ಆತ್ಮಕತೆಗಳ ಜಾಡು ಹಿಡಿದು- ಇನ್ನೊಂದು ಆತ್ಮಕತೆಯ ಸುತ್ತ!

July 3, 2009

alone-13004
ಆತ್ಮಕತೆಗಳಲ್ಲಿ ಇರುವುದೆಲ್ಲವೂ ಸತ್ಯವಾ? ಸುಳ್ಳಾದರೂ ಅದನ್ನು ಪರೀಕ್ಷಿಸಲು ಬರದು
ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ
ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ ಮೂರ್ಖತನ.
ಸತ್ಯಕ್ಕೊಂದು ಪರಿಧಿ ಹಾಕಿ ಇದರಾಚೆಗಿನದೆಲ್ಲ ಸುಳ್ಳು ಎಂದು ಹೇಳಲು ಬರುವುದೇ?
ಘಟನೆಗಳು, ಅನುಭವಗಳು, ದಾಖಲಾಗುತ್ತವೆ. ಅದರ ಸತ್ಯಾಸತ್ಯತೆ ಬರೆದವರನ್ನು ಕಾಡುತ್ತದೆ.
ಆತ್ಮಸಾಕ್ಷಿಗೆ ಹೆದರುವವರೆಲ್ಲರು ಸತ್ಯವನ್ನೇ ದಾಖಲಿಸುತ್ತಾರೆ ಎಂಬ ಮಾತುಗಳೆಲ್ಲ
ಎಷ್ಟು ಸಿನಿಕವೆನ್ನಿಸತೊಡಗಿತು. ಒಂದು ಘಟನೆಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ
ತನ್ನದೇ ಅಭಿಪ್ರಾಯಗಳನ್ನು ಹೊಂದಿರುತ್ತಾನೆ, ಅದೂ ಅವನವೇ ಎಂಬುದಕ್ಕೆ ಏನು ಸಾಕ್ಷಿ
ತಂದುಕೊಡಬಲ್ಲ? ಅವನ ಯೋಚನೆಗೆ ನಿಲುಕಬಲ್ಲಷ್ಟು ಪ್ರಾಮಾಣಿಕ ಅಭಿಪ್ರಾಯಗಳನ್ನು
ದಾಖಲಿಸಬಲ್ಲನೆಂದರೆ, ಅಭಿಪ್ರಾಯಗಳ ಪ್ರಾಮಾಣಿಕತೆಯ ಮೇಲೆ ಅವನು ಘಟನೆಯ ಬಗ್ಗೆ ನೀಡಿದ
ವಿವರಗಳನ್ನು ಸತ್ಯ ಸುಳ್ಳು ಎಂದು ವರ್ಗೀಕರಿಸಬಹುದೇ? ಹೀಗೇ ಯೋಚಿಸುತ್ತಿದ್ದೆ.
ನನ್ನನ್ನು ಸದಾ ಕಾಡುವ, ಯೋಚನೆಗೆ ಹಚ್ಚುವ, ನಾನರಿಯದ ವ್ಯಕ್ತಿಗಳನ್ನು ಪರಿಚಯಿಸುವ
ಆತ್ಮ ಕಥನಗಳು ನನಗೆ ಇನ್ನಷ್ಟು ಆಪ್ತವಾಗುತ್ತಿವೆ. ಈ ಸಲದ ಆತ್ಮಕತೆಗಳ ಸರಣಿಯಲ್ಲಿ
ನಾನು ಬರೆಯುತ್ತಿರುವುದು ’ದಾದಾಗಿರಿಯ ದಿನಗಳ’ ಬಗ್ಗೆ ಇದು ’ಅಗ್ನಿ’ ಪತ್ರಿಕೆಯ
ಸಂಪಾದಕ ಶ್ರೀಧರ್ ರ ಆತ್ಮಕತೆ. ಇದರ ಮೊದಲ ಭಾಗವಷ್ಟೇ ಓದಿದ್ದೇನೆ, ಇನ್ನೂ ಎರಡು
ಭಾಗಗಳು ಬಾಕಿ ಇವೆ ಆದ್ದರಿಂದ ಬರೆಯಲೋ ಬೇಡವೋ ಎಂಬ ಗೊಂದಲದಲ್ಲೇ, ಬರೆಯದೆ ಇರಲು
ಸಾಧ್ಯವಿಲ್ಲವೆನಿಸಿ ಬರೆಯುತ್ತಿದ್ದೇನೆ.

ಆತ್ಮಕತೆಗಳನ್ನು ಯಾರ್ಯಾರು ಬರೆಯಬಹುದು? ಯಾರಾದರೂ ಬರೆಯಬಹುದು. ಆದರೂ ಎಲ್ಲರೂ
ಬರೆಯುವುದಿಲ್ಲ ಏಕೆ? ತಮ್ಮ ಜೀವನದಲ್ಲಿ ದಾಖಲಿಸಲು ಅರ್ಹವೆನಿಸುವಂತಹ ಘಟನೆಗಳು
ನಡೆದಿದ್ದರೆ ಸಾಮಾನ್ಯವಾಗಿ ಆತ್ಮಕತೆಗಳನ್ನು ಬರೆದುಕೊಳ್ಳುತ್ತಾರೆ. ದಾಖಲಿಸಲ್ಪಟ್ಟ
ಘಟನೆಗಳು ಪೂರ್ತಿಯಾಗಲ್ಲದಿದ್ದರೂ ಎಲ್ಲೋ ಒಂದು ಕಡೆ ಬರೆಯುತ್ತಿರುವವನ
ಒಳ್ಳೆಯತನಗಳನ್ನೋ ಸಾಧನೆಗಳನ್ನೋ ಪ್ರತಿಬಿಂಬಿಸುತ್ತವೆ. ಇದು ಲೋಕಾರೂಢಿ. ಆದರೆ
ದಾದಾಗಿರಿಯ ದಿನಗಳಲ್ಲಿ ನಾನು ಕಂಡಿದ್ದು ಶ್ರೀಧರರ ಕನ್ಪೆಶನ್. ಅವರ ಮನಸ್ಸು ಬರವಣಿಗೆ
ಎಡೆಗೆ ಪಲ್ಲಟಗೊಳ್ಳುವವರೆಗೂ ಅವರೊಂದಿಗೆ ನಡೆದ ಘಟನೆಗಳು ಯಾವ ಸಿನಿಮಾಕ್ಕಿಂತ ಕಡಿಮೆ
ಇಲ್ಲ. ಅತ್ಯಂತ ರಂಜಕವಾಗಿ, ವಿಜೃಂಬಿಸಿ ಬರೆದಿದ್ದರೆ ಅದೊಂದು ಬೆಸ್ಟ್ ಸೆಲ್ಲರ್
ಪುಸ್ತಕವಾಗುತ್ತಿತ್ತೋ ಏನೋ, ಆದರೆ ಶ್ರೀಧರ್ ಎಲ್ಲೂ ಎಲ್ಲೆ ಮೀರಿಲ್ಲ. ತಮ್ಮ
ಒಳ್ಳೆಯತನಗಳನ್ನು ಸಾಬೀತುಪಡಿಸಹೊರಟಿಲ್ಲ, ಅಲ್ಲಿರುವುದು ಘಟನೆಗಳ ನೇರ ವಿವರ, ಅವುಗಳು
ಜರಗುವಾಗಿನ ಅವರ ಮನಸ್ಥಿತಿ, ತಪ್ಪೊಪ್ಪಿಗೆ ಮತ್ತು ಪಶ್ಚಾತಾಪ. “ನನ್ನ
ಬದುಕಿನಲ್ಲೊಂದು ಕಾಲವಿತ್ತು. ನನ್ನ ಪ್ರತಿಯೊಂದು ಗಳಿಗೆಯನ್ನು ಅಪರಿಚಿತ ಕಣ್ಣುಗಳು
ಹಿಂಬಾಲಿಸುತ್ತಿದ್ದವು. ಕಾಣದ ಕಿವಿಗಳು ಕೇಳಿಸಿಕೊಳ್ಳುತ್ತಿದ್ದವು. ಅದೊಂದು ಪಾತಕಿಗಳ
ಭೀಕರ ಪ್ರಪಂಚವೆಂದು ತಳ್ಳಿ ಹಾಕುವ ಹಾಗಿರಲಿಲ್ಲ. ಪಾತಕಿಗಳಲ್ಲಿ ನಾನೂ
ಒಬ್ಬನಾಗಿದ್ದೆ. ಭೀಕರತೆಯಲ್ಲಿ ನನ್ನ ಕೊಡುಗೆಯೂ ಇತ್ತು” ಎಂದು ಶುರುವಿಡುತ್ತಾರೆ.
೧೯೭೦-೮೦ ರ ಪಾತಕಪ್ರಪಂಚದ ಬಗ್ಗೆ ಬೆಚ್ಚಿಬೀಳಿಸುವ ಒಂದೊಂದೂ ವಿವರವೂ ಅವರ
ಆತ್ಮಕತೆಯಲ್ಲಿ ದಾಖಲಾಗಿದೆ, ಅದರಲ್ಲಿ ಶ್ರೀಧರ್ ರ ಪಾತ್ರವೂ ಇತ್ತೆಂಬುದು
ನಂಬಲಸಾಧ್ಯವಾದ ಸತ್ಯ.

’ಲಾ’ ಓದಿದ್ದ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಎಲ್ಲ ಅವಕಾಶಗಳು ಇದ್ದ ಅವರನ್ನು
ಪಾತಕ ಪ್ರಪಂಚ ಸೆಳೆದದ್ದು ಒಂದು ವಿಚಿತ್ರ. ಒಂದೊಮ್ಮೆ ಅಲ್ಲಿಗೆ ಕಾಲಿಟ್ಟ ಮೇಲೆ
ಹೊರಬರಲಾಗದ ಅನಿವಾರ್ಯತೆ, ಪಾತಕ ಲೋಕದಲ್ಲೆ ಇನ್ನೂ ಹೆಚ್ಚು ಹೆಚ್ಚು ಆಳಕ್ಕಿಳಿಯಬೇಕಾದ
ಸಂಧರ್ಭಗಳು, ತಪ್ಪು ಮತ್ತು ಸರಿಯಲ್ಲಿನ ದ್ವಂದ್ವಗಳೆಲ್ಲವನ್ನು ಅದೆಷ್ಟು ಚೆನ್ನಾಗಿ
ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆಂದರೆ, ಪಾತಕಿಯಾಗಿದ್ದವನ ಕೈಯಲ್ಲರಳಿದ ಕೃತಿಯೇ ಇದು
ಅನಿಸಿಬಿಡುತ್ತದೆ. “ಪಾತಕ ಪ್ರಪಂಚದಿಂದ ನಾನು ಕಳಚಿಕೊಳ್ಳಲೇ ಬೇಕಿತ್ತು. ಆದರೆ
ಕಳಚಿಕೊಳ್ಳುವುದಾದರೂ ಹೇಗೆ? ಆ ಪ್ರಶ್ನೆಯ ತುಡಿತ ನನ್ನನ್ನು ಬರವಣಿಗೆಯ ಜಗತ್ತಿಗೆ
ದೂಡಿತು. ಆ ಪ್ರಕ್ರಿಯೆ ಎದೆಯಾಳದಲ್ಲಿ ವಿಚಿತ್ರ ಘರ್ಷಣೆಯನ್ನು ಹುಟ್ಟಿಸತೊಡಗಿತು.
ತಣ್ಣನೆಯ ಕ್ರೂರಿಗಳು ಅಸಹಾಯಕರಂತೆ ಗೋಚರವಾಗತೊಡಗಿದರು. ಶಿಷ್ಠರು ಮತ್ತು ದುಷ್ಠರ
ನಡುವಿನ ವ್ಯತ್ಯಾಸ ತೆಳುವಾಗುತ್ತ ಹೋಯಿತು. ಎಲ್ಲಾರೂ ಒಂದೇ ದೋಣಿಯಲ್ಲಿ ಸಾಗುತ್ತಿರುವ
ಸಹಪ್ರಯಾಣಿಕರೆನ್ನುವ ಅರಿವು ಮನಸ್ಸನ್ನು ಆಕ್ರಮಿಸತೊಡಗಿತು. ಬರಹ ನನ್ನ ಹಾದಿಯನ್ನು
ಬದಲಿಸತೊಡಗಿತು. ಬದಲಾದ ಹಾದಿ ಹೆಚ್ಚು ಹೆಚ್ಚು ಆಪ್ತವಾಗಿ ಆಶವಾಗಿ ಬರವಣಿಗೆಯಲ್ಲಿ
ತೊಡಗುವಂತೆ ಪ್ರೇರೇಪಿಸಿತು. ಈಗ ನಿಮ್ಮ ಮುಂದೆ ನಿಂತಿದ್ದೇನೆ
ಸಂಪೂರ್ಣವಾಗಲ್ಲದಿದ್ದರೂ ಸಾಕಷ್ಟು ಬೆತ್ತಲೆಯಾಗಿ” ಹೀಗೆ ಅವರ ಮನಸ್ಸು ಕ್ರೈಂ ನಿಂದ
ಬರವಣಿಗೆಗೆ ಹೊರಳಿದ್ದನ್ನು ವಿವರಿಸುತ್ತಾರೆ. ವಿಖ್ಯಾತರದ್ದಷ್ಟೇ ಆತ್ಮಕತೆಗಳು
ಓದಿಸಿಕೊಳ್ಳುತ್ತವೆ ಎಂಬ ನನ್ನ ಭಾವನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಕೊತ್ವಾಲ್
ಕೊಲೆಯಲ್ಲಿ ಅವರು ಭಾಗಿಯಾಗಿದ್ದಾಗಿನ ವಿವರಗಳನ್ನು ಓದ ತೊಡಗಿದಾಗ, ಬೇಡ
ಬೇಡವೆಂದುಕೊಂಡಿದ್ದ ಕೊತ್ವಾಲನ ಕೊಲೆಯು ಜರುಗಿಯೇ ಬಿಟ್ಟಾಗ ಅದೊಂದು ಕ್ಷಣ ನನ್ನ
ಸುತ್ತಲಿನ ಜಗತ್ತೇ ನಿಂತಂತೇ ಭಾಸವಾಗಿದ್ದು ಸುಳ್ಳಲ್ಲ. ನನಗೆ ತಿಳಿದಂತೆ ಅಷ್ಟು
ತನ್ಮಯಳಾಗಿ ಬೇರಾವ ಕೃತಿಯನ್ನು ಬಹುಶಃ ನಾನು ಓದಿಲ್ಲ.

’ಕಲೆಯ ಶ್ರೇಷ್ಟತೆ ಇರುವುದು ವಸ್ತುಗಳ ಅಭಿವ್ಯಕ್ತಿಯಲ್ಲಿ ವಸ್ತುಗಳ
ಮೌಲ್ಯಮಾಪನದಲ್ಲಲ್ಲ’ ಹೀಗಾಗಿಯೇ ಒಂದು ಕೊಲೆಯ ವಿವರಗಳನ್ನೂ ಕೂಡ ಅದ್ಬುತವಾಗಿ
ಅಭಿವ್ಯಕ್ತಿಸಬಹುದು. ಆದರೆ ಇದೆಲ್ಲದರ ಆಚೆ ನಿಂತು ಮಾನವೀಯ ಮೌಲ್ಯಗಳಿಂದ ನೋಡಿದಾಗ
ಕೊಲೆಯು ಪರಿತಪಿಸಿ ಸುಮ್ಮನಾಗಿಬಿಡುವ ಒಂದು ಕ್ರಿಯೆಯೇ ಎಂಬ ಪ್ರಶ್ನೆ ಕಾಡುತ್ತದೆ.
’ಒಬ್ಬ ವ್ಯಕ್ತಿಯು ಸಾವಿರ ಬಾರಿ ಸಾಯುವಂತಹ ತಪ್ಪು ಮಾಡಬಹುದು, ಆದರೆ ಯಾರಿಗೂ
ಒಬ್ಬನನ್ನು ಕೊಲ್ಲುವಷ್ಟು ಅಧಿಕಾರವಾಗಲೀ ನೈತಿಕತೆಯಾಗಲೀ ಇರುವುದಿಲ್ಲ’ ಎಂದು ಎಲ್ಲೋ
ಓದಿದ ನೆನಪು. ಬಹುಶಃ ಶ್ರೀಧರ್ ಮನಸ್ಸಿನಲ್ಲಿ ಈ ಭಾವವಿತ್ತೆಂದು ಕಾಣುತ್ತದೆ.
ಪಶ್ಚತಾಪವು ಒಮ್ಮೆ ಅನುಭವಿಸಿ ಮುಗಿಸಿಬಿಡುವಂತಹ ಕ್ರಿಯೆಯಲ್ಲ. ಅದು ನಿರಂತರವಾಗಿ
ಕಾಡುತ್ತಲೇ ಇರುವ, ಅನುಭವಿಸುತ್ತಲೇ ಬದುಕಬೇಕಾದ ಮನಸ್ಥಿತಿ. ನಾನು ತಪ್ಪು
ಮಾಡಿಬಿಟ್ಟಿದ್ದೇನೆ, ಅದಕ್ಕೆ ಪಶ್ಚಾತಾಪವಾಗಿದೆ, ನನ್ನನ್ನು ಕ್ಷಮಿಸಿಬಿಡಿ ಎಂದು
ಅವರೆಲ್ಲೂ ಕೇಳಿಕೊಂಡಿಲ್ಲ, ಪ್ರಾಮಾಣಿಕ ವಿವರಗಳೊಡನೆ ತಾವು ಮಾಡಿದ ತಪ್ಪನ್ನೆಲ್ಲ
ತೆರೆದಿಟ್ಟಿದ್ದಾರೆ ಅದನ್ನೋದಿ ಓದುಗನ ಮನಸ್ಸಿನಲ್ಲಿ ಮೊಳೆಯಬಹುದಾದ ಭಾವನೆಗಳನ್ನು
ಅವರು ಅಂದಾಜಿಸ ಬಲ್ಲರು, ಒಂದು ಕೊಲೆ ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾರದ್ದು
ಎಂಬುದನ್ನು ಅರಿತೇ ಅವರು ಬರೆಯತೊಡಗಿದ್ದಾರೆ. ಹಾಗಾಗಿಯೇ ’ದಾದಾಗಿರಿಯ ದಿನಗಳು’
ಎಲ್ಲೂ ಸಿನಿಕವೆನ್ನಿಸದೆ ಓದಿಸಿಕೊಳ್ಳುತ್ತದೆ. ಕೇವಲ ಒಂದು ಆತ್ಮಕತೆಯಾಗಷ್ಟೆ
ಅಲ್ಲದೇ, ಮಾನವನ ಗುಣದಲ್ಲಾಗುವ ವೈರುಧ್ಯದ ಪ್ರತೀಕದಂತೆ ಮನಸ್ಸಿನಲ್ಲುಳಿಯುತ್ತದೆ.


ಆಂತರ್ಯವನ್ನು ಬೆತ್ತಲಾಗಿಸುವ ಆತ್ಮಕತೆಗಳು!

June 25, 2009

sept14biography

ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು
ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ
ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು. ಬಹುಶಃ
ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ
ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!

ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು
ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು
ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು
ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ
ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ,
ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ
ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ
ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ
ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ
ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ
ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.

ಓದುತ್ತಾ ಹೋದಂತೆ ಲಂಕೇಶ್ ಗಿಡದಿಂದ ಮರವಾಗಿ ನಮ್ಮಲ್ಲಿ ಬೆಳೆಯತೊಡಗುತ್ತಾರೆ.
ಮರೆಮಾಚಬಹುದಾದಂತಹ ವಿಷಯಗಳನ್ನೂ ಕೂಡ ಎಳ್ಳಷ್ಟು ಮುಜುಗರವಿಲ್ಲದೇ ಬಿಚ್ಚಿಡುವ ಅವರ
ರೀತಿ, ಸಂಬಂಧಗಳನ್ನೆಲ್ಲ ಒಂದು ಪರದೆ ಇಟ್ಟುಕೊಂಡೇ ನೋಡಿರುವ ಅವರ ಪ್ರವೃತ್ತಿ, ಅವರ
ಸ್ವಾಭಿಮಾನ, ಬೇರೆಯವರ ಬಗ್ಗೆ ಅವರಿಗಿದ್ದ ಕೀಳರಿಮೆ, ಅವರ ಜಾಣತನದ ಬಗ್ಗೆ ಅವರಿಗಿದ್ದ
ಅಹಂಕಾರ, ಉಹೂ ಎಲ್ಲೂ ಮರೆಮಾಚುವ ಪ್ರಯತ್ನವನ್ನೇ ಮಾಡಿಲ್ಲ. ಇದ್ದದ್ದನ್ನು ಇದ್ದ ಹಾಗೇ
ಓದಿಕೊಂಡುಬಿಡಿ ನಾನು ಇಷ್ಟೇ ಎಂಬ ದರ್ಪ. ಆ ದರ್ಪದಿಂದಲೇ ಇನ್ನಷ್ಟು ಹತ್ತಿರವಾಗುವ
ಲಂಕೇಶ್. ಅವರ ಬಗ್ಗೆ ಅಷ್ಟೇ ಅಲ್ಲ, ಅವರ ಸಂಪರ್ಕದಲ್ಲಿದ್ದ ಇನ್ನು ಎಷ್ಟೋ ಜನರ ಬಗ್ಗೆ
ಬೆಚ್ಚಿ ಬೀಳುವಂತ, ತಮಾಶೆ ಎನಿಸುವಂತಹ ಘಟನೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.

’ಅನುರೂಪ’, ’ಎಲ್ಲಿಂದಲೋ ಬಂದವರು’ ಮತ್ತು ’ಪಲ್ಲವಿ’ ಚಿತ್ರಗಳ ತಯಾರಿಕೆಯಲ್ಲಿ ಅವರು
ಪಟ್ಟ ಪಾಡು. ಸೆಂಟ್ರಲ್ ಕಾಲೇಜಿನ ಅಧ್ಯಾಪಕ ವೃತ್ತಿ. ಲಂಕೇಶ್ ಪತ್ರಿಕೆ
ಶುರುಮಾಡಿದ್ದು. ಬಿಡಲಾಗದ ಅವರ ಕುದುರೆ ರೇಸಿನ ಚಟ. ಪ್ರತಿ ಶುಕ್ರವಾರ ರಾತ್ರಿ
ಗೆಳೆಯರೊಂದಿಗೆ ಆಡುತ್ತಿದ್ದ ಕಾರ್ಡ್ಸ್. ದಿನವೊಂದಕ್ಕೆ ನಲವತ್ತಕ್ಕೂ ಹೆಚ್ಚು
ಸುಡುತ್ತಿದ್ದ ಸಿಗರೇಟು, ಆರೋಗ್ಯ ಕೈಕೊಡುವವರೆಗೂ ಕೈಹಿಡಿದಿದ್ದ ಕುಡಿತ, ತಮ್ಮ
ನೆಗೆಟೀವ್ ಗುಣಗಳನ್ನೂ ಪಟ್ಟಿ ಮಾಡುವುದರಲ್ಲಿ ಬೇಸರಿಸಿಕೊಂಡಿಲ್ಲ. ಚಟಗಳಿಂದಾಗಿಯೇ
ಅವರ ಕಣ್ಣೊಂದು ಕಳೆದುಕೊಳ್ಳಬೇಕಾಗಿ ಬಂದಿದ್ದು. ತೀರ ಮಿದುಳಿನ ಭಾಗಕ್ಕೆ ಲಕ್ವಾ
ಹೊಡೆದು, ಎಡಗಾಲು, ಎಡಗೈ ಶಕ್ತಿಹೀವಾಗಿ ತಾನಿನ್ನು ಬದುಕಲಾರೆ ಅಥವಾ ಬದುಕಿದರೂ
ಮೊದಲಿನಷ್ಟು ಚಟುವಟಿಕೆಯಿಂದರಲಾರೆ ಎಂದೆನಿಸಿದಾಗ ಅವರು ತಮ್ಮ ಆತ್ಮಕತೆಯನ್ನು
ಬರೆಯಬೇಕೆಂದುಕೊಂಡದ್ದರವರೆಗಿನ ವಿವರಗಳೆಲ್ಲವೂ ನಮ್ಮಲ್ಲಿ ಬೇರೂರಿ ಬೆಳೆಯ
ತೊಡಗುತ್ತವೆ. ಅವರ ಕಡೆಯ ಸಾಲುಗಳು ಹೀಗಿವೆ ’ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ
ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ
ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ
ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ
ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ
ಛಾಯೆ ಅನ್ನಿಸತೊಡಗಿತು’, ಸಾವಿನೆಡೆಗಿನ ಭಯಕ್ಕಿಂತಲೂ ಹೆಚ್ಚಾಗಿ, ಅದರ ಅಸ್ತಿತ್ವ
ಅರಿವಾಗತೊಡಗಿದರಿಂದ ಅವರಲ್ಲುಂಟಾದ ಗೊಂದಲಗಳನ್ನು ಪದಗಳಲ್ಲಿ ಜೋಡಿಸಿಟ್ಟುರುವಂತಿದೆ ಈ
ಸಾಲುಗಳು.

ಒಂದು ಕಡೆ ಲಂಕೇಶ್ ಹೀಗೆ ಕೇಳುತ್ತಾರೆ ’ನೀವು ಈ ಬದುಕಿನಲ್ಲಿ ಯಾವ ಯಾವ
ಆಗುಹೋಗುಗಳಿಗೆ, ಯಾವಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆ ಕೂತು
ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ
ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ
ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು
ಯಾವುದನ್ನು ಯಾರನ್ನು ನೆನೆಯುತ್ತೀರಿ?’ ಅಷ್ಟೇ ಅಲ್ಲಿಗೆ ಅವರ ಮೌನ. ನಮ್ಮಲ್ಲಿ
ಪ್ರಶ್ನೆಯ ಉತ್ತರದ ತಾಕಲಾಟ ನಡೆಯುತ್ತಿರುವಾಗಲೇ ಅವರು ಗಂಡು ಹೆಣ್ಣಿನ ಸಂಬಂಧದ ಬಗ್ಗೆ
ಹೇಳ ತೊಡಗುತ್ತಾರೆ. ಹೆಣ್ಣುಗಂಡಲ್ಲಿನ ವಾಂಛೆ, ಒಬ್ಬರಿಗೊಬ್ಬರು
ನಿಷ್ಠರಾಗಿರುತ್ತೇವಂಬ ವ್ಯಂಗ್ಯ, ನಿಷ್ಠೆ ಮತ್ತು ವಾಂಛಲ್ಯದೊಂದಿಗಿನ ಕಿತ್ತಾಟದಲ್ಲೇ
ವ್ಯಕ್ತಿಯೊಬ್ಬ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಚರ್ಚಿಸುತ್ತಾರೆ.

‘No doubt alcohol, tobacco and so forth are things that a saint must
avoid, but sainthood also a thing that human beings must avoid -
George Orwell’ ಎಂದು ಆತ್ಮಕಥನದ ಶುರುವಿನಲ್ಲೇ ಇದೆ, ಇಡೀ ಪುಸ್ತಕ ಓದಾದ ಮೇಲೆ
ಬಹುಶಃ ಲಂಕೇಶರು ತಮ್ಮ ಜೀವನಕ್ಕೆ ಹೊಂದಿಸಿ ಈ ಪದಗಳ ಹುಡುಕಿದ್ದಾರೆನಿಸಿತು.
ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಸುವ, ಇದುವರೆಗೂ ಎಲ್ಲೂ ಕಾಣದ ಲಂಕೇಶರನ್ನು ನನಗೆ
ಪರಿಚಯಿಸಿದ್ದು ’ಹುಳಿ ಮಾವಿನ ಮರ’.


ಮನಸು ಹೇಳಬಯಸಿದೆ……

June 22, 2009

emptyness

ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ
ಕೇಳಿದ್ದೆ, ಅವತ್ತು ನಮಗೆ ಅಂದರೆ ಆ ವರ್ಶದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೆಂಡ್
ಆಫ್ ಕಾರ್ಯಕ್ರಮವಿತ್ತು. ಶಾಲೆಯ ಜೀವನ ಮುಗಿಯ ಹೊರಟಿತ್ತು, ಕಾಲೇಜಿನ ಬಣ್ಣಬಣ್ಣದ
ಬದುಕು ಆ ಕಡೆ ನಿಂತು ಕೈ ಬೀಸಿ ಕರೆಯುತಿತ್ತು. ಎಷ್ಟೇ ಪ್ರಭುದ್ದವಾಗಿ ಆಲೋಚಿಸಿದರೂ,
ಸ್ಕೂಲ್ ಯುನಿಫಾರಂನಲ್ಲಿದ್ದರೆ ನಾವು ಚಿಕ್ಕವರೆಂದೇ ದೊಡ್ಡವರ (?) ಅಭಿಪ್ರಾಯ.
ದಿನಕ್ಕೊಂದು ಬಣ್ಣದ ಬಟ್ಟೆ, ಶಾಲೆಯ ಪ್ರಾರ್ಥನೆ, ಎಕ್ಸರ್ಸೈಸ್ ಗಳಿಂದ ಮುಕ್ತಿ,
ಬೇಕಿದ್ದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯ, ನಿಜಕ್ಕೂ ಕಾಲೇಜೊಂದು ಕಿನ್ನರ ಲೋಕ ಎಂಬ
ಭ್ರಮೆ. ಸಂಭ್ರಮ, ಭಯ, ಬೇಸರಗಳ ಮಿಶ್ರಭಾವದಿಂದ ದಿಗ್ಮೂಢರಾಗಿ, ಒಬ್ಬರಿಗೊಬ್ಬರು ಏನು
ಮಾತಾಡಿಕೊಳ್ಳಬೇಕು ಎಂಬುದೂ ಹೊಳೆಯುತ್ತಿರಲಿಲ್ಲ. ತಮ್ಮ ಕಡೆಯ ಕರ್ತವ್ಯವೆಂಬಂತೆ
ಉಪಧ್ಯಾಯರೆಲ್ಲ, ’ಯಾವ ಕಾಲೇಜ್ ಸೇರ್ತಿ?’ ’ಸೈನ್ಸಾ ಕಾಮರ್ಸಾ?’ ಎಂದು
ಕೇಳುತ್ತಿದ್ದರೆ, ಪಕ್ಕದವಳು ಕಾಮರ್ಸ್ ಅಂದಿದ್ದನ್ನೇ ನಿಷ್ಠೆ ಇಂದ
ಪುನರುಚ್ಚರಿಸಿದ್ದು, ಆಗಿನ್ನು ಸ್ಲಾಮ್ ಬುಕ್ ಗಳ ಅಭ್ಯಾಸವಾಗಿರಲಿಲ್ಲವಾದ್ದರಿಂದ,
ಕಡೆಯ ದಿನದ ಗ್ರೂಪ್ ಫೋಟೋಗೆ ಫೋಸ್ ಕೊಟ್ಟು, ಗುಂಪು ಗುಂಪಾಗಿ ಸಹಪಾಠಿಗಳ ಜೊತೆ
ಶಾಲೆಯಿಂದ ಹೊರಹೊರಟ ಚಿತ್ರ ಮೊನ್ನೆ ಮೊನ್ನೆಯಷ್ಟೇ ನಡೆಯಿತೇನೋ ಎಂಬಂತೆ ಹಸಿಯಾಗಿದೆ.

ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ, ಕಾಲೇಜಲ್ಲಿ ನಾವಂದುಕೊಂಡದ್ದೆಲ್ಲ ಇತ್ತು, ಆದರೆ
ಕೆಲವೇ ದಿನಗಳಲ್ಲಿ ಇಷ್ಟೇನೆ ಅನ್ನಿಸಹತ್ತಿತ್ತು. ಶಾಲೆಯ ಸಹಪಾಠಿಗಳ ನೆನಪು
ಮಾಸತೊಡಗಿತ್ತು. ಹೊಸ ಗೆಳತಿ/ಗೆಳೆಯರು ಅದಾಗಲೇ ಹಳಬರಾಗ ತೊಡಗಿದ್ದರು. ಕ್ಲಾಸ್ ಬಂಕ್
ಮಾಡುವುದು, ಸಿನಿಮಾ ನೋಡುವುದು, ದುಡ್ಡಿಗಾಗಿ ಮನೆಯಲ್ಲಿ ಸುಳ್ಳು ಹೇಳುವುದು ಯಾವುದೂ
ತಪ್ಪೆನಿಸದ ಮಟ್ಟಿಗೆ ಒಗ್ಗಿ ಹೋಗಿತ್ತು. ಕನ್ನಡ ಟೀಚರ್ ಹೇಳಿದ್ದ ಪದ್ಯವನ್ನು ಕಂಠಪಾಠ
ಮಾಡಿ, ರಾಗವಾಗಿ ಒಪ್ಪಿಸುತ್ತಿದ್ದಾಗಿನ ಮುಗ್ಧತೆ ಅದೆಲ್ಲೋ ಕಾಣದಂತೆ ಕಳೆದು
ಹೋಗಿತ್ತು. ಗೆಳತಿಯರ ಗುಂಪಲ್ಲಿನ ತರಲೆಗಳು, ಇಷ್ಟಿಷ್ಟೇ ಮಾತಿಗೂ ಇಷ್ಟಗಲ ನಗು,
ಕ್ಯಾಂಪಸ್ಸಿನಲ್ಲಿ ಹಾದು ಹೋಗುತ್ತಿದ್ದರೆ ಬೆನ್ನಿಗೇ ಅಂಟಿಕೊಂಡಂತೆನಿಸುತ್ತಿದ್ದವನ
ಕಣ್ಣುಗಳು, ಕಾಲೇಜಿನ ಪುಸ್ತಕಗಳಲ್ಲಿನ ಪಾತ್ರಗಳು, ರಂಗು ರಂಗೆನಿಸಿದ್ದ ಕಾಲೇಜ್ ಡೇ,
ಕಡೆಗೂ ಸೀರೆ ಉಡಿಸಿದ ಎತ್ನಿಕ್ ಡೇ, ಬಹುಮಾನ ತಂದುಕೊಟ್ಟ ಪ್ರಬಂಧ ಸ್ಪರ್ಧೆ,
ಅರ್ಧಕ್ಕೆ ಓಡಿ ವಾಪಸ್ ಬಂದ ರನ್ನಿಂಗ್ ರೈಸ್ ಕಾಂಪಿಟೇಶನ್ನು, ಹಹ್! ಮುಗಿಯದ
ನೆನಪುಗಳು. ಅಷ್ಟೇ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಅಂತಾರಲ್ಲ ಹಾಗೆ ಮುಗಿದು
ಹೋಗಿತ್ತು ಪಿ.ಯು.ಸಿ ಯ ಎರಡು ವರ್ಷ.

ಮತ್ತೊಂದು ಫೇರ್ ವೆಲ್. ಇಡೀ ವರ್ಷದ ತರಲೆಗಳನ್ನು ನೆನಪಿಸಿಕೊಳ್ಳುತ್ತ,
ದೂರವಾಗುತ್ತಿರುವುದಕ್ಕೆ ಬೇಸರಿಸಿಕೊಳ್ಳುತ್ತಾ, ಮತ್ತೆ ಸಿಗಬೇಕೆಂದು ಒಬ್ಬರಿಗೊಬ್ಬರು
ಆಜ್ಞಾಪಿಸುತ್ತಾ. ಚಿತ್ರ ವಿಚಿತ್ರವಾಗಿ ಸ್ಲಾಮ್ ಬುಕ್ ಗಳನ್ನು ತುಂಬಿಸುತ್ತಾ
ಸಂಭ್ರಮಿಸುತ್ತಿದ್ದೆವು. ಪದವಿ ಓದಲು ಹೊರಟಿದ್ದವರು, ಮದುವೆಯಾಗ ಹೊರಟಿದ್ದವರು,
ಮತ್ತಿತರ ಕೋರ್ಸ್ ಗಳಿಗೆ ಸೇರಬೇಕೆಂದಿದ್ದವರು, ಕೆಲಸ ಮಾಡುತ್ತೇನೆನ್ನುತ್ತಿದ್ದವರು,
ಹೀಗೆ ಪ್ರತಿಯೊಬ್ಬರ ಅಭಿಪ್ರಾಯವೂ ಕೇಳಿ, ಹಿಂದಿನ ಹಾಗೇ ಅದರಲ್ಲೊಂದು ಪುನರುಚ್ಚರಿಸಿ
ಪಿ.ಯು.ಸಿ. ಮುಗಿಸಿದ್ದಾಯ್ತು.

ಪದವಿ ಸೇರಿದ ಮೇಲೆ ಕ್ಲಾಸುಗಳಿಗೆ ಹಾಜರಾಗಲು ಇನ್ನಷ್ಟು ಸೋಂಬೇರಿತನ. ದಿನವೂ ತಪ್ಪದೇ
ಕಾಲೇಜಿನ ಕ್ಯಾಂಪಸ್ಸಿನಲ್ಲಿರುತ್ತಿದ್ದ ನಾವು, ಕ್ಲಾಸುಗಳಿಗಂತೂ ತೀರ ಅಪರೂಪ.
ಕ್ಯಾಂಟೀನ್ ನಲ್ಲಿ, ಥೇಟರಿನಲ್ಲಿ, ಗೆಳೆಯ ಗೆಳತಿಯರ ಮನೆಗಳಲ್ಲೇ ನಮ್ಮ ಓದು
ಸಾಗುತ್ತಿದ್ದಿದ್ದು. ಪರೀಕ್ಷೆ ಹಿಂದಿನ ದಿನ ಒಂದು ನಿಮಿಷವೂ ಹಾಳು ಮಾಡದೇ
ನಿಷ್ಠೆಯಿಂದ ಓದಿ ಅಷ್ಟೇ ನಿಷ್ಠೆಯಿಂದ ಅಲ್ಲಿ ಇಲ್ಲಿ ಕಾಪಿ ಮಾಡಿ ಬರೆದು ಅದು ಹೇಗೋ
ಪಾಸ್ ಮಾಡಿ ಮುಂದಿನ ಸೆಮಿಸ್ಟರಿಗೆ ಹಾರುತ್ತಿದ್ದೆವು. ನಮ್ಮ ಲೆಕ್ಕಾಚಾರ ಚೂರು
ತಪ್ಪಾಗಿದ್ದಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ಸೆಮಿಸ್ಟರ್ ನಲ್ಲಿ ಒಂದೋ ಎರೆಡೋ
ವಿಷಯಗಳು ಉಳಿದುಕೊಳ್ಳುವುದು, ಊಟ ತಿಂಡಿಯಷ್ಟೇ ಸಹಜವೆಂಬುದು ನಮ್ಮೆಲ್ಲರ ಒಮ್ಮತದ
ಅಭಿಪ್ರಾಯವಾಗಿಬಿಟ್ಟಿತ್ತು. ಹಾಗೂ ಹೀಗೂ ಕಡೆಯ ಸೆಮಿಸ್ಟರು ಮುಟ್ಟಿ, ಪರೀಕ್ಷೆಗಳನ್ನು
ಮುಗಿಸಿ ಹೊರಬಂದರೆ, ಮನಸ್ಸು ಮತ್ತೊಮ್ಮೆ ವಿದಾಯ ಹೇಳಲು ತಯಾರಾಗುತ್ತಿತ್ತು. ’ಫೋನ್
ಮಾಡ್ತಿರು, ಮೆಸೇಜ್ ಮಾಡ್ತಿರು, ಮೇಲ್ ಮಾಡ್ತಿರು, ಟಚ್ ನಲ್ಲಿರು’ ಎಲ್ಲವೂ
ಹೇಳಿಕೊಂಡಿದ್ದಾಯ್ತು, ಕಡೆಯ ಭೇಟಿಯ ಸೆಲೆಬ್ರೇಶನ್ ಎಂಬಂತೆ ಒಂದು ಸಿನಿಮಾ ನೋಡಿ
ಬಂದ್ವಿ. ಗುಂಪು ಚದುರಿತು. ಮನಸು ಹೇಳಬಯಸಿದ್ದ ನೂರೊಂದು ಮಾತೂ, ಮೌನದಲ್ಲೇ
ವ್ಯಕ್ತವಾಗುತ್ತಿತ್ತು.


ಅವಳು-ಇವಳು

ಏಪ್ರಿಲ್ 18, 2009

scan0009

(ಚಿತ್ರ ಕೃಪೆ: ಮಂಜುನಾಥ್ .ಎಸ್ .ರೆಡ್ಡಿ )

ಅವಳು: ನಿನಗೆ ಬುದ್ದಿ ಇದೀಯ? ಅಷ್ಟು ಮಗುಮ್ಮಾಗಿ ಇದ್ದೆ ಕಾಲೇಜ್ ದಿನಗಳಲ್ಲಿ. ಏನ್
ಬಂದಿದ್ದಿದ್ದು ನಿನಗೆ? ಯಾಕೆ ಹೀಗಾಗಿ ಹೋದೆ?

ಇವಳು: ಏನಾಯ್ತು ಅಂತ ಹೀಗ್ ಕೂಗಾಡ್ತಿದೀಯೆ? ಕೂಲ್ ಡೌನ್.

ಅವಳು: ಇನ್ನು ಏನಾಗ್ಬೇಕು ಅಂತ ಇದೀಯ ಹೇಳು? ಈ ಫೋಟೋಗಳನ್ನ ನೋಡಿದ್ಯ? ಕರ್ಮ, ಅಸಹ್ಯ ಅನಿಸೋಲ್ವೇನೆ ನಿನಗೆ ಇದನ್ನೆಲ್ಲ ಮಾಡೋಕೆ?

ಇವಳು: ಅಸಹ್ಯ ಯಾಕನಿಸ್ಬೇಕು? ಅದೆಲ್ಲ ಗ್ಲಾಮರ್ ಲೋಕದಲ್ಲಿ ಸಹಜ. ಅದಕ್ಕಿಂತಲೂ ಕಡಿಮೆ
ಬಟ್ಟೆಯಲ್ಲಿ ಫೋಸ್ ಮಾಡೋರಿದಾರೆ ಗೊತ್ತ? ತೋರಿಸ್ಲ?

ಅವಳು: ಬೇಡಮ್ಮ ಇದನ್ನೆ ನೋಡಿ ಅರಗಿಸ್ಕೋಳೋಕೆ ಆಗದೆ ಸಾಯ್ತಿದೀನಿ. ಅಲ್ವೆ ಯಾರ್ಯಾರೋ ಮಾಡ್ತಾರೆ ಅಂತ ನೀನು ಮಾಡ್ಬಿಡೋದ? ನಿನ್ನ ಮನಸಿಗೆ ಇದೆಲ್ಲ ತಪ್ಪು ಅನ್ನಿಸೋಲ್ವ?

ಇವಳು: ಹ್ಹ ಹ್ಹ! ತಪ್ಪ? ಅದು ಹೇಗೆ ತಪ್ಪಾಗುತ್ತೆ? ನನ್ನ ಮೈ ನನ್ನಿಷ್ಟ.

ಅವಳು: ಮೈ ನಿನ್ನದಾದ್ರೆ, ಏನಾದ್ರು ಮಾಡಬಹುದು ಅನ್ಕೊಂಡಿದೀಯ? ಮಾನ ಮರ್ಯಾದೆ
ಅನ್ನೋದು ಇರುತ್ತೆ. ಅದರ ಹೆಸರು ನೆನಪಿದೆಯ?

ಇವಳು: ಮರ್ಯಾದೆಯ ಲಿಮಿಟ್ಸ್ ಎಲ್ಲಿವರ್ಗೂ ಹೇಳು? ಸೀರೆನಲ್ಲಿ ಕಾಣೋ ಸೊಂಟ
ತೋರ್ಸೋವರ್ಗೂ ಅಷ್ಟೇ? ಅಲ್ವ? (ನಗುತ್ತಾಳೆ)

ಅವಳು: (ಹತಾಶಳಾಗಿ) ನಿನಗೆ ನಿಜವಾಗ್ಲು ಏನೂ ಅನ್ನಿಸೋದೆ ಇಲ್ವ? ನಗ್ತಿದೀಯ.

ಇವಳು: ಸರಿ ನೀನೆ ಹೇಳಮ್ಮ ನನಗೇನನಿಸ್ಬೇಕು, ಇದನ್ನೆಲ್ಲ ಬಿಟ್ಬಿಡ್ಲ? ನಿನ್ನ ಪ್ರಕಾರ
ಈಗಾಗ್ಲೆ ನನಗೆ ಮರ್ಯಾದೆ ಹೋಗಿ ಆಗಿದೆಯಲ್ಲ, ಬಿಟ್ಟು ಬಿಟ್ಟರೆ ಹೋದ ಮಾನ ವಾಪಸ್ ಬಂದು
ಬಿಡತ್ತ? ಪರ್ವಾಗಿಲ್ವೆ ಬಲೇ ಫ್ಲೆಕ್ಸಿಬಲ್ ನಿನ್ನ ಈ ಮಾನ ಮರ್ಯಾದೆಗಳು!!

ಅವಳು: ತಮಾಶೆ ಮಾಡ್ಬೇಡ ನಾನು ತುಂಬಾ ಸೀರಿಯಸ್ ಆಗಿ ಹೇಳ್ತಿದೀನಿ.

ಇವಳು: ಇದರಲ್ಲಿ ಸೀರಿಯಸ್ ಆಗೋ ಅಂತದ್ದು ಏನಿದೆ ಡಿಯರ್? ನನಗೆ ಅರ್ಥವಾಗ್ತಿಲ್ಲ.

ಅವಳು: ಯಾವುದರ ಬಗ್ಗೆನೂ ಭಯವೇ ಇಲ್ವೇನೆ ನಿನಗೆ, ಸಮಾಜ, ಅಪ್ಪ-ಅಮ್ಮ?

ಇವಳು: ಅಲ್ಲಿ ಇರೋದು ಪ್ರಾಬ್ಲಮ್, ಯಾಕಿರ್ಬೇಕು ಭಯ? ಕೆಲಸವಿಲ್ಲದೆ ಅಲೀತಿದ್ದಾಗ
ನಿನ್ನ ಸಮಾಜವೇ ನನಗೆ ಈ ದಾರಿ ತೋರ್ಸಿದ್ದು. ಇನ್ನು ಅಪ್ಪ-ಅಮ್ಮ, ಒಂದೆರೆಡು ದಿನ
ಕೂಗಾಡಿದ್ರು, ಈಗವರಿಗೆ ಅಭ್ಯಾಸವಾಗಿ ಹೋಗಿದೆ.

ಅವಳು: ಆತ್ಮ ಸಾಕ್ಷಿ ಅನ್ನೋದಿರತ್ತಲ್ವ ಅದಕ್ಕಾದ್ರು ಹೆದರಬೇಕಿತ್ತು ನೀನು.

ಇವಳು: ಫಿಲ್ಮ್ ಡೈಲಾಗ್ ಗಳು ಹೊಡೀಬೇಡ. ನಾನು ಯಾರನ್ನು ಮೋಸ ಮಾಡಿ ಸಂಪಾದಿಸ್ತಿಲ್ಲ.
ಇದು ನಾನು ಕಷ್ಟ ಪಟ್ಟು ದುಡಿತಿರೋ ದುಡ್ಡು.

ಅವಳು: ಕಷ್ಟಪಟ್ಟು?! ಹ್ಹ ಹ್ಹ!! ಕಾಣಿಸ್ತಿದೆ ನಿನ್ ಕಷ್ಟ!

ಇವಳು: ನಿನಗೆ ಹಾಗನ್ಸೋದು ಸಹಜ ಬಿಡು. ನಿಂದಿನ್ನೂ ಹಳ್ಳಿ ಬುದ್ದಿ. ಇದು ಸೂಪರ್ ಫಾಸ್ಟ್ ಯುಗ ಕಣೇ, ಅವಕಾಶಗಳು ಸಿಕ್ಕಾಗ ಎನ್ ಕ್ಯಾಶ್ ಮಾಡಿಕೊಳ್ಬೇಕು.

ಅವಳು: ಹೇಗಾದ್ರು ಸರಿ ಅಲ್ವ?

ಇವಳು: ಹ್ಮ್ ಸರೀನೆ. ನಮಗೆ ಸರಿ ಇದ್ದದ್ದು ಎಲ್ಲರಿಗೂ ಸರಿ ಕಾಣ್ಬೇಕು ಅಂತೇನು ಇಲ್ಲ ಅಲ್ವ. ನನಗಿಂತ ಕೆಳಗಿಳಿದು ಸಂಪಾದಿಸ್ತಿರೋ ಹುಡ್ಗೀರಿದಾರೆ, ಅವ್ರಿಗೆ ಹೋಲಿಸ್ಕೊಂಡ್ರೆ ನಾನು ಬೆಟರ್ ಅಂತ ನನ್ನ ಭಾವನೆ. ಫಿಲ್ಮ್ ಗಳಲ್ಲಿ ಹಿರೋಯಿನ್ ಗಳು ಇದೇ ಕೆಲ್ಸ ಮಾಡಿದ್ರೆ, ನೀನೂ ಕಣ್ ಕಣ್ ಬಿಟ್ಟು ನೋಡ್ತಿಯ, ನಿನ್ನ ಗೆಳತಿ ಮಾಡಿದ್ರೆ ಸಹಿಸೋಕಾಗೊಲ್ವ?

ಅವಳು: ಹಾಗಲ್ವೆ, ನಿನ್ನ ಬಗ್ಗೆ ಜನರ ಅಭಿಪ್ರಾಯ ಏನಿರಬಹುದು ಅಂತ ಯೋಚನೆ ಮಾಡಿದೀಯ? ನಿನ್ನಂತಹ ಯೋಚನೆ ಹೊಂದಿರೋ ಹುಡ್ಗೀರ್ಗೆ ಸಮಾಜದಲ್ಲಿ ಯಾವ ಸ್ಥಾನವಿದೆ ಅಂತ ಗೊತ್ತಿದೆಯ? ಯಾಕೆ ಹೀಗೆ ನಿನ್ನ ಭವಿಷ್ಯದ ಜೊತೆ ಆಟವಾಡ್ತಿದೀಯ?

ಇವಳು: ಜನರ ಅಭಿಪ್ರಾಯ ಕಟ್ಕೊಂಡು ನನಗೆ ಆಗಬೇಕಿರೋದು ಏನೂ ಇಲ್ಲ. ಹಣವಿಲ್ಲದ
ಬಿಕಾರಿಗಳಿಗೆ ನಿನ್ನ ಸಮಾಜವೇನು ಮಣೆ ಹಾಕಿ ಪೀಠದ ಮೇಲೆ ಕೂರ್ಸತ್ತ? ಭವಿಷ್ಯದಲ್ಲಿ
ತೊಂದರೆ ಆಗ್ಬಹುದು ಅಂತ ನಾನು ವರ್ತಮಾನವನ್ನ ಬಲಿ ಕೊಡೋಕೆ ಆಗಲ್ಲ.

ಅವಳು: ಸರಿ ಸಮಾಜದ ವಿಷಯ ಬೇಡ, ನಿನ್ನ ಹಿತ ದೃಷ್ಟಿಯಿಂದಲೇ ನೋಡು, ನೀನು ಹೀಗೆಲ್ಲ
ಮಾಡೋದ್ರಿಂದ ಎಷ್ಟು ಸುರಕ್ಷಿತವಾಗಿರಬಲ್ಲೆ?

ಇವಳು: ಪೇಪರ್ ಓದ್ತೀಯ?

ಅವಳು: ಇದೆಂತ ಪ್ರಶ್ನೆ?

ಇವಳು: ಅಲ್ಲ ನ್ಯೂಸ್ ಗಳೆಲ್ಲ ನೋಡಲ್ವ ನೀನು, ನಾಲ್ಕು ವರ್ಷದ ಹುಡುಗಿ, ಅವಳ
ಟೀಚರ್ನಿಂದ ಅತ್ಯಚಾರಕ್ಕೊಳಗಾಗಿದ್ಲು. ಅರವತ್ತೇಳು ವರ್ಷದ ಮುದುಕಿ ಪಾಪ ಸಾಯೋ
ವಯಸ್ಸು, ಮೂವತ್ತು ವರ್ಷದ ಗಂಡಸೊಬ್ಬ ಅತ್ಯಚಾರ ಮಾಡಿದ್ದ. ಇವತ್ತಿಗೂ ಹಳ್ಳಿಗಳಲ್ಲೇ
ನಗರಗಳಿಗಿಂತ ಅತ್ಯಚಾರದ ಸಂಖ್ಯೆ ಹೆಚ್ಚು. ಮೈ ಮುಚ್ಚಿಕ್ಕೊಂಡ ಮಾತ್ರಕ್ಕೆ
ಸುರಕ್ಷಿತವಾಗಿರ್ಬಹುದು ಅಂತೀಯ? ಇದನ್ನ ನಾನು ಮಾಡದಿದ್ರೆ, ಇನ್ನೊಬ್ಳು ಯಾರಾದ್ರು
ಮಾಡ್ತಾಳೆ, ನೋಡೋ ಕಣ್ಣಿಗೆ ಎರಡೂ ಒಂದೆ, ಅಲ್ಲಿ ಕಾಣೋದು ಬೆತ್ತಲು ಮಾತ್ರ! ಮುಖ
ಅಲ್ಲ.

ಅವಳು: ನನಗೆ ಕಾಣೋದು ಬೆತ್ತಲಾಗುತ್ತಿರುವ ನಿನ್ನ ವ್ಯಕ್ತಿತ್ವ. ನಿನ್ನ ಅಪ್ಪ
ಅಮ್ಮನಿಗೆ ಕಾಣೋದು ನಿನ್ನ ಮೈ ಅಲ್ಲ, ಅದರಿಂದೆ ಇರುವ ಅವರ ಅಸಹಾಯಕತೆ. ನಿನ್ನ
ಅಂತರಂಗಕ್ಕೆ ಕಾಣುವುದು ನಿನ್ನ ಆತ್ಮಸಾಕ್ಷಿಯ ಕೊಲೆ!

ಇವಳು: ಏನೇ ಆದರೂ ನಾನೀಗ ಹಿಂದೆ ಬರೋದಿಕ್ಕಾಗುಲ್ಲ. ನೀನು ನನ್ನ ಹತ್ರ ವಾದಿಸಬೇಡ. ಸುಮ್ಮನೋಗು.

ಅವಳು: (ಮೌನ)


ಸ್ವ-ಗತ

March 18, 2009

breakup1ನಿನಗೆ ನಿಜವಾಗಿ ತಿಳಿಯಲಿಲ್ವ? ನಾಟಕ ಮಾಡುತ್ತಿದ್ದ? ಅಷ್ಟೊಂದು ಚಡಪಡಿಸಿ ಹೋಗ್ತಿದ್ದೆ ನಿನಗೋಸ್ಕರ. ತಮಾಷೆ ನಿನಗೆ. ಊರವರಿಗೆಲ್ಲ ತಿಳಿಯೋದು ನಿನಗೆ ಮಾತ್ರ ಗೊತ್ತಾಗಲಿಲ್ಲ ಕಡೇವರ್ಗೂ. ನೀನು ಎರಡು ಮೂರು ದಿನ ಕಾಣಲಿಲ್ಲವೆಂದ್ರೆ, ನಿನ್ನೊಂದಿಗೆ ಜಗಳವಾಡಿ ಅಳುಮುಖ ಮಾಡ್ಕೊಂಡು ಮೊಂಡು ಹಿಡೀತಿದ್ನಲ್ಲ? ಅದೆಷ್ಟು ತಾಳ್ಮೆಯಿಂದ ಸಮಾಧಾನ ಮಾಡ್ತಿದ್ದೆ. ನಿನ್ನ ಮುಂದೆ ಮಗುವಾಗಿಬಿಡ್ತಿದ್ದೆನಲ್ಲ, ನಿಜ ಹೇಳು ನಿನಗೆ ಮುದ್ದು ಬರ್ತಿರ್ಲಿಲ್ವ ನನ್ಮೇಲೆ? ಅದೆಷ್ಟು ಕಾದೆ ಕಣೋ!!! ಕಾಯೋದ್ರಲ್ಲೂ ಸುಖವಿದೆ ಅಂತಾರೆ. ಅದೇನು ಸುಖವಿದೆ ಮಣ್ಣು. ಬರೀ ಕಾದದ್ದಷ್ಟೇ. ಶಬರಿ ಕತೆ ನನಗೆ ಹೆಚ್ಚು ಇಷ್ಟವಾಗ ತೊಡಗಿದ್ದೇ ಆಗ. ನೂರು ಶಬರಿಗಳನ್ನ ಮೀರಿಸುವಂತಿತ್ತು ನನ್ನ ನಿರೀಕ್ಷೆ. ಪ್ರತಿ ದಿನ, ಪ್ರತಿ ಕ್ಷಣ ನಿನ್ನ ಬಾಯಿಂದ ಆ ಮಾತು ಬರುತ್ತೆ, ಇದೀಗ ನನ್ನ ಮುಂದೆ ಮಂಡಿಯೂರಿ ’ನನ್ನ ಮದ್ವೆ ಮಾಡ್ಕೋತೀಯೇನೆ? ನಾನು ನಿನ್ನ ತುಂಬ ತುಂಬಾ ಪ್ರೀತಿಸ್ತೀನಿ’ ಅಂತ ಹೇಳಿಬಿಡ್ತೀಯ. ನನ್ನ ಪ್ರೀತಿ, ನಿರೀಕ್ಷೆ, ಕನಸುಗಳಿಗೆಲ್ಲ ಸಾರ್ಥಕತೆ ದೊರಕಿಸಿಕೊಡ್ತೀಯ. ಇನ್ನೇನು ನೀನು ನನಗೆ ಸಿಕ್ಕೇ ಬಿಡ್ತೀಯ. ಕಣ್ಣಲ್ಲಿ ನೂರು ನಕ್ಷತ್ರಗಳ ಮಿಂಚು. ಮುಖಕ್ಕೆ ನಾಚಿಕೊಳ್ಳಲು ಕಾತರ, ಬಾಹುಗಳಿಗೆ ನಿನ್ನಲ್ಲಿ ಇಷ್ಟಿಷ್ಟೇ ಒಂದಾಗಿಬಿಡುವ ಬಯಕೆ. ಅದೆಷ್ಟು ರಾತ್ರಿ ನನ್ನ ಕನಸುಗಳನ್ನ ಹೀಗೆ ಆಳಿದ್ದೀಯೋ ನೀನು

ಕಾಲ ಹಾಗೇ ಇದ್ದು ಬಿಡಬೇಕಿತ್ತು. ಬದುಕಿನ ಕೊನೆ ಕ್ಷಣದವರೆಗೆ ನೀನು ಬರುತ್ತೀಯೆಂದು ಮನದ ಹೊಸ್ತಿಲಿಗೆ ರಂಗೋಲಿಯಿಟ್ಟು ಕಾದು ಬಿಡುತ್ತಿದ್ದೆ. ಉಹೂಂ ಕಾಲವೂ ನಿನ್ನ ಜಾತಿಗೆ ಸೇರಿದ್ದು, ನಿಷ್ಟುರ, ಉರುಳುತ್ತಲೇ ಹೋಯ್ತು. ನನ್ನಲ್ಲಿನ ನಿರೀಕ್ಷೆಗೆ ಇನ್ನಷ್ಟು ರೆಕ್ಕೆ ಪುಕ್ಕ ಕಟ್ಟಿ ಕೊಡುತ್ತ. ನಾನೆಷ್ಟು ಹುಚ್ಚಿ?! ನನಗ್ಯಾಕೆ ಬೇಕಿತ್ತು ನಿನ್ನ ಬಾಯಿಂದಲೇ ಪ್ರೀತಿಸುತ್ತೇನೆ ಎಂದು ಹೇಳಿಸುವ ಹುಚ್ಚು? ನಾನೇ ಬಾಯ್ಬಿಟ್ಟು ಹೇಳಿಬಿಡಬೇಕಿತ್ತು. ಹೇಳಿಬಿಡಬಹುದಿತ್ತ? ಇಲ್ಲ, ಜನ್ಮವಿಡೀ ಅಂಗೈಯಲ್ಲಿ ಜೀವಹಿಡಿದು ಕಾಯುತ್ತಿದ್ದೆನೆ ವಿನಹ ನಿನ್ನ ತೀಕ್ಷ್ಣ ಕಣ್ಣುಗಳನ್ನೆದುರಿಸಿ ನನಗಂತು ಹೇಳಲು ಸಾಧ್ಯವೇ ಇರಲಿಲ್ಲ ಬಿಡು.

ಅದೊಂದು ದಿನ ನನ್ನೆಲ್ಲ ಸಂಭ್ರಮವನ್ನು ಗರಿಗೆದರಿಸಿ ನಿಲ್ಲಿಸಿದ್ದೆ. ’ಮನೆಗೆ ಬರುತ್ತೇನೆ. ನಿಂಜೊತೆ ಮಾತಾಡಬೇಕು. ಮುಂದಿನವಾರ ಯು.ಕೆಗೆ ಹೊರಡುತ್ತಿದ್ದೀನಲ್ಲ. ಹಾಗೆ ನಿನಗೊಂದು ಸರ್ಪ್ರೈಸ್ ಇದೆ’ ಅದೆಷ್ಟು ಸಾರಿ ನೆನಸಿಕೊಂಡು ಪುಳಕಿತಳಾದೆನೋ ನನಗೇ ಗೊತ್ತು. ನಿನ್ನ ಮಾತುಗಳಲ್ಲಿ ಅದೇನು ರೊಮ್ಯಾಂಟಿಸಿಸಂ ಇತ್ತು ಅಂತ? ನಿನ್ನ ಯಾವತ್ತಿನ ತಣ್ಣಗಿನ ದನಿಯಲ್ಲೇ ಹೇಳಿದ್ದೆ. ಆದರೂ ಮನಸು ಹುಚ್ಚು ಕುದುರೆ. ಕಣ್ಗಳು ಮತ್ತೆ ಕನಸುಗಳಿಂದ ಬಣ್ಣ ಬಣ್ಣ. ಖುಷಿಯಿಂದ ಮನೆಯೆಲ್ಲ ಓಡಾಡಿಬಿಟ್ಟೆ. ನಿನಗಿಷ್ಟದ ಬಣ್ಣದ ಸೀರೆ, ತುಸು ಹೆಚ್ಚು ಮೇಕಪ್ಪು. ಹಹ್ ಹುಚ್ಚಿ!

ನನ್ನೆದೆಯಲ್ಲಿ ಬಿರುಗಾಳಿಯ ತರಂಗಗಳೇಳುತ್ತಿತ್ತು. ನೀನು ಸಂಜೆಯ ತಂಗಾಳಿಯಂತೆ, ಕಣ್ಣುಗಳಲ್ಲಿ ಅದೇ ತೀಕ್ಷ್ಣತೆ, ಸೂರ್ಯನನ್ನೇ ಹಿಡಿದಿಟ್ಟುಕೊಂಡಿದಿಯೇನೋ ಎಂಬಂತೆ. ತನ್ನ ಹೆರಿಗೆಯ ಅಂತಿಮ ಕ್ಷಣದ ಉತ್ಕಟ ನೋವಿನಲ್ಲೂ, ಬರಲಿರುವ ಮಗುವಿನ ಬಗ್ಗೆ ಸಂತಸಗೊಳ್ಳುವ ತಾಯಿಯಂತೆ, ನಿನ್ನಗಲಿಕೆಯ ಸಂಕಟದ ಜೊತೆ ನೀನು ಕಡೆಗೂ ನನ್ನ ನಿರೀಕ್ಷೆ ನಿಜ ಮಾಡುತ್ತೀ ಎಂದು ಕಾದೆ. ನಿನ್ನ ಬಾಯಿಂದ ಕೊನೆ ಮಾತು ಬರುವವರೆಗೂ ಕಾಯುತ್ತಲೇ ಇದ್ದೆ.

ಎಲ್ಲವೂ ಎಷ್ಟು ಸಲೀಸಿತ್ತು ನಿನಗೆ ಯಾವುದರ ಬಗ್ಗೆಯೂ ಕನ್ ಫ್ಯೂಶನ್ಸ್ ಇಲ್ಲ, ಎಲ್ಲವೂ ಕರಾರುವಾಕ್, ನಿಚ್ಚಳ! ಸ್ಪಷ್ಟ! ಐದು ವರ್ಷದ ಯುಕೆ ಟ್ರಿಪ್, ರಾಜು ಅಂಕಲ್ ಮಗಳಿಗೆ ಅಲ್ಲೇ ಕೆಲಸವಿರುವುದರಿಂದ, ಇನ್ನೆರೆಡು ದಿನಕ್ಕೆ ನಿಮ್ಮಿಬ್ಬರ ಮದುವೆ. ಐದು ವರ್ಷದ ನಂತರ ಭಾರತಕ್ಕೆ ವಾಪಾಸ್, ಆಮೇಲೆ ಇಲ್ಲೊಂದು ಕಂಪನಿ ತೆರೆಯುವ ಯೋಚನೆ. ಅದಕ್ಕೆ ರಾಜು ಅಂಕಲ್ ಇನ್ವೆಸ್ಟ್ ಮೆಂಟು. ಅದಕ್ಕೆ ಬದಲಾಗಿ ನೀನವರ ಮಗಳನ್ನು ಮದುವೆಯಾಗುವುದು. ಮ್ಯಾಥ್ಸ್ ಫಾರ್ಮುಲ ಇದ್ದಂತೆ ನಿನ್ನ ಜೀವನವೂ ಅದರ ಲೆಕ್ಕಚಾರವೂ. ಬೆಚ್ಚಿಬಿದ್ದೆ ನಾನು. ಮುಂದೇನು? ನನ್ನ ಆಸೆ ನಿರೀಕ್ಷೆ ಕನಸುಗಳನ್ನು ಕೊಲ್ಲುವ ಹಕ್ಕು ನಿನಗಿಲ್ಲ ಎಂದು ನಿನ್ನ ಕತ್ತಿನ ಪಟ್ಟಿ ಹಿಡಿದು ಕೇಳಬೇಕೆನಿಸಿತು. ಸತ್ತ ನಗುವಿನೊಂದಿಗೆ ನಿನಗೆ ಕಂಗ್ರಾಟ್ಸ್ ಹೇಳುವುದು ಬಿಟ್ಟು ನನ್ನ ಕೈಲಿ ಏನು ಹೇಳಲಾಗಲಿಲ್ಲ. ಹೆದರಿದ್ದೆ. ಪ್ರೀತಿಯಂತೆಯೇ ನಿನ್ನ ಮೇಲಿನ ಕೋಪವೂ ಮನಸ್ಸಿನಲ್ಲಿ ಉಳಿದು ಹೋಯ್ತು.

ಕೋಪವೇ ಅನ್ಸುತ್ತೆ ಹಾಗೆ ನನ್ನನ್ನು ಅವನೆಡೆಗೆ ತಿರುಗಿಸಿದ್ದು. ಅವನ ಬೆಚ್ಚನೆಯ ಬಾಹುವಿನಲ್ಲಿ ನಿನ್ನ ಬಿಸುಪು ಹುಡುಕುತ್ತಿದ್ದೆ. ನಿನ್ನನ್ನು ದ್ವೇಷಿಸಬೇಕೆಂದು ಕೊಂಡಾಗಲೆಲ್ಲ ಅವನನ್ನು ಹೆಚ್ಚು ಪ್ರೀತಿಸುವ ನಾಟಕವಾಡುತ್ತಿದ್ದೆ. ನಾಟಕ ಬಯಲಾಗಿ ಹೋಗುತ್ತಿತ್ತು. ಇವನ ಪ್ರೀತಿಯಲ್ಲು ನಿನ್ನದೇ ಛಾಯೆ ಹುಡುಕುತ್ತಿದ್ದೆ, ಕೆದಕಿ ಕೆದಕಿ. ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆನೆಂದರೆ ದ್ವೇಷವನ್ನು ಪ್ರೀತಿಯಿಂದಷ್ಟೇ ಮಾಡಲು ಸಾಧ್ಯವಿತ್ತು! ನನ್ನ ಎದೆಗೆ ತಲೆ ಹಚ್ಚಿ ಆಲಿಸುತ್ತಿದ್ದ ಅವನು. ತನ್ನ ಪ್ರೀತಿಯ ಸ್ವರ ಹುಡುಕುತ್ತಿದ್ದಾನೆಂದುಕೊಂಡೆ. ಆದರೆ ಅವನ ಅನುಮಾನದ ಕಿವಿಗಳು ನಿನ್ನದೆ ಕಂಪನಗಳನ್ನು ಹುಡುಕುತ್ತಿದ್ದವು. ನೋಡು ಅವನಲ್ಲೂ ಮುಚ್ಚಿಡಲಾರದೇ ಹೋದೆ ನಿನ್ನ ಪ್ರೀತಿಯನ್ನು. ನಾ ಹೇಳದೆ ಎಲ್ಲವು ತಿಳಿದುಕೊಂಡು ಬಿಟ್ಟ. ತಿಳಿಯದೇ ಹೋಗಿದ್ದು ನಿನಗೆ ಮಾತ್ರ.

ಅವನಿಂದ ದೂರಾದ ಮೇಲೆ ಮತ್ತೆ ನನ್ನೊಡನುಳಿದದ್ದು ನಿನ್ನವೇ ನೆನಪುಗಳು. ಅವಷ್ಟೇ ಸಾಕೆಂದು ಎದೆಗವಚಿಕೊಂಡು ಬದುಕತೊಡಗಿದೆ. ನನ್ನ ಶಾಂತ ಸರೋವರದಂತಹ ಬದುಕಿಗೆ ಕಲ್ಲೆಸದ ಹಾಗೆ ನೀನೇಕೆ ಮತ್ತೆ ಬಂದು ಬಿಟ್ಟೆ? ನನಗೆ ನಿನ್ನ ನೆನಪುಗಳೊಂದಿಗೇ ಪ್ರೀತಿ ಬೆಳೆದುಬಿಟ್ಟಿತ್ತು. ಅವೇ ನೀನು, ಅಲ್ಲ ನನಗೇ ಬೇಕಿದ್ದ ನೀನು ಅಂದುಕೊಂಡು ಪ್ರೀತಿಸುತ್ತ ಬದುಕುತ್ತಿದ್ದೆ. ’ಇಲ್ಲ! ಅದು ನಾನಲ್ಲ’ ಎನ್ನುವುದನ್ನು ಸಾಬೀತು ಮಾಡಲೇ ಬಂದೆಯಾ? ಅಷ್ಟು ವರ್ಷಗಳ ನಂತರ ಮತ್ತೆ ನಿರೀಕ್ಷೇ. ಕಣ್ಣರಳಿಸಿ, ಕಿವಿ ನಿಮಿರಿಸಿ ಕೂತಿದ್ದೆ. ನಿನ್ನದು ಅದೇ ತಣ್ಣಗಿನ ಧ್ವನಿ. ’ಅವಳಿಗೆ ಇಷ್ಟವಿರಲಿಲ್ಲವೆಂದಲ್ಲ. ಇನ್ನೊಬ್ಬನಾರೋ ನನಗಿಂತ ಇಷ್ಟವಾದ ಅದಕ್ಕೆ ಡಿವೋರ್ಸ್ ಮಾಡಿದಳು. ನಿನಗೂ ಗಂಡನಿಲ್ಲ, ನಾನು ಹೆಂಡ್ತಿಯನ್ನು ಬಿಟ್ಟಿದ್ದೀನಿ. ಇಬ್ಬರೂ ಜೊತೆಗಿರೋಣ್ವ?’ ಅದೇ ಕರಾರುವಾಕ್ಕು ಮಾತುಗಳು. ನೋ ಕನ್ ಫ್ಯೂಶನ್ಸ್. ಹಳೆಯ ಲೆಕ್ಕಚಾರದ ಬುದ್ದಿ.

ನಗು ಬಂದುಬಿಡ್ತು ನನಗೆ. ನನ್ನ ಪೆದ್ದುತನಕ್ಕೋ, ನಿನ್ನ ವ್ಯವಹಾರದ ಮಾತುಗಳಿಗೋ ಗೊತ್ತಿಲ್ಲ. ಹೇಗೋ ಸಾಧ್ಯ? ಅಷ್ಟು ದಿನದ ನನ್ನ ನಿರೀಕ್ಷೆಗೆ, ಪ್ರೀತಿಗೆ ನಿನ್ನಲ್ಲಿ ಸಿಗುವ ಸ್ಥಾನ ಇದೇ ಎಂದು ತಿಳಿದ ಮೇಲೂ ನಿನ್ನ ಆಫರ್ ಹೇಗೆ ಒಪ್ಪಿಕೊಂಡುಬಿಡಲಿ? ಈಗ ನಿನಗಿಂತ ಹೆಚ್ಚಾಗಿ ನನ್ನೊಂದಿಗಿರುವ ನನಗಿಷ್ಟವಾಗುವ ನಿನ್ನ ನೆನಪುಗಳನ್ನೆ ಪ್ರೀತಿಸ್ತಿದೀನಿ. ನಿನ್ನನ್ನು ಒಪ್ಪಿಕೊಂಡು ಬಿಟ್ಟರೆ ಅವಕ್ಕೆ ಅವಮಾನವಾದಂತಲ್ಲವೇ? ನನ್ನ ಪ್ರೀತಿಯನ್ನು ನಾನು ವ್ಯಾಪರಕ್ಕಿಟ್ಟಿಲ್ಲ. ಪ್ರೀತಿಯಿಲ್ಲದ್ದು ಬರೀ ವ್ಯವಹಾರವಷ್ಟೇ. ಕ್ಷಮಿಸು ನನ್ನ ಕೈಲದು ಸಾಧ್ಯವಿಲ್ಲ.


ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

March 6, 2009

gal2

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, ‘ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ’ ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ
ಸಮಾನತೆ ಬಯಸುವ ನಾವು, ಇತರ ಪುರುಷರಂತೆ ನಮ್ಮನ್ನು ಕಂಡಾಗ ಸ್ತ್ರೀ ಶೋಷಣೆ
ಅಂದುಕೊಂಡುಬಿಡುತ್ತೇವಲ್ಲ? ಸ್ತ್ರೀ ಪುರುಷ ಸಮಾನತೆಯ ಬಗ್ಗೆ ನನ್ನದು ಮೊದಲಿನಿಂದಲೂ
ಗೊಂದಲದ ಅಭಿಪ್ರಾಯಗಳೇ. ಸ್ಪಷ್ಟವಾಗಿ ಏನನ್ನು ತೀರ್ಮಾನಿಸಿಕೊಳ್ಳಲಾಗದೆ
ಚಡಪಡಿಸುತ್ತೇನೆ.

ಮೊನ್ನೆ ಟಿವಿ ಚಾನೆಲ್ ಒಂದರಲ್ಲಿ ವೈಶ್ಯಾವಾಟಿಕೆಯ ಕುರಿತು ಚರ್ಚಿಸುತ್ತಿದ್ದರು.
ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾಜದ ಸ್ವಾಸ್ಥ್ಯ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ವೈಶ್ಯಾವಾಟಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಯುವತಿ, ತಾನು ಸ್ವಇಚ್ಛೆಯಿಂದ ಈ
ಕೆಲಸಕ್ಕೆ ಬಂದಿದ್ದಾಗಿಯೂ, ಇತರ ಎಲ್ಲಾ ಕೆಲಸಗಳಂತೆ ಜೀವನ ನಿರ್ವಹಣೆಗಾಗಿ ತಾನು ಈ
ಕೆಲಸವನ್ನು ಆರಿಸಿಕೊಂಡಿರುವೆ, ತನ್ನ ವೃತ್ತಿಯ ಬಗ್ಗೆ ಪಶ್ಚಾತಾಪವಾಗಲೀ ದುಃಖವಾಗಲೀ
ತನಗೆ ಇಲ್ಲವೆಂದೂ ಹೇಳುತ್ತಿದ್ದಳು. ಚರ್ಚೆ ಮುಂದುವರೆದು ಸಮಾಜದ ಸ್ವಾಸ್ಥ್ಯದ ಬಗ್ಗೆ
ಹೊರಳಿತು. ವೈಶ್ಯಾವಾಟಿಕೆಗೆ ಬಂದವರೆಲ್ಲಾ ತಮ್ಮ ಇಚ್ಛೆಯಿಂದ ಬಂದಿರುವುದಿಲ್ಲ,
ಕೆಲವರನ್ನು ಬಲತ್ಕಾರವಾಗಿ ವೈಶ್ಯಾವಾಟಿಕೆಗೆ ಇಳಿಸುತ್ತಾರೆ. ಅದನ್ನು ಇತರ
ವೃತ್ತಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ವೈಶ್ಯಾವಾಟಿಕೆಯಂತಹ ಕೊಳಕನ್ನು ಒಳಗೊಂಡಿರುವ
ಸಮಾಜದಲ್ಲಿ ಬದುಕುವುದು ಕಳವಳಕಾರಿಯೆಂದೂ, ಅದು ಪೇಯ್ಡ್ ರೇಪ್ (ಹಣನೀಡಿ
ಅತ್ಯಚಾರವೆಸಗುವುದು) ಎಂದು, ಬಲತ್ಕಾರವಾಗಿಯಾಗಲೀ ಸ್ವ ಇಚ್ಛೆಯಿಂದಾಗಲೀ
ವೈಶ್ಯಾವಾಟಿಕೆಯಿಂದ ಸಮಾಜದ ಮೇಲಾಗುವ ಪರಿಣಾಮಗಳು ಯೋಚಿಸುವಂತಹುದ್ದು.
ವೈಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಲೀ, ಒಪ್ಪಿಕೊಳ್ಳುವುದಾಗಲೀ
ಗೊಂದಲದ ವಿಷಯವೇ ಎಂಬ ಕನ್ ಕ್ಲೂಶನ್ ನಿಂದ ಚರ್ಚೆ ಮುಗಿದಿತ್ತು.

ಸ್ತ್ರೀಸ್ವಾತಂತ್ರ್ಯದ ಬಗ್ಗೆ ಅವರ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಅನೇಕ
ಗೊಂದಲಗಳುಂಟಾದವು. ಸಮಾಜದ ಸ್ವಾಸ್ಠ್ಯದ ವಿಷಯ ಬಂದಾಗ ಹೆಣ್ಣಿನ ಜೀವನ ಕ್ರಮವೇ ಅಷ್ಟು
ಪ್ರಾಮುಖ್ಯತೆ ಪಡೆದುಕೊಂಡುಬಿಡುತ್ತದಲ್ಲ? ಗಂಡಸು ಹೇಗಿದ್ದರು ಸಹಿಸುವ ಸಮಾಜ ಹೆಣ್ಣಿನ
ನಡತೆಯಿಂದ, ಆಕೆಯ ಜೀವನಕ್ರಮದಿಂದಲೇ ಅದರ ಆರೋಗ್ಯವನ್ನು ನಿರ್ಧರಿಸಿಕೊಳ್ಳೋದು ಏಕೆ?
ಹೆಣ್ಣಿನ ಹಲವು ನಿಲುವುಗಳಿಗೆ, ಅಭಿಪ್ರಾಯಗಳಿಗೆ ಮೈಲಿಗೆಯ ಆರೋಪ ಹೊರಿಸಿ, ಆಕೆ ಹೀಗೆ
ಇರಬೇಕು ಎಂದು ಅವಳ ಮೇಲೆ ಬಂಧನಗಳನ್ನು ಹೇರಿ ಅವಳ ಮನಸಿನಲ್ಲಿ ತಾನು ಅಬಲೆ
ನಿಸ್ಸಾಹಯಕಳು ಎಂಬತಹ ಭಾವನೆಗಳನ್ನು ಬೆಳೆಸುವ ಸಮಾಜ ಹೆಣ್ಣನ್ನು ಮಾತ್ರ
ನಿಯಂತ್ರಣದಲ್ಲಿಡಲು ಮಾಡಿರುವ ಹೇರಿಕೆಗಳಲ್ಲವೇ? ಇಂತಹ ಹೇರಿಕೆಗಳನ್ನು ಮೀರಿದ ಹೆಣ್ಣು
ಸಮಾಜದ ದೃಷ್ಟಿಯಲ್ಲಿ ಕೀಳು ಅನಿಸಿಬಿಡುತ್ತಾಳೆ! ಒಂದೇ ಗಂಡಿಗೆ ನಿಷ್ಠಳಾದ ಹೆಣ್ಣು
ಪತಿವ್ರತೆಯಾಗಿ ಆರೋಗ್ಯ ಸಮಾಜದ ಪ್ರತೀಕವಾದಂತೆ, ವಿವಿಧ ಕಾರಣಗಳಿಂದ ವೈಶ್ಯಾವೃತ್ತಿಗೆ
ಇಳಿದ ಹೆಣ್ಣು ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾಳೆ!! ಒಂದಕ್ಕಿಂತ ಹೆಚ್ಚು
ಹೆಣ್ಣುಗಳ ಸಂಪರ್ಕ ಹೊಂದಿಯೂ ಗಂಡಸೊಬ್ಬ ಗೃಹಸ್ಥನಾಗಿ ಬಾಳುವುದು ಸಾಧ್ಯವಿದೆಯಾದರೇ,
ಹೆಣ್ಣಿಗೇಕೆ ಇದು ಸಾಧ್ಯವಿಲ್ಲ? ಇಷ್ಟಕ್ಕೂ ವೈಶ್ಯಾವಾಟಿಕೆ ಹೆಣ್ಣಿಂದ ಮಾತ್ರ
ಸಾಧ್ಯವಾಗುತ್ತದೆಯೇ? ಹೆಣ್ಣಿನಷ್ಟೇ ಗಂಡೂ ಸಹ ಅದರಲ್ಲಿ ಭಾಗಿಯಾಗಿರುತ್ತಾನಲ್ಲ
ಅವನನ್ನು ಪ್ರಶ್ನಿಸದ ಸಮಾಜ ಹೆಣ್ಣನ್ನೇಕೆ ದೂರುತ್ತದೆ? ಹೆಣ್ಣು ತನ್ನ ಮೈ
ಮಾರಿಕೊಳ್ಳುತ್ತಾಳೆಂದರೆ, ಕೊಂಡು ಕೊಳ್ಳುವವನು ಗಂಡಲ್ಲವೇ?

ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ
ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು ಎಂಬುದು ನನ್ನ ಬೇಸಿಕ್
ಪ್ರಶ್ನೆಯಾದರೂ, ನನ್ನಲ್ಲಿನ ಗೊಂದಲ ಅಷ್ಟೇ ಅಲ್ಲ. ಸಮಾನತೆ ಅಂದರೆ ಸ್ತ್ರೀಯು
ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ
ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ? ಸ್ತ್ರೀಯೊಬ್ಬಳು ಪುರುಷನ ಫ್ಲರ್ಟಿಂಗನ್ನು
ಸಹಿಸಿಕೊಂಡು ತಾನು ಪತಿವ್ರತೆಯಾಗಿ ಉಳಿಯುವುದು ಸಾಧ್ಯವಿದೆ ಎಂದಾದರೆ, ಆ ಸ್ಥಿತಿ
ಅವಳಿಗೆ ಸಮಾಜದಲ್ಲಿ ಭದ್ರತೆ ಮತ್ತು ಗೌರವ ತಂದುಕೊಡುತ್ತಿದೆಯಲ್ಲ. ಸಮಾಜವೆಂದರೇ
ಕೇವಲ ಪುರುಷರೆಂದಲ್ಲ, ಸಮಾಜವು ಸ್ತ್ರೀಪುರುಷರಿಬ್ಬರನ್ನೂ ಒಳಗೊಂಡಿರುತ್ತದೆ. ಹಲವು
ಗಂಡಸರ ಸಂಬಂಧವಿರಿಸಿಕೊಳ್ಳುವ ಹೆಣ್ಣನ್ನು ಕೀಳು ಎಂದು ಭಾವಿಸುವುದು ಸಮಾಜದ
ಪುರುಷರಷ್ಟೇ ಅಲ್ಲ, ಪತಿವ್ರತೆ ಎನಿಸಿಕೊಂಡಿರುವ ಇತರ ಸ್ತ್ರೀಯರ ನಿಲುವೂ ಇದೇ
ಆಗಿರುತ್ತದೆ. ಅಲ್ಲದೇ ನಮ್ಮ ಸಮಾಜಕ್ಕೆ ಪಾತಿವ್ರತ್ಯದ ಶೀಲ ಮುಂತಾದ ಕಲ್ಪನೆಗಳು
ಇರುವುದರಿಂದಲೇ ಇತರ ಪಾಶ್ಚಾತ್ಯ ದೇಶಗಳಿಗೆ ಸಾಧ್ಯವಾಗದ ಕುಟುಂಬವ್ಯವಸ್ಥೆ ನಮ್ಮ
ದೇಶದಲ್ಲಿ ಸಾಧ್ಯವಾಗಿರುವುದು. ಸ್ತ್ರೀ ಪುರುಷ ಸಮಾನತೆ ಸಾಧಿಸಿದ ಅಥವಾ ಸಾಧಿಸಿದೆ
ಎನ್ನಲಾದ ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ತೀರ ಶಾಲೆಯ ಮಕ್ಕಳಿಗೆ ಊಟದಲ್ಲಿ Anti
pregnancy pill ಗಳನ್ನು ಹಾಕಿಕೊಡುತ್ತಾರೆಂದರೆ, ನಮ್ಮ ಕುಟುಂಬ ವ್ಯವಸ್ಥೆಯಿಂದ
ಹಾಗು ಅದರಿಂದ ಉಳಿದಿರುವ ಸಮಾಜದ ಸ್ವಾಸ್ಥ್ಯದಿಂದ ನಮ್ಮ ಹಾಗೂ ನಮ್ಮ ಮುಂದಿನ
ಪೀಳಿಗೆಗೆ ಎಷ್ಟು ಅನುಕೂಲವಾಗುತ್ತಿದೆಯಲ್ಲವೇ?

ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯ ಎರಡೂ ಒಂದಕ್ಕೊಂದು ಪೂರಕ. ಸಮಾಜದ ಸ್ವಾಸ್ಥ್ಯ
ಕೆಡಿಸುವುದಾಗಲೀ ಉಳಿಸುವುದಾಗಲೀ ಹೆಣ್ಣಿನ ಕೈಯಲ್ಲಿ ಸಾಧ್ಯವೆನ್ನುವುದಾದರೆ ಅದು
ಸ್ತ್ರೀ ಕುಲಕ್ಕೆ ಸಂದ ಗೌರವವಲ್ಲವೇ? ಹೀಗೆ ಎರಡೂ ಕೋನಗಳಲ್ಲಿ ಯೋಚಿಸಿದಾಗ ಯಾವುದು
ಸರಿ ಎಂದು ತೀರ್ಮಾನಿಸಲಾಗದೆ ಮತ್ತೆ ಮತ್ತೆ ಅದೇ ಗೊಂದಲದ ಗುಂಡಿಗೆ ಬೀಳುತ್ತೇನೆ.


ಅಮ್ಮ ಫೋನೂ- ಬೋಂಡಾ ಜಾಮೂನೂ!!!

January 28, 2009

fatman-skinnyimage

ಆಫೀಸಿಗೆ ಹೊರಡುತ್ತಿದ್ದವಳು, ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ, ಇತ್ತು ಅವತ್ತು ವಿಶೇಷವಿತ್ತು, ‘ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ, ಆಫೀಸಿಗೋಗ್ತಾಳೆ! ಕಾಲೇಜಿಗೆ ಹೋಗ್ತಾಳೇ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು!’ ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು. ಆಹಾ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು, ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ! (ಅದು ತಿಂಗಳಲ್ಲಿ ಒಂದು ಸಲ)? ಯೋಚಿಸುತ್ತಿದ್ದ ನನಗೆ, ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು.

‘ಹುಡುಗ ಸಾಫ್ಟ್ ವೇರ್ ಎಂಜಿನಿಯರ್ ಅಂತೆ ಕಣ್ರೀ, ಈ ಕಾಲದಲ್ಲಿ ಸ್ವಂತ ಮನೆ ಇಲ್ಲದೋರನ್ನ ಯಾರು ಒಪ್ಕೋತಾರೆ ಹೇಳಿ, ಆದ್ರೂ ಈ ಹುಡ್ಗ ವರದಕ್ಷಿಣೆಯೆಲ್ಲಾ ಬೇಡ ಚೆನ್ನಾಗಿ ಮದ್ವೆ ಮಾಡ್ಕೊಟ್ರೆ ಸಾಕು ಅಂತಾನಂತೆ’ ಅಮ್ಮ ಅಪ್ಪನ ಹತ್ರ ತುಂಬಾ ಖುಷಿಯಿಂದ ಹೇಳುತ್ತಿದ್ದರು.

‘ಇವಾಗ ಕಂಪನಿಗಳೆಲ್ಲ ಕೆಲಸದೋರನ್ನ ಮುಗಿದು ಹೋದ ಬಿಯರ್ ಬಾಟಲ್ ಗಳ ತರಹ ಹೊರಗೆ ಎಸೀತಿವೆ, ಸಾಫ್ಟ್ ವೇರ್ ಎಂಜಿನಿಯರ್ಸ್ ಎಲ್ಲ ಕೆಲಸ ಇಲ್ದೆ ಖಾಲಿ ಕೂತಿದಾರೆ, ಸುಮ್ನೆ ಸಂಬಳ ಜಾಸ್ತಿ ಅಂತ ಮದ್ವೆ ಮಾಡ್ಬಿಟ್ಟು ಆಮೇಲೆ ನಿನ್ನ ಮಗಳಿಗೂ ಅಳಿಯನಿಗೂ ನೀನೆ ಕೂರಿಸಿ ಊಟ ಹಾಕ್ಬೇಕು ಅಷ್ಟೇ!’
ಎಂದು ಅಕ್ಕ ನನ್ನ ಸಪೋರ್ಟಿಗೆ ನಿಂತಳು.

‘ಹೇ ಅದೆಲ್ಲ ನಂಗೂ ಗೊತ್ತು ಕಣೇ, ಬರೀ ಎಂಜಿನಿಯರ್ ಅಂತ ನಾನೂ ಮೊದಲು ಬೇಡ ಅಂದೆ, ಆದ್ರೆ ಕಮಲಮ್ಮ ಹೇಳಿದ್ರು (ಫೋನಲ್ಲಿ!!) ಹುಡುಗನ ಅಪ್ಪ ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದಾರಂತೆ ಅವ್ರು ಇರೋ ಮನೇನ ಬಿಟ್ಟು. (ಅವ್ರಿರೋದು ಕೊಟ್ಬಿಟ್ಟು ಅವ್ರೇನು ಫುಟ್ ಪಾತ್ ಮೇಲೆ ಇರ್ಬೇಕಿತ್ತ?). ನಾನೆಲ್ಲ ವಿಚಾರಿಸಿದೀನಿ, ನೀವ್ಯಾರು ಮಾತಾಡ್ಬೇಡಿ ಅವ್ರು ಭಾನುವಾರ ಬರ್ತೀದಾರೆ ಅಷ್ಟೇ!!’
ಅಮ್ಮ ತಮ್ಮದೇ ಕಡೆಯ ಮಾತೆಂಬಂತೆ ಹೇಳಿದರು.

ನೀರಲ್ಲಿ ಮುಳುಗುತ್ತಿರುವವನು ಹುಲ್ಲುಕಡ್ಡಿಯನ್ನೂ ಆಸರೆಗೆ ಹಿಡಿದಂತೆ, ದೀನ ಮುಖ ಮಾಡಿ ಅಪ್ಪನ ಕಡೆ ನೋಡಿದೆ, ಅಪ್ಪ ಅರ್ಥ ಮಾಡಿಕೊಂಡವರಂತೆ, ‘ಚಿಕ್ಕುಡುಗಿ ಈಗ್ಲೆ ಯಾಕೆ ಅವ್ಳಿಗೆ ಇದೆಲ್ಲ!’ ಅಂತ ಇನ್ನು ಶುರು ಮಾಡಿದ್ರು, “ನಿಮಗೆ ಇನ್ನು ಹತ್ತು ವರ್ಷ ಹೋದ್ರು ನಿಮ್ಮ ಮಗಳು ಚಿಕ್ಕೋಳೆ, ಮೂರು ಕತ್ತೆಗಾದಷ್ಟು ವಯಸ್ಸಾಗಿದೆ (ಛೆ ಕತ್ತೆಗಳ ಲೆಕ್ಕದಲ್ಲಿ ಅಳೆಯೋದೆ ನನ್ನ ವಯಸ್ಸನ್ನ! ಅವಮಾನ) ಒಂದು ಕೆಲಸ ಬರೋಲ್ಲ, ಕಾರ್ಯ ಬರೋಲ್ಲ, ಮೊನ್ನೆ ಹಾಲು ಕಾಯ್ಸೆ ಅಂದ್ರೆ, ಪಕ್ಕದಲ್ಲಿರೋ ಮೊಸರಿನ ತಪ್ಲೆ ಒಲೆ ಮೇಲಿಟ್ಟಿದಾಳೆ (ಎರಡೂ ಬೆಳ್ಳಗೇ ಇತ್ತು ಕಣ್ರೀ :( ). ನೀವಿಷ್ಟು ಮುದ್ದು ಮಾಡದೇ ಇದ್ದಿದ್ರೆ ನಾನು ಅವ್ಳಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ (ಬೆಳಿಗ್ಗೆ ಹೊಗಳಿದ್ದು ಅಡ್ವರ್ಟೈಸ್ ಮೆಂಟು ಮಾತ್ರ ಅಂತ ನನಗೆ ಆಗ ತಿಳೀತು!!). ಈ ಹುಡುಗ ಗೊತ್ತಾಗ್ಲಿ ಎರಡು ಕೊಟ್ಟು ಎಲ್ಲ ಕಲಿಸ್ತೀನಿ, ಇಲ್ಲ ಅಂದ್ರೆ ಹೋದೋರ ಮನೇಲಿ ನಮ್ಮ ಮಾನ ಕಳೀತಾಳೇ. ಈಗ ಯಾರೂ ಮಾತಾಡ್ಬೇಡಿ ನಾನು ಅವ್ರೀಗೆ ಬರೋಕೆ ಹೇಳಿಯಾಗಿದೆ……!” (ಅಮ್ಮ ಇನ್ನು ಏನೇನೋ ನಾಮಾರ್ಚನೆ ಮಾಡುತ್ಲೇ ಇದ್ದರು ನಿಮಗೆ ಬೋರ್ ಆಗ್ಬಾರ್ದು ಅಥವಾ ನನ್ನ ಮರ್ಯಾದೆ ಉಳಿಸಿಕೊಳ್ಳಲು ;) ಅದನ್ನ ಇಲ್ಲಿಗೆ ಎಡಿಟ್ ಮಾಡಿದೀನಿ).

ನಾನೇನು ಮಾಡಲಾರೆ ಮಗಳೇ ಎಂದು ಅಪ್ಪ ಕೈ ಚೆಲ್ಲಿದಂತೆ ನನ್ನ ನೋಡಿದರು. ಇವ್ರನ್ನೆಲ್ಲಾ ನಂಬಿದ್ರೆ ನನ್ನ ಕುತ್ತಿಗೆಗೆ ತರ್ತಾರೆ ಅಂತ ಅಮ್ಮನ ಜೊತೆ ನಾನೇ ಯುದ್ದಕ್ಕೆ ನಿಂತೆ. ‘ನೋಡಮ್ಮ ನಾನು ನಿಂಗಷ್ಟು ಭಾರ ಆದ್ರೆ (ಎಷ್ಟು ಅಂತ ಕೇಳ್ಲಿಲ್ಲ ಸಧ್ಯ), ಬೇರೆ ಊರಿಗೆ ಹೋಗಿ ಪಿ.ಜಿ.ಹೌಸ್ನಲ್ಲಿ ಇದ್ಕೋತೀನಿ, ನೀನು ಇಷ್ಟು ಬೇಗ ಮದ್ವೆ ಗಿದ್ವೆ ಅಂದ್ರೆ ನಾನು ಸುಮ್ನೆ ಇರೋಲ್ಲ ಅಷ್ಟೇ. ನಾನಿನ್ನು ಓದ್ಬೇಕು, ಸೆಟಲ್ ಆಗ್ಬೇಕು…..!’ ಹೀಗೆ ಒಂದು ಫಿಲ್ಮ್ ಡೈಲಾಗ್ ಒಗಾಯಿಸಿದೆ. ನಮ್ ಕನ್ನಡಾ ಫಿಲ್ಮ್ ಡೈಲಾಗ್ ಗಳು ಥೇಟರ್ನಲ್ಲೇ ಓಡೋಲ್ಲ ಇನ್ನ ಮನೇಲಿ ಓಡುತ್ವೆ? ಇಲ್ಲೂ ಫ್ಲಾಪ್ ಆಯ್ತು. ಅಮ್ಮ ಉಪವಾಸದ ಬೆದರಿಕೆ ಒಡ್ಡಿ ಹಾಗೂ ಹೀಗೂ ನನ್ನನ್ನ ಗಂಡು ನೋಡೋಕೆ ಒಪ್ಪಿಸಿಯೇ ಬಿಟ್ರು.

ಬಂದವರಿಗೆ ಫಿಲ್ಮ್ ನಲ್ಲಿ ಮಾಡ್ತಾರಲ್ಲ ಹಾಗೆ ಕಾಫೀಲಿ ಭೇಧಿ ಮಾತ್ರೆಗಳು ಹಾಕಿ ಕೊಟ್ಬಿಡ್ಲೇ ಅಂನ್ಕೊಂಡೆ, ಛೆ ಈ ಫಿಲ್ಮಿ ಐಡಿಯಾಗಳೂ ಉಪಯೋಗ ಆಗೋಕಿಂತ ಕೈ ಕೊಡೋದೆ ಜಾಸ್ತಿ ಅಂತ ಸುಮ್ಮನಾದೆ. ಇಷ್ಟೆಲ್ಲಾ ಹೇಳ್ತಿದೀನಿ ನಿಮಗೊಂದು ಸತ್ಯ ಹೇಳ್ದೆ ಇದ್ರೆ ಮೋಸವಾಗುತ್ತೆ ಕಣ್ರೀ, ಒಳೊಗೊಳೊಗೆ ನನಗೂ ಬರೋ ಗಂಡನ್ನ ಒಂದು ಸಾರಿ ನೋಡಬೇಕು ಅನ್ನಿಸ್ತಿತ್ತು. ಮದ್ವೆ ಆಗದಿದ್ರೂ ನೋಡೋದ್ರಲ್ಲಿ ಏನು ತಪ್ಪು ಹೇಳಿ, ಅದು ಮೊದಲ ಸಲ ಹೀಗೆ ನನ್ನನ್ನೂ (!?) ನೋಡೋಕೆ ಯಾರಾದ್ರೂ ಬರ್ತಿರೋದು (ಅಲ್ಲ ನಾನೇನು ಎಕ್ಸಿಭಿಶನ್ನಾ ಹಾಗೆ ಎಲ್ಲಾರು ಬಂದು ಬಂದು ನೋಡೋಕೆ) ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ, ಅದು ಹೇಗಿರ್ತಾನೋ ಒಂದು ಸಾರಿ ನೋಡಿಯೇ ತೀರೋಣ ಅಂತ ತೀರ್ಮಾನಿಸಿದೆ. ಫೋಟೋದಲ್ಲಂತು ಸುಮಾರಾಗಿದ್ದ, ತೆಗೆದು ಹಾಕೋಹಾಗೇನೂ ಇರ್ಲಿಲ್ಲ (ಎಲ್ಲಿಂದ ಅಂತ ಕೇಳ್ಬೇಡಿ ಮತ್ತೆ).

ಸರಿ ಆ ಹಾಳು ಭಾನುವಾರ ಬಂದೇ ಬಂತು, ಭಾನುವಾರವೆಂದ್ರೆ ಅಷ್ಟು ಖುಷಿಪಡ್ತಿದ್ದೋಳು ಈ ಸಲ ಇಷ್ಟು ಬೇಗ ಬಂತಲ್ಲ ಅಂತ ತಲೆ ಚಚ್ಕೋಳ್ತಿದ್ದೆ. ನನ್ನ ಸುಂದರ ಭಾನುವಾರದ ಖುಷಿಯನ್ನೆಲ್ಲ ಕೆಡೆಸಿದ ಆ ‘ಗಂಡಿಗೆ’ ಹಾಸಿಗೆಯಲ್ಲೇ ಹಿಡಿ ಶಾಪ ಹಾಕಿ ಎದ್ದು ತಯಾರಾದೆ. ಅಮ್ಮ ಆಗ್ಲೇ ಬೋಂಡಾ ಮತ್ತು ಜಾಮೂನ್ ರೆಡಿ ಮಾಡ್ತಿದ್ರು, ಆಹಾ ಅದರ ಸುವಾಸನೆ!! ಬಿಡಿ ಎಷ್ಟುದ್ದ ಬರೆದ್ರೂ ಸುಖವಿಲ್ಲ, ಅದನ್ನ ಅನುಭವಿಸಿಯೇ ತೀರಬೇಕು!! ಅವ್ರು ಬರ್ತಿರೋದಕ್ಕೆ ಆಗ್ತಿರೋ ಲಾಭ ಇದೊಂದೇ, ಎಂದುಕೊಂಡು ಬೋಂಡಾದ ತಟ್ಟೆಗೆ ಕೈ ಹಾಕಿದೆ. ಫಟ್ ಅಂತ ಕೈ ಮೇಲೆ ಒಂದು ಬಿಟ್ಟ ಅಮ್ಮ , ಅವ್ರು ಬಂದು ಹೋಗೋವರ್ಗೂ ಅದನ್ನ ಬಾಯಿಗಿಟ್ಟೆ ಕೈ ಮುರೀತೀನಿ ಅಂತ ಬೆದರಿಸಿದ್ರು. ‘ಅಮ್ಮೌ ಬರೋರಿಗೇನು ಮಡಿ ಬಟ್ಟೆ ಉಟ್ಟು ನೇವೇದ್ಯ ಮಾಡ್ತೀಯ? ಮೊದಲು ನನಗೆ ಕೊಡು, ಆಮೇಲೆ ಉಪ್ಪು ಖಾರ ಹೆಚ್ಚುಕಡಿಮೆ ಇದ್ರೆ ನಿನ್ನ ತಪ್ಪಿಂದ ನನ್ನ ಒಪ್ಪದೆ ಹೋದಾರು’ ಅಂತ ಅಮ್ಮನ್ನ ರೈಲತ್ತಿಸಿ, ಹಾಗೂ ಹೀಗೂ ಬೋಂಡಾ ಜಾಮೂನಿನ ರುಚಿ ನೋಡಿ ಸೇಡು ತೀರಿಸಿಕೊಂಡೆ.

ಬಂದ್ರೂ ಬಂದ್ರೂ ಕಡೇಗೂ 12 ಗಂಟೆ ಅಂತ ಹೇಳಿ 2 ಗಂಟೆಗೆ ಗಂಡು, ಗಂಡಿನ ಚೇಲಾಗಳೆಲ್ಲ ಬಂದ್ರು. ಕಾಯ್ಸಿದಷ್ಟೂ ಹೊತ್ತು ಒಂದು ನಿಮಿಷವೂ ತಪ್ಪಿಸದೇ ಅವ್ರನ್ನೆಲ್ಲ ಬೈದುಕೊಳ್ಳತ್ತಲೇ ಇದ್ದೆ! ಆಹಾ, ಆ ಗಂಡು ನೋಡೋಕೆ ಎರಡು ಕಣ್ಣು ಸಾಲದು! ಇವನ ಫೋಟೋ ಹಿಡಿದ ಆ ಫೋಟೋಗ್ರಾಫರ್ ನಿಜಕ್ಕೂ ಕಲಾವಿದ ಕಣ್ರೀ, ಇವನ ಅಸಲು ರೂಪ ಚೂರು ರಿಫ್ಲೆಕ್ಟ್ ಆಗದಂಗೆ ಎಷ್ಟು ಚೆನ್ನಾಗಿ ಹಿಡ್ದಿದ್ದಾನೆ (ಫೋಟೋನ) ಅನ್ಕೊಂಡೆ. ಅವನ ಕಣ್ಣು ಮೂಗಂತೂ ಬಿಡಿ ಹೋಲಿಕೆಗೆ ಸಿಗದಂತವು. ನಾನಿಲ್ಲಿ ಅಮೀರ್ ಖಾನ್, ಶಾರೂಕ್ ಖಾನರ ಸಿಕ್ಸ್ ಪ್ಯಾಕುಗಳ ಕನಸು ಕಾಣ್ತಿದ್ರೆ, ಈ ‘ಗಂಡು’ ಗುಂಡಗಿರೋ ಸ್ಟೀಲ್ ಬಿಂದಿಗೆಗೆ ಗಿಫ್ಟ್ ಪ್ಯಾಕ್ ಮಾಡಿದಂಗೆ ಇಷ್ಟು ದಪ್ಪದ ಹೊಟ್ಟೆ ಮೇಲೆ ಕಲರ್ ಕಲರ್ ಶರ್ಟು ಹಾಕ್ಕೊಂಡು, ಕನ್ನಡ ಫಿಲ್ಮ್ ಕಾಮೇಡಿಯನ್ ಗಳ ಜೊತೆ ಕಾಂಪೀಟ್ ಮಾಡೋ ಹಾಗಿದ್ದ. ಅಮ್ಮನ್ನ ಒಂದು ಸಲ ಗುರಾಯಿಸಿಕೊಂಡು ನೋಡಿದೆ. ತಮಗೇನು ಗೊತ್ತಿಲ್ಲದ ಹಾಗೆ ಓಡಾಡುತ್ತಿದ್ದರು. ಆ ‘ಗಂಡನ್ನ’ ನೋಡಿಯೂ ಅಮ್ಮನ ಉತ್ಸಾಹ ಕಡಿಮೆಯಾದಂತಿರಲಿಲ್ಲ. ಉಪಚಾರ ಮಾಡುತ್ತಲೇ ಹೋದರು. ಮೊದಲೇ ಕೋಪಗೊಂಡಿದ್ದ ನನಗೆ, ಅವರಿಗೆಲ್ಲ ಹೋಟೇಲ್ ಸರ್ವೆಂಟ್ ನಂತೆ ಅಮ್ಮ ಜಾಮೂನು ಬೋಂಡಾ ಕೊಡಲು ಹೇಳಿದಾಗ ನಿಜಕ್ಕೂ ರೇಗಿತು. ಮನೆಗೆ ಬಂದವರಿಗೆ ಅವಮಾನ ಮಾಡಬಾರದು, ನೀನು ಈ ಹುಡುಗನ್ನ ಮದ್ವೆಯಾಗೋದೇನು ಬೇಡ, ದಯವಿಟ್ಟು ಮರ್ಯಾದೆ ಕಳೀಬೇಡ ಕೊಡಮ್ಮ ಮಗಳೇ ಅಂತ ಅಮ್ಮ ಗೋಗರೆದ ಮೇಲೆ ಕೊಡಲು ಒಪ್ಪಿದ್ದು (ಇಲ್ಲ ಅಂದ್ರೆ ಅವರಿಗೆ ತಲುಪುವಷ್ಟರಲ್ಲಿ ನಾನೇ ಮುಗಿಸಿರುತ್ತಿದ್ದೆ).

‘ಸುಖವಾಗಿ ಬೆಳೆದು ಈಗ ಮದ್ವೆ ಮಾಡ್ಕೊಂಡು ಕಷ್ಟ ಪಡಬೇಕಿದೆ ಪಾಪ!’ ಅಕ್ಕ ಅಡಿಗೆಮನೆಯಲ್ಲಿ ಅಮ್ಮನ ಕಿವಿಯಲ್ಲಿ ಮೆಲ್ಲನಂದಳು, ‘ನೋಡೇ ಅಕ್ಕಾ! ನನ್ನ ನೋಡಿದ್ರೆ ಯಾರಿಗೂ ಅಯ್ಯೋ ಅನ್ಸೋದೆ ಇಲ್ಲ ಇಲ್ಲಿ!’ ಅಳುಮುಖ ಮಾಡಿ ನಾನು ದನಿಗೂಡಿಸಿದೆ, ‘ಅಯ್ಯೋ ನಿನಗಲ್ವೇ, ನಾನು ಹೇಳಿದ್ದು ಆ ಗಂಡಿಗೆ, ನೋಡು ಅಮ್ಮ ಮಾಡಿ ಹಾಕ್ತಾರೆ, ತಿಂದು, ಸುಖವಾಗಿ ಗುಂಡು ಗುಂಡಕ್ಕೆ ಹೇಗೆ ಬೆಳೆದಿದ್ದಾನೆ, ನಿನ್ನ ಮದ್ವೆ ಮಾಡ್ಕೊಳೋಕೆ ಪಾಪ ಅದ್ಯಾವ ಜನುಮದಲ್ಲಿ ಕರ್ಮ ಮಾಡಿದಾನೋ!’ ಎಂದು ಮುಸಿ ಮುಸಿ ನಕ್ಕಳು. ‘ಹ್ಞೂಂ, ಎಲ್ಲಾರು ಉದ್ದಕ್ಕೆ ಬೆಳೆದ್ರೆ ಇವನು ಅಡ್ಡಡ್ಡಕ್ಕೆ ಬೆಳೆದಿದ್ದಾನೆ, ಹೋಗೇ ನಿನಗೆ ತಮಾಶೆ ನನ್ನ ಜೀವ ಹೋಗ್ತಿದ್ರೆ ಇಲ್ಲಿ’ ಅಂತ ಗೊಣಗಿ ಸುಮ್ಮನಾದೆ.

ಅಂತೂ ‘ಗಂಡು’ ಮತ್ತವನ ಚೇಲಾಗಳ ನಿರ್ಗಮನವಾಯಿತು. ಬೋಂಡಾ ಜಾಮೂನು ಖರ್ಚಾಗಿದ್ದು
ಬಿಟ್ರೆ ಇನ್ನೇನು ಪ್ರಯೋಜನವಾಗಲಿಲ್ಲ. ನನಗೆ ಒಂದೂ ಉಳಿಯದೆ ಎಲ್ಲಾ ಖಾಲಿಯಾಗಿತ್ತು ಅನ್ನೋದೊಂದು ನಿರಾಶೆ ಬಿಟ್ಟರೆ ಮತ್ತೇನು ಹೆಚ್ಚು ಬೇಜಾರಾಗಲಿಲ್ಲ. ಖುಷಿಯಿಂದ ಪುಟಿಯುತ್ತಿದ್ದ ಅಮ್ಮನಿಗೂ ’ಗಂಡಿನ’ ದರ್ಶನದಿಂದ ಬೇಜಾರಾಗಿತ್ತು.

‘ಅಯ್ಯೋ ಕೆಲಸ ಮಾಡೋಕೆ ನನ್ ಮಗಳು ಮನೇಲಿದ್ರೆ ತಾನೇ! ಇಷ್ಟು ವಯಸ್ಸಾದ್ರೂ ನಾನೇ ಎಲ್ಲ ಮಾಡ್ಬೇಕು, ಮಕ್ಕಳ ಕೈಲಿ ಸೇವೆ ಮಾಡಿಸ್ಕೊಳ್ಳೋಕು ಪುಣ್ಯ ಮಾಡಿರ್ಬೇಕು ಬಿಡಿ…………!’ ಮಾರನೇ ದಿನ ಅಮ್ಮ ಫೋನಿನಲ್ಲಿ ಮಾತಾಡುತ್ತಲೆ ಇದ್ದರು, ನಾನು ನಗುತ್ತಾ ಆಫೀಸಿನ ದಾರಿ ಹಿಡಿದೆ.


ಕರಿಯನಿಗೊಂದು ಲವ್ ಲೆಟರ್

January 16, 2009

(ಈ ಪತ್ರ ಓದಲು ಶುರುವಿಡುವ ಮೊದಲು ನಿಮಗೆ ಇದರ ಹಿನ್ನೆಲೆ ಹೇಳ್ಬೇಕು. ಇದು ’ವಿಜಯ ಕರ್ನಾಟಕ’ದ ’ಈ ಗುಲಾಬಿಯು ನಿನಗಾಗಿ’ ಯಲ್ಲಿ ಪ್ರಕಟವಾಗಿತ್ತು, ನನ್ನ ಯಾವ ಬರಹವೂ ಗಳಿಸದ ಜನಪ್ರಿಯತೆ ಗಳಿಸಿತ್ತು. ಇದರಲ್ಲಿನ ಟೊಕ್ಕಿ, ನಮ್ಮ ನವಿಲುಗರಿಯ ಸೋಮು ಸೃಷ್ಟಿಸಿದ ಪಾತ್ರ. ಅವನ ಬ್ಲಾಗಿನಲ್ಲಿ ಟೊಕ್ಕಿಗೆ ಬರೆದ ಪತ್ರಗಳನ್ನು ನೀವು ನೋಡಿರ್ತೀರಿ, ನೀವು ಆ ಪತ್ರಗಳನ್ನು ಓದಿದ್ದರೆ ನಿಮಗೆ ಈ ಪತ್ರ ಚೂರು ಹೆಚ್ಚು ಅರ್ಥವಾಗಬಹುದು, ಓದದಿದ್ದರೆ ಏನು ನಷ್ಟವಿಲ್ಲ ಇದನ್ನೊಂದು ಪ್ರತ್ಯೇಕ ಪತ್ರವಾಗಿ ಓದಿಕೊಳ್ಳಬಹುದು)

gal31

ಮುನಿಸಿಕೊಂಡಿರುವ ಕರಿಯನಿಗೆ,

ಚೋಮು, ಅಂತು ನನಗೂ ಪತ್ರ ಬರೀಬೇಕು ಅನ್ನಿಸ್ತಿದೆ, ಇಲ್ಲ ಕಣೋ, ಮೊನ್ನೆ ನಾನು ಗಾಳಿ ಆಂಜನೇಯನ ದೇವಸ್ಥಾನಕ್ಕೆ ಬರಲಿಲ್ಲ ಅಂತ ನೀನು ಮುನಿಸ್ಕೊಂಡಿದೀಯ, ಬೆಣ್ಣೆ ಹಚ್ಚೋಕೆ ಈ ಪತ್ರ ಬರೀತಾವ್ಳೆ ಅನ್ಕೋಬೇಡ! ಇದುವರೆಗೆ ನೀನು ಬರ್ದಿರೋ ನೂರ ನಲವತ್ತಾರು ಪ್ರೀತಿ ತುಂಬಿದ ಪತ್ರಗಳ ಮುಂದೆ, ನನ್ನ ಈ ಪ್ರೇಮ ಪತ್ರ (?) ಸಪ್ಪೆ ಸಪ್ಪೆಯಾಗಿ ಕಾಣುತ್ತೆ ಅಂತ ನಂಗೊತ್ತು ಪುಟ್ಟ, ಆದ್ರೆ ನಿನ್ನ ಮೇಲೆ ಆಣೆ ಮಾಡಿ ಹೇಳ್ತೀನಿ, ಆ ನೂರ ನಲವತ್ತಾರು ಪತ್ರಗಳಲ್ಲಿ ನೀನು ಬರ್ದಿರೋದಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸ್ತೀನಿ. ಅಸಲಿಗೆ ಈ ಅಕ್ಷರಗಳೆಂಬ ಅಕ್ಷರಗಳಿಗೆ ನಮ್ಮ ಪ್ರೀತೀನ ವ್ಯಕ್ತಪಡಿಸೋ ಶಕ್ತಿ ಇದೆಯೇನೋ? ನಿನ್ನ ನೋಡಿದ ತಕ್ಷಣ ನನ್ನ ಕಣ್ಣಲ್ಲಿ ಮೂಡೋ ಮಿಂಚು, ನೀನು ಕೈ ಹಿಡ್ಕೊಂಡ್ರೆ ನನ್ನೆದೆಯಲ್ಲಾಗೋ ಸಂಭ್ರಮ, ನೀನು ಮುತ್ತಿಟ್ಟರೆ ಹೊಟ್ಟೆಯಾಳದಿಂದ ಹುಟ್ಟೋ ಖುಷಿಯ ನಡುಕ ಇದನ್ನೆಲ್ಲ ಅಕ್ಷರಗಳಲ್ಲಿ ಬರೆದು ಬಿಡೋಕೆ ಆಗುತ್ತ? ಬಿಡು ನಮ್ಮಿಬ್ಬರದೂ ಹುಚ್ಚಿಡಿದು ಸುರಿಯೋ ಮಳೆಗೆ ಬೊಗಸೆಯೊಡ್ಡೋ ಪ್ರಯತ್ನ!

ಆದ್ರೂ ಇವತ್ತು ಬರೀಲೇಬೇಕಂತ ಬರೀತಿದೀನಿ ಚೋಮು, ಚೋಮು ಐ ಲವ್ ಯು ಕಣೋ. ನನಗೆ ನೀನು ಬೇಕು, ಮತ್ತೆ ನೀನೇ ಬೇಕು ಅಷ್ಟೆ. ಇಲ್ಲ ಕಣೋ ಇದೊಂದು ಜನ್ಮವಿದೆ, ಇದಾದ ಮೇಲೆ ಇನ್ನಾರು ಜನ್ಮಗಳಿವೆ, ಆ ಆರು ಜನ್ಮಗಳು ನೀನು ನನ್ನ ಜೊತೇಲಿರ್ಬೇಕು ಅಂತ ನಾನು ಕೇಳೋಲ್ಲ. ಇದೊಂದೇ ಜನ್ಮದಲ್ಲಿ ಮುಂದಿನ ಸಾವಿರ ಜನ್ಮಗಳನ್ನು ನಾಚಿಸೋ ಹಾಗೆ ನಿನ್ನ ಜೊತೆ ಬದುಕಿ ಬಿಡಬೇಕು. ಒರಟೊರಟಾದ ನಿನ್ನ ಗಡ್ದ ಕೊಡುವ ಸಿಹಿ ನೋವಿನಲ್ಲಿ, ನನಗಷ್ಟೇ ಇಷ್ಟವಾಗೋ ನಿನ್ನ ಮೈಯ ಘಾಟಿನಲ್ಲಿ, ನಿನ್ನ ಮುದ್ದು ಮುದ್ದು ಮಾತಿನಲ್ಲಿ, ಉಸಿರುಗಟ್ಟಿಸೋ ನಿನ್ನ ಅಪ್ಪುಗೆಯಲ್ಲಿ, ಈ ಜನ್ಮ ಮುಗಿಸಿಬಿಡಬೇಕು.

ನಿನ್ನ ಜೊತೆ ಕಳೆಯೋ ಒಂದೊಂದು ಕ್ಷಣಾನೂ ಕಳೆದು ಹೋಗದ ಹಾಗೆ ಕಣ್ಣಲ್ಲಿ ಬಚ್ಚಿಟ್ಕೋ ಬಿಡ್ಬೇಕು. ನಿನ್ನ ಎದೆಯ ಅಷ್ಟೂ ರೋಮಗಳನ್ನ ನನ್ನ ತುಟಿಯಿಂದ ಮುದ್ದಿಸಬೇಕು. ಈ ಜನ್ಮ ಮತ್ತು ಈ ಜನ್ಮ ಪೂರ್ತಿ ಪೂರ್ತಿ ನನ್ನನ್ನೂ ಮರೆತು ನಿನ್ನವಳಾಗಿ ಬಿಡ್ಬೇಕು. ಇದಿಷ್ಟೇ ಅಲ್ವೋ ಚೋಮ ಇನ್ನು ನನ್ನ ಹುಚ್ಚು ಹುಚ್ಚು ಆಸೆಗಳ ಬಗ್ಗೆ ಹೇಳಿದ್ರೇ, ‘ಹೌದೇನೇ ಟೊಕ್ಕೀ!!?’ ಅಂತ ನನ್ನ ಕೆನ್ನೆ ಕಚ್ಚಿ ಬಿಡ್ತೀಯ ನೀನು! ನಿನ್ನದು ಮಗುವಿನಂತಹ ಮನಸ್ಸು ಕಣೋ, ಅದನ್ಯಾವತ್ತೂ ನೋಯಿಸಬಾರದು ಅಂತ ಪ್ರತಿಜ್ಞೆ ಮಾಡಿಕೊಂಡಿದೀನಿ. ಆದರೇ ಜಗತ್ತಲ್ಲಿ ಇನ್ಯಾರಿಗೂ ಕೊಡದ ಕಷ್ಟಗಳನ್ನ ಪ್ರೇಮಿಗಳಿಗೇ ಕೊಡ್ತಾನೆ ನಿನ್ನ ದೇವರು :( ಇದೊಂದು ಸಾರಿ ನನ್ನ ಕ್ಷಮಿಸುಬಿಡು ಪುಟ್ಟಾ, ಈ ಉಸಿರಿರುವವರೆಗೆ ಮತ್ತೆ ನಿನ್ನ ನೋಯಿಸಲ್ಲ, ನನ್ನಾಣೆ!

ನಾಳೆ ಮಲ್ಲಿಗೆ ತೋಟದಲ್ಲಿ ಕಣ್ತುಂಬ ಪ್ರೀತಿ ತುಂಬ್ಕೊಂಡು ನಿನಗಾಗೇ ಕಾಯ್ತಿರ್ತೀನಿ, ನಿನಗಿಷ್ಟವಾಗೋ ಕಪ್ಪು ಚೂಡೀನೇ ಹಾಕ್ಕೊಂಡು ಬರ್ತೀನಿ. ತಲೆಗೆ ಚೂರೇ ಚೂರು ಹರಳೆಣ್ಣೆ ಹಾಕ್ಕೋತೀನೋ, ಇಲ್ಲಾಂದ್ರೆ ಇಷ್ಟುದ್ದದ ನನ್ನ ನಾಗ ಜಡೆ ಎಣಿಯೋದು ಕಷ್ಟ. ಆಮೇಲೆ ಅದರಿಂದಾನೆ ಮತ್ತೆ ತಡವಾಗುತ್ತೆ ನೋಡು, ಅದಕ್ಕೆ ಚೂರೇ ಚೂರು ಹರಳಣ್ಣೆ ಹಾಕಿ ನೀಟಾಗಿ ತಲೆ ಬಾಚ್ಕೊಂಡು, ಅಮ್ಮ ಮುಡಿಸೋ ದಾಸವಾಳ ಹೂವಿಗೆ ದಾರೀಲೇ ಒಂದು ಗತಿ ಕಾಣಿಸಿ, ನಿನ್ನ ಮಲ್ಲಿಗೆ ಮಾಲೆಗೆ ನನ್ನ ತಲೇಲಿ ಜಾಗ ಮಾಡಿಕೊಂಡು, ಆ ಮಲ್ಲಿಗೆ ಹೂಗಳ ಜೊತೆ, ಅದನ್ನರಸಿ ಬರುವ ದುಂಬಿಗಳ ಜೊತೆ, ಅದರೆದೆಯಿಂದ ಉಕ್ಕೋ ಪರಿಮಳದ ಜೊತೆ, ಇಷ್ಟಿಷ್ಟೇ ನಾಚಿಕೊಂಡು, ನಿನಗಾಗೇ ಕಾಯ್ತಿರ್ತೀನಿ. ನಿನ್ನ ಕೋಪವೆಲ್ಲಾ ಮರೆತು ಇದೊಂದ್ಸಲ ಬಂದ್ಬಿಡೋ ಕರಿಯಾ, ಮತ್ತೆ ನೀನು ಕೋಪಾನೇ ಮಾಡ್ಕೊಳ್ಳದ ಹಾಗೆ ಮುತ್ತಿನ ಮಳೆಗರೆದುಬಿಡ್ತೀನಿ. ಬರ್ತೀಯಲ್ವಾ?

ನಿನ್ನವಳೇ,
‘ಟೊಕ್ಕಿ ಪುಟ್ಟು’


ಒಂದು ಮುಂಜಾವಿನಲೀ….

January 9, 2009

chicago-parrots-1-hw-park-7886321

ಜನವರಿಯ ಕೆಟ್ಟ ಚಳಿಗೂ ಕರುಣೆ ತೋರದ ಅಲಾರಾಂ ಸರಿಯಾದ ಸಮಯಕ್ಕೆ ಹೊಡ್ಕೋಳುತ್ತೆ. ನಿದ್ದೆಗಣ್ಣಲ್ಲೇ ತಡಕಾಡಿ ಫೋನ್ ನಲ್ಲಿ ಟೈಮ್ ನೋಡಿದ್ರೆ 5.07. ಮುಖ ತೊಳೆದು ಕೆದರಿರೋ ಕೂದಲಿಗೆ ರಿಬ್ಬನ್ ಬಿಗಿದು, ಶೂಸ್ ಏರಿಸಿ ಟಪ ಟಪ ಸದ್ದು ಮಾಡುತ್ತ ರೋಡಿಗಿಳಿದ್ರೆ, ಕಾಲಿಂದ ತಲೇವರ್ಗೂ ಗಡ ಗಡ ನಡುಗಿಸುವ ಚಳಿ. ಫೋನಿಗೆ ಹ್ಯಾಂಡ್ಸ್ ಫ್ರೀ ಕನೆಕ್ಟ್ ಮಾಡಿದ ಕೂಡಲೇ ಭಾಗ್ಯಾದಾ ಲಕ್ಷ್ಮಿ ಬಾರಮ್ಮಾ, ಸುಪ್ರಭಾತ ತೇಲಿ ಬರುತಿತ್ತು, ಮುಷ್ಟಿಯನ್ನು ಟ್ರೌಶರ್ ಜೇಬಿನಲ್ಲಿಳಿಸಿ ಸಣ್ಣಗೆ ವಿಷಲ್ ಹಾಕ್ತಾ ನಡೆದೆ. ಚಳೀಗೆ ವಿಷಲ್ಲೂ ಸರೀಗೆ ಬರ್ತಿಲ್ಲ.

ಗೃಹಿಣಿಯೊಬ್ಬಳು ಮನೆಯಂಗಳವನ್ನು ಗುಡಿಸೋ ಸದ್ದು ಎಷ್ಟೋ ದೂರದಿಂದ ಕೇಳಿ ಬರ್ತಲೇ ಇತ್ತು. ಕೈಗೆಟುಕುವಷ್ಟು ಸನಿಹದಲ್ಲಿ ಹೆಸರರಿಯದ ಪಕ್ಷಿ ಸೊಯ್ಯನೆ ಹಾರಿಹೋಯ್ತು. ಅಯ್ಯಪ್ಪ ಸ್ವಾಮಿ ಭಕ್ತನೊಬ್ಬ ಬೀದಿ ನಲ್ಲಿಗೇ ತನ್ನ ನಡುಗುವ ಮೈಯೊಡ್ಡಿ ನೆನೆಯುತ್ತಿದ್ದ. ಅವರಿವರು ಕೇಳುವ ಹಾಡನ್ನು ಹಾಕುತ್ತಿದ್ದ ಎಫ್.ಎಮ್ ನ ರೇಡಿಯೋ ಜಾಕಿ ಅಷ್ಟು ಬೆಳಿಗ್ಗೆಯೂ ಉತ್ಸಾಹದಿಂದ ಚಿಮ್ಮುತ್ತಿದ್ದ. ಪೇಪರ್ ಹಾಕೋ ಹುಡುಗ್ರು ನಿದ್ದೆ ಮುಗಿಯದ ಮುಖ ಹೊತ್ತು ತಮ್ಮದೇ ಲೋಕದಲ್ಲಿ ಸೈಕಲ್ ಮೇಲೆ ಹೊರಟಿದ್ರು. ಕಣ್ಣು ಮಾತ್ರ ಕಾಣೋ ಹಾಗೆ ಸ್ಕಾರ್ಫ್ ಕಟ್ಟಿದ್ದ ಹೆಣ್ಣೊಬ್ಬಳು ಬ್ಯಾಗ್ ಹಿಡಿದು ಹೂ ತರಲು ಮಾರ್ಕೆಟ್ಟಿನ ದಾರಿ ಹಿಡಿದಿದ್ದಳು. ಬೆಳಗ್ಗಿನ ಮೊದಲ ಬಸ್ಸಿಗೆ ಕಾದು ನಿಂತಿರೋ ಬಸ್ ಸ್ಟಾಪಿನ ಜನ, ಚಳಿಯಲ್ಲಿ ಮುಳುಗೇಳುತ್ತಿದ್ದಾರೆನಿಸಿತು. ಚಳಿಗೆ ಮೈ ಚೂರು ಒಗ್ಗಿಕೊಂಡಂತೆನಿಸಿ ಪಾರ್ಕಿನೊಳಗಡಿಯಿಟ್ಟೆ.

ದುಂಡು ಹೊಟ್ಟೆ ಹೊತ್ತ ಅಂಕಲ್ ಗಳು, ಗುಂಡುಗುಂಡಗಿರೋ ಹುಡುಗೀರು, ವಯಸ್ಸಾದ ಅಜ್ಜ ಅಜ್ಜಿ, ಎಲ್ಲರನ್ನು ಪಾರ್ಕಿನ ಗಿಡಮರಗಳು ನಿಶ್ಯಬ್ದವಾಗಿ ಅವಲೋಕಿಸುತ್ತಿದ್ದವು. ನಸುಕಿನಲ್ಲಿ ಈ ಪಾರ್ಕು, ಈ ಜನ, ಹೆಸರರಿಯದ ಆ ಹಕ್ಕಿ, ಪ್ಲಾಸ್ಟಿಕ್ ಕವರ್ ಹೊದಿಸಿಕೊಂಡು ನಿರ್ಲಿಪ್ತವಾಗಿರುವ, ಇನ್ನು ಸ್ವಲ್ಪ ಹೊತ್ತಿಗೆ ಮದುವೆಮನೆಯಂತಾಗುವ ಅಂಗಡಿಗಳು, ಹಾಲು ಮಾರಲು ಹೊರಟ ಹುಡುಗನ ನಿದ್ದೆಗಣ್ಣು, ನೈಟ್ ಶಿಫ್ಟ್ ಮುಗಿಸಿ ಮನೆಗೆ ಹೊರಟಿರೋ ಕಾರ್ ಡ್ರೈವರ್, ಇಂತಹ ಸಣ್ಣ ಸಣ್ಣ ಸಂಗತಿಗಳನ್ನು ಗಮನಿಸದೆ ವಂಚಿತರಾಗುತ್ತೇವಲ್ಲ ನಾವು? ಯೋಚಿಸುತ್ತ ನಡೆದಿದ್ದೆ, ಹಿಂದೆ ಯಾರೋ ಕೆಮ್ಮಿದ ಸದ್ದು. ಜಾಗ್ ಮಾಡುತ್ತಿದ್ದ ಯುವಕನೊಬ್ಬ ದಾರಿಕೇಳಲು ಸದ್ದು ಮಾಡಿದ್ದ. ಪಕ್ಕ ಸರಿದ ನಾನು, ಸ್ಲೀವ್ಸ್ ಇಲ್ಲದ ಬನಿಯನ್ ನಂತಹ ಶರ್ಟ್ ತೊಟ್ಟು ಆ ಚಳಿಯಲ್ಲಿ ಜಾಗ್ ಮಾಡುತ್ತಿದ್ದ ಅವನನ್ನೇ ದಿಟ್ಟಿಸುತ್ತ ನಡೆದೆ. ಪಕ್ಕದಲ್ಲಿದ್ದ ಆಂಟಿ ಕಣ್ಣಲ್ಲಿ ತುಂಟ ನಗು. ಅರೆ ಆಂಟಿ ಯು ಆರ್ ವೆರಿ naughty ಎಂದು ಮುಗುಳ್ನಗುತ್ತಾ ಮುಂದುವರೆದೆ.

ಅಲ್ಲೇ ಕಲ್ಲು ಬೆಂಚಿನ ಮೇಲೆ ತೂಕಡಿಸುತ್ತ ಕುಳಿತ ತಾತ. ಮನೆಯಲ್ಲೇ ಮಲಗಬಹುದಿತ್ತಲ್ವೆ ಪಾಪ, ಇಷ್ಟು ಬೆಳಿಗ್ಗೆ ಇಲ್ಲಿ ಬಂದು ತೂಕಡಿಸುತ್ತಿದೆ ಅಂದುಕೊಂಡೆ. ಆದರೆ ಮರುಕ್ಷಣವೇ ಒಂದು ಕಡೆಯ ಮೂಗು ಮುಚ್ಚಿ ದೀರ್ಘ ಉಸಿರೆಳೆದುಕೊಂಡ ತಾತ ನಾನು ತೂಕಡಿಸುತ್ತಿಲ್ಲ ಎಂದು ಸಾಬೀತುಮಾಡಿತ್ತು. ದಸ್ ಬಹಾನೆ ಕರ್ಕೆ ಲೇಗಯೆ ದಿಲ್….. ಎಫ್.ಎಮ್ ನಲ್ಲಿ ಈಗ ಹಿಪ್ ಹಾಪ್ ಹಾಡುಗಳು ತೇಲಿಬರುತ್ತಿದ್ದವು. ಇಬ್ಬರು ಹುಡುಗೀರು ಪಾರ್ಕನ್ನು ಒಂದು ರೌಂಡ್ ಹೊಡೆದು ತುಂಬಾ ಸುಸ್ತಾದವರಂತೆ ಅಲ್ಲೇ ಕಲ್ಲು ಬೆಂಚಿನ ಮೇಲೆ ಕೂತು ಹರಟೆ ಕೊಚ್ಚ ತೊಡಗಿದ್ದರು. ಏದುಸಿರು ಬಿಡುತ್ತ ಸುಮಾರು 20 ಕಿಲೋಮೀಟರ್ ಸ್ಪೀಡ್ನಲ್ಲಿ ಒಬ್ಬ ವ್ಯಕ್ತಿ ಎಲ್ಲರನ್ನು ಹಿಂದಿಕ್ಕುತ್ತ ಬಿರುಸಾಗಿ ನಡೆಯುತ್ತಿದ್ದ. ಕೂರಲು ಏಳಲು ಅಡ್ಡ ಬರುತ್ತಿದ್ದ ಹೊಟ್ಟೆಯನ್ನು ಇವತ್ತು ಕರಗಿಸಿಯೇ ತೀರುತ್ತೇನೆ ಎಂದು ಶಪತ ಮಾಡಿದಂತೆ ದಪ್ಪ ಹೊಟ್ಟೆಯ ಅಂಕಲ್ ಬಸ್ಕಿ ಮೇಲೆ ಬಸ್ಕಿ ಹೊಡೆಯುತ್ತಿದ್ದರು. ಚಳಿಗೆ ಸುಮಾರು ಮುಕ್ಕಾಲು ಪಾಲು ಕವರ್ ಆಗಿದ್ದ ಅಜ್ಜಿಯೊಬ್ಬರು ಕಷ್ಟಪಟ್ಟು ಬಗ್ಗುವುದು ಏಳುವುದು ಮಾಡುತ್ತಿದ್ದರು. ಜಾದು ಹೇ ನಶಾ ಹೇ ಮದ್ಹೋಶಿಯಾ, ತುಜ್ ಕೋ ಭುಲಾಕೆ ಅಬ್ ಜಾವೂ ಕಹಾ…. ಎಫ್ ಎಮ್ ಹಾಡುತ್ತಲೇ ಇತ್ತು. ಭಾನ ಕಿಟಕಿಯಿಂದ ಸೂರ್ಯ ಇಣುಕುತಿದ್ದ. ಪಾರ್ಕಿನಿಂದ ಹೊರಟ ಈ ವ್ಯಕ್ತಿಗಳೆಲ್ಲ ಹೊರಗೋದ ಮೇಲೆ ಏನೇನಾಗ್ತಾರೆ? ಅವರ ಕೆಲಸ, ಮನೆಸಾಲ, ಫೋನ್ ಬಿಲ್ಲು, ಪೇರೆಂಟ್ಸ್ ಮೀಟಿಂಗು ಇತ್ಯಾದಿಗಳಲ್ಲೇ ಮುಳುಗೋಗ್ತಾರಲ್ಲ? ಇಷ್ಟು ಪ್ರಶಾಂತ ಏಕಾಂತ, ಇಡೀ ದಿನದಲ್ಲಿ ಮತ್ತೆ ಅವರಿಗೆ ಸಿಗಬಹುದೆ? ಅದು ಸಿಗಲಾರದು ಎಂಬ ಅರಿವು ಇವರಿಗಿದೆಯೇ? ಗಡಿಯಾರ ಯಾರನ್ನೂ ಗಮನಿಸದೇ ತಿರುಗುತಿತ್ತು. ಆಫೀಸಿಗೆ ಹೊತ್ತಾಗುತ್ತಿದೆ ಎಂದು ಮೌನವಾಗಿ ಸಾರುತಿತ್ತು. ಎದೆತುಂಬಾ ಅಚ್ಚರಿ ಹೊತ್ತೇ ಪಾರ್ಕಿನಿಂದ ಹೊರಟೆ!!!


ಕಹಿ-ಬರಹ

ಡಿಸೆಂಬರ್ 30, 2008

aa034288

ಬ್ಲಾಗು ಶುರು ಮಾಡಿದ ಸ್ವಲ್ಪದಿನಕ್ಕೆ ಬರವಣಿಗೆ ಎಷ್ಟು ಕಷ್ಟದ ಕೆಲಸ ಅನ್ನಿಸ ಹತ್ತಿದೆ. ಏನಾದ್ರೂ ಬರೆಯಬೇಕು, ಬರೆಯಲೇಬೇಕು ಅಂತ ಅಂದುಕೊಂಡರೆ ಏನು ಹೊಳಿಯೋದೆ ಇಲ್ಲ. ಇಷ್ಟು ದಿನ ಬರೆಯದೆ ಇರಲು ಅದೇ ಕಾರಣವಾ? ಗೊತ್ತಿಲ್ಲ. ಈಗೊಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು ನಡೆದು ಹೋದ್ವು. ಭಾರತದ ಹೃದಯದಂತಿದ್ದ ಮುಂಬಯಿಗೆ ಉಗ್ರರು ಬಂದು ಬೆಂಕಿ ಇಟ್ಟು ಹೋಗಿದ್ದಾರೆ. ಬ್ಲಾಗಿನ ಬುದ್ದಿಜೀವಿಗಳೆಲ್ಲಾ ಅದರ ಬಗ್ಗೆ ಚರ್ಚಿಸಿದ್ದಾರೆ, ಬರಿಯಬೇಕೆಂದು ಯೋಚಿಸಿದರೂ ಕಾರಣವಿಲ್ಲದೇ ಸತ್ತ ಅಮಾಯಕರ ನೆನಪಿಗೆ ಕಣ್ಣಲ್ಲಿ ಮೂಡುವ ಒಂದು ಹನಿ ಬಿಟ್ಟರೆ ನನಗೆ ಬೇರೇನೂ ಹೊಳಿಯಲಿಲ್ಲ. ಯಾಕೋ ಅಂತರಂಗ ಖಾಲಿಯಾದ ಅನುಭವ. ಈ ಬರವಣಿಗೆ ಓದು ಎಲ್ಲ ಯಾರಿಗಾಗಿ ಯಾವುದಕ್ಕಾಗಿ ಅನಿಸಿಬಿಡುವಷ್ಟು ಖಿನ್ನತೆ.

ಏನನ್ನೋ ಕಳೆದುಕೊಳ್ಳುತ್ತಿರುವಂತೆ, ತಳವೇ ಇಲ್ಲದ ಯಾವುದೋ ಪ್ರಪಾತಕ್ಕೆ ಬೀಳುತ್ತಿರುವಂತೆ, ಹೀಗೆ ಏನೇನೋ ಹುಚ್ಚುಚ್ಚು ಕಲ್ಪನೆಗಳು. ಕಾರಣವಿಲ್ಲದ ಆತಂಕ. ಬುದ್ದಿಗೇನೋ ಮಂಕು ಕವಿದಂತೆ, ಇನ್ನು ಮುಂದೆ ಅದು ಏನನ್ನು ಯೋಚಿಸಲಾರದೇನೋ ಎಂದು ವಿನಾಕಾರಣ ಕಳವಳಕ್ಕೊಳಗಾಗಿಬಿಡುತ್ತೇನೆ. ಯಾರನ್ನಾದ್ರೂ ಹಿಡ್ಕೊಂಡು ಚೆನ್ನಾಗಿ ಹೊಡಿಯಬೇಕು, ರೋಡಲ್ಲಿ ನಿಂತುಕೊಂಡು ಜೋರಾಗಿ ಕಿರುಚಬೇಕು, ಯಾರಿಗಾದ್ರೂ ಹೀನಾಮಾನವಾಗಿ ಬೈದುಕೊಳ್ಳಬೇಕು, ಶರಪಂಜರದಲ್ಲಿ ಕಲ್ಪನ ಮಾಡ್ತಾಳಲ್ಲ ಹಾಗೇ ಸೋಫಾನ ಕಚ್ಚಿ ಕಚ್ಚಿ ಹರ್ದಾಕ್ಬೇಕು!! ಏನನ್ನಾದರೂ ಬರೆಯಬೇಕೆಂದುಕೊಂಡಾಗ, ನಾನಂದುಕೊಂಡದ್ದು ಬರೆಯಲಿಕ್ಕೆ ಸಾಧ್ಯವಾಗದಾಗ ನನಗೆ ಹೀಗೆಲ್ಲ ಅನ್ನಿಸುವುದುಂಟು!!! ಹುಚ್ಚರಿಗೆ ಹುಚ್ಚಿಡಿಯೋಕು ಮುಂಚೆ ಹೀಗೇ ಆಗುತ್ತದೇನೋ? ಏನನ್ನಾದರೂ ಓದುವಾಗ, ನೋಡಿದಾಗ, ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಯಾವುದೋ ಎಳೆ ಸಿಕ್ಕಂತಾಗಿ ಬರೆಯಬೇಕಂಬ ಭಾವ ದಟ್ಟವಾಗಿ ಕಾಡುತ್ತದೆ, ಬರೆಯಲು ಕೂತಾಗ ಕಾಡಿದ ಭಾವಗಳೆಲ್ಲಾ ನನ್ನವಲ್ಲವೆಂಬಂತೆ ಮಾಯವಾಗಿಬಿಟ್ಟಿರುತ್ತವೆ.

ದಿನಕ್ಕೆ ನೂರರ ಲೆಕ್ಕದಲ್ಲಿ ಹೆಚ್ಚುತ್ತಿರುವ ಬ್ಲಾಗುಗಳು, ಸಹ ಬ್ಲಾಗಿಗರ ಆಸಕ್ತಿ ಮೂಡಿಸುವ ಬರಹಗಳು, ಒಬ್ಬರಿಗೊಬ್ಬರು ಹೊಟ್ಟೆ ಕಿಚ್ಚಿಡಿಸುವ ಕವಿತೆಗಳು, ಇವನ್ನೆಲ್ಲ ನೋಡುತ್ತಿದ್ದರೆ, ಅರೆ! ಇವರಿಗೆಲ್ಲ ಸಾಧ್ಯಾವಾಗುವಂತದ್ದು ನನಿಗ್ಯಾಕೆ ಆಗೋಲ್ಲ ಎಂದು ಅಚ್ಚರಿಪಡುತ್ತೇನೆ. ಬರವಣಿಗೆಗೆ ಬೇಕಾಗೋ ಮಾನಸಿಕ ಸಿದ್ದತೆ ನಾನು ಮಾಡಿಕೊಂಡಿರುವುಲ್ಲವ? ಏನು ಬರೆಯಬೇಕೆಂದಿದ್ದೇನೆ ಎಂಬುದರ ಸ್ಪಷ್ಟ ಚಿತ್ರಣ ನನ್ನ ಮನಸ್ಸಿಗೆ ಬಂದಿರುವುದಿಲ್ಲವ? ಗೊತ್ತಿಲ್ಲ. ತುಂಬಾ ಸಲ ಏನನ್ನೋ ಬರೆಯ ಹೋಗಿ ಮತ್ತೇನನ್ನೋ ಬರೆದು ಅದನ್ನು ಬದಲಿಸಲು ಮನಸ್ಸಾಗದೆ ತಲೆಕೆರೆದುಕೊಂಡು ಸುಮ್ಮನಾಗಿದ್ದೀನಿ. ದೇವಸ್ಥಾನಕ್ಕೆ ಹೋಗಿ ದೇವರನ್ನೇ ನೋಡದೆ ಬರಿಯ ಗರಡುಗಂಬಕ್ಕೆ ನಮಸ್ಕಾರ ಮಾಡಿ ಮರಳಿಬಂದಂತೆ! ನನ್ನ ಭಾವನೆಗಳನ್ನು ಸ್ಪಷ್ಟವಾಗಿ ನನ್ನ ಬರವಣಿಗೆಯಲ್ಲಿ ಮೂಡಿಸುವುದು ನನಗೆ ಸಾಧ್ಯವೇ ಆಗಿಲ್ಲ. ಇಷ್ಟು ದಿನ ನಾನು ಬರೆದಿರೋದು ಹೆಚ್ಚಿಲ್ಲವಾದರೂ, ಅವು ನನಗೆ ತೃಪ್ತಿ ನೀಡಿಲ್ಲ. ‘ಹ್ಜ್ಞಾಂ ಇದು ಸರಿ, this is perfect ಇದನ್ನೇ ಬರೆಯಬೇಕೆಂದುಕೊಂಡದ್ದು ನಾನು’ ಎಂದು ಇದೂವರೆಗೂ ನನಗನ್ನಿಸಿಲ್ಲ. ಇದು ನನ್ನ ಬರಹದೆಡೆಗೆ ನನಗೇ ಇರುವ ಕೀಳರಿಮೆಯ? ಗೊತ್ತಿಲ್ಲ. “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ!?” ಊಹ್ಞೂಂ ಭಾವನೆಗಳ ರಭಸಕ್ಕೆ ನನ್ನ ಬರವಣಿಗೆ ಸಹಕರಿಸುತ್ತಿಲ್ಲ. ನನಗೆ ಬರೆಯಲಾಗುತ್ತಿಲ್ಲ. :(