ಸಿದ್ದಾಂತ???


hema2
ಬೆಳಿಗ್ಗೆ ೮ ಗಂಟೆಗೆ ಎಚ್ಚರವಾದಾಗ ಅಂದು ಭಾನುವಾರವೆಂದು ನೆನಪಾಯಿತು. ಹಾಸಿಗೆ
ಬಿಟ್ಟೇಳಲು ಮನಸ್ಸಾಗದೆ ಮತ್ತೆ ಕಂಬಳಿ ಎಳೆದುಕೊಂಡಳು. ನಿನ್ನೆ ರಾತ್ರಿ ನಡೆದದ್ದೆಲ್ಲ
ಫಿಲ್ಮೀನ ರೀಲುಗಳಂತೆ ಕಣ್ಣ ಮುಂದೆ ಬಂದವು. ತಲೆ ಭಾರವಾಗುತ್ತಿದೆಯೆನಿಸಿತು. ನಿನ್ನೆ
ಎಷ್ಟು ರೌಂಡ್ ‘ಟಕೀಲ’ ಕುಡಿದಿದ್ದೆ ಎಂದು ನೆನೆಸಿಕೊಳ್ಳಲು ಪ್ರಯತ್ನಿಸಿದಳು.
ನೆನಪಾಗಲಿಲ್ಲ. ಛೆ ಇನ್ನು ಮುಂದೆ ಅದನ್ನು ಕುಡಿಯಬಾರದೆಂದು ನಿರ್ಧರಿಸಿದಳು. ಅದೇನು
ಅಸಾಧ್ಯವಲ್ಲವೆಂಬ ಅಹಂಕಾರ ಅವಳಿಗೆ. ಯಾವ ಚಟಗಳಿಗೂ ನಿರಂತರವಾಗಿ ಅವಳ
ಜೊತೆಯಲ್ಲಿರುವುದು ಸಾಧ್ಯವಿಲ್ಲವೆಂಬುದು ಅವಳಿಗಷ್ಟೇ ಗೊತ್ತಿದ್ದ ಸತ್ಯ. ತೀರ
ಅದಿಲ್ಲದೆ ಬದುಕಲಾರೆ ಅನಿಸಿದ ಕ್ಷಣ ಅದರಿಂದ ಕೈಕೊಡವಿಕೊಂಡು ಹೊರಟು ಬಿಡುತ್ತಿದ್ದಳು.
ಅದೊಂತರ ಹುಚ್ಚು ಯಾರಿಗೂ, ಯಾವುದಕ್ಕೂ ತನ್ನ ಮೇಲೆ ಅಧಿಕಾರ ಚಲಾಯಿಸಲು ಅವಕಾಶ
ಕೊಡಕೂಡದೆಂಬ ಹುಚ್ಚು. ಆ ಹುಚ್ಚಿನಿಂದಲೇ ಅವಳು ತನ್ನಿಷ್ಟದ ಬೆಂಗಳೂರನ್ನು ಬಿಟ್ಟು
ಪೂನಾವೆಂಬ ಕೊಂಪೆಗೆ ಬಂದದ್ದು. ರಾತ್ರಿಯ ಘಟನೆಗಳು ನೆನಪಾದವು. ಎಂದಿಗಿಂತ ಹೆಚ್ಚೇ
ಕುಡಿದಿದ್ದನಾ? ಇರಲಾರದು. ಹೆಚ್ಚು ಕುಡಿದಿದ್ದರೆ ತಾನು ಆ ರೀತಿ
ಪ್ರತಿಕ್ರಿಯಿಸುತ್ತಿರಲಿಲ್ಲವೆಂದು ಸಮಾಧಾನ ಮಾಡಿಕೊಂಡಳು. ಅಬ್ಬಾ! ಅದೇನು ಶಕ್ತಿಯಿದೆ
ಈ ಗಂಡಸಿನ ಸ್ಪರ್ಶಕ್ಕೆ ನನ್ನಂತ ನನ್ನನ್ನೇ ಒಂದು ಕ್ಷಣ ಮೈ ಮರೆಯುವಂತೆ
ಮಾಡಿಬಿಟ್ಟಿತಲ್ಲ. ಛೆ ಅವನು ಕಿಸ್ ಮಾಡೋಕೆ ಬಂದಾಗಲೇ ತಾನವನನ್ನು ರೆಸಿಸ್ಟ್
ಮಾಡಬೇಕಿತ್ತು ಎಂದುಕೊಂಡಳು. ತನ್ನ ಕೈಲಿ ಅದು ಸಾಧ್ಯವಿತ್ತೇ? ಮುಗುಳ್ನಗುವೊಂದು
ಮಿಂಚಿತು. ಆದರೂ ಅದೆಷ್ಟು ಧ್ಯರ್ಯ ಆ ಬಡ್ಡೀ ಮಗನಿಗೆ, ನನ್ನ ಮನೆಯಲ್ಲೇ ನನ್ನನ್ನೇ
ಆವರಿಸುಕ್ಕೆ ಬಂದನಲ್ಲ! ಇದ್ದಕ್ಕಿದ್ದಂತೆ ಅವಳಿಗೆ ತನ್ನ ಮೇಲೆ ವಿಪರೀತ ಕೋಪ ಬಂತು.
ಎಲ್ಲಾ ಆಗಿದ್ದು ತನ್ನಿಂದಲೇ, ತನ್ನದೇ ಸಿದ್ದಾಂತಗಳಿಗೆ ಜೋತು ಬೀಳದೆ, ಎಲ್ಲ
ಹುಡುಗಿಯರಂತೆ ಇದ್ದಿದ್ದರೆ ತಾನಿವತ್ತು ಪಶ್ಚಾತಾಪಪಡುತ್ತಿರಲಿಲ್ಲವೆನಿಸಿ ತನ್ನ
ಬಗ್ಗೆ ಇನ್ನಷ್ಟು ಮುನಿಸಿಕೊಂಡಳು.

ಪ್ರಪಂಚದ ಅರಿವಾಗ ತೊಡಗಿದಾಗಿನಿಂದ ಹೆಣ್ಣಿನ
ಬಗ್ಗೆ ಅವಳಿಗೆ ವಿಚಿತ್ರ ದ್ವೇಷ. ಸ್ವತಂತ್ರಳಾಗಿರಲು ಯಾವ ಹೆಣ್ಣೂ ಬಯಸುವುದಿಲ್ಲ!
ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು. ಅವಳ ವಾದ, ಜಗಳ, ನಿಲುವು
ತೀರ್ಮಾನಗಳು ಅವಳಿರುವ ಜೈಲಿಗೆ ಕಂಫರ್ಟ್ ಒದಗಿಸಲಿಕ್ಕೇ ಹೊರತು ಅವಳಿಗೆ
ಸ್ವೇಚ್ಛಾಚಾರದ ವಿಚಾರವೇ ಇರುವುದಿಲ್ಲ ಎಂದು ಬಲವಾಗಿ ನಂಬಿದ್ದಳು. ತಾನು
ಇದೆಲ್ಲವನ್ನು ಮೀರಿ ಬದುಕಬೇಕೆಂಬ ಅವಳ ನಿರ್ಧಾರ ಅವಳನ್ನು ಬೇರೆಲ್ಲರಿಗಿಂತ
ವಿಭಿನ್ನವೆನಿಸುವಂತೆ ಮಾಡಿದ್ದವು. ಆ ಡಿಫ್ರೆನ್ಸಿಯೇಶನ್ನು ಅವಳಿಗೆ ವಿಚಿತ್ರ ಖುಷಿ
ಕೊಡುತ್ತಿತ್ತು. ಆಗಲೇ ಅಲ್ಲವೇ ಅವಳು ಬೆಂಗಳೂರು ಬಿಡಬೇಕೆಂದು ಕೊಂಡಿದ್ದು. ಅದ್ಯಾವ
ಗಳಿಗೆಯಲ್ಲಿ ಆ ಯೋಚನೆ ಬಂತೋ, ಅದರ ಮರುಕ್ಷಣದಿಂದ ಅವಳು ತನ್ನ ತಯಾರಿ ನಡೆಸಿದ್ದಳು.
ಅಪ್ಪ ಅಮ್ಮ, ಅಕ್ಕ ಇವರೆಲ್ಲರನ್ನು ಒಪ್ಪಿಸಿ, ಹುಟ್ಟಿ ಬೆಳೆದಿರುವ ಊರನ್ನು ಬಿಟ್ಟು
ಒಬ್ಬಳೇ ಬೇರೆ ಊರಿನಲ್ಲಿರುವುದು ಅಷ್ಟು ಸುಲಭದ್ದಾಗಿರಲಿಲ್ಲವಲ್ಲ. ಕಷ್ಟವೆನಿಸಿದಷ್ಟು
ಅದನ್ನು ಮಾಡಲೇಬೇಕೆಂಬ ಹಟ ಹೆಚ್ಚಾಗುತ್ತದೆ ಇದವಳ ಇನ್ನೊಂದು ಸಿದ್ದಾಂತ. ಎರಡು ವರ್ಷ
ಅಕ್ಷರಷಃ ಬಡಿದಾಡಿ ಪೂನಾಗೆ ಹೊರಟು ನಿಂತಳು. ‘ಅಲ್ಲಿ ರೂಮು ಸಿಗೋವರೆಗಾದ್ರೂ ನಾನು
ಜೊತೇಲಿರ್ತೇನೆ’ ಅಂದ ಅಮ್ಮನನ್ನು ಬೇಡವೇ ಬೇಡವೆಂದು ನಿರಾಕರಿಸಿ ಒಬ್ಬಳೇ ಹೊರಟಳಲ್ಲ
ಆಗವಳಲ್ಲಿ ಗೆದ್ದ ಸಂಭ್ರಮವಿತ್ತು. ಪೂನಾಕ್ಕೆ ಕಾಲಿಟ್ಟ ತಕ್ಷಣ ತಾನೊಂದು ಸ್ವತಂತ್ರ
ಹಕ್ಕಿ. ಇಲ್ಲಿ ತನ್ನನ್ನು ಬಂಧಿಸುವಂತಹ ಯಾವುದೇ ಕಟ್ಟಳೆಗಳಿಲ್ಲ. ತಾನೆಂದರೆ
ತನ್ನಿಷ್ಟ ಅಷ್ಟೇ ಎಂದುಕೊಂಡಳು.

ತಾನು ಮೊದಲು ಸಿಗರೇಟು ಹಚ್ಚಿದ್ದು ಯಾವಾಗ? ಎಂಟನೇ
ಕ್ಲಾಸಿನಲ್ಲಿದ್ದಾಗ, ಅಪ್ಪನ ಪ್ಯಾಂಟ್ ಜೇಬಿನಿಂದ ಕದ್ದು ದೂರದಲ್ಲೆಲ್ಲೋ ಯಾರು ಇಲ್ಲದ
ಜಾಗದಲ್ಲಿ ಹಚ್ಚಿ ಉಸಿರೆಳೆದುಕೊಂಡಾಗ ಬಂದಿತ್ತಲ್ಲ ಕೆಮ್ಮು. ಆಹಾ! ೧೦ ನಿಮಿಷ ನಿಂತೇ
ಇರಲಿಲ್ಲ ಕಣ್ಣು ಮೂಗು ಎನ್ನದೇ ಎಲ್ಲಾ ಕಡೆಯಿಂದ ಹೊಗೆ, ನೀರು ಕಿತ್ತುಕೊಂಡು
ಬಂದಿತ್ತು. ಅದೇ ಕೊನೆ ಮತ್ತೆ ಸಿಗರೇಟು ಮುಟ್ಟಲು ಇನ್ನಿಲ್ಲದ ಭಯವಾಗಿತ್ತು. ಎರಡು
ತಿಂಗಳಿಂದೆ ಅದೇಕೋ ಮತ್ತದರ ನೆನಪು ಬಂದು ಅಂಗಡಿಗೆ ಹೋದವಳೇ ಒಂದು ಪ್ಯಾಕ್ ಗೋಲ್ದ್ ಫ್ಲೇಕ್
ತಂದೇ ಬಿಟ್ಟಳಲ್ಲ. ಮೊದಲು ಕಷ್ಟವಾಯಿತು, ಉಸಿರೆಳುಯುತ್ತಿದ್ದ ಹಾಗೆ ಕೆಮ್ಮು
ಗುದ್ದಿಕೊಂಡು ಬಂದು ಬಿಡೋದು, ಎರಡು ದಿನ ಅಷ್ಟೇ. ಮೂರನೇ ದಿನ ಮೂರು ಸಿಗರೇಟನ್ನು
ಯಾವುದೇ ಕಷ್ಟವಿಲ್ಲದೆ ಸುಟ್ಟಿದ್ದಳು. ಡಿಸ್ಕೋಗು ಹಾಗೆ ಹೋಗಬೇಕೆನಿಸಿರಲಿಲ್ಲ ಆ ಮಿನಿ
೨ ಬಾರಿ ಕರೆದಾಗಲೂ ಬರೋಲ್ಲವೆಂದಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಮಿನಿಗೆ ಫೋನ್
ಮಾಡಿ ಡಿಸ್ಕೋಗೆ ಬರ್ತೀನೆ ನೀನು ಹೋಗೋವಾಗ ನನ್ನನ್ನು ಕರಿ ಎಂದಿದ್ದಳು. ನೀ
ಬರ್ತೀನಂದ್ರೆ ಇವತ್ತೆ ಹೋಗೋಣ ಡಾರ್ಲಿಂಗ್ ಅಂದವಳಿಗೆ ಸರಿ ಎಂದು ಅಂದು ರಾತ್ರಿ
ಮೂರುಗಂಟೆವರೆಗೂ ಕುಣಿದು ಬಂದಿದ್ದಳಲ್ಲ. ಮತ್ತೆ ಪ್ರತಿ ಶನಿವಾರ ಸಂಜೆ ಅದವಳ ರೊಟೀನ್
ಆಗಿ ಹೋಗಿತ್ತು. ಎರಡನೇ ಬಾರಿ ಡಿಸ್ಕೋ ಥೆಕ್ ನಲ್ಲಿ ಮಿನಿ ಅವನನ್ನು ಪರಿಚಯಿಸಿದಾಗ
ಅವನ ಬಗ್ಗೆ ಅವಳಿಗೆ ಏನೂ ಅನ್ನಿಸಲಿಲ್ಲ. ಇವತ್ತಿಗೂ ಅವನಲ್ಲಿ ತನ್ನನ್ನು ಆಕರ್ಷಿಸುವ
ಯಾವುದೇ ಗುಣವಿಲ್ಲವೆಂದೇ ನಂಬುತ್ತಾಳೆ. ಆ ಸ್ಥಿತಿಯಲ್ಲಿ ಅವನಲ್ಲದೇ ಯಾರಿದ್ದರೂ ತನ್ನ
ಪ್ರತಿಕ್ರಿಯೆ ಅದೇ ಆಗಿರುತ್ತಿತ್ತು. ಇಷ್ಟಕ್ಕೂ ತಾನು ನಿನ್ನೆ ರಾತ್ರಿ ಅವನ ಜೊತೆ
ಬರಲಿಕ್ಕೆ ಒಪ್ಪಿರದಿದ್ದರೆ ಇಷ್ಟೆಲ್ಲ ಸೀನ್ ಕ್ರಿಯೇಟ್ ಆಗ್ತಾನೆ ಇರಲಿಲ್ಲ. ಅಷ್ಟು
ರಾತ್ರಿಯಲ್ಲಿ ಕುಡಿದಿದ್ದ ತನ್ನನ್ನು ಕರೆದುಕೊಂಡು ಹೋಗಲು ಇವನೇ ಸರಿಯೆಂದು,
ಕುಡಿದಾಗಲೂ ಅವಳಿಗನ್ನಿಸಿದ್ದಕ್ಕೆ ಅವಳಿಗೆ ತನ್ನ ಬಗ್ಗೆ ಹೆಮ್ಮೆಯನಿಸಿತ್ತು. ನೋಡಲು
ಸಾಧುವಂತೆ ಕಂಡರೂ ಅವನು ಪರಿಸ್ಥಿತಿಯ ಲಾಭ ಪಡೆಯುವ ಕನ್ನಿಂಗ್ ಫೆಲೋ ಅಂತ ಅವಳಿಗೆ
ಗೊತ್ತಿತ್ತು, ಆದರೆ ಅವನು ಮಹಾನ್ ಪುಕ್ಕಲ ಎಂಬುದೂ ಎರಡನೇ ಭೇಟಿಯಲ್ಲೇ ಅವಳು
ಕಂಡುಕೊಂಡುಬಿಟ್ಟಿದ್ದಳು. ಅದಕ್ಕೆ ಅವಳು ಅವನು ಡ್ರಾಪ್ ಮಾಡಲೇ ಅಂದಾಗ ಮರುಮಾತಾಡದೇ
ಬೈಕನ್ನೇರಿದ್ದಳು. ಮನೆ ಹತ್ತಿರ ತಂದು ಬಿಟ್ಟವನನ್ನು ಕರಿಯಲೇ ಬೇಡವೇ ಅಂದುಕೊಂಡು,
ಶಿಷ್ಟಾಚಾರಕ್ಕಿರಲಿ ಅಂತ ಕರೆದರೆ, ಬಂದೇ ಬಿಟ್ಟನಲ್ಲ. ಕಾಫಿ ಕುಡಿಯೋಲ್ಲ ನಾನು ಟೀ
ಆದರೆ ಓಕೆ ಅಂದಿದ್ದ ಕೇಳೋಕೆ ಮುಂಚೇನೆ. ಟೀ ಮಾಡುತ್ತಿದ್ದ ತನ್ನ ಹಿಂದೆ ಅದ್ಯಾವ
ಮಾಯದಲ್ಲಿ ಬಂದು ನಿಂತನೋ, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ತನ್ನ ತುಟಿಯನ್ನು
ನನ್ನ ತುಟಿಯ ಮೇಲೊತ್ತಿದ್ದ. ಆ ಕ್ಷಣಕ್ಕೆ ಮೈ ಮರೆತಂತೆ ಸುಮ್ಮನಿದ್ದು ಬಿಟ್ಟೆನಲ್ಲ.
ಎರಡೇ ಕ್ಷಣ ತನ್ನೆಲ್ಲ ಬಲವನ್ನು ಸೇರಿಸಿ ತಳ್ಳಿದ್ದಳು ಅವನನ್ನು. ಸ್ಸಾರಿ ಅಂದ ಅವನು
ತಲೆತಗ್ಗಿಸಿಕೊಂಡು ಹೊರಟು ಹೋಗಿದ್ದ. ಆ ಘಟನೆ ನೆನಪಾಗುತ್ತಿದ್ದ ಹಾಗೆ ಅವಳಿಗೆ ಅಳು
ಬಂದು ಬಿಟ್ಟಿತು, ಅದೇಕೋ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಮರುಕ್ಷಣವೇ ತಾನು
ಅತ್ತಿದ್ದಕ್ಕೆ ಅವಳಿಗೇ ನಾಚಿಕೆಯಾಯಿತು. ಇಷ್ಟು ದಿನ ತಾನು ಬದುಕಿದ ರೀತಿ ಏನು
ಸಾಧಿಸಿದಂತಾಯ್ತು ಎಂದು ತನ್ನನ್ನೇ ಕೇಳಿಕೊಂಡಳು. ಕಾಣದ ಸಿದ್ದಾಂತಗಳ ಬಲೆಗೆ ಬಿದ್ದು
ನಾನು ಸಾಧಿಸಬೇಕೆಂದುಕೊಂಡದ್ದಾದರೂ ಏನು? ಬದುಕಿಗೆ ಸಿದ್ದಾಂತಗಳು ಅಗತ್ಯವಾ?
ಸಿದ್ದಾಂತಗಳಿಲ್ಲದೆ ಬದುಕಲಿಕ್ಕೆ ಆಗೋದೆ ಇಲ್ವ? ಆಗುತ್ತೆ ಆದರೆ……
ಸಿದ್ದಾಂತಗಳಿಲ್ಲದೆ ಬದುಕುತ್ತೀನಿ ಅನ್ನೋದು ಒಂದು ಸಿದ್ದಾಂತದ ಪ್ರತಿಪಾದನೆ ಅಲ್ಲವೇ?
ಇನ್ನು ಯೋಚಿಸಿದರೇ ತನಗೆ ಹುಚ್ಚೇ ಹಿಡಿಯುತ್ತದೆನಿಸಿ, ಹಾಸಿಗೆ ಬಿಟ್ಟು ಮೇಲೆದ್ದಳು.

 1. ನಿಮ್ಮ ಬರವಣಿಗೆ ಸೊಗಸಾಗಿದೆ.

  ಇಲ್ಲಿ ನಿಮ್ಮ ಬೆವರು, ನಿರೀಕ್ಷೆ ಕನಸು – ಕಾಮ, ಸ್ಪರ್ಶ ಎದೆಬಡಿತ ಎಲ್ಲವು ನಿಮ್ಮದೇ..
  ನೀವು
  ಬೇಲಿಯೊಳಗಿನ ಸ್ವಾತಂತ್ರ್ಯ ದಿನ ನಿಲ್ಲದ ನಿಮ್ಮ ಅಸ್ತಿತ್ವದ ಹುಡುಕಾಟ ಜಗತ್ತೆಲ್ಲ ಹುಟ್ಟು-ಸಾವಿನ ಆಟ, ಮೊಳಕೆ – ಸಸಿಯೇ, ಮರವೋ – ಹೂವೋ, ಚಿಟ್ಟೆ – ಪತಂಗವೋ, ಹಕ್ಕಿಯೋ – ಪ್ರಾಣಿಯೋ ,ಎಲ್ಲ ಅದೇ ಆಗಿರುವಂತೆ

  ಇಲ್ಲಿ ನೀವು
  ನೀವೆ ಅಗಿರುವುದೊಂದೇ
  ವಿಚಿತ್ರ !

 2. ಶಶಿ,

  ನಿಮ್ಮ ಪ್ರತಿಕ್ರಿಯೆ ನನ್ನನ್ನು ಗಾಢ ಚಿಂತನೆಗೆ ಹಚ್ಚಿತು. ಈ ಬರಹ ನನಗಿಂತ ಹೆಚ್ಚು ನಿಮಗೇ ಅರ್ಥವಾದಂತಿದೆ. ಆದರೆ ಒಂದು ಮಾತು ಇಲ್ಲಿನ ‘ಅವಳು’ ಖಂಡಿತ ನಾನಲ್ಲ. ಅವಳಲ್ಲಿ ನಾನೊಂದು ಭಾಗವಷ್ಟೇ. ಉಳಿದಂತೆ ನೀವು ಮೆಚ್ಚಿದ್ದು ಖುಷಿಯಾಯ್ತು.

 3. ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಭಾಷೆಯಲ್ಲಿ ಹಿಡಿತವಿದೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.. ಧನ್ಯವಾದಗಳು…

 4. ಉತ್ತಮ ಕಥೆಯಾಗುವ ಎಲ್ಲಾ ಲಕ್ಷಣಗಳು ಈ ಬರಹಕ್ಕಿದೆ ಅನ್ನಿಸಿತು. ಇನ್ನೂ ಸ್ವಲ್ಪ ಸಿದ್ಧಾಂತದ ಚೌಕಟ್ಟನ್ನು ಧಿಕ್ಕರಿಸುವ ಧೈರ್ಯಮಾಡಿದ್ದರೆ ನಾನು ಕುಣಿದಾಡಿ ಈ ಕಥೆಯನ್ನು ಓದಿಕೊಳ್ಳುತ್ತಿದ್ದೆ 🙂

  ಅಂದಹಾಗೆ ನಿಮಗೂ ನನ್ನನ್ನು ಕಾಡುತ್ತಿದ್ದ ಹಾಗೂ ಕಾಡುತ್ತಿರುವ skepticism ಕಾಡುತ್ತಿದೆ ಅನ್ನಿಸುತ್ತದೆ. ನಮ್ಮದೇ ನಂಬಿಕೆಗಳನ್ನು ಸಂಶಯಿಸುವ, ನಮ್ಮ ಸಂಶಯವನ್ನು ನಂಬುವ ವಿಚಿತ್ರ ಸ್ಥಿತಿ! ಇಲ್ಲಿಂದಲೇ ಹೊಸ ಚಿಂತನೆ ಹುಟ್ಟುತ್ತದೆ ಎಂದು ನಾನು ಭ್ರಮಿಸಿದ್ದೇನೆ 🙂

  ಸುಪ್ರೀತ್

 5. ಪ್ರಕಾಶ್, ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ಖುಷಿಯಾಯ್ತು.
  ಸುಪ್ರೀತ್, ಸಿದ್ದಾಂತವನ್ನು ಇನ್ನಷ್ಟು ಧಿಕ್ಕರಿಸಲು ಧೈರ್ಯ ಸಾಲಲಿಲ್ಲ. ಈ ಬರಹ ನಿಮ್ಮನ್ನು ಕುಣಿಯುವಂತೆ ಮಾಡದ್ದಕ್ಕೆ ಖೇದವಿದೆ 🙂 skepticismನಿಂದ ಹೊಸ ಚಿಂತನೆಗಳು ಹುಟ್ಟುತ್ತವೆಂಬುದು ಸುಳ್ಳಲ್ಲ, ಆದರೆ ಒಮ್ಮೆ ಹುಟ್ಟಿದ ಈ skepticism ನಿಲ್ಲುವಂತದ್ದಲ್ಲ, ನಮ್ಮ ನಂಬಿಕೆಗಳ ಬುಡವನ್ನು ಅಲ್ಲಾಡಿಸಿಬಿಡುವ ಈ skepticism ಬಗ್ಗೆ ನನಗೆ ಆತಂಕವಿದೆ.

  ಹೇಮಾ

  • santhosh
  • ನವೆಂಬರ್ 15th, 2008

  skepticism whts it? ಕನ್ನಡಿಯಲ್ಲಿ ನಮ್ಮದೇ ಪ್ರತಿಬಿಂಬವನ್ನು ನೋಡಿ ಅನುಮಾನ ಪದದಿದ್ದರೆ ಸಾಕು. ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು ಅನ್ನೋದು ನಿಜ. she always like to be dependent on others. ಅದನ್ನೇ ನೀವು ತಪ್ಪಾಗಿ ಪುರುಷ ಪ್ರದಾನ ಸಮಾಜ ಅಂತ ಕರೆಯುವುದು.
  ಜೀವನಕ್ಕೆ ಸಿದ್ದಾ೦ತ ಬೇಕು, ಆದರೆ ಅದು ನಮ್ಮ ಏಳಿಗೆಗೆ, ನಮ್ಮ ಸ೦ತೋಷಕ್ಕಾಗಿ, ಬೇರೆಯವರಿಗೆ hurt ಮಾಡೋ ರೀತಿ ಇರಬಾರದು ಅ೦ತ ಇನ್ನು ಏನೇನೋ ಹೇಳಬಹುದು, ಆದರೆ i am not that much qualified and intelligent to tell all those things, so ಜಾಸ್ತಿ ತಲೆ ಕೆಡಿಸಿಕೊಳ್ಳೋದು ಬೇಡ.

  santhosh

 6. ಹೇಮಾ,

  ಒಂದು ಕ್ಷಣದ ಆತ್ಮವಂಚನೆ ಎಂಥ ಸಿದ್ದಾಂತವನ್ನೂ ಬುಡಮೇಲುಗೊಳಿಸೀತು…

  ultimate ಆಗಿ ನಮ್ಮ ಆತ್ಮಸಾಕ್ಷಿಗೆ ಮೋಸವಾಗದಂತೆ ಬದುಕಿದರೆ ಸಾಕು ಅಂತ ನಾನಂದುಕೊಳ್ಳುತ್ತಿದ್ದೇನೆ..( ಇದೂ ಒಂದು ಸಿದ್ದಾಂತವಾಗಿ ಬಿಡ್ತೆ?:-))

  ಚಿಕ್ಕ ವಯಸ್ಸಿನಲ್ಲಿ ಗಾಢ ಚಿಂತನೆಯ ಕಥೆ ಬರೆಯುತ್ತಿದ್ದೀರಿ…keep it up.(ಹಾಗಾದ್ರೆ ಯಾವ ವಯಸ್ಸಿನಲ್ಲಿ ಬರೆಯಬೇಕು ಕೇಳದಿರಿ..:))

  ಹಾಗೇ ಮುಂದಿನ ಬರಹದಲ್ಲಿ ಸುಪ್ರೀತ್ ನನ್ನು ಕುಣಿಸುವಿರೆಂದು ನಂಬಿದ್ದೇನೆ..:-)

 7. skeptism ನಿಂದಲೇ ಹೊಸ ಚಿಂತನೆ ಹುಟ್ಟುತ್ತದೆ ಎಂದು ನಾನು ‘ಭ್ರಮಿಸಿದ್ದೇನೆ’ ಅಂದಿರುವೆಯಲ್ಲಾ ಸುಪ್ರೀತ್, ಅದು ‘ಸಂಭ್ರಮಿಸಿದ್ದೇನೆ’ ಎಂದಾಗಬೇಕಿತ್ತು..! 🙂

 8. ಸಂತೋಷ್,

  ಸುಪ್ರೀತ್ ಹೇಳಿದಂತೆ ನಮ್ಮದೇ ನಂಬಿಕೆಗಳನ್ನು ಸಂಶಯಿಸುವ, ನಮ್ಮ ಸಂಶಯವನ್ನು ನಂಬುವ ವಿಚಿತ್ರ ಸ್ಠಿತಿಗೆ skepticism ಅಂತಾರೆ. ಇದೊಂತರಾ ಕನ್ನಡಿಯೊಳಗಿನ ಬಿಂಬವನ್ನು ನಂಬದಂತಹ ಸ್ಥಿತಿಯೇ. ಹೆಣ್ಣು ಇಷ್ಟಪಟ್ಟು ಕಂಫರ್ಟಬಲ್ ಜೈಲನ್ನು ಬಯಸಿದರೆ ತಪ್ಪಲ್ಲ, ಆದರೇ ಸ್ವತಂತ್ರವಾಗಿರಲು ಹೆಣ್ಣಿಗೆ ಹಕ್ಕೇ ಇಲ್ಲ, ಆಕೆ ಬಂಧನದಲ್ಲಿರಲೇ ಲಾಯಕ್ಕಾದವಳು ಎಂದು ನಂಬಿಬಿಡುವುದು ತಪ್ಪು. ಇನ್ನೂ ಜಾಸ್ತಿ ಹೇಳಿದರೆ ಸ್ತ್ರೀವಾದಿಗಳ ಗುಂಪಿಗೆ ನನ್ನನ್ನು ಸೇರಿಸಿಬಿಡ್ತಿ ನೀನು, ಸೋ ನೀ ಹೇಳಿದಂತೆ ಜಾಸ್ತಿ ತಲೆ ಕೆಡೆಸಿಕೊಳ್ಳೋದು ಬೇಡ.

  ರಂಜಿತ್,

  ಪ್ರಶ್ನೆಗಳು ಕೇಳುವ ಮುನ್ನವೇ ಉತ್ತರಿಸಿಬಿಟ್ಟಿದ್ದೀರಿ ಥ್ಯಾಂಕ್ಸ್. ಸುಪ್ರೀತನನ್ನು ಕುಣಿಸಬೇಕೆಂಬುದು ನನ್ನ ಹಂಬಲವೂ ಕೂಡ, ಆದರೆ ನನ್ನ ಬರವಣಿಗೆಗೆ ಅಷ್ಟು ಪವರ್ ಇಲ್ಲವೆನ್ನಿ 😦 ನಮ್ಮಿಬ್ಬರ ಖುಷಿಗಾದರೂ ಒಂದೆರೆಡು ಸ್ಟೆಪ್ ಹಾಕಿಬಿಡಿ ಸುಪ್ರೀತರೇ ಎಂದು ವಿನಂತಿಸಬಹುದಷ್ಟೇ 😉 !!

  ಗಣೇಶ್,
  ನಿಮ್ಮ ಕಮೆಂಟಿಗೆ ಸುಪ್ರೀತನೇ ಉತ್ತರಿಸಬೇಕು! (ಅಂದ ಹಾಗೆ ಸುಪ್ರೀತ್ ನನ್ನ ಬರವಣಿಗೆಗಿಂತ ನಿಮ್ಮ ಕಮೆಂಟಿಗೇ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿರೋದು ನಂಗೊಂಚೂರು ಹೊಟ್ಟೆಕಿಚ್ಚು ತಂದಿದೆ 😉 )

  • UMI
  • ನವೆಂಬರ್ 21st, 2008

  ಓಹ್ super …. ನಿಮ್ಮ ಬರವಣಿಗೆಯಲ್ಲಿ ಎಲ್ಲಾ ದೃಶ್ಯಗಳೂ ಕಣ್ಣಿಗೆ ಕಟ್ಟೋ ತರಹ ಇತ್ತು ….
  ಒಂದು ಕ್ಷಣ “ಪೂನಾ” ಲೋಕಕ್ಕೆ ಹೋಗಿದ್ದೆ 🙂

 9. ನಾನು ಸ್ಕೆಪ್ಟಿಸಿಸಂನ ಡೀಲರ್ ಆಗಲಿ ಮಾರ್ಕೆಟಿಂಗ್ ಎಕ್ಸಿಕುಟಿವ್ ಆಗಲಿ ಅಲ್ಲ ಗಣೇಶ್ ಸಂಭ್ರಮಿಸುವುದಕ್ಕೆ!
  ಮುಂದೊಂದು ದಿನ ನನ್ನ ಸಂಶಯವಾದವೂ ಕೂಡ ಒಂದು ‘ಸಿದ್ಧಾಂತ’ ಎಂಬ ಸಂಶಯ ಬರಬಹುದು !

 10. ಲೇಖನ ಚೆನ್ನಾಗಿದೆ … ನನ್ನ ಅಭಿಪ್ರಾಯ ಇಷ್ಟೇ .. ಅಸಲಿಗೆ ಅದು ಸಿದ್ದಾಂತ ವೇ ಅಲ್ಲ ಯಾಕೆಂದರೆ ಪ್ರತಿ ಸಿದ್ದಾಂತ ಕ್ಕೂ ಅದರದೇ ಆದ ಒಂದು ನೈತಿಕತೆ ಇರುತ್ತೆ . ಪೂನಗೆ ಬಂದ ಹುಡ್ಗಿಗೆ ಯಾವುದೇ ನೈತಿಕತೆ ಇರಲಿಲ್ಲ , ಆಕೆ ಮಾಡಿದ್ದು ಸ್ವಾತಂತ್ರದ ಹೆಸರಿನಲ್ಲಿ ಸ್ವೇಚ್ಚೆ … ಅದು ಅಲ್ಲದೇನೆ ಅತ್ತಿದ್ದಕೆ ನಾಚಿಕೆ ಬೇರೆ .. ಅಳುವಿನಲ್ಲಿ ನಾಚಿಕೆ ಇರಬಾರದು.. there is no shame in tears.

 11. ಸಂತೋಷ್,

  ನಿಮಗೆ ಲೇಖನದ ಜಿಸ್ಟ್ ಅರ್ಥವಾದಂತಿಲ್ಲ, ಅದು ಸ್ವೇಚ್ಛೆ ಮತ್ತು ಸ್ವಾತಂತ್ರ್ಯದ ನಡುವೆ ಗೊಂದಲಕ್ಕೊಳಗಾಗಿರೋ ಹುಡುಗಿಯೊಬ್ಬಳ ಯೋಚನೆಗಳು. ಆಕೆಯ ಯೋಚನೆಗಳು ನೈತಿಕತೆ, ಅನೈತಿಕತೆಗೆ ಸಂಬಂಧಿಸಿದ್ದಲ್ಲ (ಅಂದಹಾಗೆ ಇಲ್ಲಿ ನಿಮಗೆ ಅನೈತಿಕ ಅನಿಸಿದ್ದೇನು ಅರ್ಥವಾಗಲಿಲ್ಲ), ಅದು ಬಂಧನಗಳನ್ನು ಮೀರಲು ಅವಳೇ ಸೃಷ್ಟಿಸಿಕೊಂಡಿರುವ ಸಿದ್ದಾಂತಗಳನ್ನು ಕುರಿತು, ಅದನ್ನು ಕಾಡುವ ಗೊಂದಲಗಳನ್ನು ಕುರಿತು, ಅವಳ ಸಿದ್ದಾಂತಗಳ ಮೇಲೆ ಅವಳಿಗೇ ಹುಟ್ಟುವ ಅಪನಂಬಿಕೆಗಳ ಕುರಿತು, ಸ್ವೇಚ್ಛೆಗೂ ಸ್ವಾತಂತ್ರ್ಯಕ್ಕೂ ವ್ಯತ್ಯಾಸ ತಿಳಿಯದೆ ಆಕೆ ಅನುಭವಿಸುವ ತಳಮಳಗಳನ್ನು ಕುರಿತು.

  well ನಿಮ್ಮ ‘there is no shame in tears’ policy ಎಲ್ಲಾ ಸಮಯದಲ್ಲೂ apply ಅಗೋಲ್ಲ ಅನ್ಕೋತೀನಿ, ಇಲ್ಲಿ ಆಕೆ ಅತ್ತಿದ್ದು ಆಕೆಯದೇ ಸಿದ್ದಾಂತಗಳ ಮೇಲೆ ಆಕೆಗೆ ಮೂಡಿದ ಕೋಪದಿಂದ, ಆಕೆಗೆ ನಾಚಿಕೆಯಾಗಿದ್ದು ಸಿದ್ದಾಂತಗಳಿಲ್ಲದೇ ಬದುಕಬಹುದಲ್ಲವೇ ಎಂಬ ಹೊಸ ಸಿದ್ದಾಂತ ಕಂಡುಕೊಂಡ ಮೇಲೆ 🙂

  ವಾದದ ಬಿರುಸಿನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಹೇಳೋದು ಮರ್ತಿದ್ದೆ 😉 thank u for reply ಆಗಾಗ ಬರ್ತಿರಿ.

  ಹೇಮ

 12. ಕಾಡುವ ಭಾವಗಳನ್ನು ತುಂಬ ಚೆನ್ನಾಗಿ ಅಕ್ಷರ ರೂಪಕ್ಕಿಳಿಸಿದ್ದೀರಿ ; ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ; ತುಂಬ ಇಷ್ಟವಾಯಿತು.

 13. Hema, its creating good interaction. One cannot read and leave. It is thought provoking. It doesn’t lead one to keep quite of the things that are very complex to get and perceive.

  Perceptions are to be questioned. Then only a real truth and saakshaatkaara can happen. The dilemma of a girl has been explored in a well defined manner. Thank you for providing your good write up.

  Keep writing. Keep thinking. Keep questioning.

  Ganesh.K

 14. Greeshma & Ganesh

  thanks 🙂

  • Nagaraj D
  • ಡಿಸೆಂಬರ್ 30th, 2008

  super ri

 15. ನಾಗರಾಜ್,
  ಥ್ಯಾಂಕ್ಸ್ ರೀ 🙂

  • KUMAR
  • ಆಗಷ್ಟ್ 22nd, 2014

  nimma baravanige hasya vidambane preti kanasu yella channagide nevu olleya barahagaararu annovadaralli yeradu matilla nimma abhimaanigalalli nanna hesaru hosa serpade heege bareyuttiri (koreyuttiri) nimma baravanige heege saagali

  nimma abhimaaniyallobba

  kumar

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: