ಬೇಕಾಗಿದ್ದಾರೆ!
ಮದುವೆ ಆಗೋದು ಅಂತ ತೀರ್ಮಾನಿಸಿ ಬಿಟ್ಟಿದೀನಿ! ಬಂದ ’ಗಂಡು’ (ಗುಂಡು?) ಗಳನ್ನೆಲ್ಲ,
ಸ್ಟೀಲ್ ಬಿಂದಿಗೆ, ಹಿತ್ತಾಳೆ ಹಂಡೆ, ತೊಳೆದ ಕೆಂಡ, ನರಸಿಂಹರಾಜು ಮುಖ, ಅಂಬರೀಷ್
ಸೊಂಟ ಅಂತೆಲ್ಲ ಹೆಸರಿಟ್ಟು ರಿಜೆಕ್ಟ್ ಮಾಡ್ತಿದ್ದವಳು ಈಗ ಇದ್ದಕ್ಕಿದ್ದಂತೆ ಮದುವೆ
ಆಗೋದು ಅಂತ ತೀರ್ಮಾನಿಸಿ ಬಿಟ್ಟಿದ್ದೀನಿ. ಬುದ್ದನಿಗೆ ಬೋಧಿವೃಕ್ಷದ ಕೆಳಗಡೆ ಆದ ಹಾಗೆ
ನನಗೂ ನಮ್ಮ ಅಡುಗೆಮನೆಲಿ ಗ್ನಾನೋದಯ ಆಗಿ ಹೋಗಿದೆ. ನನ್ನಮ್ಮ ತನ್ನ ಪುಣ್ಯದ
ಅಕೌಂಟನ್ನು ಕ್ರೆಡಿಟ್ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಹೊರಟು ಇಂದಿಗೆ ವಾರವಾಯಿತು.
ನಂಬುವ ಮಾತೇ ಅಲ್ಲ ಆದರೂ ನನ್ನಂತ ನಾನೇ ಈ ಒಂದು ವಾರವೂ ನನ್ನ ಬೆಳಗಿನ ತಿಂಡಿಯನ್ನು
ಬಲಿಕೊಟ್ಟಿದ್ದೇನೆ. ಈಗೊಂದು ವಾರದಿಂದ ಎದ್ದು ತಿಂಡಿ ಮಾಡಿಕೊಂಡು ತಿನ್ನುವುದಿರಲಿ,
ಯಾರಾದರೂ ಮಾಡಿಟ್ಟಿದ್ದರೂ ತಿನ್ನಲು ಸಮಯವಿಲ್ಲದಷ್ಟು ಲೇಟಾಗಿ ಹೋಗಿ, ಅರ್ಧಗಂಟೆ
ತಡವಾಗಿ ಆಫೀಸ್ ಸೇರಿ ಕಂಪ್ಯೂಟರ್ ನೊಳಗೆ ಕಳೆದು ಹೋದರೆ, ಮತ್ತೆ ತಿಂಡಿ
ತಿಂದಿಲ್ಲವೆಂದು ನೆನಪಾಗುವುದು ಊಟದ ಸಮಯಕ್ಕೆ. ಯಾವುದೇ ಡಯಟ್ಟಿನ ಸಹಾಯವಿಲ್ಲದೆ
ಅನಾಮತ್ತು ೨ ಕೆಜಿ ತೂಕ ಇಳಿಸಿಬಿಟ್ಟಿದ್ದೇನೆ.ಮುಂದೆ ಹೀಗಾಗಬಾರೆದೆಂಬ
ಮುನ್ನೆಚ್ಚರಿಕೆಗಾಗಿಯೇ ಚೆನ್ನಾಗಿ ಅಡುಗೆ ಬಲ್ಲ ಹುಡುಗನನ್ನು ಹುಡುಕಿ
ಮದುವೆಯಾಗಿಬಿಡಬೇಕೆಂದಿದ್ದೇನೆ. ಹೀಗೆಂದ ತಕ್ಷಣ ನನ್ನನ್ನು ಸಮಾನತೆ, ಸ್ತ್ರೀವಾದಿ
ಎಂದೆಲ್ಲ ಬ್ರಾಂಡ್ ಮಾಡಿಬಿಡಬೇಡಿ. ಚೆನ್ನಾಗಿ ಅಡುಗೆ ಬರುವ ಯಾವ ಹುಡುಗನೂ ನನ್ನ ಕೈಯ
ಅಡಿಗೆಯನ್ನು ತುಂಬಾ ದಿನ ಸಹಿಸಿಕೊಳ್ಳಲಾರನೆಂಬ ಕಾನ್ಫಿಡೆನ್ಸ್ ನಿಂದ ಈ
ಮಾತನ್ನು ಹೇಳುತ್ತಿದ್ದೇನೆ.
ಅಡುಗೆಮನೆ ಅನ್ನೋದು ಹುಡುಗಿಯರಿಗೆ ಅದೇಕೆ ಬ್ರಾಂಡ್ ಮಾಡಿದ್ದಾರೋ, ಏನೇ ಇದ್ದರೂ ನಾನು
ಮತ್ತು ಅಡುಗೆ ಎರೆಡೂ ವಿರುದ್ದ ಪದಗಳು. ಕಷ್ಟಪಟ್ಟು ವಾಂಗಿಭಾತ್ ಮಾಡುವುದನ್ನು
ಕಲಿತು, ಮನೆಗೆ ಬಂದ ಅತಿಥಿಗಳಿಗೆ ಒಮ್ಮೆ ಕೊಟ್ಟರೆ, ಪುಳಿಯೋಗರೆಗೆ ಸ್ವಲ್ಪ ಹುಳಿ
ಕಡಿಮೆ ಹಾಕಬೇಕಿತ್ತು ಎಂದಾಗ, ಅವರನ್ನೇ ಹುಣಸೇಹಣ್ಣಿನಂತೆ ಕಿವುಚಿಬಿಡುವ
ಮನಸ್ಸಾಗಿತ್ತು. ಅಪ್ಪನಿಗೆ ಅಮ್ಮ ಮನೆಯಲ್ಲಿ ಇಲ್ಲದಾಗ ಕಾಫಿ ಮಾಡಿಕೊಡಲೋ ಅಥವಾ ಟೀ
ಕುಡೀತೀರ ಎಂದು ಕೇಳಿದರೆ, ಯಾವುದನ್ನಾದರೂ ಮಾಡು ಮಗಳೇ ನೀ ಮಾಡಿದರೆ ಎರೆಡು ಒಂದೇ ತರ
ಇರುತ್ತೆ ಎಂದಂದು ನಗುತ್ತಾರೆ. ನಾನು ಮಾಡಿದ ಚಪಾತಿ ಯಾವಾಗಲೂ ಆಸ್ಟ್ರೇಲಿಯ ಮ್ಯಾಪ್
ತರಹ ಇರುತ್ತದೆಂದು ಅಕ್ಕನ ಪುಟ್ಟ ಮಗಳು ಹಿಯ್ಯಾಳಿಸುತ್ತಾಳೆ. ಅಲ್ಲರೀ ಆಸ್ಟ್ರೇಲಿಯ
ಮ್ಯಾಪ್ ಆದರೇನು ಇಂಡಿಯಾ ಮ್ಯಾಪ್ ಆದರೇನು ಮುರಿದೇ ತಾನೆ ತಿನ್ನುವುದು. ಹೊಟ್ಟೆ ಒಳಗೆ
ಏನು ಶೇಪ್ ಸಮೇತ ಹೋಗತ್ತ? ಬುದ್ದಿಇಲ್ಲ ಜನಕ್ಕೆ. ನನ್ನ ಹೊಸ ಪ್ರಯತ್ನವನ್ನು ಯಾರ
ಕೈಲದಾರೂ ಹೊಗಳಿಸಬೇಕೆಂದು ಮೊನ್ನೆ ಪಕ್ಕದ ಮನೆಯ ಹುಡುಗನಿಗೆ ನಾನು ಮಾಡಿದ್ದ
ತಿಂಡಿಯನ್ನು ಕಪ್ ನಲ್ಲಿ ಹಾಕಿಕೊಟ್ಟೆ, ’ಚೂರು ಸಪ್ಪೆ ಇತ್ತು ಅಕ್ಕ, ಪಾಯಸದಲ್ಲೆಲ್ಲೂ
ಬೇಳೆ ಕಾಣಲಿಲ್ಲ, ಆದರೂ ಚೆನ್ನಾಗಿದೆ’ ಎಂದುಬಿಟ್ಟ, ನನಗೆ ನಖಶಿಖ ಅಂತ ಉರಿದು
ಹೋಯಿತು, ನಾನು ಮಾಡಿದ್ದಿದ್ದು ಜಾಮೂನು, ಅದು ಗುಂಡಗೆ ಉಳಿಯದೇ ತನ್ನ ಶೇಪ್
ಕಳೆದುಕೊಂಡು ಪಾಕದಲ್ಲಿ ಕರಗಿ ಹೋಗಿತ್ತಷ್ಟೇ!!
ನಾನು ಅನ್ನ ಮಾಡುತ್ತೇನೆಂದರೆ ನನಗಿಂತ ಜಾಸ್ತಿ ನಮ್ಮ ಪಕ್ಕದ ಮನೆಯ ಆಂಟಿಗೆ ತುಂಬಾ
ಭಯ. ಅದು ಆಗಿದ್ದು ಇಷ್ಟು, ಅಕ್ಕಿ ಮತ್ತು ನೀರು ಕುಕ್ಕರಿಗೆ ಹಾಕಿ ಮೂರು ವಿಷಲ್
ಹಾಕಿಸಿದರೆ ಅನ್ನವಾಗುತ್ತದೆ ಎಂದು ಅಮ್ಮನ
ಬಾಯಲ್ಲಿ ಕೇಳಿದ್ದೆ ಪ್ರಾಕ್ಟಿಕಲ್ ಆಗಿ ಎಕ್ಸ್ ಪರಿಮೆಂಟ್ ಮಾಡಿರಲಿಲ್ಲ. ಅದೊಂದು ದಿನ
ಮಾಡಿ ನೋಡಿಯೇ ಬಿಡೋಣವೆನಿಸಿ ಅಕ್ಕಿ ನೀರು ಹಾಕಿ ಕುಕ್ಕರನ್ನು ಒಲೆಯಮೇಲಿಟ್ಟು ಟಿವಿ
ನೋಡುತ್ತ ಕುಳಿತು ಬಿಟ್ಟೆ ಎಷ್ಟು ಹೊತ್ತಾದರೂ ಕುಕ್ಕರ್ ವಿಷಲ್ ಹಾಕೋದನ್ನೆ ಮರೆತು
ಹೋಗಿತ್ತು. ಪಾಪ ಅದಕ್ಕೂ ಪಕ್ಕದಲ್ಲಿ ಸುಂದರ ಹುಡುಗಿಯರು ಯಾರೂ ಕಾಣಿಸಲಿಲ್ಲವೇನೋ,
ನಾನು ಬೇರೆ ಹಾಲಿನಲ್ಲಿದ್ದೆನಲ್ಲ. ಸುಮಾರು ಹೊತ್ತಾಯಿತು. ಏನೋ ಸೀದ ವಾಸನೆ
ಬರುತ್ತಿದೆ ಎಂದು ಎರಡನೇ ಫ್ಲೋರಿನ ಆಂಟಿ ಕಷ್ಟಪಟ್ಟು ತಮ್ಮ
ದೇಹವನ್ನು ನಮ್ಮ ಮನೆವರೆಗೂ ತಂದು ಏದುಸಿರು ಬಿಡುತ್ತಾ ಹೇಳಿದರು.
ಅನ್ನ ಮಾಡ್ತಿದ್ದೆ ಆಂಟಿ ಕುಕ್ಕರ್ ಇಟ್ಟು ತುಂಬಾ ಹೊತ್ತಾಯಿತು ವಿಷಲ್ ಹಾಕ್ತಿಲ್ಲ
ನೋಡಿ ಎಂದು ಅವರನ್ನು ಅಡುಗೆ ಮನೆಗೆ ಕರೆದೊಯ್ದು ತೋರಿಸಿದೆ, ಕುಕ್ಕರ್ ತಲೆಯಮೇಲೆ
ವಿಷಲ್ಲೇ ಇಲ್ಲವಲ್ಲೇ ಎಂದು ನನ್ನ ತಲೆಯ ಮೇಲೆ ಮೊಟಕಿದರು. ಅಷ್ಟೇ ಆಗಿದ್ದರೆ
ಚೆನ್ನಾಗಿತ್ತು, ಒಳಗೇನಾಗಿರಬಹುದು ನೋಡೋಣವೆನಿಸಿ ಕುಕ್ಕರ್ ನ ಮುಚ್ಚುಳ
ತೆಗೆಯುತ್ತಿದ್ದಂತೆ ಬಿಸಿ ಅನ್ನದ ಅಗಳುಗಳು ಕುಕ್ಕರಿನೊಳಗೆ ಇಣುಕುತ್ತಿದ್ದ ಆಂಟಿಯ
ಮುಖಕ್ಕೆ ಹಾರಿ, ಕೆಲದಿನಗಳವರೆಗು ಅವರು ಹೊರಗೆ ಮುಖ ತೋರಿಸದ ಹಾಗೆ ಕೆಟ್ಟದಾಗಿ
ಬೊಬ್ಬೆಗಳಾಗಿದ್ದವು. ಅವತ್ತಿನಿಂದ ಆಂಟಿ ನಾನು ಅನ್ನ ಮಾಡುತ್ತೇನೆಂದರೂ ಸಾಕು ಹೆದರಿ
ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿ ಕಳುಹಿಸುತ್ತಾರೆ.
ಇಷ್ಟೆಲ್ಲ ಆದರೂ ಅಡುಗೆಯನ್ನು ಕಲಿಯಲೇಬೇಕೆಂಬ ನನ್ನ ಹಂಬಲವೇನು ಕಡಿಮೆಯಾಗಿಲ್ಲ.
ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತು ಒಂದು ದಿನ ಯಾವುದಾದರೂ ಫೈವ್
ಸ್ಟಾರ್ ಹೋಟೇಲಿನ ಶೆಫ್ ಆಗ್ಬೇಕು ಅನ್ನೋದು ನನ್ನ ದೂರದ ಯೋಚನೆ.ಇಂತಹ ಮಹಾನ್
ಯೋಚನೆಯನ್ನಿಟ್ಟಿಕೊಂಡಿರುವ ನನಗೆ ಇಂತಹ ಸಣ್ಣಪುಟ್ಟ ತಪ್ಪುಗಳೆಲ್ಲ ಗಣನೀಯವೆನಿಸಿಲ್ಲ.
ಒಮ್ಮೊಮ್ಮೆ ಅನಿವಾರ್ಯವಾಗಿ ಬೇರೆಯವರ ಸುರಕ್ಷತೆಯ ದೃಷ್ಟಿಯಿಂದ ನನ್ನ ಸತತ
ಪ್ರಯತ್ನವನ್ನು ಕೈಬಿಡುತ್ತೇನೆ. ಹೀಗಾಗಿ ನಾನು ಮನೆಯಲ್ಲಿರದ ದಿನ ನೀನು ಅಡಿಗೆಮನೆಗೆ
ಹೋಗಬಾರದು, ಒಲೆ ಹಚ್ಚಬಾರದೆಂಬ ಅಮ್ಮನ ನಿಷೇದಾಜ್ಞೆಯನ್ನು ಶಿರಸಾವಹಿಸಿ
ಪಾಲಿಸುತ್ತಿದ್ದೇನೆ.
ನಾನು ಆಮ್ಲೇಟ್ ಮಾಡಿದರೆ ಅದು ಕಾವಲಿಯಿಂದ ಏಳಲು ಮುಷ್ಕರ ಹೂಡುತ್ತದೆ, ದೋಸೆಯು
ಹೆಂಚಿನಿಂದ ಹೊರಬರುವಷ್ಟ್ರಲ್ಲಿ ಉಡಿ ಉಡಿಯಾಗಿ ಅನ್ನದ ರೂಪ ಪಡೆದಿರುತ್ತದೆ. ಇಡ್ಲಿಗೂ
ಇಟ್ಟಿಗೆಗೂ ವ್ಯತ್ಯಾಸವೇ ಇರುವುದಿಲ್ಲ, ಇನ್ನು ಚಿತ್ರನ್ನವಂತು ದೇವರ ಮೇಲೆ ಎಸೆಯುವ
ಅಕ್ಷತೆಯ ಕಾಳಿನ ಹಾಗಿರುತ್ತದೆ, ಟೊಮೇಟೋ ಗೊಜ್ಜು ತನ್ನ ಅಸಲೀ ರೂಪ ಬಿಟ್ಟುಕೊಟ್ಟು
ಟೊಮೆಟೋ ರಸವಾಗಿಬಿಟ್ಟಿದೆ, ಇವೆಲ್ಲಾ ನನ್ನ ಅಡುಗೆಗೆ ಸಿಕ್ಕ ಕಾಂಪ್ಲಿಮೆಂಟ್ಸು. ಮರಳಿ
ಯತ್ನವ ಮಾಡು ಎಂಬ ಮಾತನ್ನು ಮರೆಯದೇ, ಟಿವಿಗಳಲ್ಲಿ ಬರುವ ಶೋಗಳನ್ನು ನೋಡಿ, ಪಾಕ
ಶಾಸ್ತ್ರದ ಪುಸ್ತಕಗಳನ್ನು ಓದಿ ಅಂತೂ ಹೇಗೋ ಆವಗವಾಗ ಅಡುಗೆ ಕಲಿಯುವ (ಕೊಲ್ಲುವ)
ಪ್ರಯತ್ನವನ್ನಂತು ಮಾಡುತ್ತಲೇ ಇರುತ್ತೇನೆ. ಆದರೆ ಇತ್ತೀಚೆಗೆ ನನ್ನ ಪಾಕ ಕ್ರಾಂತಿಯ
ಪರಿಣಾಮಗಳಿಂದಾಗಿ, ನಾನು ಮಾಡುವ ಅಡುಗೆಯನ್ನು ತಿಂದು ಅಭಿಪ್ರಾಯ ತಿಳಿಸಲು ಜನ
ಸಿಗುತ್ತಿಲ್ಲ ಎನ್ನುವುದೇ ಕೊರಗು, ಒಂದು ಮಹಾನ್ ಸಾಧನೆ ಇಂತಹ ಕಾರಣಗಳಿಂದ ನಿಲ್ಲಬಾರದೆಂಬ
ಉದ್ದೇಶದಿಂದ ಹೀಗೊಂದು ಅಡ್ವರ್ಟೈಸ್ ಮೆಂಟು, ’ನನ್ನ ಅಡುಗೆಯನ್ನು ರುಚಿ ನೋಡಲು ಜನ
ಬೇಕಾಗಿದ್ದಾರೆ. ಜೀವನ ಬೇಸರವಾಗಿರುವವರು, ಜೀವ ನಶ್ವರ ಎಂದುಕೊಂಡಿರುವವರಿಗೆ ಆದ್ಯತೆ!!’
(ವಿಜಯಕರ್ನಾಟಕದಲ್ಲಿ ಪ್ರಕಟಿತ)
Good one ree……
hahahha super sir,
chennagide
ನಿಮ್ಮ ಆಲೋಚನೆ ಅತ್ಯುತ್ತಮವಾಗಿದೆ. ಭಾಗಷ್ಯ ನೀವು ಸಿಕ್ಕಾಪಟ್ಟೆ, ಯಾರರ ಬಿರ್ರಿ ಯಾಗಿ ಚೆನ್ನಾಗಿ ಅಡುಗೆ ಮಾಡುವಿರಿ ಅನ್ಸುತ್ತೆ, ಅದಕ್ಕೆ ನಿಮ್ಮ ಸುತ್ತ ಮುತ್ತಲಿನ ಜನಕ್ಕೆ ಹೊಟ್ಟೆ ಕಿಚ್ಚಿಂದ ಹಾಗೆ ಹೇಳುತ್ತಾರೆ. ಯಾಕೆಂದರೆ ನಾನು ಮಾಡಿದ ಅದ್ಭುತ ಅಡುಗೆಯ ರುಚಿ ತಿಳಿಯದ ನನ್ನ ರೂಂ ಮೇಟ್ ಮಂಗನ ಮೂತಿ ಮಾಡಿಕೊಂಡು ತಿನ್ನುವ.
ನಿಮ್ಮ ಅಡುಗೆ ಅಬ್ಯಾಸಕ್ಕೆ ನನ್ನ ಬೆಂಬಲವಿದೆ. ನಿಮಗೆ ಪ್ರಯೋಗಕ್ಕೆ ಹೊಸ ಜನರ ಅಗತ್ಯ ಇಲ್ಲ, ದೇವರು ಇಂತಹ ಪ್ರಯೋಗಕ್ಕೆ ಅನುಕೂಲ ಆಗಲಿ ಅಂತಾನೆ ಆಫೀಸ್ ನಲ್ಲಿ ಮ್ಯಾನೇಜರ್ ಅನ್ನುವ ಜೀವಿ ಗಳನ್ನು ಶ್ರುಷ್ಟಿಸಿದ್ದಾನೆ. ಇನ್ನೇಕೆ ತಡ ಪ್ರಯೋಗಿಸಿ.
ಮಿಕ್ಕಂತೆ ಒಳ್ಳೆ ಬರಹ, ಓದಿ ಕುಶಿ ಆಯಿತು.
sahodari..nijakku odi tumba khshi ayitu,.
-Nagu,talwar.
ತಾಯಿ ನಾನು ಬೆಂದಕಾಳೂರಿನಲ್ಲಿ ಒಂದು ಕೆಲಸದ ಹುಡುಕಾಟದಲ್ಲಿರೋದು ಅಕ್ಷರಶಃ ಸತ್ಯ. ಆದರೆ ನಿಮ್ಮ company ಸೇರೋದು ತುಂಬಾ risky ಅನ್ಸುತ್ತೆ…..ಹ್ಹ್ ಹ್ಹ್ ಹ್ಹ್…
ಚೆನ್ನಾಗಿದೆ
tumba dinada mele olle teermaana. 😉
hello illi swalpa exaggeration idhe annodhu bittu, nimma swanntha anubava enaadroo bardidiraa? be frank and tell me
your friend
-mistake
Naaan Ready…….:)
beekagiddare barha channagide ri hema haaganta nanna baa anta karibedi nimma aduge ruchi nodoke nange ennu yeneno kelasa eve