್ತಿದ್ದೆವು. ನಮ್ಮ ಲೆಕ್ಕಾಚಾರ ಚೂರು
ತಪ್ಪಾಗಿದ್ದಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ಸೆಮಿಸ್ಟರ್ ನಲ್ಲಿ ಒಂದೋ ಎರೆಡೋ
ವಿಷಯಗಳು ಉಳಿದುಕೊಳ್ಳುವುದು, ಊಟ ತಿಂಡಿಯಷ್ಟೇ ಸಹಜವೆಂಬುದು ನಮ್ಮೆಲ್ಲರ ಒಮ್ಮತದ
ಅಭಿಪ್ರಾಯವಾಗಿಬಿಟ್ಟಿತ್ತು. ಹಾಗೂ ಹೀಗೂ ಕಡೆಯ ಸೆಮಿಸ್ಟರು ಮುಟ್ಟಿ, ಪರೀಕ್ಷೆಗಳನ್ನು
ಮುಗಿಸಿ ಹೊರಬಂದರೆ, ಮನಸ್ಸು ಮತ್ತೊಮ್ಮೆ ವಿದಾಯ ಹೇಳಲು ತಯಾರಾಗುತ್ತಿತ್ತು. ’ಫೋನ್
ಮಾಡ್ತಿರು, ಮೆಸೇಜ್ ಮಾಡ್ತಿರು, ಮೇಲ್ ಮಾಡ್ತಿರು, ಟಚ್ ನಲ್ಲಿರು’ ಎಲ್ಲವೂ
ಹೇಳಿಕೊಂಡಿದ್ದಾಯ್ತು, ಕಡೆಯ ಭೇಟಿಯ ಸೆಲೆಬ್ರೇಶನ್ ಎಂಬಂತೆ ಒಂದು ಸಿನಿಮಾ ನೋಡಿ
ಬಂದ್ವಿ. ಗುಂಪು ಚದುರಿತು. ಮನಸು ಹೇಳಬಯಸಿದ್ದ ನೂರೊಂದು ಮಾತೂ, ಮೌನದಲ್ಲೇ
ವ್ಯಕ್ತವಾಗುತ್ತಿತ್ತು.

ಅವಳು-ಇವಳು

scan0009

(ಚಿತ್ರ ಕೃಪೆ: ಮಂಜುನಾಥ್ .ಎಸ್ .ರೆಡ್ಡಿ )

ಅವಳು: ನಿನಗೆ ಬುದ್ದಿ ಇದೀಯ? ಅಷ್ಟು ಮಗುಮ್ಮಾಗಿ ಇದ್ದೆ ಕಾಲೇಜ್ ದಿನಗಳಲ್ಲಿ. ಏನ್
ಬಂದಿದ್ದಿದ್ದು ನಿನಗೆ? ಯಾಕೆ ಹೀಗಾಗಿ ಹೋದೆ?

ಇವಳು: ಏನಾಯ್ತು ಅಂತ ಹೀಗ್ ಕೂಗಾಡ್ತಿದೀಯೆ? ಕೂಲ್ ಡೌನ್.

ಅವಳು: ಇನ್ನು ಏನಾಗ್ಬೇಕು ಅಂತ ಇದೀಯ ಹೇಳು? ಈ ಫೋಟೋಗಳನ್ನ ನೋಡಿದ್ಯ? ಕರ್ಮ, ಅಸಹ್ಯ ಅನಿಸೋಲ್ವೇನೆ ನಿನಗೆ ಇದನ್ನೆಲ್ಲ ಮಾಡೋಕೆ?

ಇವಳು: ಅಸಹ್ಯ ಯಾಕನಿಸ್ಬೇಕು? ಅದೆಲ್ಲ ಗ್ಲಾಮರ್ ಲೋಕದಲ್ಲಿ ಸಹಜ. ಅದಕ್ಕಿಂತಲೂ ಕಡಿಮೆ
ಬಟ್ಟೆಯಲ್ಲಿ ಫೋಸ್ ಮಾಡೋರಿದಾರೆ ಗೊತ್ತ? ತೋರಿಸ್ಲ?

ಅವಳು: ಬೇಡಮ್ಮ ಇದನ್ನೆ ನೋಡಿ ಅರಗಿಸ್ಕೋಳೋಕೆ ಆಗದೆ ಸಾಯ್ತಿದೀನಿ. ಅಲ್ವೆ ಯಾರ್ಯಾರೋ ಮಾಡ್ತಾರೆ ಅಂತ ನೀನು ಮಾಡ್ಬಿಡೋದ? ನಿನ್ನ ಮನಸಿಗೆ ಇದೆಲ್ಲ ತಪ್ಪು ಅನ್ನಿಸೋಲ್ವ?

ಇವಳು: ಹ್ಹ ಹ್ಹ! ತಪ್ಪ? ಅದು ಹೇಗೆ ತಪ್ಪಾಗುತ್ತೆ? ನನ್ನ ಮೈ ನನ್ನಿಷ್ಟ.

ಅವಳು: ಮೈ ನಿನ್ನದಾದ್ರೆ, ಏನಾದ್ರು ಮಾಡಬಹುದು ಅನ್ಕೊಂಡಿದೀಯ? ಮಾನ ಮರ್ಯಾದೆ
ಅನ್ನೋದು ಇರುತ್ತೆ. ಅದರ ಹೆಸರು ನೆನಪಿದೆಯ?

ಇವಳು: ಮರ್ಯಾದೆಯ ಲಿಮಿಟ್ಸ್ ಎಲ್ಲಿವರ್ಗೂ ಹೇಳು? ಸೀರೆನಲ್ಲಿ ಕಾಣೋ ಸೊಂಟ
ತೋರ್ಸೋವರ್ಗೂ ಅಷ್ಟೇ? ಅಲ್ವ? (ನಗುತ್ತಾಳೆ)

ಅವಳು: (ಹತಾಶಳಾಗಿ) ನಿನಗೆ ನಿಜವಾಗ್ಲು ಏನೂ ಅನ್ನಿಸೋದೆ ಇಲ್ವ? ನಗ್ತಿದೀಯ.

ಇವಳು: ಸರಿ ನೀನೆ ಹೇಳಮ್ಮ ನನಗೇನನಿಸ್ಬೇಕು, ಇದನ್ನೆಲ್ಲ ಬಿಟ್ಬಿಡ್ಲ? ನಿನ್ನ ಪ್ರಕಾರ
ಈಗಾಗ್ಲೆ ನನಗೆ ಮರ್ಯಾದೆ ಹೋಗಿ ಆಗಿದೆಯಲ್ಲ, ಬಿಟ್ಟು ಬಿಟ್ಟರೆ ಹೋದ ಮಾನ ವಾಪಸ್ ಬಂದು
ಬಿಡತ್ತ? ಪರ್ವಾಗಿಲ್ವೆ ಬಲೇ ಫ್ಲೆಕ್ಸಿಬಲ್ ನಿನ್ನ ಈ ಮಾನ ಮರ್ಯಾದೆಗಳು!!

ಅವಳು: ತಮಾಶೆ ಮಾಡ್ಬೇಡ ನಾನು ತುಂಬಾ ಸೀರಿಯಸ್ ಆಗಿ ಹೇಳ್ತಿದೀನಿ.

ಇವಳು: ಇದರಲ್ಲಿ ಸೀರಿಯಸ್ ಆಗೋ ಅಂತದ್ದು ಏನಿದೆ ಡಿಯರ್? ನನಗೆ ಅರ್ಥವಾಗ್ತಿಲ್ಲ.

ಅವಳು: ಯಾವುದರ ಬಗ್ಗೆನೂ ಭಯವೇ ಇಲ್ವೇನೆ ನಿನಗೆ, ಸಮಾಜ, ಅಪ್ಪ-ಅಮ್ಮ?

ಇವಳು: ಅಲ್ಲಿ ಇರೋದು ಪ್ರಾಬ್ಲಮ್, ಯಾಕಿರ್ಬೇಕು ಭಯ? ಕೆಲಸವಿಲ್ಲದೆ ಅಲೀತಿದ್ದಾಗ
ನಿನ್ನ ಸಮಾಜವೇ ನನಗೆ ಈ ದಾರಿ ತೋರ್ಸಿದ್ದು. ಇನ್ನು ಅಪ್ಪ-ಅಮ್ಮ, ಒಂದೆರೆಡು ದಿನ
ಕೂಗಾಡಿದ್ರು, ಈಗವರಿಗೆ ಅಭ್ಯಾಸವಾಗಿ ಹೋಗಿದೆ.

ಅವಳು: ಆತ್ಮ ಸಾಕ್ಷಿ ಅನ್ನೋದಿರತ್ತಲ್ವ ಅದಕ್ಕಾದ್ರು ಹೆದರಬೇಕಿತ್ತು ನೀನು.

ಇವಳು: ಫಿಲ್ಮ್ ಡೈಲಾಗ್ ಗಳು ಹೊಡೀಬೇಡ. ನಾನು ಯಾರನ್ನು ಮೋಸ ಮಾಡಿ ಸಂಪಾದಿಸ್ತಿಲ್ಲ.
ಇದು ನಾನು ಕಷ್ಟ ಪಟ್ಟು ದುಡಿತಿರೋ ದುಡ್ಡು.

ಅವಳು: ಕಷ್ಟಪಟ್ಟು?! ಹ್ಹ ಹ್ಹ!! ಕಾಣಿಸ್ತಿದೆ ನಿನ್ ಕಷ್ಟ!

ಇವಳು: ನಿನಗೆ ಹಾಗನ್ಸೋದು ಸಹಜ ಬಿಡು. ನಿಂದಿನ್ನೂ ಹಳ್ಳಿ ಬುದ್ದಿ. ಇದು ಸೂಪರ್ ಫಾಸ್ಟ್ ಯುಗ ಕಣೇ, ಅವಕಾಶಗಳು ಸಿಕ್ಕಾಗ ಎನ್ ಕ್ಯಾಶ್ ಮಾಡಿಕೊಳ್ಬೇಕು.

ಅವಳು: ಹೇಗಾದ್ರು ಸರಿ ಅಲ್ವ?

ಇವಳು: ಹ್ಮ್ ಸರೀನೆ. ನಮಗೆ ಸರಿ ಇದ್ದದ್ದು ಎಲ್ಲರಿಗೂ ಸರಿ ಕಾಣ್ಬೇಕು ಅಂತೇನು ಇಲ್ಲ ಅಲ್ವ. ನನಗಿಂತ ಕೆಳಗಿಳಿದು ಸಂಪಾದಿಸ್ತಿರೋ ಹುಡ್ಗೀರಿದಾರೆ, ಅವ್ರಿಗೆ ಹೋಲಿಸ್ಕೊಂಡ್ರೆ ನಾನು ಬೆಟರ್ ಅಂತ ನನ್ನ ಭಾವನೆ. ಫಿಲ್ಮ್ ಗಳಲ್ಲಿ ಹಿರೋಯಿನ್ ಗಳು ಇದೇ ಕೆಲ್ಸ ಮಾಡಿದ್ರೆ, ನೀನೂ ಕಣ್ ಕಣ್ ಬಿಟ್ಟು ನೋಡ್ತಿಯ, ನಿನ್ನ ಗೆಳತಿ ಮಾಡಿದ್ರೆ ಸಹಿಸೋಕಾಗೊಲ್ವ?

ಅವಳು: ಹಾಗಲ್ವೆ, ನಿನ್ನ ಬಗ್ಗೆ ಜನರ ಅಭಿಪ್ರಾಯ ಏನಿರಬಹುದು ಅಂತ ಯೋಚನೆ ಮಾಡಿದೀಯ? ನಿನ್ನಂತಹ ಯೋಚನೆ ಹೊಂದಿರೋ ಹುಡ್ಗೀರ್ಗೆ ಸಮಾಜದಲ್ಲಿ ಯಾವ ಸ್ಥಾನವಿದೆ ಅಂತ ಗೊತ್ತಿದೆಯ? ಯಾಕೆ ಹೀಗೆ ನಿನ್ನ ಭವಿಷ್ಯದ ಜೊತೆ ಆಟವಾಡ್ತಿದೀಯ?

ಇವಳು: ಜನರ ಅಭಿಪ್ರಾಯ ಕಟ್ಕೊಂಡು ನನಗೆ ಆಗಬೇಕಿರೋದು ಏನೂ ಇಲ್ಲ. ಹಣವಿಲ್ಲದ
ಬಿಕಾರಿಗಳಿಗೆ ನಿನ್ನ ಸಮಾಜವೇನು ಮಣೆ ಹಾಕಿ ಪೀಠದ ಮೇಲೆ ಕೂರ್ಸತ್ತ? ಭವಿಷ್ಯದಲ್ಲಿ
ತೊಂದರೆ ಆಗ್ಬಹುದು ಅಂತ ನಾನು ವರ್ತಮಾನವನ್ನ ಬಲಿ ಕೊಡೋಕೆ ಆಗಲ್ಲ.

ಅವಳು: ಸರಿ ಸಮಾಜದ ವಿಷಯ ಬೇಡ, ನಿನ್ನ ಹಿತ ದೃಷ್ಟಿಯಿಂದಲೇ ನೋಡು, ನೀನು ಹೀಗೆಲ್ಲ
ಮಾಡೋದ್ರಿಂದ ಎಷ್ಟು ಸುರಕ್ಷಿತವಾಗಿರಬಲ್ಲೆ?

ಇವಳು: ಪೇಪರ್ ಓದ್ತೀಯ?

ಅವಳು: ಇದೆಂತ ಪ್ರಶ್ನೆ?

ಇವಳು: ಅಲ್ಲ ನ್ಯೂಸ್ ಗಳೆಲ್ಲ ನೋಡಲ್ವ ನೀನು, ನಾಲ್ಕು ವರ್ಷದ ಹುಡುಗಿ, ಅವಳ
ಟೀಚರ್ನಿಂದ ಅತ್ಯಚಾರಕ್ಕೊಳಗಾಗಿದ್ಲು. ಅರವತ್ತೇಳು ವರ್ಷದ ಮುದುಕಿ ಪಾಪ ಸಾಯೋ
ವಯಸ್ಸು, ಮೂವತ್ತು ವರ್ಷದ ಗಂಡಸೊಬ್ಬ ಅತ್ಯಚಾರ ಮಾಡಿದ್ದ. ಇವತ್ತಿಗೂ ಹಳ್ಳಿಗಳಲ್ಲೇ
ನಗರಗಳಿಗಿಂತ ಅತ್ಯಚಾರದ ಸಂಖ್ಯೆ ಹೆಚ್ಚು. ಮೈ ಮುಚ್ಚಿಕ್ಕೊಂಡ ಮಾತ್ರಕ್ಕೆ
ಸುರಕ್ಷಿತವಾಗಿರ್ಬಹುದು ಅಂತೀಯ? ಇದನ್ನ ನಾನು ಮಾಡದಿದ್ರೆ, ಇನ್ನೊಬ್ಳು ಯಾರಾದ್ರು
ಮಾಡ್ತಾಳೆ, ನೋಡೋ ಕಣ್ಣಿಗೆ ಎರಡೂ ಒಂದೆ, ಅಲ್ಲಿ ಕಾಣೋದು ಬೆತ್ತಲು ಮಾತ್ರ! ಮುಖ
ಅಲ್ಲ.

ಅವಳು: ನನಗೆ ಕಾಣೋದು ಬೆತ್ತಲಾಗುತ್ತಿರುವ ನಿನ್ನ ವ್ಯಕ್ತಿತ್ವ. ನಿನ್ನ ಅಪ್ಪ
ಅಮ್ಮನಿಗೆ ಕಾಣೋದು ನಿನ್ನ ಮೈ ಅಲ್ಲ, ಅದರಿಂದೆ ಇರುವ ಅವರ ಅಸಹಾಯಕತೆ. ನಿನ್ನ
ಅಂತರಂಗಕ್ಕೆ ಕಾಣುವುದು ನಿನ್ನ ಆತ್ಮಸಾಕ್ಷಿಯ ಕೊಲೆ!

ಇವಳು: ಏನೇ ಆದರೂ ನಾನೀಗ ಹಿಂದೆ ಬರೋದಿಕ್ಕಾಗುಲ್ಲ. ನೀನು ನನ್ನ ಹತ್ರ ವಾದಿಸಬೇಡ. ಸುಮ್ಮನೋಗು.

ಅವಳು: (ಮೌನ)

ಸ್ವ-ಗತ

breakup1ನಿನಗೆ ನಿಜವಾಗಿ ತಿಳಿಯಲಿಲ್ವ? ನಾಟಕ ಮಾಡುತ್ತಿದ್ದ? ಅಷ್ಟೊಂದು ಚಡಪಡಿಸಿ ಹೋಗ್ತಿದ್ದೆ ನಿನಗೋಸ್ಕರ. ತಮಾಷೆ ನಿನಗೆ. ಊರವರಿಗೆಲ್ಲ ತಿಳಿಯೋದು ನಿನಗೆ ಮಾತ್ರ ಗೊತ್ತಾಗಲಿಲ್ಲ ಕಡೇವರ್ಗೂ. ನೀನು ಎರಡು ಮೂರು ದಿನ ಕಾಣಲಿಲ್ಲವೆಂದ್ರೆ, ನಿನ್ನೊಂದಿಗೆ ಜಗಳವಾಡಿ ಅಳುಮುಖ ಮಾಡ್ಕೊಂಡು ಮೊಂಡು ಹಿಡೀತಿದ್ನಲ್ಲ? ಅದೆಷ್ಟು ತಾಳ್ಮೆಯಿಂದ ಸಮಾಧಾನ ಮಾಡ್ತಿದ್ದೆ. ನಿನ್ನ ಮುಂದೆ ಮಗುವಾಗಿಬಿಡ್ತಿದ್ದೆನಲ್ಲ, ನಿಜ ಹೇಳು ನಿನಗೆ ಮುದ್ದು ಬರ್ತಿರ್ಲಿಲ್ವ ನನ್ಮೇಲೆ? ಅದೆಷ್ಟು ಕಾದೆ ಕಣೋ!!! ಕಾಯೋದ್ರಲ್ಲೂ ಸುಖವಿದೆ ಅಂತಾರೆ. ಅದೇನು ಸುಖವಿದೆ ಮಣ್ಣು. ಬರೀ ಕಾದದ್ದಷ್ಟೇ. ಶಬರಿ ಕತೆ ನನಗೆ ಹೆಚ್ಚು ಇಷ್ಟವಾಗ ತೊಡಗಿದ್ದೇ ಆಗ. ನೂರು ಶಬರಿಗಳನ್ನ ಮೀರಿಸುವಂತಿತ್ತು ನನ್ನ ನಿರೀಕ್ಷೆ. ಪ್ರತಿ ದಿನ, ಪ್ರತಿ ಕ್ಷಣ ನಿನ್ನ ಬಾಯಿಂದ ಆ ಮಾತು ಬರುತ್ತೆ, ಇದೀಗ ನನ್ನ ಮುಂದೆ ಮಂಡಿಯೂರಿ ’ನನ್ನ ಮದ್ವೆ ಮಾಡ್ಕೋತೀಯೇನೆ? ನಾನು ನಿನ್ನ ತುಂಬ ತುಂಬಾ ಪ್ರೀತಿಸ್ತೀನಿ’ ಅಂತ ಹೇಳಿಬಿಡ್ತೀಯ. ನನ್ನ ಪ್ರೀತಿ, ನಿರೀಕ್ಷೆ, ಕನಸುಗಳಿಗೆಲ್ಲ ಸಾರ್ಥಕತೆ ದೊರಕಿಸಿಕೊಡ್ತೀಯ. ಇನ್ನೇನು ನೀನು ನನಗೆ ಸಿಕ್ಕೇ ಬಿಡ್ತೀಯ. ಕಣ್ಣಲ್ಲಿ ನೂರು ನಕ್ಷತ್ರಗಳ ಮಿಂಚು. ಮುಖಕ್ಕೆ ನಾಚಿಕೊಳ್ಳಲು ಕಾತರ, ಬಾಹುಗಳಿಗೆ ನಿನ್ನಲ್ಲಿ ಇಷ್ಟಿಷ್ಟೇ ಒಂದಾಗಿಬಿಡುವ ಬಯಕೆ. ಅದೆಷ್ಟು ರಾತ್ರಿ ನನ್ನ ಕನಸುಗಳನ್ನ ಹೀಗೆ ಆಳಿದ್ದೀಯೋ ನೀನು

ಕಾಲ ಹಾಗೇ ಇದ್ದು ಬಿಡಬೇಕಿತ್ತು. ಬದುಕಿನ ಕೊನೆ ಕ್ಷಣದವರೆಗೆ ನೀನು ಬರುತ್ತೀಯೆಂದು ಮನದ ಹೊಸ್ತಿಲಿಗೆ ರಂಗೋಲಿಯಿಟ್ಟು ಕಾದು ಬಿಡುತ್ತಿದ್ದೆ. ಉಹೂಂ ಕಾಲವೂ ನಿನ್ನ ಜಾತಿಗೆ ಸೇರಿದ್ದು, ನಿಷ್ಟುರ, ಉರುಳುತ್ತಲೇ ಹೋಯ್ತು. ನನ್ನಲ್ಲಿನ ನಿರೀಕ್ಷೆಗೆ ಇನ್ನಷ್ಟು ರೆಕ್ಕೆ ಪುಕ್ಕ ಕಟ್ಟಿ ಕೊಡುತ್ತ. ನಾನೆಷ್ಟು ಹುಚ್ಚಿ?! ನನಗ್ಯಾಕೆ ಬೇಕಿತ್ತು ನಿನ್ನ ಬಾಯಿಂದಲೇ ಪ್ರೀತಿಸುತ್ತೇನೆ ಎಂದು ಹೇಳಿಸುವ ಹುಚ್ಚು? ನಾನೇ ಬಾಯ್ಬಿಟ್ಟು ಹೇಳಿಬಿಡಬೇಕಿತ್ತು. ಹೇಳಿಬಿಡಬಹುದಿತ್ತ? ಇಲ್ಲ, ಜನ್ಮವಿಡೀ ಅಂಗೈಯಲ್ಲಿ ಜೀವಹಿಡಿದು ಕಾಯುತ್ತಿದ್ದೆನೆ ವಿನಹ ನಿನ್ನ ತೀಕ್ಷ್ಣ ಕಣ್ಣುಗಳನ್ನೆದುರಿಸಿ ನನಗಂತು ಹೇಳಲು ಸಾಧ್ಯವೇ ಇರಲಿಲ್ಲ ಬಿಡು.

ಅದೊಂದು ದಿನ ನನ್ನೆಲ್ಲ ಸಂಭ್ರಮವನ್ನು ಗರಿಗೆದರಿಸಿ ನಿಲ್ಲಿಸಿದ್ದೆ. ’ಮನೆಗೆ ಬರುತ್ತೇನೆ. ನಿಂಜೊತೆ ಮಾತಾಡಬೇಕು. ಮುಂದಿನವಾರ ಯು.ಕೆಗೆ ಹೊರಡುತ್ತಿದ್ದೀನಲ್ಲ. ಹಾಗೆ ನಿನಗೊಂದು ಸರ್ಪ್ರೈಸ್ ಇದೆ’ ಅದೆಷ್ಟು ಸಾರಿ ನೆನಸಿಕೊಂಡು ಪುಳಕಿತಳಾದೆನೋ ನನಗೇ ಗೊತ್ತು. ನಿನ್ನ ಮಾತುಗಳಲ್ಲಿ ಅದೇನು ರೊಮ್ಯಾಂಟಿಸಿಸಂ ಇತ್ತು ಅಂತ? ನಿನ್ನ ಯಾವತ್ತಿನ ತಣ್ಣಗಿನ ದನಿಯಲ್ಲೇ ಹೇಳಿದ್ದೆ. ಆದರೂ ಮನಸು ಹುಚ್ಚು ಕುದುರೆ. ಕಣ್ಗಳು ಮತ್ತೆ ಕನಸುಗಳಿಂದ ಬಣ್ಣ ಬಣ್ಣ. ಖುಷಿಯಿಂದ ಮನೆಯೆಲ್ಲ ಓಡಾಡಿಬಿಟ್ಟೆ. ನಿನಗಿಷ್ಟದ ಬಣ್ಣದ ಸೀರೆ, ತುಸು ಹೆಚ್ಚು ಮೇಕಪ್ಪು. ಹಹ್ ಹುಚ್ಚಿ!

ನನ್ನೆದೆಯಲ್ಲಿ ಬಿರುಗಾಳಿಯ ತರಂಗಗಳೇಳುತ್ತಿತ್ತು. ನೀನು ಸಂಜೆಯ ತಂಗಾಳಿಯಂತೆ, ಕಣ್ಣುಗಳಲ್ಲಿ ಅದೇ ತೀಕ್ಷ್ಣತೆ, ಸೂರ್ಯನನ್ನೇ ಹಿಡಿದಿಟ್ಟುಕೊಂಡಿದಿಯೇನೋ ಎಂಬಂತೆ. ತನ್ನ ಹೆರಿಗೆಯ ಅಂತಿಮ ಕ್ಷಣದ ಉತ್ಕಟ ನೋವಿನಲ್ಲೂ, ಬರಲಿರುವ ಮಗುವಿನ ಬಗ್ಗೆ ಸಂತಸಗೊಳ್ಳುವ ತಾಯಿಯಂತೆ, ನಿನ್ನಗಲಿಕೆಯ ಸಂಕಟದ ಜೊತೆ ನೀನು ಕಡೆಗೂ ನನ್ನ ನಿರೀಕ್ಷೆ ನಿಜ ಮಾಡುತ್ತೀ ಎಂದು ಕಾದೆ. ನಿನ್ನ ಬಾಯಿಂದ ಕೊನೆ ಮಾತು ಬರುವವರೆಗೂ ಕಾಯುತ್ತಲೇ ಇದ್ದೆ.

ಎಲ್ಲವೂ ಎಷ್ಟು ಸಲೀಸಿತ್ತು ನಿನಗೆ ಯಾವುದರ ಬಗ್ಗೆಯೂ ಕನ್ ಫ್ಯೂಶನ್ಸ್ ಇಲ್ಲ, ಎಲ್ಲವೂ ಕರಾರುವಾಕ್, ನಿಚ್ಚಳ! ಸ್ಪಷ್ಟ! ಐದು ವರ್ಷದ ಯುಕೆ ಟ್ರಿಪ್, ರಾಜು ಅಂಕಲ್ ಮಗಳಿಗೆ ಅಲ್ಲೇ ಕೆಲಸವಿರುವುದರಿಂದ, ಇನ್ನೆರೆಡು ದಿನಕ್ಕೆ ನಿಮ್ಮಿಬ್ಬರ ಮದುವೆ. ಐದು ವರ್ಷದ ನಂತರ ಭಾರತಕ್ಕೆ ವಾಪಾಸ್, ಆಮೇಲೆ ಇಲ್ಲೊಂದು ಕಂಪನಿ ತೆರೆಯುವ ಯೋಚನೆ. ಅದಕ್ಕೆ ರಾಜು ಅಂಕಲ್ ಇನ್ವೆಸ್ಟ್ ಮೆಂಟು. ಅದಕ್ಕೆ ಬದಲಾಗಿ ನೀನವರ ಮಗಳನ್ನು ಮದುವೆಯಾಗುವುದು. ಮ್ಯಾಥ್ಸ್ ಫಾರ್ಮುಲ ಇದ್ದಂತೆ ನಿನ್ನ ಜೀವನವೂ ಅದರ ಲೆಕ್ಕಚಾರವೂ. ಬೆಚ್ಚಿಬಿದ್ದೆ ನಾನು. ಮುಂದೇನು? ನನ್ನ ಆಸೆ ನಿರೀಕ್ಷೆ ಕನಸುಗಳನ್ನು ಕೊಲ್ಲುವ ಹಕ್ಕು ನಿನಗಿಲ್ಲ ಎಂದು ನಿನ್ನ ಕತ್ತಿನ ಪಟ್ಟಿ ಹಿಡಿದು ಕೇಳಬೇಕೆನಿಸಿತು. ಸತ್ತ ನಗುವಿನೊಂದಿಗೆ ನಿನಗೆ ಕಂಗ್ರಾಟ್ಸ್ ಹೇಳುವುದು ಬಿಟ್ಟು ನನ್ನ ಕೈಲಿ ಏನು ಹೇಳಲಾಗಲಿಲ್ಲ. ಹೆದರಿದ್ದೆ. ಪ್ರೀತಿಯಂತೆಯೇ ನಿನ್ನ ಮೇಲಿನ ಕೋಪವೂ ಮನಸ್ಸಿನಲ್ಲಿ ಉಳಿದು ಹೋಯ್ತು.

ಕೋಪವೇ ಅನ್ಸುತ್ತೆ ಹಾಗೆ ನನ್ನನ್ನು ಅವನೆಡೆಗೆ ತಿರುಗಿಸಿದ್ದು. ಅವನ ಬೆಚ್ಚನೆಯ ಬಾಹುವಿನಲ್ಲಿ ನಿನ್ನ ಬಿಸುಪು ಹುಡುಕುತ್ತಿದ್ದೆ. ನಿನ್ನನ್ನು ದ್ವೇಷಿಸಬೇಕೆಂದು ಕೊಂಡಾಗಲೆಲ್ಲ ಅವನನ್ನು ಹೆಚ್ಚು ಪ್ರೀತಿಸುವ ನಾಟಕವಾಡುತ್ತಿದ್ದೆ. ನಾಟಕ ಬಯಲಾಗಿ ಹೋಗುತ್ತಿತ್ತು. ಇವನ ಪ್ರೀತಿಯಲ್ಲು ನಿನ್ನದೇ ಛಾಯೆ ಹುಡುಕುತ್ತಿದ್ದೆ, ಕೆದಕಿ ಕೆದಕಿ. ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆನೆಂದರೆ ದ್ವೇಷವನ್ನು ಪ್ರೀತಿಯಿಂದಷ್ಟೇ ಮಾಡಲು ಸಾಧ್ಯವಿತ್ತು! ನನ್ನ ಎದೆಗೆ ತಲೆ ಹಚ್ಚಿ ಆಲಿಸುತ್ತಿದ್ದ ಅವನು. ತನ್ನ ಪ್ರೀತಿಯ ಸ್ವರ ಹುಡುಕುತ್ತಿದ್ದಾನೆಂದುಕೊಂಡೆ. ಆದರೆ ಅವನ ಅನುಮಾನದ ಕಿವಿಗಳು ನಿನ್ನದೆ ಕಂಪನಗಳನ್ನು ಹುಡುಕುತ್ತಿದ್ದವು. ನೋಡು ಅವನಲ್ಲೂ ಮುಚ್ಚಿಡಲಾರದೇ ಹೋದೆ ನಿನ್ನ ಪ್ರೀತಿಯನ್ನು. ನಾ ಹೇಳದೆ ಎಲ್ಲವು ತಿಳಿದುಕೊಂಡು ಬಿಟ್ಟ. ತಿಳಿಯದೇ ಹೋಗಿದ್ದು ನಿನಗೆ ಮಾತ್ರ.

ಅವನಿಂದ ದೂರಾದ ಮೇಲೆ ಮತ್ತೆ ನನ್ನೊಡನುಳಿದದ್ದು ನಿನ್ನವೇ ನೆನಪುಗಳು. ಅವಷ್ಟೇ ಸಾಕೆಂದು ಎದೆಗವಚಿಕೊಂಡು ಬದುಕತೊಡಗಿದೆ. ನನ್ನ ಶಾಂತ ಸರೋವರದಂತಹ ಬದುಕಿಗೆ ಕಲ್ಲೆಸದ ಹಾಗೆ ನೀನೇಕೆ ಮತ್ತೆ ಬಂದು ಬಿಟ್ಟೆ? ನನಗೆ ನಿನ್ನ ನೆನಪುಗಳೊಂದಿಗೇ ಪ್ರೀತಿ ಬೆಳೆದುಬಿಟ್ಟಿತ್ತು. ಅವೇ ನೀನು, ಅಲ್ಲ ನನಗೇ ಬೇಕಿದ್ದ ನೀನು ಅಂದುಕೊಂಡು ಪ್ರೀತಿಸುತ್ತ ಬದುಕುತ್ತಿದ್ದೆ. ’ಇಲ್ಲ! ಅದು ನಾನಲ್ಲ’ ಎನ್ನುವುದನ್ನು ಸಾಬೀತು ಮಾಡಲೇ ಬಂದೆಯಾ? ಅಷ್ಟು ವರ್ಷಗಳ ನಂತರ ಮತ್ತೆ ನಿರೀಕ್ಷೇ. ಕಣ್ಣರಳಿಸಿ, ಕಿವಿ ನಿಮಿರಿಸಿ ಕೂತಿದ್ದೆ. ನಿನ್ನದು ಅದೇ ತಣ್ಣಗಿನ ಧ್ವನಿ. ’ಅವಳಿಗೆ ಇಷ್ಟವಿರಲಿಲ್ಲವೆಂದಲ್ಲ. ಇನ್ನೊಬ್ಬನಾರೋ ನನಗಿಂತ ಇಷ್ಟವಾದ ಅದಕ್ಕೆ ಡಿವೋರ್ಸ್ ಮಾಡಿದಳು. ನಿನಗೂ ಗಂಡನಿಲ್ಲ, ನಾನು ಹೆಂಡ್ತಿಯನ್ನು ಬಿಟ್ಟಿದ್ದೀನಿ. ಇಬ್ಬರೂ ಜೊತೆಗಿರೋಣ್ವ?’ ಅದೇ ಕರಾರುವಾಕ್ಕು ಮಾತುಗಳು. ನೋ ಕನ್ ಫ್ಯೂಶನ್ಸ್. ಹಳೆಯ ಲೆಕ್ಕಚಾರದ ಬುದ್ದಿ.

ನಗು ಬಂದುಬಿಡ್ತು ನನಗೆ. ನನ್ನ ಪೆದ್ದುತನಕ್ಕೋ, ನಿನ್ನ ವ್ಯವಹಾರದ ಮಾತುಗಳಿಗೋ ಗೊತ್ತಿಲ್ಲ. ಹೇಗೋ ಸಾಧ್ಯ? ಅಷ್ಟು ದಿನದ ನನ್ನ ನಿರೀಕ್ಷೆಗೆ, ಪ್ರೀತಿಗೆ ನಿನ್ನಲ್ಲಿ ಸಿಗುವ ಸ್ಥಾನ ಇದೇ ಎಂದು ತಿಳಿದ ಮೇಲೂ ನಿನ್ನ ಆಫರ್ ಹೇಗೆ ಒಪ್ಪಿಕೊಂಡುಬಿಡಲಿ? ಈಗ ನಿನಗಿಂತ ಹೆಚ್ಚಾಗಿ ನನ್ನೊಂದಿಗಿರುವ ನನಗಿಷ್ಟವಾಗುವ ನಿನ್ನ ನೆನಪುಗಳನ್ನೆ ಪ್ರೀತಿಸ್ತಿದೀನಿ. ನಿನ್ನನ್ನು ಒಪ್ಪಿಕೊಂಡು ಬಿಟ್ಟರೆ ಅವಕ್ಕೆ ಅವಮಾನವಾದಂತಲ್ಲವೇ? ನನ್ನ ಪ್ರೀತಿಯನ್ನು ನಾನು ವ್ಯಾಪರಕ್ಕಿಟ್ಟಿಲ್ಲ. ಪ್ರೀತಿಯಿಲ್ಲದ್ದು ಬರೀ ವ್ಯವಹಾರವಷ್ಟೇ. ಕ್ಷಮಿಸು ನನ್ನ ಕೈಲದು ಸಾಧ್ಯವಿಲ್ಲ.