ಅರೆ-ಬರೆ
’ಬರೆಯೋದು ನಿಲ್ಲಿಸಿಬಿಟ್ರ? ತುಂಬ ದಿನವಾಯ್ತು ಬ್ಲಾಗಿನಲ್ಲೇನು ಬರೆದಹಾಗಿಲ್ಲ?’ ಎಂಬ ಪ್ರಶ್ನೆಗೆ ಏನುತ್ತರಿಸಲಿ? ತಿಳಿಯಲಿಲ್ಲ. ನಿಜವೇ, ಸುಮಾರು ದಿನಗಳಾದವು, ಬರವಣಿಗೆ ಬಹುತೇಕ ಮರೆತಂತೇ ಆಗಿದೆ. ಅಲ್ಲೊಂದು ಇಲ್ಲೊಂದು ಕಮೆಂಟುಗಳು ಬಿಟ್ಟರೆ, ಓದಿಸಿಕೊಳ್ಳುವಂತದ್ದು ಏನೂ ಬರೆದಿಲ್ಲ. ಮೊದಲಿನಿಂದಲೂ ಹೀಗೆ, ರೆಗ್ಯುಲಾರಿಟಿ ಅನ್ನೋದು ನನಗೆ ಸಿದ್ದಿಸಿದ್ದೆ ಇಲ್ಲ. ಯಾವುದರಿಂದಲೂ ಬೇಗ ಬೋರ್ ಆಗಿಬಿಡುವ, ಒಂದರಿಂದ ಇನ್ನೊಂದಕ್ಕೆ ತಟಕ್ಕನೆ ನೆಗೆದು ಬಿಡುವ ಮನಸ್ಥಿತಿ. ಇದೊಂದು ಚಟವೋ, ಹವ್ಯಾಸವೋ, ಮನೋವೈಕಲ್ಯವೋ ತಿಳಿಯದು. ಬರೆಯಬೇಕೆಂದುಕೊಂಡರೂ ವಿಷಯಗಳಲ್ಲಿ ಅಸ್ಪಷ್ಟತೆ, ಏನೋ ಬರೆಯಲು ಹೋಗಿ ಅದಿನ್ನೇನೋ ಆಗಿ ಕಡೆಗೆ ಯಾವುದೂ ಬೇಡವೆನಿಸಿ ಸುಮ್ಮನಾದದ್ದು ಎಷ್ಟು ಸಲವೋ. ಅದೇಕೆ ಹಾಗಾಗುತ್ತದೆ? ಬರವಣಿಗೆಯ ಬಗ್ಗೆ ಬರೆಯ ಹೊರಟಷ್ಟು ಅಚ್ಚರಿಗಳು ಕಾಡುತ್ತವೆ. ಪಿಯುಸಿ ದಿನಗಳವು, ಯಾವುದಾದರೊಂದು ಕಾದಂಬರಿ ಸಿಕ್ಕರೆ ಊಟ ನಿದ್ದೆ ಬಿಟ್ಟು ಕೂರುತ್ತಿದ್ದದ್ದು, ಓದು ಮುಗಿದ ನಂತರ ಯಾರೊಂದಿಗೂ ಮಾತೇ ಆಡದೆ ಕೆಲವು ಕಾಲ ಅದರ ಗುಂಗಿನಲ್ಲೇ ಕಳೆದು ಹೋಗುತ್ತಿದ್ದುದ್ದು ಬಿಟ್ಟರೆ ಓದಿದ್ದನ್ನೇ ಮತ್ತೆ ಓದುವುದಾಗಲೀ, ಅದರ ಬಗ್ಗೆ ಬರೆಯುವುದಾಗಲೀ ಬೇರೆಯದೇ ಗ್ರಹದ ಜೀವಿಗಳ ಕೆಲಸವೆನ್ನುವಷ್ಟು ಮಟ್ಟಿಗೆ ಬರವಣಿಗೆಗೆ ಅಪರಿಚಿತಳಾಗಿದ್ದೆ.
ಈಗಲೂ ಬರವಣಿಗೆಯ ಬಗ್ಗೆ ನನ್ನದೇ ದೂರುಗಳಿವೆ. ಬರೆಯಬೇಕೆನ್ನುವ ವಿಷಯದ ಆಯ್ಕೆಯಿಂದ ಹಿಡಿದು ಪ್ರತಿ ಪದಕ್ಕೂ, ಸಾಲಿಗೂ ತಿಣುಕಾಡುತ್ತಾ, ಅತ್ಯಂತ ಗೊಂದಲದಲ್ಲಿ ಬರೆಯುತ್ತೇನೆ. ಬರೆದ ಮೇಲೆ ಅಪೂರ್ಣವೆನಿಸ ತೊಡಗಿ ಅತೃಪ್ತಿಯಲ್ಲಿ ಬೇಯುತ್ತೇನೆ. ಆದರೂ ಬರವಣಿಗೆ ನನಗೆ ಖುಷಿಕೊಡುವ ವಿಷಯ. ಓದುವಾಗಿರುವ ಅಸ್ಪಷ್ಟತೆ ಗೊಂದಲಗಳು ಬರೆಯತೊಡಗಿದಾಗ ಬಗೆಹರಿದ್ದಿದೆ. ನನ್ನದೆ ನಿಲುವುಗಳು, ಅಭಿಪ್ರಾಯಗಳು ಇನ್ನಷ್ಟು ಪಕ್ವಗೊಂಡಿದ್ದಿದೆ. ಬರೆಯತೊಡಗಿದ್ದಾಗಿನಿಂದ ನನ್ನ ಓದಿನ ರೀತಿಯೇ ಬದಲಾಗಿದೆ. ಕೆಲವೊಮ್ಮೆ ನನ್ನ ಓದು ಕೇವಲ ನನ್ನ ಬರವಣಿಗೆಗಷ್ಟೇ ಸೀಮಿತವಾಗಿ ಹೋಯ್ತೆ, ಬರೆಯ ತೊಡಗುವುದಕ್ಕೂ ಮುಂಚಿನ ತನ್ಮಯತೆ ಇಂದ ನಾನಿದನ್ನು ಓದುತ್ತಿಲ್ಲವೇನೋ ಎನಿಸಿ ಕಳವಳಗೊಳ್ಳುತ್ತೇನೆ. ’ಬರವಣಿಗೆ ಒಂದು ಉತ್ತಮ ಓದಿನ ರೀತಿ’ ಎಂಬಂತಹ ಮಾತುಗಳನ್ನು ಕೇಳಿದಾಗ ಬರವಣಿಗೆಯಿಂದಲೇ ನನ್ನ ಓದು ಇನ್ನಷ್ಟು ಸಮೃದ್ದವಾಗುತ್ತಿದೆ, ಎಂದು ಸಂಭ್ರಮಿಸಿಯೂ ಇದ್ದೇನೆ.
ಏನು ಬರೆಯಬೇಕು? ಯಾವುದರ ಬಗ್ಗೆ ಬರೆಯಬೇಕು? ನಮ್ಮ ಅನುಭವಗಳನ್ನೆಲ್ಲ ಬರಹವಾಗಿಸಬೇಕೆ? ನನ್ನ ಅತೀ ಬೇಸರದ ದಿನದ ಒಂಟಿತನ, ಖುಷಿಯಾಗಿದ್ದಾಗಿನ ಹುರುಪು, ಮನಸ್ಸಿನ ಸಂತೋಷ, ದುಗುಡ ದುಃಖ ತುಂಟತನ, ಅವನಾರೋ ಕೈ ಹಿಡಿದಾಗ ಉಂಟಾಗುವ ರೋಮಾಂಚನ, ಇನ್ನೊಬ್ಬನ ಮಾತಿಗೇ ಕಿವಿಯಾಗಿ ಬದುಕು ಕಳೆದುಬಿಡಬೇಕೆನಿಸುವ ಹುಂಬತನ, ತಲೆ ಮೇಲೆ ಕೈ ಇಟ್ಟು ಹರಸುವ ಹಿರಿಯರ ಸ್ಪರ್ಶದ ಆರ್ದ್ರತೆ, ಎಲ್ಲವನ್ನೂ ತನ್ನ ಅಚ್ಚರಿಯ ಕಣ್ಣುಗಳಲ್ಲಿ ನೋಡುತ್ತಿರುವ ಮುಗ್ಧ ಮಗು, ಹೀಗೆ ಎಚ್ಚರವಾಗಿರುವಾಗಿನ ನನ್ನ ಬದುಕಿನ ಪ್ರತಿ ಕ್ಷಣ ಗಳಿಗೆಯೂ ನನಗೆ ಅನುಭವವೇ. ಈ ಹೊತ್ತು ಹೀಗೆ ಕೂತು ಬರೆಯುತ್ತಿರುವ ನಾನು ಈ ಕ್ಷಣವನ್ನು ಅನುಭವಿಸುತ್ತಿಲ್ಲವೇ? ಓದುತ್ತಿರುವ ನೀವು ಅನುಭವವಲ್ಲದೇ ಮತ್ತೇನು ಪಡೆಯುತ್ತಿದ್ದೀರಿ? ಅನುಭವಗಳನ್ನೆಲ್ಲ ಬರಹವಾಗಿಸುವುದು ಎಂದರೆ ಹೇಗೆ? ಅನುಭವಿಸಿ ಬರೆಯುವುದು ಎಂದರೇನು? ಯಾವ ಯಾವ ಅನುಭವಗಳ ಬಗ್ಗೆಯೆಂದು ಬರೆಯುತ್ತೀರಿ? ಉಹ್ಞುಂ ನನ್ನಲ್ಲಿ ಸ್ಪಷ್ಟತೆ ಇಲ್ಲ.
ನಮ್ಮೆಲ್ಲ ಯೋಚನೆಗಳನ್ನು ಕಲ್ಪನೆಗಳನ್ನು ಚಿಂತನೆಗಳನ್ನು ಮೊನಚುಗೊಳಿಸುವ ಶಕ್ತಿ ಬರವಣಿಗೆಗಿದೆ ಎಂಬುದು ನನ್ನ ನಂಬಿಕೆ, ಹೀಗಾಗಿಯೇ ನನಗೆ ಬೇರೆ ಚಟಗಳಂತೆ ಹತ್ತಿಸಿಕೊಂಡ ಇದನ್ನು ಅಷ್ಟೇ ಸುಲಭವಾಗಿ ಬಿಟ್ಟು ಬಿಡಲು ಆಗುತ್ತಿಲ್ಲ. ನನ್ನ ಯೋಚನೆಗಳ ನಿರಂತರ ತಿಕ್ಕಾಟಕ್ಕೆ, ಸ್ಪಷ್ಟತೆಗೆ, ಗೊಂದಲಗಳಿಗೆ ಬರವಣಿಗೆಯ ಜೊತೆ ಬೇಕೇಬೇಕು. ಬರೆಯಬೇಕೆಂದೇ ಓದ ತೊಡಗುತ್ತೇನೆ ಅಥವಾ ಓದುತ್ತಿದ್ದೇನಾದ್ದರಿಂದ ಬರೆಯತೊಡಗಿದ್ದೇನೆ. ಬರವಣಿಗೆಯು ನನ್ನ ಪಾಲಿಗೆ ಬರೆದು ಮುಗಿಸಿಬಿಡುವ ಕ್ರಿಯೆಯಲ್ಲ, ನನ್ನಲ್ಲೇ ನಿರಂತರ ಹರಿಯುವ, ಕಾಡುವ, ಬೆನ್ನುಬೀಳುವ ಗೀಳು.
ಸ್ವಕೇಂದ್ರಿತ ಚಿಂತನೆ, ಸ್ವಪ್ರಜ್ಞೆಯಿಂದ ಹೊರಬಂದು ಬರೆಯುವುದಕ್ಕೆ ಪ್ರಯತ್ನಿಸಿ.
ಒಬ್ಬ ಬರಹಗಾರನ /ಬರಹಗಾರ್ತಿಯ ಅಂತರಂಗವನ್ನು ತೆರೆದಿಟ್ಟಿದ್ದೀರಿ… ಬಹುಶಃ ಎಲ್ಲ ಸಣ್ಣ ಪುಟ್ಟ ಬರಹಗಾರರನ್ನು ಆವರಿಸುವ ಮಾನಸಿಕ ಕ್ಷೋಭೆ ಇದು…
ಹುಸೇನ್