ಸಿದ್ಲಿಂಗು – A review
ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು.
ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.
ಚಿತ್ರದಲ್ಲಿ ಒಂದೊಂದು ಪಾತ್ರವನ್ನು ಮೂಡಿಸಿರುವ ರೀತಿ ವಿಶಿಷ್ಟವಾಗಿದೆ. ಪಾತ್ರಗಳು ಒಂದಕ್ಕೊಂದು ಪರಿಚಯವಾಗುವುದು ಇನ್ಸಿಡೆಂಟಲ್ ಎನಿಸುತ್ತ ಸಹಜತೆಗೆ ಹತ್ತಿರವಾಗಿದೆ.ಎಲ್ಲ ಪಾತ್ರಗಳೂ ಇನ್ನೊಂದು ಪಾತ್ರಕ್ಕೆ ಸಹಾಯ ಮಾಡುತ್ತಲೇ ಹತ್ತಿರವಾಗುತ್ತವೆ, ಯಾರಿಗೆ ಯಾರೂ ಅನಿವಾರ್ಯವಲ್ಲ. ಇತ್ತೀಚಿನವರೆಗೂ ತೀರ ಭಾವುಕವೆನಿಸುತ್ತಿದ್ದ ಎಂದುಕೊಳ್ಳುತ್ತಿದ್ದ ಅಪ್ಪ ಅಮ್ಮ ಪ್ರೇಯಸಿ ಎಂಬಂತಹ ಪಾತ್ರಗಳು ಇಲ್ಲಿ ಅಷ್ಟು ಆಳವೆನಿಸದೇ ತೀರ ಹಗುರವಾಗಿ ಮೂಡಿಸಿದಂತಿದೆ. ಅಚಾನಕ್ಕಾಗಿ ಹುಟ್ಟುವ ಪಾತ್ರಗಳು ಅವು ಕಳೆದು ಹೋಗುವ ರೀತಿಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಿಸದಿರುವುದು ತಿಳಿಯುತ್ತದೆ. ಲೆಕ್ಚರರ್ ಒಬ್ಬಳು ಕಾರಣವೇ ಇಲ್ಲದಂತೆ ತನ್ನ ವಿದ್ಯಾರ್ಥಿಯತ್ತ ಆಕರ್ಷಿತಳಾಗಿ ಮೈ ಒಪ್ಪಿಸಿಬಿಡುವ ದೃಶ್ಯ ತೀರ ಸಹಜವೆಂಬಂತೆ ಹೇಳಲಾಗಿದೆ. ಇಡೀ ಕತೆಯಲ್ಲಿ ಗಂಭೀರ ಎನಿಸುವುದು, ಭಾವನಾತ್ಮಕವಾಗಿ ತಟ್ಟುವುದು ಬಾಲಕ ಸಿದ್ಲಿಂಗುವಿನ ಪ್ರೇಮ ಪ್ರಸಂಗ. ಕಡಿಮೆ ದೃಶ್ಯಗಳಲ್ಲೇ ಆ ಪಾತ್ರಕ್ಕಿರುವ ಪ್ರಾಮುಖ್ಯತೆ ಆಳ, ಇಡೀ ಸಿನಿಮಾದ ತುಂಬಾ ಇರುವ ಯುವಕ ಸಿದ್ಲಿಂಗುವಿಗೆ ಸಿಗದಿರುವುದು ವಿಪರ್ಯಾಸ. ಪ್ರತಿ ಪಾತ್ರವನ್ನು ಹಗುರವಾಗಿ ಮೂಡಿಸಿ ಸೀರಿಯಸ್ ನೆಸ್ ನತ್ತ ತಳ್ಳುವುದು, ಮುಂಗಾರು ಮಳೆಯಿಂದಲೂ ನಡೆದು ಕೊಂಡು ಬಂದಿರುವ ಪದ್ದತಿಯೇ, ಆದರೆ ಈ ಸಿನಿಮಾದಲ್ಲಿ ಗಂಭೀರತೆಯೂ ಎಲ್ಲೂ ಪ್ರಮುಖವಾಗಿಲ್ಲ ಹಾಗಾಗಿ ಕಡೆಯಲ್ಲಿ ನಾಯಕಿ ಸತ್ತರೂ ಅದು ಕತೆ ಹೇಳುತ್ತಿರುವ ರೀತಿಗೆ, ನಡೆದಷ್ಟೇ accidental ಎನಿಸಿ ಮರೆತು ಹೋಗುತ್ತದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣತೆಯ ಹಿನ್ನೆಲೆಯಲ್ಲಿ ಕತೆಯನ್ನು ಬಿಡಿಸುತ್ತಾ ಮುಂದುವರೆಯುವ ಚಿತ್ರ, ಕತೆಗೆ ಅನಿವಾರ್ಯವೆನಿಸುವಂತೆ ನಾಯಕನಿಗೆ ಕಾರಿನ ಬಗ್ಗೆ ಇರುವ ಗೀಳನ್ನು ತೋರಿಸುತ್ತದೆ. ಸಿದ್ಲಿಂಗುವಿನ ಜೀವನದ ಜೊತೆ ಕಾರು, ಕಾರಿನ ಬಗ್ಗೆ ಆತನ ಕನಸನ್ನು ವಿಸ್ತರಿಸುತ್ತಾ ಸಾಗುತ್ತದೆ. ಇಡೀ ಕತೆಯಲ್ಲಿ ಬಂದು ಮರೆಯಾಗುವ ಪಾತ್ರಗಳಲ್ಲಿ ಇಲ್ಲದ ಗಟ್ಟಿತನವನ್ನು ಕಾರಿಗೆ ನೀಡಲಾಗಿದೆ. ಪಾತ್ರಗಳನ್ನು ಬೇಕೆಂದಲ್ಲಿ ಸೃಷ್ಟಿಸಿ ಬೇಡವೆಂದಲ್ಲಿ ಸಾಯಿಸಿಬಿಟ್ಟಿರುವ ನಿರ್ದೇಶಕರು ಕಾರಿಗೊಂದು ಕೊನೆಯೇ ಕೊಡುವುದಿಲ್ಲ. ಯಾವ ಪಾತ್ರಕ್ಕೂ ಸ್ಪಷ್ಟನೆ ಯಾಗಲೀ ಫ್ಲಾಶ್ ಬ್ಯಾಕ್ ಆಗಲೀ ಇಲ್ಲವೇ ಇಲ್ಲ. ಎಲ್ಲರೂ ಸಿದ್ಲಿಂಗುವಿಗೆ ಪರಿಚಯವಾಗಲೆಂದೇ ಕಾಯುತ್ತಿರುವ ಪಾತ್ರಗಳು, ಸಿದ್ಲಿಂಗುವಿನೊಂದಿಗಲ್ಲದೆ ಅವಕ್ಕೆ ಬೇರೆಲ್ಲೂ ಇರವೇ ಇಲ್ಲ. ಹೀಗೆ ಅಸ್ಪಷ್ಟವಾದ ಒಂದು ಕತೆಯನ್ನು ಹೇಳಲು ಹೊರಟು, ಹೇಳುವಾಗಲೂ ಸ್ಪಷ್ಟತೆ ಕಂಡುಕೊಳ್ಳದೆ, ಕೊನೆಯನ್ನು ಪರಿಣಾಮಕಾರಿಗೊಳಿಸುವತ್ತ ಕೆಂದ್ರೀಕೃತಗೊಂಡು ಅಬ್ರಪ್ಟ್ ಆಗಿ ಮುಗಿದು ಹೋಗುತ್ತದೆ.
ಚಿತ್ರದಲ್ಲಿನ ಡಬಲ್ ಮೀನಿಂಗ್ ಸಂಭಾಷಣೆ ಬಗೆಗೆ ನಿಮ್ಮ ಅನಿಸಿಕೆ ತಿಳಿಸಿದ್ರೆ ಚೆನ್ನಾಗಿತ್ತು.. ಹಾಗೇನೆ, ಬಾಳಲ್ಲಿ ಕೂಡ ನಮಗೆ ಎದುರಾಗುವ ಬಹಳಷ್ಟು ಪಾತ್ರಗಳಿಗೆ ಸ್ಪಷ್ಟನೆ ಇರೋಲ್ಲ. ಅಗತ್ಯ ಕೂಡ ಇಲ್ಲ, ಪಾತ್ರದ ಸ್ಪಷ್ಟನೆ ನಮಗೆಷ್ಟು ಬೇಕೋ, ನಮ್ಮ ಮನಪಾತ್ರೆಯೊಳಗೆ ಎಷ್ಟು ಹಿಡಿಸುತ್ತೋ ಅಷ್ಟೇ ಸಿಗೋದು ಅಲ್ವೇ?
ಬದುಕು ಕೂಡ ಅಬ್ರಪ್ಟ್ ಆಗೇ ಕೊನೆಯಾಗೋದು..
ಹಾಗೆ ನೋಡಿದ್ರೆ (ಸದಾ ಡೈರೆಕ್ಟರ್ ಗಳು ಬಳಸೀ ಬಳಸೀ ಕ್ಲೀಷೆಯಾಗಿರುವ) “ಇದು ರಿಯಲ್ ಲೈಫ್ ಗೆ ತುಂಬಾ ಹತ್ತಿರವಾದ ಕಥೆ!”:)
ಡಬಲ್ ಮೀನಿಂಗ್ ಡೈಲಾಗ್ ಗಳ ಬಗ್ಗೆ ಹೇಳೋದು ವಿಮರ್ಶೆ (!) ಮಾಡುವುದು ಏನೂ ಇಲ್ಲ, ಡೈರೆಕ್ಟರ್ರೇ ಹೇಳಿಕೊಂಡ ಹಾಗೆ ಅದೊಂದು ಗಿಮಿಕ್ ಅಷ್ಟೆ, ಸಿನಿಮಾ ಅದನ್ನು ’ಡಿಮ್ಯಾಂಡ್’ ಮಾಡದಿದ್ದರು ನಿರ್ದೇಶಕರು ಪ್ರಚಾರಗಿಟ್ಟಿಸಲು ಸಪ್ಲೈ ಮಾಡಿರುವುದು ತಿಳಿಯುತ್ತದೆ. ಪಾತ್ರಗಳ ಸ್ಪಷ್ಟನೆ ವಿವರವಾಗಲ್ಲದಿದ್ದರೂ ಎಷ್ಟು ಬೇಕೋ ಅಷ್ಟನ್ನೂ ಕಟ್ಟಿಕೊಡುವಲ್ಲಿ ಸೋತಿದೆ ಅನಿಸ್ತು ಸರ್, ಯಾವ ಪಾತ್ರವನ್ನೂ ಸ್ಪಷ್ಟವಾಗಲು ಬಿಡದೆ ಓಡಿಸುತ್ತಿದ್ದಂತಿತ್ತು. ಕಡೆ ಕಡೆಗೆ ಹೀರೋ ಪಾತ್ರವೂ ಲೈಟ್ ಎನಿಸಿ ಆತ ನರೇಟ್ ಮಾಡುತಿರುವ ಕತೆಯು ಆಳವೆನಿಸುವುದೇ ಇಲ್ಲ. ರಿಯಲ್ ಲೈಫಿಗೆ ಹತ್ತಿರವಾಗುವ ಸನ್ನಿವೇಶಗಳು ಹೌದಾದರೂ ಕಡೆ ಕಡೆಗೆ ನೋಡುತ್ತಿರುವುದು ಸಿನಿಮಾ ಇದು ನಿಜವಲ್ಲ ಎನಿಸತೊಡಗುತ್ತದೆ, ಶುರುವಿನಲ್ಲಿರುವ ಶಾರ್ಪ್ ನೆಸ್ ಅನ್ನು ಸಿನಿಮಾ ಕಡೆಯವರೆಗು ಉಳಿಸಿಕೊಂಡಿಲ್ಲ ಎನ್ನುವುದು ನನ್ನಭಿಪ್ರಾಯ.
naa nODilla. maga nODi bandu kathe hELIdda. puNyakke avanige Double meaning artha aagirlilla. awnanna kaerkonDhOda amma matra baaytumba baidru. but Suman Ranganath abhinaya chennaagide anta matte matte hELidru. ee pOst, takka maTTige aa cinema bagge ondu chitraNa koDtu. avribra opinion keLi nan tale keTTOgittu 😦
ಸಿನಿಮಾ ನೋಡಿ. ಈಗಿರುವ ಟ್ರೆಂಡಿಗೆ ಹೊಸ ಪ್ರಯತ್ನವಂತೂ ಹೌದು. ಒಮ್ಮೆ ನೋಡಲಡ್ಡಿಯಿಲ್ಲ.
ವಿಮರ್ಶೆ ಬರೆಯಲು ಹೋಗಿ ಕತೆಯನ್ನೇ ಬರೆದುಬಿಟ್ಟಿದ್ದೀರಲ್ಲ! ಕ್ಲೈಮಾಕ್ಸ್ ಚೆನ್ನಾಗಿಲ್ಲ ಅಂತ ಬರೆದರೆ ಸಾಕಿತ್ತು. ಕ್ಲೈಮಾಕ್ಸ್ ಏನು ಎಂದು ಬರೆಯುವುದು ಅನಿವಾರ್ಯವಿತ್ತೆ? ಮಾಡಲು ಬರದ ಕೆಲಸವನ್ನು ಮಾಡಲು ಹೋಗಿ ಇನ್ನೊಬ್ಬರ ಹೊಟ್ಟೆಯ ಮೇಲ್ಯಾಕೆ ಹೊಡೆಯುತ್ತೀರಿ? ಅಪರೂಪಕ್ಕೊಮ್ಮೆ offbeat and original ಸಿನೆಮಾ ಮಾಡಿದ್ದಾರೆ. ಚೆನ್ನಾಗಿರೋದನ್ನ ಚೆನ್ನಾಗಿದೆ ಅನ್ನಬಾರದೇ?
ಚಿಮನರೇ, ಸಿನಿಮಾ offbeat ಮತ್ತು original ಅನಿಸುವುದು ಕ್ಲೈಮ್ಯಾಕ್ಸನ್ನು ಹೊರಗಿಟ್ಟ ನಂತರ. ಅದನ್ನು ಪರಿಗಣಿಸಿ ಎಂದು ನೋಡುಗರಿಗೆ ಹೇಳುವಾಗ ಕ್ಲೈಮ್ಯಾಕ್ಸ್ ಏನು ಎಂದು ಹೇಳದೆ ಇರುವುದು ವಿಮರ್ಶೆಗೆ ಅನ್ಯಾಯ. ಕ್ಲೈಮ್ಯಾಕ್ಸಿನಲ್ಲಿ ಪಂಚ್ ಇದೆ ಎಂದು ಕಮರ್ಶಿಯಲ್ ಪಬ್ಲಿಸಿಟಿ ಕೊಡಲು ನಾನು ಸಿನಿಮಾದ ಅಡ್ವರ್ಟೈಸ್ ಮಾಡ್ತಿಲ್ಲ, ಇದು ವಿಮರ್ಶೆ. ಸಿನಿಮಾದಲ್ಲಿ ಇರುವುದನ್ನು ತೋರಿಸಿ ದುಡ್ಡು ಮಾಡಲಿ ಬಿಡಿ, ಸಿನಿಮಾದ ಬಗ್ಗೆ ಕ್ಲೈಮ್ಯಾಕ್ಸ್ ಬಗ್ಗೆ ಸುಳ್ಳು ಸುಳ್ಳೆ ಹೇಳಿ ವೀಕ್ಷಕರನ್ನು ದಾರಿ ತಪ್ಪಿಸುವುದೇ “ಮಾಡಲು ಬರುವ ಕೆಲಸ” ಎಂದು ನೀವು ತಿಳಿಯುವುದಾದರೆ ಹಾಗೆ ಇರಲಿ, I am happy about it.
ಕ್ಲೈಮಾಕ್ಸ್ ಏನೆಂದು ಹೇಳದೇನೇ ಕ್ಲೈಮಾಕ್ಸ್ ಚೆನ್ನಾಗಿಲ್ಲ ಎಂದು ಬರೆಯಲು ಬರುತ್ತದೆ. ಅದು ನಿಮಗೆ ಗೊತ್ತಿಲ್ಲವಾದ್ದರಿಂದಲೇ “ಮಾಡಲು ಬರದ ಕೆಲಸ” ಅಂದಿದ್ದು! ವಿಮರ್ಶೆ ಬರೆಯುವ ಮುನ್ನ ಒಂದಷ್ಟು ವಿಮರ್ಶೆಗಳನ್ನು ಓದಬಾರದೇ?
ಕ್ಲೈಮ್ಯಾಕ್ಸ್ ಹೇಗಿದೆ ಎಂದು ತಿಳಿಸದೆ ಕ್ಲೈಮ್ಯಾಕ್ಸ್ ಚೆನ್ನಾಗಿಲ್ಲ ಎಂದು ಬರೆಯಲು ಬರುವುದಿಲ್ಲವೆಂದಲ್ಲ, ಕೇವಲ ಕತೆಗಾಗಿ, ಕ್ಲೈಮ್ಯಾಕ್ಸ್ ಗಾಗಿ ಸಿನಿಮಾ ನೋಡುವರಾಗಿದ್ದರೇ ಸಿದ್ಲಿಂಗು ಚಿತ್ರ ನೋಡಬೇಡಿರೆಂದು ಬರೆದಿರುವುದು. ಇತರರ ವಿಮರ್ಶೆಗಳನ್ನು ಓದಿ, ಅರ್ಥಮಾಡಿಕೊಂಡು ವಿಮರ್ಶೆಯನ್ನು ಬರೆಯಲು ಕಲಿಯಬಹುದು, ಆದರೆ ವಸ್ತುನಿಷ್ಠ ವಿಮರ್ಶೆಯನ್ನು ಓದಿ ಅರ್ಥಮಾಡಿಕೊಳ್ಳುವುದನ್ನು ಕಲಿಸುವುದು ಹೇಗೆ? ನನಗೆ ತಿಳಿದಿಲ್ಲ.